ತುಳು ಭಾಷೆಗೆ ಎರಡನೇ ಅಧಿಕೃತ ರಾಜ್ಯಭಾಷೆ ಸ್ಥಾನಮಾನ: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಸ್ವಾಗತ

Upayuktha
0


ಮಂಗಳೂರು: ತುಳು ಭಾಷೆಯನ್ನು ಕರ್ನಾಟಕದ ಎರಡನೆಯ ಅಧಿಕೃತ ರಾಜ್ಯಭಾಷೆಯಾಗಿ ಘೋಷಿಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ್ ಅವರು ಹಾರ್ದಿಕವಾಗಿ ಸ್ವಾಗತಿಸಿದ್ದಾರೆ.


ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ತುಳುನಾಡಿನ ಜನತೆಯ ದಶಕಗಳ ಕನಸು ಮತ್ತು ನಿರಂತರ ಹೋರಾಟಕ್ಕೆ ಕೊನೆಗೂ ಸೂಕ್ತ ಗೌರವ ಸಿಕ್ಕಂತಾಗಿದೆ. ತುಳುವರು ಇಂದು ಉದ್ಯೋಗ ಹಾಗೂ ವಿವಿಧ ಕಾರಣಗಳಿಗಾಗಿ ಜಗತ್ತಿನಾದ್ಯಂತ ಪಸರಿಸಿದ್ದು, ತಮ್ಮ ವಿಶಿಷ್ಟ ಭಾಷೆ ಮತ್ತು ಸಮೃದ್ಧ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.


ತುಳು ಭಾಷಿಕರು ಅತ್ಯಂತ ಉದಾರ ಮತ್ತು ಹೃದಯವಂತ ಮನಸ್ಸಿನವರಾಗಿದ್ದು, ತಮ್ಮ ಮಾತೃಭಾಷೆ ತುಳುವಿನೊಂದಿಗೆ ಕನ್ನಡ ಸಾಹಿತ್ಯ, ಕಲೆ ಹಾಗೂ ಸಾಂಸ್ಕೃತಿಕ ರಂಗಕ್ಕೂ ಅನಾದಿ ಕಾಲದಿಂದಲೂ ಅಪಾರ ಕೊಡುಗೆ ನೀಡುತ್ತಾ ಬಂದಿದ್ದಾರೆ. ಕನ್ನಡ ಮತ್ತು ತುಳು ಭಾಷೆಗಳ ನಡುವೆ ನಿಕಟ ಹಾಗೂ ಸಾಮರಸ್ಯದ ಬಾಂಧವ್ಯವಿದೆ. ಈ ಎಲ್ಲಾ ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನು ಪರಿಗಣಿಸಿ, ಸರ್ಕಾರವು ತುಳು ಭಾಷೆಗೆ ಎರಡನೇ ಅಧಿಕೃತ ರಾಜ್ಯಭಾಷೆಯ ಸ್ಥಾನಮಾನ ನೀಡಿರುವುದು ಅತ್ಯಂತ ಶ್ಲಾಘನೀಯ ಹಾಗೂ ಚಾರಿತ್ರಿಕ ಹೆಜ್ಜೆಯಾಗಿದೆ ಎಂದು ಡಾ. ಎಂ.ಪಿ. ಶ್ರೀನಾಥ್ ಅವರು ಅಭಿಪ್ರಾಯಪಟ್ಟಿದ್ದಾರೆ.


ಈ ಐತಿಹಾಸಿಕ ನಿರ್ಧಾರ ಕೈಗೊಂಡ ರಾಜ್ಯ ಸರ್ಕಾರಕ್ಕೆ ಹಾಗೂ ಈ ಹೋರಾಟದಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top