ಹುನಗುಂದ: ಅಪ್ಪ, ಅವ್ವ ಮತ್ತು ಮಗ ಮೂವರ ನಡುವೆ ಕರುಳಿನ ಸಂಬಂಧ ಸೆಳೆತ ನಾಟಕದ ತುಂಬಾ ನಿರಂತರವಾಗಿ ಜೀವಜಲದಂತೆ ಹರಿದುಕೊಂಡು ಹೋಗುತ್ತದೆ. ಪ್ರಸ್ತುತ ಬದುಕಿನ ಜೊತೆಯಾಗುವ ಮಗ ಸೀನಪ್ಪ ತನ್ನ ಭವಿಷ್ಯದ ಹಾದಿಗೆ ತೆರೆದುಕೊಳ್ಳುವ ಹವಣಿಕೆ ಮತ್ತು ಅನಿವಾರ್ಯತೆ ಅವನದು. ಆದರೆ ಅಪ್ಪನ ಶಿಸ್ತುಬದ್ಧತೆ, ಪಾಲಿಸುವ ತತ್ವಗಳು, ಧಾರ್ಮಿಕ ಆಚರಣೆ ಹಾಗೂ ನಿಯಮ ಪಾಲನೆ ಎಲ್ಲವೂ ಸೀನಪ್ಪನ ಬದುಕಿನಲ್ಲಿ ಸಿನಿಕತನ ಹುಟ್ಟಿಸುತ್ತವೆ. ಅವ್ವ ಮಾತ್ರ ಎಲ್ಲವನ್ನೂ ಸಾಕ್ಷಿ ಎಂಬಂತೆ ಕುಟುಂಬ ವತ್ಸಲೆಯಾಗಿರುತ್ತಾಳೆ.
ಹುಬ್ಬಳ್ಳಿಯ ಬಹುಮುಖಿ ರಂಗ ಸಂಸ್ಥೆ ನಗರದ ರಾಯರ ಮಠದಲ್ಲಿ ಈಚೆಗೆ ಶ್ರೀನಿವಾಸ ವೈದ್ಯ ಅವರ ಸಣ್ಣಕತೆ ಆಧಾರಿತ ಶ್ರದ್ಧಾ ಎಂಬ ನಾಟಕ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಪ್ರದರ್ಶನದ ವ್ಯವಸ್ಥೆಯನ್ನು ಹವ್ಯಾಸಿ ನಾಟಕ ಕಂಪನಿ ಮಾಡಿತ್ತು. ಐವತ್ತೈದು ನಿಮಿಷಗಳ ನಾಟಕ ಆರಂಭದಿಂದ ಅಂತ್ಯದವರೆಗೆ ಕಣ್ಣಗಲಿಸಿ ನೋಡುವಂತೆ ಮಾಡಿತು. ಸೀನಪ್ಪನೆ ಕತೆಯ ನಿರೂಪಕನಾದರೂ ಮಧ್ಯದಲ್ಲಿ ಅಪ್ಪನ ಆಂಗಿಕ ಚಲನೆ ಮತ್ತು ಸಂಭಾಷಣೆ ಪ್ರದರ್ಶನಕ್ಕೆ ಇಂಬು ತರುತ್ತವೆ.
ಅಪ್ಪನ ಶ್ರಾದ್ಧದ ದಿನದಿಂದ ಆರಂಭವಾದ ನಾಟಕ ಸೀನಪ್ಪನ ಜೀವನ ವೃತ್ತಾಂತ ತೆರೆದಿಡುತ್ತದೆ. ಇವನ ಬಾಲ್ಯ, ಶಿಕ್ಷಣ, ಗೆಳೆಯರು ಒಡನಾಟ, ಹವ್ಯಾಸ, ನೌಕರಿಗಾಗಿ ಮುಂಬೈ ತೆರಳುವ ಕ್ಷಣಗಳು 60 ರ ದಶಕದ ಮಧ್ಯಮ ವರ್ಗದ ಅದರಲ್ಲೂ ಬ್ರಾಹ್ಮಣ ಕುಟುಂಬದ ತೊಳಲಾಟವನ್ನು ಕಾಣಿಸುತ್ತದೆ. ಮನುಷ್ಯನ ಭಾವನೆಗಳು ಮತ್ತು ಮಾನವೀಯತೆ ಬದುಕನ್ನು ಕಟ್ಟುತ್ತವೆ. ಪ್ರತಿ ಸಂಭಾಷಣೆ ಹಾಗೂ ಅಭಿನಯ ಇದಕ್ಕೆ ಪೂರಕವಾಗಿದ್ದು ನಾಟಕವನ್ನು ಗೆಲ್ಲಿಸಿದವು. ಸೂಕ್ತ ಬೆಳಕು, ವಸ್ತ್ರ ವಿನ್ಯಾಸ ಮತ್ತು ಸಂಗೀತ ಪ್ರದರ್ಶನದ ಯಶಸ್ಸಿಗೆ ಕಾರಣವಾದವು.
ಇಂಟಿಮೇಟ್ ಥೇಟರ್ ದಲ್ಲಿ ಆಪ್ತವಾಗಿ ಕಾಣಿಸುವ ನಾಟಕ ಇದು. ಮಧ್ಯದಲ್ಲಿರುವ ಕಂಬ ಬದುಕಿಗೆ ಗಟ್ಟಿಯಾಗಿ ನಿಲ್ಲಬೇಕು ಎನ್ನುವಂತೆ ಸೂಚಿಸುತ್ತದೆ. ಪ್ರದರ್ಶನದ ಆರಂಭಕ್ಕೆ ದೀಪದ ಬೆಳಕು ಹಿಡಿದು ಬರುವ ಸೀನಪ್ಪ ಕೊನೆತನಕ ಭವಿಷ್ಯದ ಬೆಳಕಿಗಾಗಿ ಹಾತೊರೆಯುವನು. ಅನುಭವಿ ನಟರಾದ ಮಂಜು ಮಂಡಲಗೇರಿ, ಮೃತ್ಯುಂಜಯ ಹಿರೇಮಠ ಮತ್ತು ಲಕ್ಷ್ಮಿ ಹನಸಿ ಮನೋಜ್ಞ ಅಭಿನಯ ನೀಡಿದ್ದಾರೆ. ನವೀನ ಭೂಮಿ ಅವರ ಸಮರ್ಥ ನಿರ್ದೇಶನ, ವಿನ್ಯಾಸ ಮತ್ತು ರಂಗರೂಪ ನಾಟಕಕ್ಕೆ ಹೆಚ್ಚುಗಾರಿಕೆ ತಂದವು.
- ಎಸ್ಕೆ ಕೊನೆಸಾಗರ, ಹುನಗುಂದ
