ಜಿಜಿಜೆಸಿ ಪ್ರಧಾನ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ
ಹಾಸನ : ಶಿಕ್ಷಕ ವೃತ್ತಿ ಬಹಳ ಪವಿತ್ರವಾದುದು. ಅದನ್ನು ಎಲ್ಲರೂ ಗೌರವಿಸಬೇಕು. ಇಂದು ಎಲ್ಲ ರೀತಿಯ ಸರ್ವ ಶ್ರೇಷ್ಠ ಹುದ್ದೆಗಳಲ್ಲಿರವವರ ಮಾರ್ಗದರ್ಶಕರಾಗಿ ಅವರವರ ಶಿಕ್ಷಕರಿರುತ್ತಾರೆ. ಹಾಗೆಯೇ ಇಂದಿನ ಮಕ್ಕಳು ತಮಗೆ ನಿತ್ಯವೂ ಪಾಠಕಲಿಸುವ ಶಿಕ್ಷಕರನ್ನು ಸ್ಮರಿಸುವ ಸಲುವಾಗಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಉಪಪ್ರಾಂಶುಪಾಲರಾದ ಮಂಜುನಾಥ್ ರವರು ಹೇಳಿದರು.
ನಗರದ ಆರ್.ಸಿ. ರಸ್ತೆಯ ಜಿ. ಜಿ. ಜೆ. ಸಿ.(ಪ್ರಧಾನ), ಪ್ರೌಢಶಾಲಾ ವಿಭಾಗದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ವಿದ್ಯಾರ್ಥಿಗಳನ್ನು ಕುರಿತು ಮಾತನಾಡುತ್ತ ಇಂದಿನ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸದ ಕೊರತೆ ಎದ್ದು ಕಾಣುತ್ತದೆ. ಯಾವುದೇ ವಿದ್ಯಾರ್ಥಿ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಮುಂದಾದಾಗ ಆತ್ಮವಿಶ್ವಾಸ ಬಹಳ ಮುಖ್ಯ. ಆರೋಗ್ಯಕರ ಶರೀರದಲ್ಲಿ ಆರೋಗ್ಯಕರ ಮನಸ್ಸು ಇರುತ್ತದೆ. ವಿದ್ಯಾರ್ಥಿಗಳು ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು. ಆರೋಗ್ಯ ಚೆನ್ನಾಗಿದ್ದಾಗ ಮಾತ್ರ ಚೆನ್ನಾಗಿ ವ್ಯಾಸಂಗದಲ್ಲಿ ತೊಡಗಿಕೊಳ್ಳಲು ಸಾಧ್ಯ ಆದ್ದರಿಂದ ಎಲ್ಲರೂ ಆರೋಗ್ಯದಿಂದ ಇದ್ದು, ಆತ್ಮ ವಿಶ್ವಾಸದಿಂದ ಓದಿ ಉತ್ತಮ ಅಂಕಗಳನ್ನು ಗಳಿಸಿ ಶಾಲೆಗೆ ಕೀರ್ತಿ ತರಬೇಕು ಎಂದರು.
ಶಾಲೆಯ ಸಮಾಜ ವಿಜ್ಞಾನ ಶಿಕ್ಷಕರಾದ ಕೆ.ಎನ್. ಚಿದಾನಂದರವರು ಮುಖ್ಯ ಭಾಷಣಕಾರರಾಗಿ ಎಲ್ಲರನ್ನು ಉದ್ದೇಶಿಸಿ ಮಾತನಾಡುತ್ತಾ ಇಂದಿನ ಮಕ್ಕಳು ಸ್ಪರ್ಧಾತ್ಮಕ ಯುಗದಲ್ಲಿ ಬದುಕುತ್ತಿದ್ದಾರೆ. ಎ.ಐ. ತಂತ್ರಜ್ಞಾನ ಬಹಳ ಮುಂದುವರಿದಿದ್ದು, ಎಲ್ಲಾ ಕ್ಷೇತ್ರಗಳನ್ನು ಆವರಿಸಿದೆ. ಇಂದು ಮಕ್ಕಳು ಸರ್ವತೋಮುಖ ಜ್ಞಾನವನ್ನು ಪಡೆಯುವ ಮೂಲಕ ಇಂದಿನ ಆಧುನಿಕ ಪ್ರಪಂಚಕ್ಕೆ ಹೊಂದಿಕೊಳ್ಳಬೇಕು ಎಂದರು. ಮುಂದುವರಿದು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ಜೀವನ ವೃತ್ತಾಂತವನ್ನು ಮಕ್ಕಳಿಗೆ ತಿಳಿಸುತ್ತಾ, 1888 ರ - ಸೆಪ್ಟಂಬರ್ 5 ರಂದು ಮದರಾಸಿನ ತಿರುತ್ತಣಿ ಎಂಬಲ್ಲಿ ಜನಿಸಿದ ರಾಧಾಕೃಷ್ಣನ್ ರವರು, ಡಾ. ರಾಜೇಂದ್ರ ಪ್ರಸಾದ್ ರ ನಂತರ, 1962ರಲ್ಲಿ ಭಾರತದ ಎರಡನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿ, ತಮ್ಮ ಅಧಿಕಾರಾವಧಿಯಲ್ಲಿ ರಾಷ್ಟ್ರದ ಸರ್ವತೋಮುಖ ಏಳಿಗೆಗೆ ಅವಿರತವಾಗಿ ಶ್ರಮಿಸಿದರು. ಆಗ ಭಾರತ ದೇಶ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತರಕ್ಕೇರಿತು. ತಮ್ಮ ರಾಷ್ಟ್ರಪತಿ ಹುದ್ದೆಯ ಅಧಿಕಾರಾವಧಿ ಮುಗಿದ ನಂತರ 1967ರಲ್ಲಿ ತಮ್ಮ ನಿವೃತ್ತಿ ಜೀವನವನ್ನು ಮದ್ರಾಸಿನಲ್ಲಿ ಕಳೆದ ರಾಧಾಕೃಷ್ಣನ್ ರವರು 1975ರ ಏಪ್ರಿಲ್ 17 ರಂದು ಪಂಚಭೂತಗಳಲ್ಲಿ ಲೀನರಾದರು. ತಮ್ಮ ಜನ್ಮ ದಿನವನ್ನು ಶಿಕ್ಷಕ ಸಮೂಹಕ್ಕೆ ಮೀಸಲಿಟ್ಟ ಚಿರಧ್ರುವ ತಾರೆ, ಮಹಾನ್ ಆದರ್ಶ ಶಿಕ್ಷಕರಾದ ಅವರ ಜೀವನಾದರ್ಶಗಳನ್ನು ನಾವು ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಶಾಲೆಯ ಸಂಗೀತ ಶಿಕ್ಷಕರಾದ ಸತ್ಯನಾರಾಯಣ ಮುರಳಿ ಯವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಗುರು ಸದಾ ಪೂಜ್ಯನಾಗಿದ್ದು, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯೇ ತನ್ನ ಜೀವನದ ಪರಮ ಉದ್ದೇಶವಾಗಿರುತ್ತವೆ. ಅಂತಹ ಗುರುವನ್ನು ನಿತ್ಯವೂ ನೆನೆಯುವ ಮೂಲಕ ಪ್ರತಿ ವಿದ್ಯಾರ್ಥಿಯೂ ಗುರು ಕೃಪೆಗೆ ಪಾತ್ರರಾಗಬೇಕು ಎಂದರು. ಕನ್ನಡ ಭಾಷಾ ಶಿಕ್ಷಕರಾದ ರುದ್ರೇಶ್ ರವರು ಮಾತನಾಡಿ ಇಂದಿನ ಮಕ್ಕಳು ತಮ್ಮ ತಂದೆ ತಾಯಿ, ಗುರು ಹಿರಿಯರನ್ನು ಗೌರವಿಸುವ ಸಂಸ್ಕೃತಿ ಕಲಿಯಬೇಕಿದೆ. ಒಳ್ಳೆಯದನ್ನು ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. ವಿಜ್ಞಾನ ಶಿಕ್ಷಕರಾದ ಪಿ. ಮಧು ರವರು ಮಾತನಾಡಿ ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕತೆಯ ಗುಣವನ್ನು ಬೆಳೆಸಿಕೊಳ್ಳಬೇಕು. ವಿದ್ಯೆ ಕಲಿಸಿದ ಗುರುಗಳನ್ನು ಸದಾ ಸ್ಮರಿಸಬೇಕು. ಸಕಾರಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿನಿಯರಾದ ಕು. ನೂರ್ ಫಾತೀಮಾ , ಕು. ಮೇಘ ಕಾರ್ಯಕ್ರಮ ನಿರೂಪಿಸಿದರೆ ಕು. ಸಮೀನಾರವರು ಸರ್ವರನ್ನು ಸ್ವಾಗತಿಸಿದರು. ವಿದ್ಯಾರ್ಥಿನಿಯರ ತಂಡ ಪ್ರಾರ್ಥನೆ ಮಾಡಿತು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ಎ.ವಿ. ಗೀತಾರಾಣಿ, ಎಂ.ಆರ್. ರಂಗಾಮಣಿ, ಎಸ್. ಕೆ. ಪೂರ್ಣಿಮಾ, ತೈಬಾ ಕೌಸರ್, ಚಿದಾನಂದ , ಅಹಲ್ಯ , ಬಿ. ಇಡಿ. ಪ್ರಶಿಕ್ಷಣಾರ್ಥಿಗಳು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ
