ಬಾದರಾಯಣ ಆಚಾರ್ಯರಿಗೆ ‘ಶ್ರೀ ವಿದ್ಯಾಮಾನ್ಯತೀರ್ಥರ ಸ್ಮರಣಾ ವಿಶೇಷ ಪ್ರಶಸ್ತಿ’

Upayuktha
0

* ಗುರುವಾರ ಶ್ರೀ ವಿದ್ಯೇಶತೀರ್ಥರಿಂದ ಗೌರವ ಪ್ರದಾನ

* ಬಾರ್ಕೂರಿನ ಭಂಡಾರಕೇರಿ ಶ್ರೀಮಠದಲ್ಲಿ ಗೌರವಾರ್ಪಣೆ


ಮೈಸೂರು: ಕೀರ್ತಿಶೇಷ ಶ್ರೀ ವಿದ್ಯಾಮಾನ್ಯತೀರ್ಥರ ಪೀಠಾರೋಹಣ ಶತಮಾನೋತ್ಸವದ ಸಂಭ್ರಮಾಚರಣೆ ಅಂಗವಾಗಿ ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ 47ನೇ ಚಾತುರ್ಮಾಸ್ಯ ವ್ರತದ ಸಂದರ್ಭದಲ್ಲಿ ಕೊಡಮಾಡುವ ‘ಶ್ರೀ ವಿದ್ಯಾಮಾನ್ಯತೀರ್ಥರ ಸ್ಮರಣಾ ವಿಶೇಷ ಪ್ರಶಸ್ತಿ’ ಗೆ ನಗರದ ಹಿರಿಯ ವಿದ್ವಾಂಸ ಬಾದರಾಯಣಾಚಾರ್ಯ ಆಯ್ಕೆಯಾಗಿದ್ದಾರೆ. ಉಡುಪಿ ಸಮೀಪದ ಬಾರ್ಕೂರಿನ ಭಂಡಾರಕೇರಿ ಶ್ರೀಮಠದಲ್ಲಿ ಸೆ. 10ರಂದು ಸಂಜೆ 5 ಗಂಟೆಗೆ  ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನೆರವೇರಲಿದೆ. ಸನ್ಮಾನವು ಸ್ಮರಣಿಗೆ , ಸನ್ಮಾನ ಪತ್ರ ಮತ್ತು ಗೌರವ ಸಂಭಾವನೆ ಒಳಗೊಂಡಿದೆ ಎಂದು ಶ್ರೀ ವಿದ್ಯೇಶತೀರ್ಥರು  ತಿಳಿಸಿದ್ದಾರೆ.


ಕಟೀಲು ದುರ್ಗಾ ಪರಮೇಶ್ವರಿ ದೇವಾಲಯದ ಮೊಕ್ತೇಸರ ವಿದ್ವಾನ್ ಹರಿ ನಾರಾಯಣ ಅಸ್ರಣ್ಣ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಆಚಾರ್ಯ ಶ್ರೀ ಮಧ್ವರಿಂದ ರಚಿತವಾದ ಶ್ರೀ ಮಹಾಭಾರತ ತಾತ್ಪರ್ಯ ನಿರ್ಣಯ ಗ್ರಂಥವನ್ನು 18 ಮಂದಿ ವಿದ್ವಾಂಸರೊಂದಿಗೆ ಶ್ರೀಗಳ ಚಾತುರ್ಮಾಸ ಸಂದರ್ಭ 9 ದಿನಗಳ ಕಾಲ 3 ಬಾರಿ ಪಾರಾಯಣ ಸೇವೆಯನ್ನೂ ಮಾಡಿದ ಬಾದರಾಯಣಾಚಾರ್ಯರು ಪ್ರಶಸ್ತಿಗೆ ಭಾಜನರಾಗುತ್ತಿರುವುದು ವಿಶೇಷವಾಗಿದೆ.  


ಪ್ರಶಸ್ತಿ ಪುರಸ್ಕೃತರ ವಿವರ

ಹಿರಿಯ ವಿದ್ವಾಂಸ ಬಾದರಾಯಣಾಚಾರ್ಯರು ಮುಂಬೈನ ಶ್ರೀ ಸತ್ಯಧ್ಯಾನ ವಿದ್ಯಾಪೀಠದಲ್ಲಿ ದಶಕಗಳ ಕಾಲ ಶಾಸ್ತ್ರ ವಿಚಾರ ಅಧ್ಯಯನ ಮಾಡಿದ್ದಾರೆ. ಕುಲಪತಿ, ಮಹಾ ಮಹೋ ಪಾಧ್ಯಾಯ ಡಾ.ಮಾಹುಲಿ ವಿದ್ಯಾಸಿಂಹಾಚಾರ್ಯರ ಗರಡಿಯಲ್ಲಿ ಪಳಗಿ, ಸುಧಾ ಪಂಡಿತರಾಗಿ ಹೊರ ಹೊಮ್ಮಿದ್ದಾರೆ. ಸಂಸ್ಕೃತ ಮತ್ತು ಆಂಗ್ಲ ಭಾಷಾ ಎಂಎ ಪದವೀಧರರು. ಶ್ರೀ ಸತ್ಯಾತ್ಮತೀರ್ಥ ಸ್ವಾಮಿಗಳ  ವಿಶೇಷ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ. ಭಾಗವತ ಪ್ರವಚನಕ್ಕೆ ಖ್ಯಾತರಾಗಿರುವ ಇವರು ಈಗಾಗಲೇ ನೂರಾರು ಭಾಗವತ ಪ್ರವಚನ ಸಪ್ತಾಹ ನಡೆಸಿದ ಹಿರಿಮೆ ಪಡೆದಿದ್ದಾರೆ. ನಾಡಿನಾದ್ಯಂತ ವಿವಿಧ ಮಠ, ಮಂದಿರ, ವಿಶೇಷ ಜ್ಞಾನಸತ್ರ ಮತ್ತು ಮಾಧ್ವ ಸಮ್ಮೇಳನಗಳಲ್ಲಿ ತಮ್ಮ ವಿಚಾರಧಾರೆಯನ್ನು ಹೊಮ್ಮಿಸಿ, ಆಸ್ತಿಕ  ಶ್ರೋತೃಗಳ ಮನ ಗೆದ್ದಿದ್ದಾರೆ.


ಮೈಸೂರಿನ ಶ್ರೀ ವೆಂಕಟೇಶ ಧ್ಯಾನಕೇಂದ್ರದ ವ್ಯವಸ್ಥಾಪಕರಾಗಿ ವಿಶೇಷ ಸೇವೆ ಸಲ್ಲಿಸಿ, ನಂತರ ತಮ್ಮ ಮನೆಯಲ್ಲೇ ‘ ಬ್ರಹ್ಮಾತ್ಮ ವಿದ್ಯಾಪೀಠ’  ಆರಂಭಿಸಿ, ಹಲವು ವಿದ್ಯಾರ್ಥಿಗಳಿಗೆ ಮತ್ತು ವಿವಿಧ ವೃತ್ತಿಯಲ್ಲಿ ಇರುವವರಿಗೆ ಪಾಠ, ಪ್ರವಚನ ಮಾಡುತ್ತಿದ್ದಾರೆ.


ಈವರೆಗೆ 4 ವಿದ್ಯಾರ್ಥಿಗಳಿಗೆ ಸುಧಾ ಮಂಗಳ ಮಾಡಿಸಿ ಗುರು ಸ್ಥಾನಕ್ಕೆ ಭಾಜನರಾಗಿದ್ದಾರೆ. ತಿರಪ್ಪೂರು ವಿದ್ಯಾಪೀಠ ದಲ್ಲಿ ವ್ಯಾಕರಣ ಬೋಧನೆ ಮಾಡಿ, ಪೇಜಾವರ ಮತ್ತು ಉತ್ತರಾದಿ ಮಠದ ಜಯತೀರ್ಥ ವಿದ್ಯಾಪೀಠ, ಟಿಟಿಡಿ ಧರ್ಮಗಿರಿ ಪಾಠಶಾಲೆ ನಡೆಸುವ ವಿವಿಧ ಪರೀಕ್ಷೆಗಳಿಗೆ  ಪರೀಕ್ಷಕರಾಗಿರುವುದು ಇನ್ನೊಂದು ವಿಶೇಷ.


ಯಾವುದೇ ಸಂದರ್ಭದಲ್ಲಿ ಸಂಯಮ ಮತ್ತು ಸೌಜನ್ಯ ಪಾಲಿಸುವುದು, ಸದಾ ಅಧ್ಯಯನ ಶೀಲರಾಗಿ ಇರುವುದು, ಅನನ್ಯ ಗುರುಭಕ್ತಿ ಮತ್ತು ವಿದ್ಯಾ ಸಂಪನ್ನತೆ ಹೊಂದಿರುವುದು ಇವರ ವಿಶೇಷ ಗುಣವಾಗಿದೆ.


ತಮ್ಮ ಪತ್ನಿ, ಮೂವರು ಮಕ್ಕಳನ್ನೂ ಸದಾ ಕಾಲ ಧರ್ಮದ ಸೇವೆಗೆ , ಶಾಸ್ತ್ರ ಅಧ್ಯಯನಕ್ಕೆ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಆಚರಣೆಗಾಗಿಯೇ  ಇರಿಸಿದ್ದು, ಸುಖೀ ಕುಟುಂಬದೊಂದಿಗೆ ಸಮೃದ್ಧ ಸಮಾಜವನ್ನೂ ಕಾಣಬಯಸುವ ಪ್ರವೃತ್ತಿ ಇವರದ್ದು. ಇಂಥವರು ಪ್ರಶಸ್ತಿ, ಪುರಸ್ಕಾರಕ್ಕೆ  ಭಾಜನರಾಗುತ್ತಿರುವುದು ವಿದ್ವತ್ ವಲಯದಲ್ಲಿ ಸಂಭ್ರಮವನ್ನು ಮೂಡಿಸಿದೆ.

- ರಘುರಾಮ


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top