ಅಡಿಕೆ ವಿಂಗಡಣೆಗೆ ಎಐ ತಂತ್ರಜ್ಞಾನ: ತೀರ್ಥಹಳ್ಳಿಯ ವಿದ್ಯಾರ್ಥಿನಿ ಅನರ್ಘ್ಯ ಹೊಸ ಪ್ರಯೋಗ

Upayuktha
0

 " ಮಲೆನಾಡಿನ ಕೃಷಿ ಕ್ರಾಂತಿಗೆ ತಂತ್ರಜ್ಞಾನದ ಸ್ಪರ್ಶ "



ತೀರ್ಥಹಳ್ಳಿ: ಮಲೆನಾಡು ಪ್ರದೇಶವು ತನ್ನ ಕೃಷಿ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಪದ್ಧತಿಗಳಿಗೆ ಹೆಸರುವಾಸಿಯಾಗಿದೆ. ಈ ಭಾಗದ ಕೃಷಿಕರ ಜೀವನೋಪಾಯಕ್ಕೆ ಅಡಿಕೆ ಅತ್ಯಂತ ಪ್ರಮುಖ ಹಾಗೂ ತಳಹದಿಯ ವಾಣಿಜ್ಯ ಬೆಳೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕೃಷಿ ಕಾರ್ಮಿಕರ ಅಭಾವ ತೀವ್ರವಾಗುತ್ತಿದ್ದು, ಇದನ್ನು ಎದುರಿಸಲು ಆಧುನಿಕ ತಂತ್ರಜ್ಞಾನದ ಬಳಕೆ ಅನಿವಾರ್ಯವಾಗಿದೆ. 


ಅಡಿಕೆ ಕೊಯ್ಯಲು ಹಗುರವಾದ ಫೈಬರ್ ಹಾಗೂ ಕಾರ್ಬನ್ ಡ್ಯೂಟಿ ರಾಡ್‌ಗಳು ಮತ್ತು ಸಿಪ್ಪೆ ಸುಲಿಯುವ ಯಂತ್ರಗಳು ಈಗಾಗಲೇ ಬಳಕೆಯಲ್ಲಿದ್ದು, ಕೃಷಿ ಚಟುವಟಿಕೆಯನ್ನು ಒಂದಷ್ಟು ಸುಲಭಗೊಳಿಸಿವೆ. ಆದರೆ, ಸುಲಿದ ಅಡಿಕೆಯನ್ನು ಬೇಯಿಸಿ, ಒಣಗಿಸಿದ ನಂತರ ಅದನ್ನು ಗುಣಮಟ್ಟಕ್ಕೆ ತಕ್ಕಂತೆ ನಾಲ್ಕು ವಿಭಾಗಗಳಾಗಿ ಕೈಯಿಂದ ವಿಂಗಡಿಸುವುದು ಅತ್ಯಂತ ಶ್ರಮದಾಯಕ ಹಾಗೂ ಸುದೀರ್ಘ ಸಮಯ ತೆಗೆದುಕೊಳ್ಳುವ ಸವಾಲಿನ ಕೆಲಸವಾಗಿ ಉಳಿದಿತ್ತು.


ಈ ಸಾಂಪ್ರದಾಯಿಕ ಸಮಸ್ಯೆಗೆ ತಂತ್ರಜ್ಞಾನದ ಮೂಲಕ ಸೃಜನಶೀಲ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತೀರ್ಥಹಳ್ಳಿಯ ಹಿರಿಯ ಪತ್ರಕರ್ತ ಪ್ರಸನ್ನ ಹೊಳ್ಳ ಹಾಗೂ ಸಂಸ್ಕೃತ ಪ್ರಾಧ್ಯಾಪಕಿ ಪ್ರಭಾ ಹೊಳ್ಳ ದಂಪತಿಯ ಪುತ್ರಿ, ತೀರ್ಥಹಳ್ಳಿಯ ಸೇವಾ ಭಾರತಿ ಶಾಲೆಯ ವಿದ್ಯಾರ್ಥಿನಿ ಅನರ್ಘ್ಯ ಪಿ. ಹೊಳ್ಳ ಅವರು ಅತ್ಯುತ್ತಮ 'ಎ ಐ (AI) ಆಧಾರಿತ ಅಡಿಕೆ ವಿಂಗಡಣಾ ಯಂತ್ರ'ದ ಮಾದರಿಯನ್ನು ಅಭಿವೃದ್ಧಿಪಡಿಸಿ ಭರವಸೆ ಮೂಡಿಸಿದ್ದಾರೆ. 6 ನೇ ತರಗತಿಯ ವಿಜ್ಞಾನ ಮಾದರಿಯಾಗಿ ರೂಪುಗೊಂಡಿರುವ ಈ ಯಂತ್ರವು ಕೃತಕ ಬುದ್ಧಿಮತ್ತೆ ಮತ್ತು ಮೈಕ್ರೋಕಂಟ್ರೋಲರ್ ತಂತ್ರಜ್ಞಾನವನ್ನು ಅತ್ಯಂತ ಸಾಮರಸ್ಯದಿಂದ ಸಂಯೋಜಿಸಿ ನಿರ್ಮಿಸಲಾಗಿದೆ.


ಈ ಯಂತ್ರದ ಕಾರ್ಯವೈಖರಿಯು ಸಂಪೂರ್ಣವಾಗಿ ಸ್ವಯಂಚಾಲಿತವಾಗಿದ್ದು, ಮೇಲ್ಭಾಗದ ನಾಳದ ಮೂಲಕ ಹಸ, ಬೆಟ್ಟೆ, ರಾಶಿ ಇಡಿ ಮತ್ತು ಗೊರಬಲು ಎಂಬ ನಾಲ್ಕೂ ಬಗೆಯ ಒಣಗಿಸಿದ ಅಡಿಕೆಗಳನ್ನು ಹಾಕಲಾಗುತ್ತದೆ. ಕೆಳಭಾಗದಲ್ಲಿರುವ ಸ್ಟಾರ್ ವೀಲ್ ಮೆಕ್ಯಾನಿಸಂ ಅಡಿಕೆಗಳು ಒಂದಕ್ಕೊಂದು ಸಿಕ್ಕಿಹಾಕಿಕೊಳ್ಳದೆ ಸಾಲಾಗಿ ಎಡಭಾಗದ ಕನ್ವೇಯರ್ ಬೆಲ್ಟ್‌ಗೆ ಸಾಗುವಂತೆ ನಿಯಂತ್ರಿಸುತ್ತದೆ. ಕನ್ವೇಯರ್ ಬೆಲ್ಟ್ ಮೇಲೆ ಅಡಿಕೆ ಮುಂದಕ್ಕೆ ಚಲಿಸುತ್ತಿದ್ದಂತೆ, ಮಧ್ಯಭಾಗದಲ್ಲಿರುವ ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ಆ ಅಡಕೆಯ ಚಿತ್ರವನ್ನು ಸೆರೆಹಿಡಿಯುತ್ತದೆ. ಸ್ಮಾರ್ಟ್‌ಫೋನ್‌ನಲ್ಲಿ ರೂಪುಗೊಳಿಸಲಾದ ವಿಶೇಷ ಆ್ಯಪ್ ಹಾಗೂ ಎ ಐ (Machine Learning) ಮಾದರಿಯು ಆ ಅಡಿಕೆಯ ಆಕಾರ ಮತ್ತು ವಿನ್ಯಾಸವನ್ನು ಕ್ಷಣಾರ್ಧದಲ್ಲಿ ವಿಶ್ಲೇಷಿಸಿ, ಅದು ಯಾವ ತಳಿಯದ್ದು ಎಂಬುದನ್ನು ನಿಖರವಾಗಿ ಗುರುತಿಸುತ್ತದೆ.


ಅಡಕೆಯ ವಿಧವನ್ನು ಆ್ಯಪ್ ಗುರುತಿಸಿದ ತಕ್ಷಣ, ಮೊಬೈಲ್‌ನ ಬ್ಲೂಟೂತ್ ಮೂಲಕ ಆರ್ಡಿನೋ ಮೈಕ್ರೋಕಂಟ್ರೋಲರ್‌ಗೆ ಡಿಜಿಟಲ್ ಸಿಗ್ನಲ್ ರವಾನೆಯಾಗುತ್ತದೆ. ಆರ್ಡಿನೋ ಮೈಕ್ರೋಕಂಟ್ರೋಲರ್ ಯಂತ್ರದ ಮೋಟಾರ್‌ಗಳನ್ನು ನಿಯಂತ್ರಿಸಿ, ಕನ್ವೇಯರ್ ಬೆಲ್ಟ್‌ನ ತುದಿಯಲ್ಲಿರುವ 360 ಡಿಗ್ರಿ ತಿರುಗುವ ರೋಬೋಟಿಕ್ ಮೋಟಾರ್‌ಗೆ ನಿರ್ದೇಶನ ನೀಡುತ್ತದೆ. ಮೋಟಾರ್ ತಕ್ಷಣವೇ ಆಯಾ ಅಡಿಕೆಗೆ ನಿಗದಿಯಾದ ಬೌಲ್‌ನತ್ತ ತಿರುಗಿ, ಅಡಕೆಯು ಸರಿಯಾದ ಪಾತ್ರೆಗೆ ಬಂದು ಬೀಳುವಂತೆ ಮಾಡುತ್ತದೆ. ಸ್ಮಾರ್ಟ್‌ಫೋನ್ ಆ್ಯಪ್ ಮೂಲಕವೇ ಸಂಪೂರ್ಣ ಪ್ರಕ್ರಿಯೆಯನ್ನು ನಿಯಂತ್ರಿಸಲು ಸಾಧಕವಾಗಿರುವುದರಿಂದ ರೈತರಿಗೆ ಇದರ ಬಳಕೆ ಸರಳವಾಗಿದೆ.


ಪ್ರಸ್ತುತ ಪ್ರದರ್ಶನಕ್ಕಾಗಿ ನಿರ್ಮಿಸಲಾದ ಈ ಸಣ್ಣ ಮಾದರಿಯ ಮೂಲ ತತ್ವವು ಕೃಷಿ ಕ್ಷೇತ್ರಕ್ಕೆ ಅತ್ಯಂತ ಪ್ರಾಯೋಗಿಕವಾಗಿದೆ. ಭವಿಷ್ಯದಲ್ಲಿ ಇಂಡಸ್ಟ್ರಿಯಲ್ ವಿಷನ್ ಕ್ಯಾಮೆರಾ, ಹೈ-ಸ್ಪೀಡ್ ಪ್ರೊಸೆಸರ್ ಹಾಗೂ ಏರ್ ಬ್ಲೋಯರ್ ತಂತ್ರಜ್ಞಾನಗಳನ್ನು ಬಳಸಿ ಇದನ್ನು ಬೃಹತ್ ಮಟ್ಟದಲ್ಲಿ ನಿರ್ಮಿಸಿದರೆ, ಗಂಟೆಗೆ ನೂರಾರು ಕೆಜಿ ಅಡಿಕೆಯನ್ನು ಕ್ಷಣಾರ್ಧದಲ್ಲಿ ವಿಂಗಡಿಸಬಹುದು. ಗ್ರಾಮೀಣ ಭಾಗದ ಸಮಸ್ಯೆಗೆ ಅತ್ಯಾಧುನಿಕ ಪರಿಹಾರ ಕಂಡುಕೊಂಡ ಅನರ್ಘ್ಯ ಪಿ. ಹೊಳ್ಳ ಅವರ ಈ ಪ್ರಯತ್ನವು ಮಲೆನಾಡಿನ ಕೃಷಿ ಕ್ಷೇತ್ರಕ್ಕೆ ಹೊಸ ಭರವಸೆಯಾಗಿದ್ದು, ವಿದ್ಯಾರ್ಥಿನಿಯ ಸೃಜನಶೀಲತೆಗೆ ಹಾಗೂ ಮಾರ್ಗದರ್ಶನ ನೀಡಿದ ಶಿಕ್ಷಕರು ಮತ್ತು ಪೋಷಕರಿಗೆ ಅಭಿನಂದನೆಗಳು ಸಲ್ಲುತ್ತವೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top