ಧರ್ಮಾಚರಣೆಯಿಂದಷ್ಟೇ ಶಾಂತಿ-ಸಾಮರಸ್ಯದ ಬದುಕು ಸಾಧ್ಯ: ರಂಭಾಪುರಿ ಶ್ರೀಗಳು
ಆಳಂದ: ಧರ್ಮಾಚರಣೆಯಿಂದ ಮಾತ್ರ ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯದ ಬದುಕು ಕಂಡುಕೊಳ್ಳಲು ಸಾಧ್ಯ. ಧರ್ಮ, ಜಾತಿ, ಪ್ರಾಂತಗಳ ಹೆಸರಿನಲ್ಲಿ ವಿಭಜಿಸುವ ಶಕ್ತಿಗಳ ವಿರುದ್ಧ ಸೌಹಾರ್ದತೆಯಿಂದ ಬಾಳಲು ಪ್ರತಿಯೊಬ್ಬರಿಗೂ ಧರ್ಮ ಪರಿಪಾಲನೆ ಅತ್ಯಂತ ಅಗತ್ಯ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ದೇಶಿಕೇಂದ್ರ ಶಿವಾಚಾರ್ಯರು ಹೇಳಿದರು. ತಾಲೂಕಿನ ತಡಕಲ್ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಅಂಬಾ ಭವಾನಿ ಮಂದಿರವನ್ನು ಸೆ. 23 ರಂದು ಶ್ರೀ ಅಂಬಾ ಭವಾನಿ ದೇವಿಗೆ ವಿಶೇಷ ಪೂಜೆ ನೆರವೇರಿಸುವ ಮೂಲಕ ಲೋಕಾರ್ಪಣೆಗೊಳಿಸಿ, ನಂತರ ನಡೆದ ಧರ್ಮಸಭೆಯಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡುತ್ತಿದ್ದರು.
ಪ್ರಸಕ್ತ ಸಮಾಜದಲ್ಲಿ ಧರ್ಮ ಹಾಗೂ ಜಾತಿಗಳ ಮಧ್ಯೆ ವೈಮನಸ್ಸು ಹುಟ್ಟುಹಾಕುವ ಶಕ್ತಿಗಳನ್ನು ದೂರವಿಟ್ಟು, ಸಮಾಜದಲ್ಲಿ ಸಾಮರಸ್ಯದ ವಾತಾವರಣ ಮೂಡಿಸಲು ಸಂಸ್ಕೃತಿ ಮತ್ತು ಆದರ್ಶ ಪರಂಪರೆಯನ್ನು ಬೆಳೆಸಿಕೊಳ್ಳಬೇಕು. ಜಗದ್ಗುರು ಪೀಠಗಳ ದಶಸೂತ್ರ ಹಾಗೂ ಬಸವಣ್ಣನವರು ಬೋಧಿಸಿದ ಸಪ್ತ ಧರ್ಮ ಸೂತ್ರಗಳನ್ನು ಪಾಲಿಸುವ ಮೂಲಕ ಮಾನವ ಧರ್ಮ ಮತ್ತು ವಿಶ್ವ ಬಂಧುತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಮಂದಿರ ಲೋಕಾರ್ಪಣೆ ಸಮಾರಂಭಕ್ಕೆ ಸೇರಿದ್ದ ಜನಸಾಗರವು ಗುತ್ತೇದಾರರ ಜನಪ್ರಿಯತೆಗೆ ಸಾಕ್ಷಿಯಾಗಿದ್ದು, ಶರನ್ನವರಾತ್ರಿಯ ವೈಭವ ಇಲ್ಲ ಎದ್ದು ಕಾಣುತ್ತಿದೆ ಎಂದರು.
ಸನಾತನ ಧರ್ಮದಲ್ಲಿ ಯಾರೂ ಅನಾಥರಲ್ಲ:
ವಾರಣಾಸಿಯ ಕಾಶಿ ಮಹಾಪೀಠದ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು ಆಶೀರ್ವಚನ ನೀಡಿ, "ಕಂಪ್ಯೂಟರ್ ಯುಗದಲ್ಲೂ ನಾವು ನಿಸರ್ಗದ ಅಧೀನದಲ್ಲೇ ಬದುಕಬೇಕಾಗಿದೆ. ಧರ್ಮದ ಹಾದಿಯಲ್ಲಿ ಸಾಗಿದರೆ ಮಳೆ, ಬೆಳೆ ಸಮೃದ್ಧಿಯಾಗಿ ಮಾನವ ಕಲ್ಯಾಣವಾಗುತ್ತದೆ. ಪಂಚಭೂತಗಳಿಂದ ನಿರ್ಮಿತವಾದ ಮಾನವನಿಗೆ ಪರಮಾತ್ಮನೇ ರಕ್ಷಕ. ಸನಾತನ ಧರ್ಮದಲ್ಲಿ ಯಾರೂ ಅನಾಥರಲ್ಲ" ಎಂದು ನುಡಿದರು. ಉಜ್ಜಯಿನಿ ಪೀಠದ ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿ, "ದೇವಾಲಯಗಳ ನಿರ್ಮಾಣವು ಭಗವಂತ ಮತ್ತು ಭಕ್ತರ ನಡುವೆ ಸೇತುವೆಯಂತಿದ್ದು, ಧಾರ್ಮಿಕ ಪರಂಪರೆ ಎತ್ತಿಹಿಡಿಯುತ್ತಿರುವ ಗುತ್ತೇದಾರ ಕುಟುಂಬದ ಧರ್ಮಕಾರ್ಯ ಶ್ಲಾಘನೀಯ" ಎಂದರು.
ತಾಯಿಯ ನೆನಪಿನಲ್ಲಿ ಮಂದಿರ ನಿರ್ಮಾಣದ ಸಂಕಲ್ಪ ಈಡೇರಿದೆ:
ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಶಾಸಕ ಸುಭಾಷ್ ಆರ್. ಗುತ್ತೇದಾರ್, "ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡ ನನಗೆ ಅವರ ಮುಖ ನೋಡುವ ಭಾಗ್ಯವೂ ಸಿಗಲಿಲ್ಲ. ತಾಯಿ ಅಂಬುಬಾಯಿ ಅವರ ರೂಪದಲ್ಲಿ ಈ ಮಂದಿರದಲ್ಲಿ ಶ್ರೀ ಅಂಬಾ ಭವಾನಿ ದೇವಿಯನ್ನು ಪ್ರತಿಷ್ಠಾಪಿಸುವ ಮೂಲಕ ನನ್ನ ಹಲವು ದಿನಗಳ ಸಂಕಲ್ಪ ಈಡೇರಿದೆ. ಬಡತನದಲ್ಲೂ ತಂದೆ, ತಾಯಿ, ಅಜ್ಜಂದಿರ ಕೃಪೆ ಹಾಗೂ ಆಳಂದ ಜನತೆಯ ಆಶೀರ್ವಾದದಿಂದ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ" ಎಂದು ಭಾವುಕರಾಗಿ ಹೇಳಿದರು.
ಅಡ್ಡ ಪಲ್ಲಕ್ಕಿ ಮಹೋತ್ಸವ ಮತ್ತು ಧಾರ್ಮಿಕ ಕಾರ್ಯಕ್ರಮಗಳು:
ಸಮಾರಂಭದ ನಿಮಿತ್ತ 1008 ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ರಕ್ತದಾನ ಶಿಬಿರ ನಡೆಯಿತು. ಜಗದ್ಗುರುಗಳನ್ನು ಹಾಗೂ ಪೂಜ್ಯರನ್ನು ಕುಂಭ ಹೊತ್ತ ಮುತ್ತೈದೆಯರು ಭಕ್ತಿಯಿಂದ ಸ್ವಾಗತಿಸಿದರು. ತದನಂತರ ಮೂವರು ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಮಹೋತ್ಸವವು ಅತ್ಯಂತ ಸಂಭ್ರಮದಿಂದ ಜರುಗಿತು.
ಕಾರ್ಯಕ್ರಮದ ನೇತೃತ್ವವನ್ನು ಕಡಗಂಚಿ ಕಟ್ಟಿಮಠದ ಶ್ರೀ ವೀರ ತಪಸ್ವಿ ವೀರಭದ್ರ ಶಿವಾಚಾರ್ಯರು ವಹಿಸಿದ್ದರು. ಹರ್ಷಾನಂದ ಗುತ್ತೇದಾರ್ ಎಲ್ಲರನ್ನೂ ಸ್ವಾಗತಿಸಿದರು. ಸಾನ್ನಿಧ್ಯವನ್ನು ಬಿಗವಾನ್-ನಿರಗುಡಿಯ ಶ್ರೀ ಹವಾ ಮಲ್ಲಿನಾಥ ಮಹಾರಾಜರು, ನಂದಗಾಂವ ವಿರಕ್ತಮಠದ ಶ್ರೀ ರಾಜಶೇಖರ ಸ್ವಾಮಿಗಳು, ಅಫ್ಜಲ್ಪುರ ಮಳೇoದ್ರ ಹಿರೇಮಠದ ಶ್ರೀ ವಿಶ್ವರಾಧ್ಯ ಮಳೇoದ್ರ ಶಿವಾಚಾರ್ಯರು ಸೇರಿದಂತೆ ಹಲವು ಮಠಾಧೀಶರು ವಹಿಸಿದ್ದರು.
ವೇದಿಕೆಯಲ್ಲಿ ಮಾಜಿ ಸಚಿವ ಮಾಲಿಕಯ್ಯ ವಿ. ಗುತ್ತೇದಾರ್, ಮಾಜಿ ಸಂಸದ ಡಾ. ಉಮೇಶ್ ಜಾಧವ್, ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ್ ಪಾಟೀಲ್, ಮುಖಂಡರಾದ ಶಿವಕಾಂತ್ ಮಹಾಜನ್, ಸಂತೋಷ್ ಎಸ್. ಗುತ್ತೇದಾರ್, ಶಿವರಾಜ್ ರದ್ದೇವಾಡಗಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
