ಶ್ರೀನಿವಾಸ್ ಯೂನಿವರ್ಸಿಟಿ: ಇಂಜಿನಿಯರಿಂಗ್ ವಿದ್ಯಾರ್ಥಿಗಳ ಓರಿಯೆಂಟೇಷನ್

Upayuktha
0


ಮಂಗಳೂರು (ಮುಕ್ಕ): ಇಲ್ಲಿನ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ 2026-27 ನೇ ಸಾಲಿನ ಪ್ರಥಮ ವರ್ಷದ ಬಿ.ಟೆಕ್ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಓರಿಯೆಂಟೇಷನ್ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ವೈಭವದಿಂದ ಜರುಗಿತು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀನಿವಾಸ್ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಾಧಿಪತಿ ಡಾ. ಎ. ಶ್ರೀನಿವಾಸ್ ರಾವ್ ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ನೂತನ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಉದ್ಘಾಟನೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.


ಕಲಿಕೆ ಜೀವನಕ್ಕಾಗಿ, ಪರೀಕ್ಷೆಗಾಗಿ ಅಲ್ಲ:

ಅಧ್ಯಕ್ಷೀಯ ಭಾಷಣ ಮಾಡಿದ ಕುಲಾಧಿಪತಿ ಡಾ. ಎ. ಶ್ರೀನಿವಾಸ್ ರಾವ್, "ಇಂಜಿನಿಯರಿಂಗ್ ವಿದ್ಯಾರ್ಥಿಗಳು 'ಜೀವನಕ್ಕಾಗಿ ಕಲಿಯಬೇಕು, ಪರೀಕ್ಷೆಗಲ್ಲ' (Learn for life, Not for the exam) ಎಂಬ ಧೈಯಿಟ್ಟುಕೊಳ್ಳಬೇಕು. ತಾಂತ್ರಿಕ ಮಾರುಕಟ್ಟೆಯ ಅಗತ್ಯಕ್ಕೆ ತಕ್ಕಂತೆ ವಿಶ್ವವಿದ್ಯಾಲಯವು ಮೌಲ್ಯವರ್ಧಿತ ಪಠ್ಯಕ್ರಮ ಅಳವಡಿಸಿಕೊಂಡಿದೆ. ಕೇವಲ ಉದ್ಯೋಗಾಕಾಂಕ್ಷಿಗಳಾಗದೇ, ನವೋದ್ಯಮ (Startups) ಹಾಗೂ ಸಂಶೋಧನೆಯತ್ತ ಗಮನ ಹರಿಸಿ ಉದ್ಯಮಶಿಲ್ಪಿಗಳಾಗಬೇಕು" ಎಂದು ಕರೆ ನೀಡಿದರು.


ಉಪಕುಲಪತಿ ಡಾ. ಕೆ. ಸತ್ಯನಾರಾಯಣ ರೆಡ್ಡಿ ಮಾತನಾಡಿ, ಇಂದಿನ ಜಗತ್ತಿನಲ್ಲಿ ತಾಂತ್ರಿಕ ನವೀನತೆ ಹಾಗೂ ಸೃಜನಾತ್ಮಕ ಪರಿಹಾರಗಳ ಮೂಲಕ ಸಮಾಜದ ಸವಾಲುಗಳನ್ನು ಎದುರಿಸುವಲ್ಲಿ ಇಂಜಿನಿಯರ್‌ಗಳ ಪಾತ್ರ ಮಹತ್ವದ್ದು ಎಂದರು.


ಸಂಸ್ಥೆಯ ಮುಖ್ಯಸ್ಥ ಡಾ. ರಾಮಕೃಷ್ಣ ಎನ್ ಹೆಗಡೆ ಸ್ವಾಗತಿಸಿ, ಕಳೆದ 38 ವರ್ಷಗಳಲ್ಲಿ ಸಂಸ್ಥೆ ಬೆಳೆದು ಬಂದ ಹಾದಿ, ಕಾಲೇಜಿನಲ್ಲಿ ಲಭ್ಯವಿರುವ ಇನ್‌ಕ್ಯುಬೇಷನ್ ಸೆಂಟರ್, ಸೆಂಟರ್ ಆಫ್ ಎಕ್ಸಲೆನ್ಸ್ ಹಾಗೂ ಪ್ಲೇಸ್‌ಮೆಂಟ್ ಸೌಲಭ್ಯಗಳ ಪರಿಚಯ ನೀಡಿದರು.


ವಿಶೇಷ ಆಕರ್ಷಣೆ – ಎಐ ರೋಬೋಟ್, ಹ್ಯೂಮನ್ ಡ್ರೋನ್ ಪ್ರದರ್ಶನ:

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರೊ. ವಿಶ್ವಾಸ್ ಶೆಟ್ಟಿ, ವಿಶಾಖ್ ಮೆಂಡನ್ ಹಾಗೂ ತಂಡದವರು ದೇಶದಲ್ಲೇ ಮೊದಲ ಬಾರಿಗೆ ವಿನ್ಯಾಸಗೊಳಿಸಿದ ಎಂಟು ಮೋಟಾರುಗಳ ಮನುಷ್ಯರನ್ನು ಹೊತ್ತೊಯ್ಯುವ ಡ್ರೋನ್ "ಶ್ರೀ ವಿಮಾನ್", ಕೃತಕ ಬುದ್ಧಿಮತ್ತೆ ಆಧಾರಿತ ಸ್ವಯಂಚಾಲಿತ ವಾಹನ "ಶ್ರೀ ವಾಹನ್" ಹಾಗೂ ಎಐ ರಿಸೆಪ್ಷನ್ ರೋಬೋಟ್ "ಶ್ರೀನಿ ಬೋಟ್" ಪ್ರದರ್ಶಿಸಲಾಯಿತು.


ವೇದಿಕೆಯಲ್ಲಿ ವಿಶ್ವಸ್ತ ಮಂಡಳಿಯ ಸದಸ್ಯರಾದ ವಿಜಯಲಕ್ಷ್ಮಿ ಆರ್. ರಾವ್, ಪ್ರೊ.  ಎ. ಮಿತ್ರಾ ಎಸ್ ರಾವ್, ಕುಲಸಚಿವ ಡಾ. ಅನಿಲ್ ಕುಮಾರ್, ಸಹಾಯಕ ಕುಲಸಚಿವ ಡಾ. ಜಯಶ್ರೀ ಬೋಳಾರ್ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.


ಕಾರ್ಯಕ್ರಮದ ಸಂಚಾಲಕಿ ಡಾ. ಆಶಾ ಸರಸ್ವತಿ ವಂದಿಸಿದರು, ವಿದ್ಯಾರ್ಥಿನಿ ಧನ್ಯಶ್ರೀ ರಾವ್ ಪ್ರಾರ್ಥಿಸಿದರು. ಪ್ರೊ. ರೋಹನ್ ಫೆರ್ನಾಂಡಿಸ್ ಮತ್ತು ನಿವೇದಿತಾ ನೀಲಣ್ಣನವರ್ ಕಾರ್ಯಕ್ರಮ ನಿರೂಪಿಸಿದರು. ಪ್ರಥಮ ವರ್ಷದ ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top