ಬೆಂಗಳೂರು: ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ (NMIT) ಹಳೆಯ ವಿದ್ಯಾರ್ಥಿನಿ ಹಾಗೂ ಪ್ರಸ್ತುತ ಯುಕೆ (UK) ಬಾಹ್ಯಾಕಾಶ ಸಂಸ್ಥೆಯ ಸಂಶೋಧನೆ ಮತ್ತು ಅಭಿವೃದ್ಧಿ (R&D) ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಮಮತಾ ಮಹೇಶ್ವರಪ್ಪ ಅವರನ್ನು ಕಾಲೇಜು ಆವರಣದಲ್ಲಿ ಸನ್ಮಾನಿಸಲಾಯಿತು. ಬಾಹ್ಯಾಕಾಶ ಸಂಶೋಧನೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅವರು ನೀಡಿದ ಅತ್ಯುತ್ತಮ ಕೊಡುಗೆಯನ್ನು ಗೌರವಿಸಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಮಾರಂಭದಲ್ಲಿ ಮುಖ್ಯ ಅಭ್ಯಾಗತರಾಗಿ ಪಾಲ್ಗೊಂಡು ಮಾತನಾಡಿದ ನಿಟ್ಟೆ ಶಿಕ್ಷಣ ಸಂಸ್ಥೆಯ ಟ್ರಸ್ಟಿ ರೋಹಿತ್ ಪೂಂಜಾ, ವಿದ್ಯಾರ್ಥಿಗಳು ವೃತ್ತಿಪರ ಯಶಸ್ಸು ಸಾಧಿಸಲು ಸ್ಪಷ್ಟ ಗುರಿ ಮತ್ತು ದೃಢಸಂಕಲ್ಪದ ಅಗತ್ಯವಿದೆ ಎಂದರು. “ಪದವಿ ಮುಗಿಸುವಷ್ಟರಲ್ಲಿ ಭವಿಷ್ಯದ ಗುರಿಯ ಬಗ್ಗೆ ಸಂಪೂರ್ಣ ಸ್ಪಷ್ಟತೆ ಇರಬೇಕು. 28 ಬಾರಿ ಒಲಿಂಪಿಕ್ ಪದಕ ವಿಜೇತ ಮೈಕೆಲ್ ಫೆಲ್ಪ್ಸ್ ಅವರಲ್ಲಿ ಕಾಣುವ 'ಗ್ರಿಟ್' ಅಂದರೆ ಧೈರ್ಯ, ದೃಢಸಂಕಲ್ಪ ಮತ್ತು ಪರಿಶ್ರಮ ಪ್ರತಿಯೊಬ್ಬ ವಿದ್ಯಾರ್ಥಿಗೂ ಅತ್ಯಗತ್ಯ,” ಎಂದು ಅವರು ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಮಮತಾ ಮಹೇಶ್ವರಪ್ಪ, ತಮ್ಮ ವಿದ್ಯಾಭ್ಯಾಸದ ದಿನಗಳಲ್ಲಿ ಗಗನಯಾತ್ರಿಗಳಾದ ಕಲ್ಪನಾ ಚಾವ್ಲಾ ಹಾಗೂ ಸುನಿತಾ ವಿಲಿಯಮ್ಸ್ ಅವರಿಂದ ಪ್ರೇರಣೆ ಪಡೆದಿದ್ದಾಗಿ ಸ್ಮರಿಸಿದರು. “ಎಂಜಿನಿಯರಿಂಗ್ ಓದುತ್ತಿದ್ದಾಗ ಇಸ್ರೋ (ISRO) ಸಹಭಾಗಿತ್ವದೊಂದಿಗೆ ಕೈಗೊಂಡ 'ಸ್ಟಡ್‌ಸ್ಯಾಟ್' (STUDSAT) ವಿದ್ಯಾರ್ಥಿ ಉಪಗ್ರಹ ಯೋಜನೆಯು ನನ್ನ ವೃತ್ತಿಜೀವನಕ್ಕೆ ಪ್ರಮುಖ ತಡಿಪಾಯ ಹಾಕಿಕೊಟ್ಟಿತು. ಸಾಂಪ್ರದಾಯಿಕ ತರಗತಿಯ ಜೊತೆಗೆ ಪ್ರಾಯೋಗಿಕ ಅನುಭವಗಳನ್ನು ಪಡೆದುಕೊಳ್ಳುವ ಮೂಲಕ ನಿಮ್ಮ ಕನಸುಗಳನ್ನು ಬೆನ್ನಟ್ಟಿ,” ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಡಾ. ಮಮತಾ ಅವರು NMIT ಯ 2005-2009ರ ಬ್ಯಾಚ್‌ನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿಯಾಗಿದ್ದು, ಸರ್ರೆ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆದಿದ್ದಾರೆ.
ಇದೇ ಸಂದರ್ಭದಲ್ಲಿ ಸಂಸ್ಥೆಯ ಹಳೆಯ ವಿದ್ಯಾರ್ಥಿ, ಜಾಗ್ವಾರ್ ಲ್ಯಾಂಡ್ ರೋವರ್‌ನ 'ಪ್ರಾಡಕ್ಟ್ ಓನರ್-ಕಾಕ್‌ಪಿಟ್ ಮೆಕ್ಯಾನಿಸಮ್ಸ್' ಹುದ್ದೆಯಲ್ಲಿರುವ ಅರ್ಪಣ್ ಎಚ್. ವಸಂತ್ (ಮೆಕ್ಯಾನಿಕಲ್ 2005-09 ಬ್ಯಾಚ್) ಅವರನ್ನೂ ಗೌರವಿಸಲಾಯಿತು. ಅವರು ಮಾತನಾಡಿ, ಸೈದ್ಧಾಂತಿಕ ಜ್ಞಾನವನ್ನು ಪ್ರಾಯೋಗಿಕವಾಗಿ ಅನ್ವಯಿಸಲು ಲಭ್ಯವಿರುವ ಪ್ರತಿಯೊಂದು ಅವಕಾಶವನ್ನು ಬಳಸಿಕೊಳ್ಳುವಂತೆ ಸಲಹೆ ನೀಡಿದರು.
ಪ್ರಾಂಶುಪಾಲರಾದ ಡಾ. ಎಚ್. ಸಿ. ನಾಗರಾಜ್ ಅವರು 'STUDSAT' ಯೋಜನೆಗೆ ಡಾ. ಮಮತಾ ನೀಡಿದ ಕೊಡುಗೆಯನ್ನು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಪ್ರೊಫೆಸರ್ ಮತ್ತು ಕಾರ್ಯಕ್ರಮ ಸಂಯೋಜಕಿ ಡಾ. ಮಂಜುಳಾ ಬಿ.ಎಂ, ಹಳೆಯ ವಿದ್ಯಾರ್ಥಿಗಳ ಸಂಘದ ಸಹಾಯಕ ನಿರ್ದೇಶಕಿ ಗೋಪಿಕಾ ರಾಧಾಕೃಷ್ಣನ್ ಹಾಗೂ ಕಾಲೇಜಿನ ಬೋಧಕ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


