ಹುನಗುಂದ: ಹಿರಿಯರು ನಡೆದು ಬಂದ ದಾರಿ, ಅವರ ಆದರ್ಶಗಳು ಹಾಗೂ ಸಮಾಜದಲ್ಲಿ ಹಿರಿಯರ ಪಾತ್ರ ಸೇರಿದಂತೆ ಜೀವನದ ವಿವಿಧ ಆಯಾಮಗಳನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಅಳವಡಿಸಿಕೊಳ್ಳಬೇಕು. ಇದೇ ಜೀವನದ ನೈಜ ನಾಟಕವಾಗಿದೆ ಎಂದು ವಿಜಯಮಹಾಂತೇಶ ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಡಾ. ಮಹಾಂತೇಶ ಕಡಪಟ್ಟಿ ಹೇಳಿದರು.
ಪಟ್ಟಣದ ವಿಜಯಮಹಾಂತೇಶ ಮಹಾವಿದ್ಯಾಲಯ ಹಾಗೂ ಸಂಸ್ಕೃತಿ ಬಳಗ (ಹೊಸಬ) ಸಹಯೋಗದಲ್ಲಿ ಹುಬ್ಬಳ್ಳಿಯ ಬಹುಮುಖಿ ರಂಗ ಸಂಸ್ಥೆಯ ಕಲಾವಿದರು ಪ್ರದರ್ಶಿಸಿದ ‘ಶ್ರದ್ಧಾ’ ನಾಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಲವು ವರ್ಷಗಳಿಂದ ಕಲಾವಿದರು ನೈಜವಾಗಿ ಪ್ರದರ್ಶಿಸುತ್ತಿರುವ ನಾಟಕಗಳು ಸಮಾಜ ಹಾಗೂ ಪ್ರತಿಯೊಬ್ಬರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ. ಪುಸ್ತಕಗಳ ಓದು, ಸಿನಿಮಾ ಹಾಗೂ ಮೊಬೈಲ್ ಬಳಕೆಯಿಂದ ದೊರೆಯುವ ಮನರಂಜನೆಗಿಂತ ನಾಟಕಗಳನ್ನು ನೇರವಾಗಿ ವೀಕ್ಷಿಸುವುದರಿಂದ ವಿದ್ಯಾರ್ಥಿಗಳಿಗೆ ಜೀವನದ ವಿವಿಧ ಪಾತ್ರಗಳನ್ನು ಅರ್ಥಮಾಡಿಕೊಳ್ಳುವ ಹಾಗೂ ಸಮಾಜದ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಗ್ರಹಿಸುವ ಸಾಮರ್ಥ್ಯ ಬೆಳೆಯುತ್ತದೆ ಎಂದು ಹೇಳಿದರು.
ದೈಹಿಕ ಶಿಕ್ಷಣ ನಿರ್ದೇಶಕ ಎಸ್.ಬಿ. ಚಳಗೇರಿ ಮಾತನಾಡಿ, ಅಭಿನಯ, ರಂಗಸಜ್ಜಿಕೆ ಹಾಗೂ ಹಾಡುಗಾರಿಕೆಯ ಸಮನ್ವಯವೇ ರಂಗಕರ್ಮಿಯ ಪ್ರಮುಖ ಉದ್ದೇಶವಾಗಿದೆ. ಪ್ರತಿಯೊಂದು ಕಾರ್ಯವನ್ನೂ ಶ್ರದ್ಧಾಪೂರ್ವಕವಾಗಿ ಮಾಡಿದಾಗ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ವಿದ್ಯಾರ್ಥಿಗಳು ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕು. ನಾಟಕಗಳು ಸಮಾಜದಲ್ಲಿ ಪರಿವರ್ತನೆ ತರುವುದರ ಜೊತೆಗೆ ಉತ್ತಮ ಸಂದೇಶಗಳನ್ನು ನೀಡುತ್ತವೆ ಎಂದರು. ನಾಟಕ ತಂಡದ ನಿಖಿಲ್ ಪಾಟೀಲ ಮಾತನಾಡಿ, ನಾಟಕ ಕೇವಲ ಮನರಂಜನೆಯ ಸಾಧನವಲ್ಲ. ಅದು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಆತ್ಮವಿಶ್ವಾಸ, ಸಂವಹನ ಕೌಶಲ್ಯ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುತ್ತದೆ. ಆಧುನಿಕ ತಂತ್ರಜ್ಞಾನ ಮತ್ತು ಬದಲಾಗುತ್ತಿರುವ ಸಾಮಾಜಿಕ ಪರಿಸ್ಥಿತಿಗೆ ಅನುಗುಣವಾಗಿ ರಂಗಕಲೆಯಲ್ಲಿಯೂ ಹೊಸ ಪ್ರಯೋಗಗಳು ನಡೆಯುತ್ತಿವೆ. ವಿದ್ಯಾರ್ಥಿಗಳು ಇಂತಹ ಪ್ರಯೋಗಗಳನ್ನು ಪರಿಚಯಿಸಿಕೊಂಡು ಅಭಿನಯ, ನಿರ್ದೇಶನ, ಬೆಳಕು, ಧ್ವನಿ ಹಾಗೂ ರಂಗಸಜ್ಜಿಕೆಯಂತಹ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೋಲಗೊಂಡ ವಹಿಸಿದ್ದರು. ಡಾ. ಎಲ್.ಎನ್. ಕುಲಕರ್ಣಿ, ಡಾ. ಆರ್.ಎಸ್. ನಾಗಣ್ಣವರ, ಚಟುವಟಿಕೆ ವಿಸ್ತರಣೆ ಸಂಯೋಜಕ ಎಸ್.ಬಿ. ಚಳಗೇರಿ, ಕಾಲೇಜು ಒಕ್ಕೂಟ ಕಾರ್ಯಾಧ್ಯಕ್ಷ ಶ್ರೀನಿಧಿ ಆರ್.ಎ., ಡಾ. ಸಂತೋಷ ನಾಯಕ, ಹೊಸಬ ತಂಡದ ವೀರೇಶ ಕುರ್ತಕೋಟಿ, ಐ.ಎಚ್. ನಾಯಿಕ ಹಾಗೂ ಶಿವಬಸವ ಅಂಗಡಿ ಉಪಸ್ಥಿತರಿದ್ದರು. ಹೊಸಬದ ಅಶೋಕ ಬಾವಿಕಟ್ಟಿ ನಿರೂಪಿಸಿದರು. ವಾದಿರಾಜ ಗುಡ್ಡದ ವಂದಿಸಿದರು.
