ತುಳು ಭಾಷೆಗೆ ಎರಡನೇ ಅಧಿಕೃತ ಭಾಷೆ ಮಾನ್ಯತೆ: ಸಿಎಂಗೆ ಎ.ಸಿ. ಭಂಡಾರಿ ಹಾರ್ದಿಕ ಅಭಿನಂದನೆ

Upayuktha
0



ಮಂಗಳೂರು: ತುಳು ಭಾಷೆಯನ್ನು ಕರ್ನಾಟಕ ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸಿ ವಿಶೇಷ ಮಾನ್ಯತೆ ನೀಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅಖಿಲ ಭಾರತ ತುಳು ಒಕ್ಕೂಟವು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದೆ.


ತುಳು ಭಾಷೆ ಮತ್ತು ಸಂಸ್ಕೃತಿಯ ಉಳಿವು ಹಾಗೂ ಬೆಳವಣಿಗೆಗಾಗಿ ಕಳೆದ ಐದೂವರೆ ದಶಕಗಳಿಂದ ‘ತುಳು ಕೂಟ’ ಮತ್ತು ಮೂರೂವರೆ ದಶಕಗಳಿಂದ ‘ಅಖಿಲ ಭಾರತ ತುಳು ಒಕ್ಕೂಟ’ ನಿರಂತರವಾಗಿ ಶ್ರಮಿಸುತ್ತಿವೆ. ಬಪ್ಪನಾಡು, ಮಂಗಳೂರು, ಅಡ್ಯಾರ್‌ಗಳಲ್ಲಿ ತುಳು ಸಮ್ಮೇಳನಗಳು, ಅಡ್ಯಾರ್‌ನಲ್ಲಿ ‘ವಿಶ್ವ ತುಳುವೆರೆ ಪರ್ಬ’ ಹಾಗೂ ದುಬಾಯಿಯಲ್ಲಿ ‘ವಿಶ್ವ ತುಳು ಸಮ್ಮೇಳನ’ಗಳನ್ನು ಸಂಘಟಿಸುವ ಮೂಲಕ ಒಕ್ಕೂಟವು ತುಳು ಭಾಷೆಯ ಅಧಿಕೃತ ಮಾನ್ಯತೆಗಾಗಿ ಬಹುಕಾಲದಿಂದ ಹೋರಾಟ ನಡೆಸಿಕೊಂಡು ಬಂದಿದೆ. ಅಲ್ಲದೆ, ಡಾ. ಎಂ. ಮೋಹನ ಆಳ್ವ ಅವರ ವರದಿ ಸಿದ್ಧತೆಗೆ ಪೂರ್ಣ ಸಹಕಾರ ನೀಡಿ, ಅದರ ಅನುಷ್ಠಾನಕ್ಕಾಗಿ ನಿರಂತರ ಶ್ರಮಿಸಿದೆ.


ಮಂಗಳೂರಿನಲ್ಲಿ ನಡೆದ ರಾಜ್ಯ ಸಂಪುಟ ಸಭೆಯಲ್ಲಿ ತುಳು ಭಾಷೆಯನ್ನು ರಾಜ್ಯದ ಅಧಿಕೃತ ಹೆಚ್ಚುವರಿ ಭಾಷೆಯಾಗಿ ಘೋಷಿಸಬೇಕು ಎನ್ನುವ ಮನವಿಯನ್ನು ಮುಖ್ಯಮಂತ್ರಿಗಳಿಗೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರಿಗೆ ತಲುಪಿಸಿ, ಈ ಚಾರಿತ್ರಿಕ ಘೋಷಣೆಗೆ ಕಾರಣಕರ್ತರಾದ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಫರೀದ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹಾಗೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಶಾಸಕರು ಮತ್ತು ಜನನಾಯಕರಿಗೆ ಸಮಸ್ತ ತುಳುವರ ಪರವಾಗಿ ಕೃತಜ್ಞತೆ ಸಲ್ಲಿಸಲಾಗಿದೆ.


ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ, ಗೌರವಾಧ್ಯಕ್ಷ ಶಶಿಧರ ಶೆಟ್ಟಿ ಬರೋಡ, ಕಾರ್ಯದರ್ಶಿ ಪಿ.ಎ. ಪೂಜಾರಿ, ಕೋಶಾಧಿಕಾರಿ ವಿಜಯಲಕ್ಷ್ಮಿ ಬಿ. ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ ಹಾಗೂ ಉಪಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅವರು ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ಈ ಅಭಿನಂದನೆಗಳನ್ನು ತಿಳಿಸಿದ್ದಾರೆ.


إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top