ಸೇಂಟ್ ಅಲೋಶಿಯಸ್ ವಿಶ್ವವಿದ್ಯಾಲಯದಲ್ಲಿ 'ಸಮಕಾಲೀನ ಬ್ಯಾಂಕಿಂಗ್ ವ್ಯವಸ್ಥೆ' ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ

Shreya Hegde
0


ಮಂಗಳೂರು: ಸೇಂಟ್ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ಸಂಸ್ಥೆಯ ಉದ್ಯಮ ಆಡಳಿತ ವಿಭಾಗ ಹಾಗೂ ಬಿಸಿನೆಸ್ ಮತ್ತು ಮ್ಯಾನೇಜ್‌ಮೆಂಟ್ ಶಾಲೆಯ ಜಂಟಿ ಆಶ್ರಯದಲ್ಲಿ "ಸಮಕಾಲೀನ ಬ್ಯಾಂಕಿಂಗ್ ವ್ಯವಸ್ಥೆ: ನಾವೀನ್ಯತೆ, ರಕ್ಷಣೆ, ಆಡಳಿತ ಮತ್ತು ಸುಸ್ಥಿರತೆ" ಎಂಬ ವಿಷಯದ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಸೆಪ್ಟೆಂಬರ್ 10, 2026 ರಂದು ವಿಶ್ವವಿದ್ಯಾಲಯದ ಎಲ್.ಎಫ್. ರಸ್ಕಿನ್ಹಾ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.


ಮಂಜೇಶ್ವರದ ಜಿಪಿಎಂ ಸರ್ಕಾರಿ ಕಾಲೇಜಿನ ಉಪಪ್ರಾಂಶುಪಾಲ ಹಾಗೂ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ಶಚೀಂದ್ರನ್ ವಿ. ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ದಿಕ್ಸೂಚಿ ಭಾಷಣ ಮಾಡಿದರು. ಆಧುನಿಕ ಬ್ಯಾಂಕಿಂಗ್‌ನ ಮೂಲ ಕಾರ್ಯಗಳನ್ನು ವಿವರಿಸಿದ ಅವರು, ಸಾಂಪ್ರದಾಯಿಕ ಬ್ಯಾಂಕಿಂಗ್ ಮತ್ತು ಇಂದಿನ ಬ್ಯಾಂಕಿಂಗ್ ವ್ಯವಸ್ಥೆಯನ್ನು ಹೋಲಿಸುತ್ತಾ ಸುಸ್ಥಿರ ಬ್ಯಾಂಕಿಂಗ್‌ನ ಅಗತ್ಯತೆಯನ್ನು ಪ್ರತಿಪಾದಿಸಿದರು. ಗ್ರಾಹಕರು ಮಾರುಕಟ್ಟೆ ದರಗಳ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ಸುರಕ್ಷಿತ ಬ್ಯಾಂಕಿಂಗ್ ವ್ಯವಹರಿಸಬೇಕು ಎಂದು ಅವರು ಕಿವಿಮಾತು ಹೇಳಿದರು.


ಬೆಂಗಳೂರಿನ ಮೈಲ್ಸ್ ಫೌಂಡೇಶನ್‌ನ ಸಂಸ್ಥಾಪಕ ಮತ್ತು ಸಿಇಒ ಶ್ರೀ ವರುಣ್ ಜೈನ್ ಗೌರವ ಅತಿಥಿಯಾಗಿ ಭಾಗವಹಿಸಿದ್ದರು. ಬ್ಯಾಂಕಿಂಗ್ ಕ್ಷೇತ್ರದ ಇತಿಹಾಸವನ್ನು ಸ್ಮರಿಸಿದ ಅವರು, ಬ್ಯಾಂಕಿಂಗ್ ಕ್ಷೇತ್ರವು ನಂಬಿಕೆಯ ಮೇಲೆ ನಿಂತಿದೆ; ಬ್ಯಾಂಕ್‌ಗಳು ವಿಫಲವಾದರೆ ನಂಬಿಕೆ ಇಲ್ಲವಾಗಿ ಸಂಪೂರ್ಣ ಅರ್ಥವ್ಯವಸ್ಥೆಯೇ ಕುಸಿಯುತ್ತದೆ ಎಂದರು. ಇತ್ತೀಚಿನ ತಾಂತ್ರಿಕ ಬೆಳವಣಿಗೆಗಳು, ತ್ವರಿತ ಹಣ ವರ್ಗಾವಣೆ ಮತ್ತು ವಂಚನೆಗಳನ್ನು ತಡೆಯಲು ಕೃತಕ ಬುದ್ಧಿಮತ್ತೆಯ (AI) ಪಾತ್ರದ ಕುರಿತು ಅವರು ಬೆಳಕು ಚೆಲ್ಲಿದರು.


ಅಧ್ಯಕ್ಷೀಯ ನುಡಿಗಳನ್ನಾಡಿದ ವಿಶ್ವವಿದ್ಯಾಲಯದ ಕುಲಪತಿ ವಂದನೀಯ ಡಾ. (ಕರ್ನಲ್) ಪ್ರವೀಣ್ ಮಾರ್ಟಿಸ್ ಎಸ್.ಜೆ. ಅವರು, ಮಂಗಳೂರು ಒಂದು ಶತಮಾನಕ್ಕೂ ಮುಂಚೆಯೇ ಬ್ಯಾಂಕಿಂಗ್ ಹಬ್ ಆಗಿ ಬೆಳೆದಿದೆ. ಇಂದಿನ ತಂತ್ರಜ್ಞಾನವು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ತಂದಿದೆ ಎಂದರು. ವೇದಿಕೆಯಲ್ಲಿ ವಿಶ್ವವಿದ್ಯಾಲಯದ ಕುಲಸಚಿವ ಡಾ. ರೋನಾಲ್ಡ್ ನಜರೆತ್, ಪರೀಕ್ಷಾ ನಿಯಂತ್ರಕ ಡಾ. ಆರತಿ ಶಾನ್‌ಭಾಗ್, ಬಿಸಿನೆಸ್ ಮತ್ತು ಮ್ಯಾನೇಜ್‌ಮೆಂಟ್ ಸಹಾಯಕ ಡೀನ್ ಶ್ರೀ ಚೇತನ್ ಶೆಟ್ಟಿಗಾರ್, ಬಿಬಿಎ ವಿಭಾಗಾಧ್ಯಕ್ಷ ಶ್ರೀ ಸೋನಲ್ ಸ್ಟೀವನ್ ಲೋಬೋ ಹಾಗೂ ವಿಚಾರ ಸಂಕಿರಣದ ಸಂಚಾಲಕರಾದ ಡಾ. ವಿನೋಲ ಸಾಂಡ್ರಾ ಸಿಕ್ವೇರಾ ಮತ್ತು ಶ್ರೀಮತಿ ಕವಿತಾ ಎಂ. ಉಪಸ್ಥಿತರಿದ್ದರು.


ಉದ್ಘಾಟನಾ ಸಮಾರಂಭದ ನಂತರ "ಸಮಕಾಲೀನ ಬ್ಯಾಂಕಿಂಗ್ ವ್ಯವಸ್ಥೆ: ನಾವೀನ್ಯತೆ, ರಕ್ಷಣೆ, ಆಡಳಿತ ಮತ್ತು ಸುಸ್ಥಿರತೆ" ವಿಷಯದ ಕುರಿತು ಪ್ಯಾನಲ್ ಚರ್ಚೆ ನಡೆಯಿತು. ಈ ಚರ್ಚೆಯಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಉಪ ಮಹಾಪ್ರಬಂಧಕರಾದ ಶ್ರೀಮತಿ ತೇಜಸ್ವಿನಿ ವಿ. ಸಿ., ಎಂಸಿಸಿ ಬ್ಯಾಂಕ್‌ನ ಸಲಹೆಗಾರರಾದ ಶ್ರೀ ಎಸ್. ಎಚ್. ವಿಶ್ವೇಶ್ವರಯ್ಯ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಉಪ ಮಹಾಪ್ರಬಂಧಕರಾದ ಶ್ರೀ ಕೃಷ್ಣ ಮೋಹನ್ ಮುಚರ್ಲ ಅವರು ಭಾಗವಹಿಸಿದ್ದರು. ಯುಪಿಐ, ಡಿಜಿಟಲ್ ಬ್ಯಾಂಕಿಂಗ್, ಕೃತಕ ಬುದ್ಧಿಮತ್ತೆ, ಫಿನ್‌ಟೆಕ್ ಮತ್ತು ಡಾಟಾ ಆಧರಿತ ನಿರ್ಧಾರಗಳು ಆಧುನಿಕ ಬ್ಯಾಂಕಿಂಗ್ ಕ್ಷೇತ್ರವನ್ನು ಹೇಗೆ ಬದಲಾಯಿಸುತ್ತಿವೆ ಎಂಬುದರ ಕುರಿತು ಗಣ್ಯರು ಚರ್ಚಿಸಿದರು. ತಾಂತ್ರಿಕ ಬೆಳವಣಿಗೆಯ ಜೊತೆಗೆ ಸೈಬರ್ ಭದ್ರತೆ, ಗ್ರಾಹಕರ ಗೌಪ್ಯತೆ ಮತ್ತು ಜವಾಬ್ದಾರಿಯುತ ಆಡಳಿತಕ್ಕೆ ನೀಡಬೇಕಾದ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು.


ಈ ವಿಚಾರ ಸಂಕಿರಣದಲ್ಲಿ ಒಟ್ಟು 281 ಪ್ರತಿನಿಧಿಗಳು ಭಾಗವಹಿಸಿದ್ದರು. ಮಧ್ಯಾಹ್ನದ ಶೈಕ್ಷಣಿಕ ಗೋಷ್ಠಿಯಲ್ಲಿ ವಿದ್ಯಾರ್ಥಿಗಳಿಂದ ಸಂಶೋಧನಾ ಪ್ರಬಂಧ ಮಂಡನೆ ನಡೆಯಿತು. ಒಟ್ಟು 3 ವಿಭಾಗಗಳಲ್ಲಿ 18 ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಾಯಿತು. ಅತ್ಯುತ್ತಮ ಪ್ರಬಂಧಗಳಿಗೆ "ಬೆಸ್ಟ್ ಪೇಪರ್ ಪ್ರಶಸ್ತಿ" ನೀಡಿ ಗೌರವಿಸಲಾಯಿತು. ಕ್ಯಾರಲ್ ಶಾರಲ್ ಪಿರೇರಾ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಕವಿತಾ ಎಂ. ಸ್ವಾಗತಿಸಿದರು. ಡಾ. ಆರತಿ ಶಾನ್‌ಭಾಗ್ ವಿಚಾರ ಸಂಕಿರಣದ ಆಶಯ ನುಡಿಗಳನ್ನಾಡಿದರು. ಡಾ. ವಿನೋಲ ಸಾಂಡ್ರಾ ಸಿಕ್ವೇರಾ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top