ಅಡಿಕೆ ವ್ಯವಹಾರದಲ್ಲಿ ಏನೋ ನಡೆಯುತ್ತಿದೆ, ಅನುಮಾನವೇ ಬೇಡ!

Shreya Hegde
0



ರಾಶಿ ಅಡಿಕೆ ಇಡಿಯೊಂದಿಗೆ ಪ್ರತಿಶತ 40 ಭಾಗ 'ಆಪಿ' (ಪುಡಿ/ಕೆಳದರ್ಜೆ ಅಡಿಕೆ) ಇರಬೇಕು ಎಂದು ಹೇಳುತ್ತಿರುವುದರ ಹಿಂದೆ, ಒಟ್ಟಾರೆ ಅಡಿಕೆ ವ್ಯವಹಾರದಲ್ಲಿ ದೊಡ್ಡ ಮಟ್ಟದ ವ್ಯವಸ್ಥಿತ ಮೋಸ ನಡೆಯುತ್ತಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ!


ಹಾಗಾದರೆ, ತೆರೆಮರೆಯಲ್ಲಿ ಏನೆಲ್ಲ ನಡೆಯುತ್ತಿರಬಹುದು!?


ಕಳೆದ ವರ್ಷ ಇದ್ದಕ್ಕಿದ್ದಂತೆ ರಾಶಿ ಇಡಿಯಲ್ಲಿ 'ಕಲ್ಗೋಟಿದೆ', 'ಪಾಲಿಶ್ಡ್ ಗೊರಬಲು ಇದೆ' ಎಂದು ಸಬೂಬು ಹೇಳಿ ಸುಮಾರು ಎರಡು ತಿಂಗಳು ಏಳೆಂಟು ಸಾವಿರ ರೂಪಾಯಿಗಳಷ್ಟು ಬೆಲೆಯನ್ನು ಏಕಾಏಕಿ ಇಳಿಸಲಾಯಿತು. ಈ ವರ್ಷ ಮುಂದುವರಿದು, ರಾಶಿ ಅಡಿಯೊಂದಿಗೆ ಪ್ರತಿಶತ 40 ಭಾಗ ಆಪಿ ಇರಲೇಬೇಕು ಎಂಬ ಹೊಸ ಕತೆಗಳನ್ನು ಕಟ್ಟುಕೊಂಡು ರೈತರನ್ನು ಗೊಂದಲಕ್ಕೀಡು ಮಾಡಲಾಗುತ್ತಿದೆ. ಇದರ ಜೊತೆಗೆ 'ಗುಟ್ಕಾ ನಿಷೇಧ'ದ ಸುದ್ದಿಯ ಉಪಕತೆಯನ್ನೂ ತಂದು ತಳಕು ಹಾಕಲಾಗಿದೆ.


ಬೆಲೆ ಇಳಿಕೆಗೆ ನಿಜವಾದ ಕಾರಣಗಳೇನು?

ಹೆಚ್ಚು ಅಡಿಕೆ ಮಾರುಕಟ್ಟೆಗೆ ದಾಂಗುಡಿ ಇಡುತ್ತಿರುವುದೇ ಈ ಎಲ್ಲಾ ನಾಟಕಗಳಿಗೆ ಕಾರಣವಿರಬಹುದೇ? ಅಥವಾ ಒಟ್ಟು ಅಡಿಕೆ ಬೆಳೆ ಹೆಚ್ಚುತ್ತಿರುವುದೇ ಈ ಬೆಲೆ ಕುಸಿತಕ್ಕೆ ಮೂಲ ಕಾರಣ ಎನ್ನಬಹುದೇ? ಒಂದು ಕಾಲದಲ್ಲಿ ಅಗತ್ಯಕ್ಕೆ ತಕ್ಕಷ್ಟು ಅಡಿಕೆಯನ್ನು ಕೆಲವೇ ಕೆಲವು ಜಿಲ್ಲೆಗಳಲ್ಲಿ ಬೆಳೆಯುತ್ತಿದ್ದಾಗ ಎಲ್ಲವೂ ಸರಿಯಿತ್ತು. ಆದರೆ ಇಂದು ಇಡೀ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಅಡಿಕೆ ಬೆಳೆ ವಿಸ್ತರಣೆಯಾಗಿದೆ. ಇದನ್ನು ಬಂಡವಾಳ ಮಾಡಿಕೊಂಡಿರುವ ಕೆಲವು ಪಟ್ಟಭದ್ರ ಹಿತಾಸಕ್ತಿಗಳು, ಮೊಸರಲ್ಲಿ ಕಲ್ಲು ಹುಡುಕಿದಂತೆ (ಅದಿಲ್ಲದಿದ್ದರೂ) ಅಡಿಕೆಯಲ್ಲಿ ಒಂದಲ್ಲ ಒಂದು ಕೊಂಕು ತೆಗೆದು ಬೆಲೆ ಇಳಿಸಲು ನಿರಂತರವಾಗಿ ಪ್ರಯತ್ನಿಸುತ್ತಿವೆ. ಇಷ್ಟು ಸಾಲದೆಂಬಂತೆ, ವಿದೇಶದಿಂದ ಅಕ್ರಮವಾಗಿ ಕಳಪೆ ಅಡಿಕೆಯನ್ನು ಆಮದು ಮಾಡಿಕೊಂಡು, ಅಡಿಕೆ ವ್ಯವಹಾರದ ಆಟಕ್ಕೆ ನಿರಂತರವಾಗಿ ಸ್ಪಿನ್ ಮತ್ತು ಟ್ವಿಸ್ಟ್ ನೀಡಲಾಗುತ್ತಿದೆ!


ಉತ್ಪಾದನೆ ಕುಸಿದಿದೆ ಎಂಬ ಸರ್ಕಾರದ ಅಚ್ಚರಿಯ ಲೆಕ್ಕಾಚಾರ!


ಅರ್ಥವಾಗದ ಮತ್ತೊಂದು ದೊಡ್ಡ ವಿಚಾರವೆಂದರೆ, ಕಳೆದ ವರ್ಷ ಒಟ್ಟಾರೆ ದೇಶದ ಅಡಿಕೆ ಉತ್ಪಾದನೆಯಲ್ಲಿ ಶೇ. 37ರಷ್ಟು ಕಮ್ಮಿಯಾಗಿದೆ ಎಂದು ಕೇಂದ್ರ ಸರ್ಕಾರದ ವರದಿ ಹೇಳುತ್ತದೆ! (ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರ ಪ್ರಶ್ನೆಗೆ ಸಂಸತ್ತಿನಲ್ಲಿ ನೀಡಲಾದ ಉತ್ತರ ಇದು).


ಇದು ಹೇಗೆ ಸಾಧ್ಯ?

ಬಯಲು ಸೀಮೆ ಭಾಗದಲ್ಲಿ ಕಳೆದ ವರ್ಷ ಯಾವುದೇ ಬರಗಾಲವಿರಲಿಲ್ಲ, ಮಾರಕ ರೋಗಗಳು ಬಾಧಿಸಿರಲಿಲ್ಲ, ಇಳುವರಿಯೂ ಕಡಿಮೆಯಾಗಿರಲಿಲ್ಲ. ಹಾಗಾದರೆ ದೇಶದ ಒಟ್ಟಾರೆ ಅಡಿಕೆ ಉತ್ಪಾದನೆ ಹಿಂದಿನ ವರ್ಷಕ್ಕಿಂತ ಶೇ. 37ರಷ್ಟು ಕುಸಿಯಲು ಹೇಗೆ ಸಾಧ್ಯ?


ಮಲೆನಾಡು ಮತ್ತು ಕರಾವಳಿಯ ಒಂದಿಷ್ಟು ಭಾಗದಲ್ಲಿ ಎಲೆಚುಕ್ಕಿ ರೋಗದಿಂದ ಅಡಿಕೆ ಇಳುವರಿ ಕಡಿಮೆಯಾಗಿರುವುದು ನಿಜ. ಆದರೆ, ಅತಿ ಹೆಚ್ಚು ಅಡಿಕೆ ಬೆಳೆಯುವ ಅರೆಮಲೆನಾಡು ಮತ್ತು ಬಯಲು ಸೀಮೆಗಳಲ್ಲಿ ಅಡಿಕೆ ಬೆಳೆ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಹೆಚ್ಚುತ್ತಿರುವ ವಾಸ್ತವ ನಮ್ಮ ಕಣ್ಣಮುಂದಿದೆ. ಹೀಗಿರುವಾಗ, ದೇಶದ ಅಡಿಕೆ ಉತ್ಪಾದನೆ ಶೇ. 37ರಷ್ಟು ಕುಸಿದಿದೆ ಎಂದು ಬಿಂಬಿಸುವುದರ ಹಿಂದೆ ನಿಜವಾದ ಉದ್ದೇಶವೇನು? ವಿದೇಶದಿಂದ ಸುಲಭವಾಗಿ, ಯಾವುದೇ ಹೆಚ್ಚಿನ ಸುಂಕವಿಲ್ಲದೆ (ಕೇವಲ 351 ರೂಪಾಯಿ ಪ್ರತಿ ಕೆ.ಜಿ. ದರದಲ್ಲಿ) ಹೆಚ್ಚುವರಿ ಅಡಿಕೆ ಆಮದು ಮಾಡಿಕೊಳ್ಳಲು ದಾರಿ ಮಾಡಿಕೊಡುವ ಇರಾದೆ ಇದರ ಹಿಂದೆ ಇದೆಯೇ?


ಅಥವಾ ದೇಶದ ಒಳಭಾಗದಲ್ಲೂ ನಂಬರ್ 'ಟು' ಅಕೌಂಟ್‌ನಲ್ಲಿ ಅತಿ ಹೆಚ್ಚು ಅಡಿಕೆ ವಹಿವಾಟು ನಡೆಯುತ್ತಿರುವುದೇ ಇದಕ್ಕೆ ಕಾರಣವೇ?


ಎಪಿಎಂಸಿ (APMC) ಒಳಗೆ ಬಂದ ಅಧಿಕೃತ ವಹಿವಾಟಿನ ಲೆಕ್ಕವನ್ನು ಮಾತ್ರ ಸರ್ಕಾರದ ಮುಂದಿಟ್ಟು, "ಶೇ. 37ರಷ್ಟು ಅಡಿಕೆ ಕಡಿಮೆಯಾಗಿದೆ" ಎಂದು ಕಾಗದದ ಮೇಲಿನ ಸುಳ್ಳು ಲೆಕ್ಕ ಬರೆಯಲಾಗುತ್ತಿದೆಯೇ?ಹಾಗಾದರೆ, ಅಡಿಕೆ ಉತ್ಪಾದನೆಯೂ ಏರುತ್ತಿದೆ ಮತ್ತು ಅದಕ್ಕಿಂತ ಹೆಚ್ಚಾಗಿ ಜಿಎಸ್‌ಟಿ (GST) ಬಿಲ್ ಇಲ್ಲದೆ ನಡೆಯುವ ಅಡಿಕೆ ವಹಿವಾಟಿನ ಪ್ರಮಾಣವೂ ಗಣನೀಯವಾಗಿ ಏರುತ್ತಿದೆ ಎಂದರ್ಥವಲ್ಲವೇ? ಈ ಜಿಎಸ್‌ಟಿ ರಹಿತ ಅಡಿಕೆ ವ್ಯವಹಾರದ ಮೇಲೆ ಯಾವುದೇ ಸರ್ಕಾರಗಳ ನಿಯಂತ್ರಣವೂ ಇಲ್ಲದಂತಾಗಿದೆಯಲ್ಲವೇ?


ದೇಶದ ಗಡಿಯಲ್ಲಿ ಭದ್ರತೆಯ ಕಣ್ಣುತಪ್ಪಿಸಿ (ಅಥವಾ ಕಸ್ಟಮ್ಸ್ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ದೊಡ್ಡ ವರ್ತಕರ ಒಳಒಪ್ಪಂದದೊಂದಿಗೆ!) ವಿದೇಶಿ ಅಕ್ರಮ ಅಡಿಕೆ ಆಮದು ನಿರಂತರವಾಗಿ ನಡೆಯುತ್ತಿದ್ದರೂ ಸರ್ಕಾರಗಳು ನಿಷ್ಕ್ರಿಯವಾಗಿರುವುದು ದುರಂತ. ಇನ್ನು ದೇಶದ ಒಳಗಡೆ ಜಿಎಸ್‌ಟಿ, ಎಪಿಎಂಸಿ ಅಥವಾ ಚೆಕ್‌ಪೋಸ್ಟ್‌ಗಳ ನಿಯಂತ್ರಣವಿಲ್ಲದೆ ಇಷ್ಟು ದೊಡ್ಡ ಪ್ರಮಾಣದ ಅಕ್ರಮ ಅಡಿಕೆ ವ್ಯವಹಾರ ನಡೆಯುತ್ತಿರುವುದು ಯಾರಿಗೂ ಆಶ್ಚರ್ಯ ತರದಿರಲಾರದು. ಇದರ ನೇರ ಪರಿಣಾಮ ಇಂದು ಅಡಿಕೆ ಬೆಲೆ ಪಾತಾಳಕ್ಕೆ ಕುಸಿಯುವಂತೆ ಮಾಡುತ್ತಿದೆ.


ಜನಪ್ರತಿನಿಧಿಗಳ ಮೌನದ ರಹಸ್ಯವೇನು?

ಕಬ್ಬು ಬೆಳೆ ಸಮಸ್ಯೆ ಬಂದಾಗ ಜನಪ್ರತಿನಿಧಿಗಳು ಸೈಲೆಂಟ್ ಆಗುತ್ತಾರೆ; ಏಕೆಂದರೆ ಬಹುತೇಕ ಸಕ್ಕರೆ ಕಾರ್ಖಾನೆಗಳ ಒಡೆಯರು ಅವರೇ ಆಗಿರುತ್ತಾರೆ. ಶಿಕ್ಷಣ ಕ್ಷೇತ್ರದ ಸಮಸ್ಯೆ ಬಂದಾಗಲೂ ಜನಪ್ರತಿನಿಧಿಗಳು ತುಟಿಕ್ ಪಿಟಿಕ್ ಎನ್ನುವುದಿಲ್ಲ; ಏಕೆಂದರೆ ಬಹುತೇಕ ಶಿಕ್ಷಣ ಸಂಸ್ಥೆಗಳ ಮಾಲೀಕರು ಅವರೇ ಆಗಿರುತ್ತಾರೆ.


ಹಾಗೆಯೇ, ಅಡಿಕೆ ಸಮಸ್ಯೆ ಬಂದಾಗಲೂ ಜನಪ್ರತಿನಿಧಿಗಳು ಸಂಪೂರ್ಣ ಮೌನ ವಹಿಸುತ್ತಾರೆ; ಏಕೆಂದರೆ ಅಡಿಕೆ ವ್ಯವಹಾರದ ಹಿಂಬಾಲಕರು ಅಥವಾ ಪ್ರಮುಖ ಪಾಲುದಾರರು ಕೂಡ ಬಹುತೇಕ ಅವರೇ ಆಗಿದ್ದಾರೆಯೇ!? ಇಲ್ಲವಾದರೆ, ದಿನದಿಂದ ದಿನಕ್ಕೆ ಅಡಿಕೆ ದರ ಕುಸಿಯುತ್ತಿದ್ದರೂ, ಅಕ್ರಮ ಅಡಿಕೆ ಆಮದು ಮಿತಿಮೀರುತ್ತಿದ್ದರೂ, ಅಡಿಕೆ ಬೆಳೆ ವಿಸ್ತಾರಗೊಳ್ಳುತ್ತಿದ್ದರೂ... ಅಧಿಕಾರದಲ್ಲಿರುವ ಜನಪ್ರತಿನಿಧಿಗಳು ಬಾಯಿಗೆ ಫೆವಿಕ್ವಿಕ್ ಹಾಕಿಕೊಂಡವರಂತೆ ಸುಮ್ಮನಿರುವುದೇಕೆ?


— ಅರವಿಂದ ಸಿಗದಾಳ್, ಮೇಲುಕೊಪ್ಪ

9449631248

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top