ಮಂಗಳೂರು: ವ್ಯಕ್ತಿಯೊಬ್ಬನ ಅಜ್ಞಾನದ ಕತ್ತಲೆಯನ್ನು ದೂರ ಮಾಡಿ ಜ್ಞಾನದ ಜ್ಯೋತಿಯನ್ನು ಬೆಳಗಿಸುವ ಶಿಕ್ಷಕರು ಸಮಾಜದ ಕಣ್ಣುಗಳಿದ್ದಂತೆ ಎಂದು ಸಂಸ್ಕೃತ ವಿದ್ವಾಂಸೆ ವಾಗಿಶ್ವರಿ ಶಿವರಾಮ್ ಹೇಳಿದರು.
ಕೂಟ ಮಹಾಜಗತ್ತು ಮಂಗಳೂರು ಅಂಗಸಂಸ್ಥೆ ವತಿಯಿಂದ ಪಾಂಡೇಶ್ವರದ ಶ್ರೀ ಗುರು ನರಸಿಂಹ ಸಭಾಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ‘ಕೂಟ ಸಮಾಜದ ಶಿಕ್ಷಕ ರತ್ನ’ ಗೌರವ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಕ್ಷರ ಜ್ಞಾನದ ಜತೆಗೆ ಲೋಕಜ್ಞಾನವನ್ನು ನೀಡಿ, ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಹೊರತರುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಕೂಟ ಮಹಾಜಗತ್ತು ಸಮಾಜಮುಖಿಯಾಗಿ ಉತ್ತಮ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಹಾಗೂ ನೃತ್ಯ ಗುರು ಶ್ರೀಧರ ಹೊಳ್ಳ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಭಾರತೀಯ ಸಂಸ್ಕೃತಿಯ ಸಿಂಚನ ದೊರೆತಾಗ ಸೃಜನಶೀಲ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಇಂತಹ ಮಕ್ಕಳು ಮುಂದೆ ಸಮಾಜದ ಆಸ್ತಿಯಾಗುತ್ತಾರೆ. ಆದ್ದರಿಂದ ಹೆತ್ತವರೂ ಮನೆಯಲ್ಲಿ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಖಂಡಿಗ ಸುಬ್ರಮಣ್ಯ ಭಟ್, ಪಿ. ಶಾಂತರಾಮ ಕಾರಂತ, ಯಶೋಧ ಕೆ., ವಿಜಯಲಕ್ಷ್ಮಿ ಕಾರಂತ ಹಾಗೂ ಸವಿತಾ ಐತಾಳ ಅವರನ್ನು ‘ಕೂಟ ಸಮಾಜದ ಶಿಕ್ಷಕ ರತ್ನ’ ಗೌರವ ನೀಡಿ ಸನ್ಮಾನಿಸಲಾಯಿತು.
ಶ್ರೀಧರ ಹೊಳ್ಳ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಸಂತಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಜಿ.ಕೆ. ಮಯ್ಯ ವಂದಿಸಿದರು. ಕೋಶಾಧಿಕಾರಿ ಪದ್ಮನಾಭ ಮಯ್ಯ, ಗೌರಿ ಹೊಳ್ಳ, ಅನುಪಮ ಟಿ., ಪಂಕಜ ಐತಾಳ ಹಾಗೂ ಶಶಿಪ್ರಭಾ ಐತಾಳ ಸನ್ಮಾನಿತರ ಪರಿಚಯ ಮಾಡಿದರು. ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಹಾಗೂ ಮಹಿಳಾ ಪ್ರತಿನಿಧಿಗಳು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


