ರಾಮಕೃಷ್ಣ ಮಿಷನ್- ಸ್ವಚ್ಛ ಮಂಗಳೂರು ಅಭಿಯಾನ: ಕೇಂದ್ರ ಗ್ರಂಥಾಲಯ ಉದ್ಯಾನವನದಲ್ಲಿ ಮಾಸಿಕ ಸ್ವಚ್ಛತಾ ಶ್ರಮದಾನ

Upayuktha
0



ಮಂಗಳೂರು: ರಾಮಕೃಷ್ಣ ಮಿಷನ್ ನೇತೃತ್ವದ 'ಸ್ವಚ್ಛ ಮಂಗಳೂರು ಅಭಿಯಾನ'ದ ಸೆಪ್ಟೆಂಬರ್ 2026ರ ಮಾಸಿಕ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮವು ಕದ್ರಿ ಮಲ್ಲಿಕಟ್ಟೆಯ ಕೇಂದ್ರ ಗ್ರಂಥಾಲಯ ಉದ್ಯಾನವನದ ಆವರಣದಲ್ಲಿ ಯಶಸ್ವಿಯಾಗಿ ನಡೆಯಿತು.


ಕಾರ್ಯಕ್ರಮಕ್ಕೆ ಎಂ.ಆರ್.ಪಿ.ಎಲ್–ಒಎನ್‌ಜಿಸಿ ಸಂಸ್ಥೆಯ ಜನರಲ್ ಮ್ಯಾನೇಜರ್ ಮಂದಾರ್ ಕಾಲೆ ಹಾಗೂ ಬಿಳಿಗಿರಿ ರಂಗನಾಥಸ್ವಾಮಿ (ಬಿ.ಆರ್. ಹಿಲ್ಸ್) ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಶಿಕಲಾ ಅವರು ಚಾಲನೆ ನೀಡಿದರು.


"ಸ್ವಚ್ಛ ಮಂಗಳೂರು ಅಭಿಯಾನದಲ್ಲಿ ಸ್ವಯಂಸೇವಕರ ಬದ್ಧತೆ ಶ್ಲಾಘನೀಯ. ಆರಂಭದಿಂದಲೂ ಎಂ.ಆರ್.ಪಿ.ಎಲ್ ಸಂಸ್ಥೆಯು ಈ ಸತ್ಕಾರ್ಯಕ್ಕೆ ಕೈಜೋಡಿಸಿರುವುದಕ್ಕೆ ಹೆಮ್ಮೆಯಿದೆ" ಎಂದು ಮಂದಾರ್ ಕಾಲೆ ನುಡಿದರು.


ಬಳಿಕ ಮಾತನಾಡಿದ ಪಿಡಿಒ ಶಶಿಕಲಾ ಅವರು "ರಾಮಕೃಷ್ಣ ಮಿಷನ್‌ನ ವ್ಯವಸ್ಥಿತ ಕಾರ್ಯವೈಖರಿ ಹಾಗೂ ಉತ್ತಮ ತ್ಯಾಜ್ಯ ನಿರ್ವಹಣಾ ಪದ್ಧತಿಗಳನ್ನು ಕಲಿಯಲು ನಮ್ಮ ಪಂಚಾಯಿತಿ ಸಿಬ್ಬಂದಿ ಬಿ.ಆರ್. ಹಿಲ್ಸ್‌ನಿಂದ ಆಗಮಿಸಿದ್ದಾರೆ. ಇಲ್ಲಿ ಪಡೆದ ಪ್ರೇರಣೆಯನ್ನು ನಮ್ಮ ಗ್ರಾಮ ಪಂಚಾಯಿತಿಯಲ್ಲೂ ಅಳವಡಿಸಿಕೊಳ್ಳುತ್ತೇವೆ" ಎಂದರು.


"ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯನ್ನು ಕೇವಲ ಒಂದು ದಿನದ ಚಟುವಟಿಕೆಯನ್ನಾಗಿ ನೋಡದೆ, ಪ್ರತಿಯೊಬ್ಬರೂ ಜೀವನದ ಭಾಗವಾಗಿಸಿಕೊಳ್ಳಬೇಕು" ಎಂದು ಡಾ. ಜ್ಞಾನೇಶ್ವರ ಪೈ ಮಾರೂರ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.


ವೇದಿಕೆಯಲ್ಲಿ ನಿವೃತ್ತ ಯೋಧರಾದ ಗೋಪಿನಾಥ ರಾವ್, ಸತ್ಯನಾರಾಯಣ ಕೆ.ವಿ. ಹಾಗೂ ದಿಲ್ ರಾಜ್ ಆಳ್ವ ಉಪಸ್ಥಿತರಿದ್ದು ಸ್ವಯಂಸೇವಕರಿಗೆ ಪ್ರೋತ್ಸಾಹ ನೀಡಿದರು.


ವಿವಿಧ ಹಂತಗಳಲ್ಲಿ ನಡೆದ ಸ್ವಚ್ಛತಾ ಕಾರ್ಯ


ಹಿರಿಯ ಸ್ವಯಂಸೇವಕರ ಮಾರ್ಗದರ್ಶನದಲ್ಲಿ 'ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಪ್ರೊಫೆಷನಲ್ ಎಜುಕೇಶನ್' ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಗ್ರಂಥಾಲಯದ ಹೊರಭಾಗ, ಕಾಲುದಾರಿಗಳಲ್ಲಿದ್ದ ಕಸ, ಒಣ ಎಲೆಗಳು, ತ್ಯಾಜ್ಯ ಹಾಗೂ ಅನಗತ್ಯ ಬ್ಯಾನರ್‌ಗಳನ್ನು ತೆರವುಗೊಳಿಸಿದರು.


'ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಹಾಸ್ಪಿಟಾಲಿಟಿ' ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉದ್ಯಾನವನದ ಒಳಗಿದ್ದ ಕಳೆ, ಅತಿಯಾಗಿ ಬೆಳೆದ ಹುಲ್ಲನ್ನು ತೆರವುಗೊಳಿಸಿ ನಡಿಗೆ ಮಾರ್ಗ ಮತ್ತು ಮಕ್ಕಳ ಆಟದ ಪ್ರದೇಶವನ್ನು ಶುಚಿಗೊಳಿಸಿದರು.


'ಶ್ರೀನಿವಾಸ ಇನ್‌ಸ್ಟಿಟ್ಯೂಟ್ ಆಫ್ ಏವಿಯೇಷನ್' ವಿದ್ಯಾರ್ಥಿಗಳು ಪ್ರಸಿದ್ಧ ಸಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಅವರ ಸ್ಮಾರಕದ ಗೋಡೆ ಮೇಲಿದ್ದ ಪಾಚಿಯನ್ನು ಉಜ್ಜಿ, ಬ್ಲೀಚಿಂಗ್ ಪೌಡರ್ ಬಳಸಿ ಶುಚಿ ಮಾಡಿದರು. ಜೊತೆಗೆ ಟ್ಯಾಂಕರ್ ನೀರಿನ ನೆರವಿನಿಂದ ಗೋಡೆಯ ಕಾರಂಜಿಯನ್ನೂ ಸರಿಪಡಿಸಿ ಸ್ವಚ್ಛಗೊಳಿಸಿದರು.


ಈ ಬಾರಿಯ ಶ್ರಮದಾನದಲ್ಲಿ ಬಿ.ಆರ್. ಹಿಲ್ಸ್ ಗ್ರಾಮ ಪಂಚಾಯಿತಿ ಸಿಬ್ಬಂದಿ ವಿಶೇಷವಾಗಿ ಭಾಗವಹಿಸಿ ನೇರವಾಗಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡರು. ಅಭಿಯಾನದ ಹಿರಿಯ ಸ್ವಯಂಸೇವಕರೊಂದಿಗೆ ಸಂವಾದ ನಡೆಸಿ, ಸಮುದಾಯ ಆಧಾರಿತ ಸ್ವಚ್ಛತೆ ಹಾಗೂ ಸಾರ್ವಜನಿಕ ಸ್ಥಳಗಳ ನಿರ್ವಹಣೆಯ ಬಗ್ಗೆ ಮಾಹಿತಿ ಪಡೆದುಕೊಂಡರು.


ಈ ಮಾಸಿಕ ಶ್ರಮದಾನವನ್ನು ಸ್ವಚ್ಛ ಮಂಗಳೂರು ಪ್ರತಿಷ್ಠಾನದ ಸಹಯೋಗದೊಂದಿಗೆ ಹಾಗೂ ಎಂ.ಆರ್.ಪಿ.ಎಲ್-ಒಎನ್‌ಜಿಸಿ ಸಂಸ್ಥೆಯ ಸಿಎಸ್ಆರ್ (CSR) ಯೋಜನೆಯ ಬೆಂಬಲದೊಂದಿಗೆ ಆಯೋಜಿಸಲಾಗಿತ್ತು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top