ಮಂಗಳೂರು : ಶಕ್ತಿನಗರದ ಶಕ್ತಿ ವಿದ್ಯಾಸಂಸ್ಥೆಯ ವಸತಿ ನಿಲಯದ ವಿದ್ಯಾರ್ಥಿಗಳು ಹಾಗೂ ಶಕ್ತಿ ಶ್ರೀ ಗಣೇಶೋತ್ಸವ ಸೇವಾ ಸಮಿತಿಯ ಜಂಟಿ ಆಶ್ರಯದಲ್ಲಿ ತೃತೀಯ ವರ್ಷದ ಶ್ರೀ ಗಣೇಶೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ದಿನಾಂಕ 14-09-2026 ರಂದು ಆಚರಿಸಲಾಯಿತು.
ಗೌರಿ ಗಣೇಶ ಹಬ್ಬದ ದಿನದಂದು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ವೈಭವದ ಮೆರವಣಿಗೆಯ ಮೂಲಕ ಗಣೇಶ ಮೂರ್ತಿಯನ್ನು ವಿದ್ಯಾಸಂಸ್ಥೆಗೆ ತರಲಾಯಿತು. ಗಣೇಶ ಚತುರ್ಥಿಯ ಶುಭದಿನದಂದು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಪುರೋಹಿತ ವೆಂಕಟ್ರಮಣ ಭಟ್ ಅವರ ನೇತೃತ್ವದಲ್ಲಿ ಪ್ರತಿಷ್ಠಾಪನಾ ಪೂಜೆ ನೆರವೇರಿತು.
ಧ್ವಜಾರೋಹಣ ಹಾಗೂ ಭಜನೆ : ಸಮಿತಿಯ ಅಧ್ಯಕ್ಷರಾದ ಶ್ರೀ ಅರುಣ್ ನಾಯಕ್ ಅವರು ಓಂಕಾರ ಧ್ವಜಾರೋಹಣ ನೆರವೇರಿಸಿದರು. ಪೂರ್ಣ ವಂದೇ ಮಾತರಂ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಗಣೇಶೋತ್ಸವದ ಜನಕ ಬಾಲಗಂಗಾಧರ ತಿಲಕ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಸಂಸ್ಥೆಯ ನೂರಾರು ವಿದ್ಯಾರ್ಥಿಗಳು ಏಕಕಾಲದಲ್ಲಿ ನಡೆಸಿಕೊಟ್ಟ ಭಜನಾ ಸಂಕೀರ್ತನೆ ಮನಸೆಳೆಯಿತು.
ಭವ್ಯ ಶೋಭಾಯಾತ್ರೆ : ಸಂಜೆ 4 ಗಂಟೆಗೆ ನಡೆದ ಗಣೇಶನ ಭವ್ಯ ಶೋಭಾಯಾತ್ರೆಗೆ ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ.ಸಿ. ನ್ಯಾಕ್, ಟ್ರಸ್ಟಿ ಸಗುಣ ಸಿ. ನ್ಯಾಕ್ ಹಾಗೂ ಅತಿಥಿಗಳಾದ ಶ್ರೀ ವಿಜಯ ಕುಮಾರ್ ನ್ಯಾಕ್ ದಂಪತಿಗಳು ಚಾಲನೆ ನೀಡಿದರು.
ಮೆರವಣಿಗೆಯ ಆಕರ್ಷಣೆ : ಶಕ್ತಿ ವಿದ್ಯಾಸಂಸ್ಥೆಯಿಂದ ಹೊರಟ ಮೆರವಣಿಗೆಯು ಶ್ರೀ ಗೋಪಾಲಕೃಷ್ಣ ದೇವಸ್ಥಾನ ರಸ್ತೆ, ಪೊಲೀಸ್ ಕ್ವಾರ್ಟರ್ಸ್, ಶಕ್ತಿನಗರ ಬಸ್ ನಿಲ್ದಾಣ ಹಾಗೂ ಶ್ರೀ ಮುತ್ತಪ್ಪ ಗುಡಿಯ ಮಾರ್ಗವಾಗಿ ಸಾಗಿಬಂತು. ವಿದ್ಯಾರ್ಥಿಗಳ ಚೆಂಡೆವಾದನ, ಕುಣಿತ ಭಜನೆ, ಹುಲಿವೇಷ, ತಾಸೆ ಮತ್ತು ವೈವಿಧ್ಯಮಯ ವೇಷಭೂಷಣಗಳು ಮೆರವಣಿಗೆಗೆ ಮೆರಗು ನೀಡಿದವು. ಶ್ರೀ ಕ್ಷೇತ್ರ ಮುತ್ತಪ್ಪ ಗುಡಿಯ ಟ್ರಸ್ಟಿಗಳು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಶೋಭಾಯಾತ್ರೆಯನ್ನು ಗೌರವದಿಂದ ಬರಮಾಡಿಕೊಂಡರು. ವಿದ್ಯಾರ್ಥಿಗಳ ಶಿಸ್ತುಬದ್ಧ ಮೆರವಣಿಗೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
ಸಂಸ್ಥೆಯ ಆವರಣದಲ್ಲಿ ವಿಸರ್ಜನಾ ಪೂಜೆಯನ್ನು ನೆರವೇರಿಸಿದ ಬಳಿಕ, ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಪೂರ್ಣ ವಂದೇ ಮಾತರಂ ಗೀತೆಯೊಂದಿಗೆ ಸಂಸ್ಥೆಯ ಬಾವಿಯಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು.
ಈ ಶುಭ ಸಂದರ್ಭದಲ್ಲಿ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ., ಶಕ್ತಿ ರೆಸಿಡೆನ್ಷಿಯಲ್ ಶಾಲೆಯ ಪ್ರಾಂಶುಪಾಲೆ ಸುರೇಖಾ ಆರ್. ಭಟ್, ಸಮಿತಿಯ ಅಧ್ಯಕ್ಷ ಅರುಣ್ ನಾಯಕ್, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
