ಮಂಗಳೂರು: ಹಿರಿಯ ಲೇಖಕಿ, ಸಾಹಿತ್ಯ ಸಂಘಟಕಿ, ಸುರತ್ಕಲ್ ಗೋವಿಂದ ದಾಸ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಲೀಲಾವತಿ ಎಸ್. ರಾವ್ (83) ಇಂದು ಮೈಸೂರಿನಲ್ಲಿ ನಿಧನ ಹೊಂದಿದರು.
ಪತಿ ಎಂ.ಸಿ.ಎಫ್. ನಿವೃತ್ತ ಎಂಜಿನಿಯರ್ ಪಿ. ಶ್ರೀನಿವಾಸ ರಾವ್ ಹಾಗೂ ಓರ್ವ ಪುತ್ರ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಹಾಸನದ ಎ.ವಿ.ಕೆ. ಕಾಲೇಜಿನಲ್ಲಿ ಎರಡು ವರ್ಷಗಳ ಕಾಲ ಉಪನ್ಯಾಸಕಿಯಾಗಿ ಅನಂತರ ಮೈಸೂರು ವಿ.ವಿಯಲ್ಲಿ ಎರಡು ವರ್ಷ ಹರಿದಾಸ ಸಾಹಿತ್ಯ ವಿಭಾಗ ದಲ್ಲಿ ಸಂಶೋಧನಾ ಸಹಾಯಕಿಯಾಗಿ ಸೇವೆ ಸಲ್ಲಿಸಿದರು. 1972 ರಲ್ಲಿ ಸುರತ್ಕಲ್ ನ ಗೋವಿಂದ ದಾಸ ಕಾಲೇಜಿನಲ್ಲಿ ಉಪನ್ಯಾಸಕಿ ಯಾಗಿ ಸೇರಿ ಕನ್ನಡ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸಿ 2001ರಲ್ಲಿ ನಿವೃತ್ತಿ ಹೊಂದಿದರು.
ಗೋವಿಂದ ದಾಸ ಕಾಲೇಜಿನ ಸಾಹಿತ್ಯ ಸಂಘದ ಅಧ್ಯಕ್ಷೆಯಾಗಿ ಕಲಾ ನಿರ್ದೇಶಕಿಯಾಗಿ ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಮತ್ತು ಕಲಾ ಅಭಿರುಚಿ ಮೂಡಿಸಿದ್ದರು. ಕರಾವಳಿ ಲೇಖಕಿ ಮತ್ತು ವಾಚಕಿಯರ ಸಂಘದ ಸ್ಥಾಪಕ ಸದಸ್ಯೆಯಾಗಿ ಅಧ್ಯಕ್ಷೆ ಯಾಗಿ ಸಾಹಿತ್ಯ ಚಟುವಟಿಕೆಗಳಿಗೆ ಪ್ರೇರಕ ಶಕ್ತಿಯಾಗಿದ್ದರು.
ದಾಸ ಸಾಹಿತ್ಯದ ಕೆಲವು ನೋಟಗಳು, ಪ್ರಾಚೀ ನಕನ್ನಡ ಸಾಹಿತ್ಯದಲ್ಲಿ ಮಹಿಳೆ, ಏರುವ ಬಾ ಕೇದಾರ ಶಿಖರ, ಕಿರಿಯರಿಗೆ ಹಿರಿಯರ ಕತೆಗಳು ಪ್ರಮುಖ ಕೃತಿಗಳು. ಹೆಳವನಕಟ್ಟೆ ಗಿರಿಯಮ್ಮನ ಕೀರ್ತನೆಗಳು, ನಿಡಗುರುಕಿ ಜೀವೂಬಾಯಿ ಯವರ ಕೀರ್ತನೆಗಳು ಇವು ಇವರ ಸಂಪಾದಿತ ಕೃತಿಗಳು. ಕುಳಾಯಿಯಲ್ಲಿ ನಡೆದ ಮಂಗಳೂರು ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಕನ್ನಡ ಸಾಹಿತ್ಯ ಪರಿಷತ್ ನ ಕೃತಿ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿ ಗಳಿಗೆ ಪಾತ್ರರಾಗಿದ್ದರು.
ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕಿಯಾಗಿ, ಯುವ ಬರಹಗಾರರಿಗೆ ಮಾರ್ಗದರ್ಶಕಿಯಾಗಿ ಜನಪ್ರಿಯರಾಗಿದ್ದರು. ಕಾಳಜಿ ಸಾಹಿತ್ಯ ಸಂಘಟನೆಯ ಗೌರವ ಅಧ್ಯಕ್ಷತೆ, ಮಂಗಳೂರು ವಿ.ವಿ ಕನ್ನಡ ಶೈಕ್ಷಣಿಕ ಮಂಡಳಿ, ಪಠ್ಯ ಪುಸ್ತಕ ರಚನಾ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಹಿರಿಯ ವಿಮರ್ಶಕ ಪ್ರೊ. ಬಿ.ಎ. ವಿವೇಕ ರೈ, ಹಿರಿಯ ಲೇಖಕಿ ಚಂದ್ರಕಲಾ ನಂದಾವರ, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕರಾ ವಳಿ ಲೀಖಕಿಯರ ಮತ್ತು ವಾಚಕಿ ಯರ ಸಂಘ ದ ಅಧ್ಯಕ್ಷೆ ಶಕುಂತಲಾ ಶೆಟ್ಟಿ, ಹಿಂದು ವಿದ್ಯಾದಾಯಿನಿ ಸಂಘದ ಅಧ್ಯಕ್ಷ ಜಯಚಂದ್ರ ಹತ್ವಾರ್ ಮತ್ತು ಸದಸ್ಯರು, ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ. ಹರೀಶ್ ಆಚಾರ್ಯ ಮತ್ತು ಅಧ್ಯಾಪಕರು ಸಂತಾಪ ಸೂಚಿಸಿದ್ದಾರೆ.
