ಎಸ್ ಕೆ ರಾಮಚಂದ್ರರಾಯರ ನೆನಪು

Upayuktha
0

ಸಾಲಿಗ್ರಾಮ (ಸಾ) ಕೃಷ್ಣ (ಕೃ) ರಾಮಚಂದ್ರರಾಯರನ್ನು ನಾನು ಸಾಕ್ಷಾತ್ತಾಗಿ ನೋಡಿದ್ದು ಬೆಂಗಳೂರಿನ‌ ಜೆ ಪಿ ನಗರದಲ್ಲಿರುವ ಆರ್ ವಿ ಡೆಂಟಲ್ ಕಾಲೇಜಿನ ಸಭಾಂಗಣದಲ್ಲಿ. ಬಹುಶಃ ಅದು 1998ನೇ ಇಸವಿ ಇರಬಹುದು. ಆ ಇಳಿಸಂಜೆ ಅವರು ಪುರಂದರದಾಸರ ಹಿರಿಮೆಯ ಬಗ್ಗೆ ಮಾತನಾಡಿದರು. ಕೊನೆಯಲ್ಲಿ ಅವರು, 'ತ್ಯಾಗರಾಜರು, ಎಂದರೋ ಮಹಾನುಭಾವುಲು ಅಂದರಿಕಿ ವಂದನಮು ಎಂದು ಉದ್ಗರಿಸಿರುವುದು ಪುರಂದರದಾಸರ ಬಗ್ಗೆಯೇ ಎಂದು ಹೇಳಿ, ತಮ್ಮ ಮಾತಿಗೆ  ಮಂಗಳ ಹಾಡಿದರು. ಅವರ ಮಾತಿನಲ್ಲಿ ಸಂದಿಗ್ಧತೆಯ ಲವಲೇಶವೂ ಇರಲಿಲ್ಲ; ಬದಲಿಗೆ, ನನ್ನಂತಹವನಲ್ಲಿ ಹೆಚ್ಚುಹೆಚ್ಚು ಅಧ್ಯಯನದ ಆಸೆ ಹುಟ್ಟಿಸುವಂತಹ ಖಾಚಿತ್ಯವಿತ್ತು. His speech on that day was convincing one. 


ಇದಾದಮೇಲೆ ನಾನು ಸಾಕೃರಾ ಅವರ ಪುಸ್ತಕಗಳನ್ನು ಅಲ್ಲಲ್ಲಿ ನೋಡತೊಡಗಿದೆ. ಹೀಗೆ ಮೊದಮೊದಲಿಗೆ ನಾನು ಹೆಕ್ಕಿಕೊಂಡ ಅವರ ಪುಸ್ತಕವೆಂದರೆ "ನಮ್ಮ  ಸಂಗೀತ ಮತ್ತು ವಾಗ್ಗೇಯಕಾರರು". ನಾನು ಇದನ್ನು ಓದಿದಾಗ ಅನೇಕ ಹೊಸ ಸಂಗತಿಗಳು ಗೊತ್ತಾದವು. ಆದರೆ ಇಪ್ಪತ್ತು ವರ್ಷಗಳ ಹಿಂದೆ ಓದಿದ ಈ ಪುಸ್ತಕದ ವಿವರಗಳು ನನಗೀಗ ಮರೆತು ಹೋಗಿವೆ. ಈಗ ಈ ಪುಸ್ತಕವನ್ನು ನಮ್ಮ ಮಗ ಓದುತ್ತಾ ಕೂತಿದ್ದಾನೆ. ವೀಣಾವಾದನ ಕಲಿಯುತ್ತಿರುವ ಅವನಿಗೆ ಈ ಪುಸ್ತಕ ನನಗೆ ಆಗಿದ್ದಕ್ಕಿಂತಲೂ ಹೆಚ್ಚು ಆಪ್ತವಾಗಿದೆ. ನನ್ನದೇನಿದ್ದರೂ (ಆ ದಿನಗಳ್ಲಿ) ಸಾಹಿತ್ಯದ ವಿದ್ಯಾರ್ಥಿಯ ದೃಷ್ಟಿಯಷ್ಟೆ. ನನ್ನ ಮಗನದು ಸಂಗೀತದ ವಿದ್ಯಾರ್ಥಿಯ ಕೋನ. ಈ ಕೃತಿಯ ಬೆನ್ನಲ್ಲೇ ನಾನು, ರಾಯರು ದಾಸ ಸಾಹಿತ್ಯ ಕುರಿತು ಬರೆದಿರುವ ಲೇಖನಗಳ ಪುಸ್ತಕವನ್ನು ಓದಿದೆ. ಇದು ಮಲ್ಲೇಪುರಂ ವೆಂಕಟೇಶ ಅವರು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ಬಂದ ಬಹಳ ಒಳ್ಳೆಯ ಪುಸ್ತಕ.


ಆಮೇಲೆ ನಾನು ರಾಯರ ಹಲವು ಪುಸ್ತಕಗಳನ್ನು ಓದಿದೆ- ಅಣ್ಣಪ್ಪ ದೈವ, ಶ್ರೀಕೃಷ್ಣನ ವ್ಯಕ್ತಿತ್ವ, ಗಣಪತಿಯ ಕಲ್ಪನೆ, ತಿರುಪತಿ  ತಿಮ್ಮಪ್ಪ, ಮಿಲರೇಪ, ರಾಮಾನುಜ, ಶಾರದಾ ಪೀಠದ ಮಾಣಿಕ್ಯ, ಈಶಾವಾಸ್ಯೋಪನಿಷತ್ತು, ವೇದದಲ್ಲಿನ ಕಥೆಗಳು, ಪೂರ್ಣಪ್ರಜ್ಞ ಪ್ರಶಸ್ತಿ, ಜಯದೇವ, ಅಶ್ವಘೋಷ, ಕಲಾವಿದ ವೆಂಕಟಪ್ಪ, Mysore Traditional Painting, ಎಂ ಎಸ್ ಸುಬ್ಬುಲಕ್ಷ್ಮಿ, ಶ್ರೀವಿದ್ಯಾ, ದೇವಾಲಯ ಶಿಲ್ಪ- ನೆಲೆ, ಹಿನ್ನೆಲೆ, ಹಿರಿಯರ ಹೆಜ್ಜೆಗಳು ಇತ್ಯಾದಿ ಇತ್ಯಾದಿ. ಇವೆಲ್ಲವೂ ಒಂದಕ್ಕಿಂತ ಒಂದು ಸೊಗಸಾಗಿವೆ. ನಿಜ ಹೇಳಬೇಕೆಂದರೆ, ಕನ್ನಡ ಸಾಹಿತ್ಯದಲ್ಲಿ ಒಂದು ಸೀಮಿತ ವರ್ತುಲದಲ್ಲಿ ಸಿಲುಕಿಕೊಂಡಿರುವ ನೂರಾರು ಜನರಿಗೆ ನಾನು, ರಾಯರ ವಾಙ್ಮಯವನ್ನು ಓದುವಂತೆ ಹೇಳಿದ್ದೇನೆ. ಅಂದಹಾಗೆ, ಮೇಲೆ ಹೇಳಿದ ಗ್ರಂಥಗಳ ಪೈಕಿ ಹೆಚ್ಚಿನವನ್ನು ನಾನು, ಬೆಂಗಳೂರಿನ ಜಯನಗರದ ಸರಳಾದೇವಿ ಸ್ಕೂಲಿನ ಹಿಂಬದಿಯಲ್ಲಿರುವ ಅವರ ಮನೆಗೇ ಹೋಗಿ ಖರೀದಿಸಿದ್ದೇನೆ. ಇದಕ್ಕೆಲ್ಲ ಅವರ ಮಗ, ಅಕಾಲಿಕವಾಗಿ ಗತಿಸಿ ಹೋದ ಶ್ರೀ ಸುದರ್ಶನರು ಶೇಕಡ 40ರಷ್ಟು ಸೋವಿ ಕೊಡುತ್ತಿದ್ದರು.


ರಾಯರದು ಸನಾತನ ತಿಳಿವಳಿಕೆ ಮತ್ತು ಆಧುನಿಕ ವಿವೇಕ ಎರಡೂ ಹದವಾಗಿ ಮೇಳೈಸಿರುವ ವಾಙ್ಮಯ ರಾಶಿ. ಸಂಸ್ಕೃತ, ಕನ್ನಡ, ಇಂಗ್ಲಿಷ್, ಪಾಳಿ, ಅರ್ಧಮಾಗಧಿ ಮುಂತಾದ ಭಾಷೆಗಳ ಮೇಲೆ ಅವರಿಗೆ ಪ್ರಭುತ್ವವಿತ್ತು. ಜೊತೆಗೆ ಚಿತ್ರರಚನೆ, ಸಂಗೀತ, ವೇದಾಧ್ಯಯನ, ಧರ್ಮ, ಪುರಾಣ, ಜಾನಪದ, ಮನೋವಿಜ್ಞಾನ, ತಂತ್ರವಿದ್ಯೆ..... ಮುಂತಾದ ಧಾರೆಗಳಲ್ಲೂ ಅವರದು ಪ್ರಕಾಂಡ ಪ್ರತಿಭೆ. No doubt, he was a genius and gifted. ಅವರ ಭಾಷೆ ಹೃದ್ಯ; ನಿರೂಪಣೆ ಸರಳವಾದರೂ ಪರಿಣಾಮಕಾರಿ; ಹೇಳಬೇಕಾದ್ದನ್ನು ಸರಿಯಾದ ಕ್ರಮದಲ್ಲಿ ನಿರೂಪಿಸುವ ಅನನ್ಯತೆ. ಇಂತಹ ರಾಯರು ಬರೆದಿರುವ ಚಿಕ್ಕ/ದೊಡ್ಡ ಪುಸ್ತಕಗಳನ್ನು ಲೆಕ್ಕ ಹಾಕಿದರೆ ಅವುಗಳ ಸಂಖ್ಯೆ ಇನ್ನೂರನ್ನು ದಾಟುತ್ತದೆ ಎನಿಸುತ್ತದೆ. ತಿಳಿಗನ್ನಡದ ಚೆಲುವನ್ನು ಸವಿಯಬೇಕೆಂದರೆ ನಾವು ಬಿಎಂಶ್ರೀ, ಡಿವಿಜಿ, ಮಾಸ್ತಿಯವರ ಕೃತಿಗಳಂತೆಯೇ ರಾಮಚಂದ್ರರಾಯರ ಕೃತಿಗಳನ್ನೂ ಓದಬೇಕು. ಜೊತೆಗೆ ಒಬ್ಬ ಲೇಖಕನ ಸಂಕಲ್ಪ ಬಲದ ಅಗಾಧತೆಗೂ ರಾಯರು ಮೇಲ್ಪಂಕ್ತಿಯಾಗಿದ್ದಾರೆ. ಹೀಗಾಗಿಯೇ ನಾನು ಅವರನ್ನು ನನ್ನ ಪಾಲಿನ ಪೂರ್ವಸೂರಿಗಳಲ್ಲಿ ಒಬ್ಬರಾಗಿ ಸ್ವೀಕರಿಸಿದ್ದೇನೆ. ಅವರ ವಾಙ್ಮಯದ ಅಲ್ಪಸ್ವಲ್ಪ ಓದು ನನಗೆ ಇದನ್ನು ಕಲಿಸಿಕೊಟ್ಟಿದೆ.


ರಾಯರು ಋಗ್ವೇದಕ್ಕೆ 14 ಸಂಪುಟಗಳ ವ್ಯಾಖ್ಯಾನ ಬರೆಯುವ ಬಹುದೊಡ್ಡ ಕೆಲಸವನ್ನು ಕೈಗೆತ್ತಿಕೊಂಡಿದ್ದರು. ಇದರಲ್ಲಿ ಅವರಿಗೆ ಸಾಧ್ಯವಾಗಿದ್ದು ಏಳು ಸಂಪುಟಗಳಷ್ಟೆ. ಅಷ್ಟರಲ್ಲಿ ಅವರಿಗೆ ಕಾಲನ ಕರೆ ಬಂತು. ಅವರ ಮರಣಾನಂತರ ಬಸವನಗುಡಿಯ ಗಂಜಾಂ ಭವನದಲ್ಲಿ ನಡೆದ ಈ ಸಂಪುಟಗಳ ಬಿಡುಗಡೆ ಸಮಾರಂಭಕ್ಕೆ ನಾನು ಸುರಿಯುವ ಮಳೆಯನ್ನೂ ಲೆಕ್ಕಿಸದೆ ಹೋಗಿದ್ದೆ. ಅದೊಂದು ಅಚ್ಚುಕಟ್ಟಾದ ಕಾರ್ಯಕ್ರಮ. ಅವತ್ತು, ಈಗ ನಮ್ಮೊಂದಿಗಿಲ್ಲದ ಪ್ರಖರ ಓದುಗ ಕೆ ಸಿ ರಘು ಕೂಡ ಬಂದಿದ್ದರು. ಕೊನೆಯಲ್ಲಿ ಅವರು ಈ ಸಂಪುಟಗಳ ಸೆಟ್ ಖರೀದಿಸಿದರು. ನನಗೂ ಒಂದು ಸೆಟ್ ಕೊಡಿಸಲು ಅವರು ತುದಿಗಾಲಲ್ಲಿ ನಿಂತಿದ್ದರು. ಆದರೆ ನನಗೆ ತುಂಬಾ ಸಂಕೋಚವಾಗಿ ಬೇಡವೆಂದೆ. 


ರಾಯರ ವಾಙ್ಮಯದ ಬೀಸು ತುಂಬಾ ತುಂಬಾ ದೊಡ್ಡದು. ಅವರಷ್ಟು ವ್ಯಾಪ್ತಿ ಇದ್ದ ಸಾಹಿತಿಗಳು ಈಗಂತೂ ಇಲ್ಲವೇ ಇಲ್ಲ ಎನ್ನಬಹುದು. ಆದರೆ ಕನ್ನಡ ಸಾಹಿತ್ಯ ಲೋಕವು ಅವರ ಮೌಲಿಕ ಕೊಡುಗೆಯನ್ನು ಈಗಲೂ ಸರಿಯಾಗಿ ಗ್ರಹಿಸಿಲ್ಲ. ಇದೊಂದು ದುರಂತ. ಆದರೆ, ಸಾಹಿತ್ಯ ಎಂದರೇನೆಂದು ನಿಜವಾದ ಅರ್ಥದಲ್ಲಿ ಬಲ್ಲವರು ರಾಯರ ಕೃತಿಗಳನ್ನು ಈಗಲೂ ಹುಡುಕಿಕೊಂಡು ಓದುತ್ತಿದ್ದಾರೆ. ರಾಯರಂಥವರು ಒಂದು ಭಾಷೆಯ ಪುಣ್ಯಸಂಚಯದಿಂದ ಬರುತ್ತಾರಷ್ಟೆ. ಕನ್ನಡ ಅಂತಹ ಪುಣ್ಯದ ನುಡಿ. ಅವರ ಕೃತಿಗಳನ್ನು ಓದುತ್ತಿದ್ದರೆ ಬೆರಗಿನ ಭಾವ ಬರುತ್ತದೆ. ಅದೊಂದು ಘನವಾದ ಲೋಕ; ಅದೊಂದು ವಿರಾಟ್ ವಾಙ್ಮಯ. ರಾಯರು ಇದ್ದಿದ್ದರೆ ಇವತ್ತಿಗೆ ನೂರಾಒಂದು ವರ್ಷ ತುಂಬುತ್ತಿತ್ತು. ಈ ಧೀಮಂತ ಲೇಖಕರಿಗೆ ನೆನಪಿನ ನಮನಗಳು!


- ಬಿ.ಎಸ್. ಜಯಪ್ರಕಾಶ ನಾರಾಯಣ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top