ನಗರಗಳ ಬೆಳವಣಿಗೆ ಹೆಸರಿನಲ್ಲಿ ಹಸಿರು ಪ್ರದೇಶ ಕಡಿಮೆಯಾಗೋದು ಪರಿಸರಕ್ಕ ದೊಡ್ಡ ಹೊಡೆತ ಕೊಡ್ತಿದೆ. ಅಭಿವೃದ್ಧಿ ಬೇಕು, ಆದ್ರ ಪರಿಸರನೂ ಉಳಿಸಿಕೊಳ್ಳೋದು ಅಷ್ಟೇ ಮುಖ್ಯ. ನಗರಗಳು ಬೆಳೆಯೋದು ಸಹಜ, ಆದ್ರೆ ಆ ಬೆಳವಣಿಗೆಯ ಜೊತೆಗೆ ಪ್ರಕೃತಿಯನ್ನೂ ಕಾಪಾಡಿಕೊಳ್ಳೋ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
ಇವತ್ತಿನ ದಿನಮಾನದಲ್ಲಿ ನಗರಗಳು ವೇಗವಾಗಿ ಬೆಳೆಯುತ್ತಿವೆ. ಹೊಸ ಕಟ್ಟಡ, ರಸ್ತೆ, ಅಂಗಡಿ-ಮಳಿಗೆಗಳು ಹೆಚ್ಚಾಗ್ತಾ ಹೋದಂತೆ ಮರ-ಗಿಡ, ಉದ್ಯಾನವನ ಮತ್ತು ಖಾಲಿ ಜಾಗಗಳು ಕಡಿಮೆಯಾಗ್ತಾ ಬಂದಿವೆ. ಒಂದೊಂದೇ ಮರಗಳು ಕಾಂಕ್ರೀಟ್ ಕಟ್ಟಡಗಳಿಗೆ ಜಾಗ ಮಾಡಿಕೊಡ್ತಾ ಹೋದಾಗ, ನಗರಗಳ ಹಸಿರು ನಿಧಾನವಾಗಿ ಕಣ್ಮರೆಯಾಗ್ತಿದೆ.
ಮರ-ಗಿಡಗಳು ನಗರಕ್ಕ ತಂಪು ಕೊಡ್ತವೆ, ಗಾಳಿನ ಸ್ವಚ್ಛವಾಗಿಡ್ತವೆ ಮತ್ತು ಬಿಸಿಲಿನ ತಾಪ ಕಡಿಮೆ ಮಾಡ್ತವೆ. ಅವು ಮನುಷ್ಯರಿಗೆ ಮಾತ್ರವಲ್ಲ, ಪಕ್ಷಿ-ಪ್ರಾಣಿಗಳಿಗೂ ಆಶ್ರಯ ಕೊಡ್ತವೆ. ಹಸಿರು ಪ್ರದೇಶ ಕಡಿಮೆಯಾದ್ರ ವಾಯುಮಾಲಿನ್ಯ, ಬಿಸಿಲಿನ ತಾಪ ಮತ್ತು ಪರಿಸರದ ಸಮಸ್ಯೆಗಳು ಇನ್ನೂ ಜಾಸ್ತಿ ಆಗೋ ಸಾಧ್ಯತೆ ಇದೆ. ಮಳೆನೀರು ನೆಲದೊಳಗೆ ಇಂಗೋಕೆ ಕೂಡ ಹಸಿರು ಪ್ರದೇಶಗಳು ಸಹಾಯ ಮಾಡ್ತವೆ.
ನಗರದಾಗ ಮಕ್ಕಳಿಗೆ ಆಟ ಆಡೋಕೆ, ಹಿರಿಯರಿಗೆ ನೆಮ್ಮದಿಯಾಗಿ ಕೂತುಕೊಳ್ಳೋಕೆ ಮತ್ತು ಜನರಿಗೆ ಆರೋಗ್ಯಕರ ವಾತಾವರಣ ಸಿಗೋಕೆ ಉದ್ಯಾನವನಗಳು ಬೇಕು. ಹಸಿರು ಜಾಗಗಳು ಜನರ ದೈಹಿಕ ಆರೋಗ್ಯದ ಜೊತೆಗೆ ಮನಸ್ಸಿನ ನೆಮ್ಮದಿಗೂ ಸಹಕಾರಿಯಾಗ್ತವೆ. ಹೀಗಾಗಿ ನಗರ ಅಭಿವೃದ್ಧಿ ಮಾಡೋವಾಗ ಕಟ್ಟಡ, ರಸ್ತೆಗಳಿಗೆ ಕೊಡುವಷ್ಟೇ ಮಹತ್ವವನ್ನ ಹಸಿರು ಪ್ರದೇಶಕ್ಕೂ ಕೊಡಬೇಕು.
ಅಗತ್ಯ ಇಲ್ಲದೆ ಮರ ಕಡಿಬಾರದು. ಅಭಿವೃದ್ಧಿ ಕಾಮಗಾರಿ ನಡೆಯೋವಾಗ ಸಾಧ್ಯವಾದಷ್ಟು ಮರಗಳನ್ನ ಉಳಿಸಿಕೊಳ್ಳಬೇಕು. ರಸ್ತೆ ಬದಿಗಳಲ್ಲಿ, ಶಾಲಾ-ಕಾಲೇಜುಗಳ ಆವರಣದಲ್ಲಿ, ಉದ್ಯಾನವನಗಳಲ್ಲಿ ಮತ್ತು ಖಾಲಿ ಜಾಗಗಳಲ್ಲಿ ಹೊಸ ಗಿಡಗಳನ್ನ ನೆಡಬೇಕು. ನೆಟ್ಟ ಗಿಡಗಳನ್ನ ಕೇವಲ ಫೋಟೋ ತೆಗೆದು ಬಿಡದೇ, ಅವು ಬೆಳೆದು ದೊಡ್ಡ ಮರ ಆಗೋವರೆಗೂ ನೀರು ಹಾಕಿ, ಆರೈಕೆ ಮಾಡಬೇಕು.
ನಗರಗಳಲ್ಲಿರೋ ಕೆರೆ, ಉದ್ಯಾನವನ, ಆಟದ ಮೈದಾನ ಮತ್ತು ಸಾರ್ವಜನಿಕ ಹಸಿರು ಪ್ರದೇಶಗಳನ್ನ ಉಳಿಸಿಕೊಳ್ಳೋದು ಕೂಡ ಮುಖ್ಯ. ಪ್ರತಿಯೊಬ್ಬರೂ ತಮ್ಮ ಮನೆ ಸುತ್ತಮುತ್ತ ಒಂದು ಗಿಡ ನೆಟ್ಟು ಬೆಳೆಸಿದ್ರೂ ಪರಿಸರ ಸಂರಕ್ಷಣೆಗೆ ದೊಡ್ಡ ಕೊಡುಗೆ ಆಗುತ್ತೆ. ಜನರು, ಸ್ಥಳೀಯ ಆಡಳಿತ ಮತ್ತು ಸರ್ಕಾರ ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ನಗರಗಳ ಹಸಿರನ್ನ ಉಳಿಸಿಕೊಳ್ಳಲು ಸಾಧ್ಯ.
ಕಾಂಕ್ರೀಟ್ ಕಟ್ಟಡಗಳು ಹೆಚ್ಚಾದಷ್ಟೂ ಹಸಿರಿನ ಅಗತ್ಯ ಇನ್ನೂ ಹೆಚ್ಚಾಗ್ತಿದೆ. ಅಭಿವೃದ್ಧಿ ಅಂದ್ರೆ ಕೇವಲ ದೊಡ್ಡ ಕಟ್ಟಡ, ಅಗಲವಾದ ರಸ್ತೆ ಮತ್ತು ಹೊಸ ಮಳಿಗೆಗಳ ನಿರ್ಮಾಣ ಅಲ್ಲ. ಜನರು ಆರೋಗ್ಯವಾಗಿ, ನೆಮ್ಮದಿಯಾಗಿ ಬದುಕೋಕೆ ಅನುಕೂಲವಾಗುವ ಪರಿಸರವನ್ನ ನಿರ್ಮಾಣ ಮಾಡೋದು ಕೂಡ ನಿಜವಾದ ಅಭಿವೃದ್ಧಿಯ ಭಾಗ.
ನಗರ ಬೆಳೆಯಲಿ, ಆದ್ರ ಹಸಿರು ಕಡಿಮೆಯಾಗಬಾರದು. ಕಾಂಕ್ರೀಟ್ ಜೊತೆಗೆ ಮರ-ಗಿಡ, ಉದ್ಯಾನವನ, ಕೆರೆ-ಕೊಳಗಳು ಉಳಿದಾಗಲೇ ನಮ್ಮ ನಗರ ನಿಜವಾದ ಅರ್ಥದಲ್ಲಿ ಅಭಿವೃದ್ಧಿ ಹೊಂದಿದ ನಗರವಾಗುತ್ತೆ. ಕಾಂಕ್ರೀಟ್ ನುಂಗಿದ ಹಸಿರಿಗೆ ಮತ್ತೆ ಉಸಿರು ಕೊಡೋಣ; ಇವತ್ತು ನಾವು ನೆಡುವ ಒಂದು ಗಿಡ ನಾಳೆಯ ಪೀಳಿಗೆಗೆ ಕೊಡುವ ಅಮೂಲ್ಯ ಉಡುಗೊರೆ.
- ಸ್ವಾತಿ ಶಿವಲಿಂಗಪ್ಪ ಬುಳ್ಳಾ
ಪತ್ರಿಕೋದ್ಯಮ ವಿಭಾಗ, ಬಸವೇಶ್ವರ ಕಲಾ ಮಹಾವಿದ್ಯಾಲಯ,ಬಾಗಲಕೋಟೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

