ಉಜಿರೆ: “ವ್ಯಸನಮುಕ್ತ ಸಮಾಜ ನಿರ್ಮಿಸುವಲ್ಲಿ ಯುವಜನತೆ ಸಕ್ರಿಯವಾಗಿ ತೊಡಗಿಕೊಳ್ಳಬೇಕು. ಸಮಾಜವನ್ನು ದುಶ್ಚಟಗಳಿಂದ ಮುಕ್ತಗೊಳಿಸುವ ದೃಢಸಂಕಲ್ಪದೊಂದಿಗೆ ನಿರಂತರ ಜವಾಬ್ದಾರಿಯುತ ಕೆಲಸ ಮಾಡುತ್ತಿರುವ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಉಪಕ್ರಮಗಳು ಅತ್ಯಂತ ಶ್ಲಾಘನೀಯ. ಅವರ ಈ ಸಾಮಾಜಿಕ ಕಾರ್ಯಕ್ಕೆ ನಾವೆಲ್ಲರೂ ಸಂಪೂರ್ಣ ಬೆಂಬಲ ನೀಡಬೇಕಾಗಿದೆ” ಎಂದು ಉಜಿರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ, ರೊಟೇರಿಯನ್ ಉಷಾ ಕಿರಣ್ ಕಾರಂತ್ ಹೇಳಿದರು.
ಇಲ್ಲಿನ ಎಸ್.ಡಿ.ಎಂ ಮಹಿಳಾ ಐ.ಟಿ.ಐ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಸ್ವಾಸ್ಥ್ಯ ಸಂಕಲ್ಪ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ, ನಿವೃತ್ತ ಶಿಕ್ಷಕ ರೊಟೇರಿಯನ್ ಬಿ. ಸೋಮಶೇಖರ ಶೆಟ್ಟಿ, “ದೈಹಿಕ ಹಾಗೂ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಉತ್ತಮ ಆರೋಗ್ಯಕ್ಕಾಗಿ ದುಶ್ಚಟಗಳಿಂದ ದೂರವಿರಬೇಕು ಮತ್ತು ಸನ್ಮಾರ್ಗದಲ್ಲಿ ನಡೆಸುವ ನಲ್ಲ ಗೆಳೆಯರ ಬಳಗವನ್ನು ಬೆಳೆಸಿಕೊಳ್ಳಬೇಕು. ಸಮಾಜದ ಶಾಂತಿ-ಸ್ವಾಸ್ಥ್ಯವನ್ನು ಹಾಳುಮಾಡುವ ಪ್ರಯತ್ನಗಳಿಗೆ ಅವಕಾಶ ನೀಡಬಾರದು” ಎಂದರು.
ಮುಂದುವರಿದು ಮಾತನಾಡಿದ ಅವರು, “ಜೀವನದಲ್ಲಿ ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ಸಮಚಿತ್ತದಿಂದ ಮುನ್ನಡೆಯಬೇಕು. ನಿರಂತರ ಓದುವ ಹವ್ಯಾಸ ಬೆಳೆಸಿಕೊಂಡು ದೇಶದ ಸತ್ಪ್ರಜೆಗಳಾಗಬೇಕು. ನಿರ್ದಿಷ್ಟ ಗುರಿ ಹಾಗೂ ಅಚಲ ಆತ್ಮವಿಶ್ವಾಸದಿಂದ ಸಾಧನೆಯ ಹಾದಿಯಲ್ಲಿ ಸಾಗಿದಾಗ ಮಾತ್ರ ಹೆತ್ತವರು ನೀಡಿದ ಬದುಕು ಸಾರ್ಥಕವಾಗುತ್ತದೆ” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಬಿ. ಸೋಮಶೇಖರ ಶೆಟ್ಟಿ ಅವರು ವಿದ್ಯಾರ್ಥಿನಿಯರಿಗೆ ಶಿಸ್ತು, ಸ್ವಚ್ಛತೆ ಪಾಲನೆ ಹಾಗೂ ದುಶ್ಚಟಗಳಿಂದ ದೂರವಿರುವ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು.
ಸಂಸ್ಥೆಯ ಪ್ರಾಂಶುಪಾಲ ವಿ. ಪ್ರಕಾಶ್ ಕಾಮತ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಂಪ್ಯೂಟರ್ ವಿಭಾಗದ ವಿದ್ಯಾರ್ಥಿನಿ ಅನುಪ್ರಿಯಾ ವಂದಿಸಿದರು. ವಿದ್ಯಾರ್ಥಿನಿ ವೀಕ್ಷಾ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


