ಕೃಷ್ಣಂ ವಂದೇ ಜಗದ್ಗುರುಂ

Upayuktha
0




ಆದೌ ದೇವಕೀ ದೇವಿ ಗರ್ಭಜನನಂ ಗೋಪಿಗೃಹೇ ವರ್ಧನಂ/

ಮಾಯಾಪೂತನಿ ಜೀವಿತಾಪಹರಣಂ ಗೋವರ್ಧನೋದ್ಧಾರಣಂ//

ಕಂಸಚ್ಛೇದನ ಕೌರವಾದಿ ಹರಣಂ ಕುಂತೀಸುತಾ ಪಾಲನಂ/

ಏತದ್ಭಾಗವತಂ ಪುರಾಣ ಪುಣ್ಯ ಕಥಿತಂ ಶ್ರೀಕೃಷ್ಣಲೀಲಾಮೃತಂ//


“ಕೃಷ್ಣ” ಹೆಸರೇ ಅಪರಿಮಿತ ಆನಂದ, ಸೊಗಸು, ಚಂದ. ಇಡಿಯ ಬ್ರಹ್ಮಾಂಡವೇ ಕಣ್ಣೆದುರು ತೇಲಿ ಹೋಗುವ ಅನುಭವ. ಆ ಹೆಸರಿನಲ್ಲಿ ಎಷ್ಟೊಂದು ಮೋಡಿ, ಜಾದು ಅಡಗಿದೆ ನೋಡಿ. ತುಂಟ ಕೃಷ್ಣನ ಬಾಲಲೀಲೆಗಳನ್ನು ಓದುವುದೇ ಪರಮಾನಂದ. ಶ್ರಾವಣ ಮಾಸದ ಕೃಷ್ಣ ಪಕ್ಷದ ಸಿಂಹಮಾಸ ರೋಹಿಣಿ ನಕ್ಷತ್ರದಂದು ಮಧ್ಯರಾತ್ರಿಯ ಸಮಯದಲ್ಲಿ ಶ್ರೀಕೃಷ್ಣನ ಜನನ, ದೇವಕಿಯ ಗರ್ಭದಿಂದ ಮಥುರಾದ ಕಾರಾಗೃಹದಲ್ಲಿ ಕಾವಲುಗಾರರ ಬಂಧನದಲ್ಲಿ. ಆದರೇನಂತೆ, ಪವಾಡವೆಂಬಂತೆ ಕ್ರೂರ ಕಂಸನಿಗೆ ತಿಳಿಯದಂತೆ ಶಿಶುವನ್ನು ಗೋಕುಲದ ನಂದರಾಜನ ಅರಮನೆಗೆ ಒಯ್ದು, ಅಲ್ಲಿದ್ದ ಯಶೋದೆಯ ಮಡಿಲಲ್ಲಿದ್ದ ಪುಟ್ಟ ಹಸುಳೆಯನ್ನು ದೇವಕಿಯ ಮಗ್ಗುಲಲ್ಲಿ ಮಲಗಿಸಿದ ತಂದೆ ವಸುದೇವ. ಅದೇ ಶಿಶು ಕಂಸನ ಖಡ್ಗದ ಬಾಯಿಯಿಂದ ತಪ್ಪಿಸಿ ಆಗಸಕ್ಕೆ ನೆಗೆದು, ಎಚ್ಚರಿಕೆಯ ಸಂದೇಶ ನೀಡಿದ ದುರ್ಗೆಯ ಅಂಶ.


ಕೃಷ್ಣನ ಅವತಾರಗಳು, ಲೀಲಾವಿನೋದಗಳು ಹೇಳಿದಷ್ಟು ಮುಗಿಯದು. ಶ್ರೀಕೃಷ್ಣನಿಗೆ ಭಗವಂತನ ಸ್ಥಾನವಿದ್ದರೂ ಆತ ಗೋವುಗಳನ್ನು ಕಾಯ್ದ ಗೋಪಾಲಕನೆನಿಸಿದ. ಸುಧಾಮನ ಮುಷ್ಟಿ ಅವಲಕ್ಕಿಗೆ ಮನಸೋತು ಅನುಗ್ರಹಿಸಿ ಸ್ನೇಹದ ಋಣ ತೀರಿಸಿದ. ನಿಷ್ಕಲ್ಮಶ ಪ್ರೀತಿಯದು. ಗೆಳೆತನ ‘ಹೃದಯ ಶ್ರೀಮಂತಿಕೆ’ಯ ಪ್ರತೀಕ. ರಾಧಾ ಮಾಧವನಾಗಿ, ಪ್ರಿಯ ಸಖನಾಗಿ, ನಂಬಿದ ಭಕ್ತರನ್ನು ಕಾಯುವ ದಿವ್ಯಶಕ್ತಿಯಾಗಿ, ಭಕ್ತರ ದೇವನಾಗಿ, ರುಕ್ಮಿಣಿ ವಲ್ಲಭನಾಗಿ ಜಗತ್ತನ್ನು ಕಾಯುವ ತಂದೆಯಾಗಿ, ಸಕಲರ ಗುರುವಾಗಿ, 'ದೇವನೊಬ್ಬ ನಾಮ ಹಲವು' ಶ್ರೀಕೃಷ್ಣನ ವೈಶಿಷ್ಟ್ಯ. ಬದುಕಿಗೆ ನವ ಚೈತನ್ಯ ತುಂಬಿ ತೋರಿಸಿದ ಮಧುಸೂದನ, ಚೈತನ್ಯದಾಯಕನಾತ.


ಜೀವರಾಶಿಗೆ ಚೈತನ್ಯ ಸ್ವರೂಪಿಯಾಗಿ ಮೆರೆದವನೆಂದರೆ ಗೋಕುಲಬಾಲ ಕೃಷ್ಣ. ಭಗವದ್ಗೀತೆಯ ಮೂಲಕ ಪ್ರಪಂಚಕ್ಕೆ ಗುರುವಾದವ, ಕಣ್ಣಾದವ. ಕಾಯಕದ ಶ್ರಮಕ್ಕೆ ಸರಿಯಾದ ಕರ್ಮಫಲ ನೀಡುವವ. ವೇದಾಂತಿ, ಮನೋಹರ, ಹಿರಿಯರಿಗೆ ಜಗದ್ಗುರು. ನಾವು ಯಾವಾಗ ಹೇಗಿರಬೇಕು, ಹೇಗೆ ಎಲ್ಲಿ ಎಷ್ಟು ಮಾತನಾಡಬೇಕು ಎಂದು ಸಾರಿದ ಮಹಾನ್ ಪಂಡಿತ. ಅದ್ಭುತ ಸಲಹೆಗಾರ, ತೂಕ ನೋಡಿ ಹದವರಿತ ಮಾತುಗಾರ, ಮನಸಿಜಪಿತ ಮನದ ಮಾತನ್ನರಿತ ಬಿರುದಾಂಕಿತ, ಮನವರಿತು ಸಹಕರಿಸುವವ. ಸೂಕ್ಷ್ಮತೆಯ ಹರಿಕಾರ ಕೃಷ್ಣ.


ಸಕಲಕಲಾವಲ್ಲಭನಾತ. ಮಾನವ ಸಂಬಂಧಗಳ ಬೆಲೆಯನ್ನು ಪ್ರತಿ ಹಂತದಲ್ಲೂ ಸಾರಿದ ಮಾರ್ಗದರ್ಶಿ. ಮನುಷ್ಯ ಸಂಬಂಧಗಳನ್ನು ಹಲವಾರು ಉದಾಹರಣೆ, ಘಟನೆಗಳ ಮೂಲಕ ತೋರಿಸಿಕೊಟ್ಟ ಹೃದಯವಂತ. ಸಹನಾಶೀಲ ಎನ್ನುವುದಕ್ಕೆ ಶಿಶುಪಾಲನ ಪ್ರಕರಣವೇ ಸಾಕ್ಷಿ. ಸರ್ವವೂ ವಿಧಿಲಿಖಿತದಂತೆ ಎಂದ ಮಹಾತ್ಮ. ಗೋವುಗಳನ್ನು ರಕ್ಷಿಸಿದ ಗೋಪಾಲಕ. ರಾಧೆಗೆ ಸ್ಥಾನಮಾನ ನೀಡಿದ ರಾಧಾಮಾಧವ. ಪಾಪಪುಣ್ಯ, ಎಸಗಿದ ಕರ್ಮಾನುಸಾರ ಬದುಕು ಎಂದ ತ್ಯಾಗಿ, ಯೋಗಿ. ಕುತಂತ್ರವೆಂದರೂ ಅದರಲ್ಲೊಂದು ತಂತ್ರವೆಸಗಿ ನಯವಾಗಿ ತಕ್ಕ ಶಿಕ್ಷೆ ನೀಡಿದ ಕಪಟ ನಾಟಕ ಸೂತ್ರಧಾರ. ಧೀಮಂತ. ತನ್ನ ಅವತಾರದ ಬಗ್ಗೆ ಸೂಕ್ಷ್ಮವಾಗಿ ಲೋಕಮುಖಕ್ಕೆ ತೋರಿಸಿಕೊಟ್ಟ ಭಗವಂತ. ಆದಿ-ಅಂತ್ಯಗಳ ಮಧ್ಯೆ ಹೇಗಿರಬೇಕೆಂಬ ಸಂದೇಶ ನೀಡಿದ ದೇವನಾದ. 'ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ಕಾಪಾಡುತ್ತದೆ' ಎಂದು ಪಾಂಡವರ ಮೂಲಕ ತೋರಿಸಿಕೊಟ್ಟ. ಲೋಕಾಪವಾದಗಳನ್ನು ನಗುತ್ತಲೇ ಸ್ವೀಕರಿಸಿ ಪರಿಹರಿಸಿದವ. ಯಾರದೇ ತಪ್ಪುಗಳಿಗೆ ತಕ್ಷಣ ಶಿಕ್ಷೆ ನೀಡದೆ, ಯಾವ ತಪ್ಪೆಂದು ಹೇಳಿ ತಿದ್ದಿಕೊಳ್ಳಲು ಸಮಯ ನೀಡಿ, ಅನಂತರ ಶಿಕ್ಷೆ ನೀಡಿದ ಪರಿ ಆದರ್ಶ.


ವಿಧಿಯಾಟದಂತೆ ನಡೆಯಬೇಕೆಂದು ತೋರಿಸಿಕೊಟ್ಟ ಧೀರ. ನಿರ್ಧಾರ, ಗುರಿ, ಸಾಧನೆ ಯಶಸ್ಸಿನ ಮೆಟ್ಟಿಲೆಂದ ದಾರ್ಶನಿಕ. ಮಾನವ ಸಹಜ ದೌರ್ಬಲ್ಯಗಳನ್ನು ಕಿತ್ತೆಸೆದು ಹೊರಬರೋಣ, ಧರ್ಮಕ್ಕೆ ಯಾವತ್ತೂ ಜಯವೆಂದು ಹೇಳಿದವ, ನಡೆದವ. ಇಂಥ ಧೀಮಂತ ನಾಯಕ, ಓರ್ವ ವ್ಯಕ್ತಿಯಾಗದೆ ಮಹಾನ್ ಶಕ್ತಿಯಾಗಿ ಯುಕ್ತಿಯಿಂದ ಎಲ್ಲವನ್ನೂ ಸಾಧಿಸಿ ತೋರಿಸಿದವ. ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮ ಸಡಗರದಿಂದ ದೇಶಾದ್ಯಂತ ಆಚರಿಸುತ್ತಾರೆ. ಪುಟ್ಟ ಮಕ್ಕಳಿಗೆ ರಾಧಾಕೃಷ್ಣರ ವೇಷ ತೊಡಿಸುವುದು, ಮೊಸರುಕುಡಿಕೆ ಉತ್ಸವ, ಆಟೋಟಗಳು, ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವರು. ಭಗವಾನ್ ಶ್ರೀಕೃಷ್ಣನನ್ನು ಪೊರೆಯುವ ಶಕ್ತಿಯಾಗಿ ನೋಡೋಣ.


ನಾವು ಯಾವುದೇ ಒಂದು ಕಾರ್ಯ ಮಾಡುವಾಗಲೂ ಎಡರುತೊಡರು ಸಾಮಾನ್ಯ, ಅದನ್ನು ದೂರಮಾಡಿ ಮುನ್ನುಗ್ಗುವ ಛಲ ನಮ್ಮಲ್ಲಿರಲಿ. ಋಣಾತ್ಮಕ ಅಂಶಗಳನ್ನು ಬೇರುಸಹಿತ ಕಿತ್ತು ಎಸೆಯೋಣ. ಧನಾತ್ಮಕವಾಗಿ ಯೋಚಿಸಿ ಯೋಜನೆಗಳನ್ನು ರೂಪಿಸಿ ಯಶಸ್ವಿಯಾಗೋಣ. ಇವೆಲ್ಲವೂ ಭಗವಂತನ ತಂತ್ರಗಾರಿಕೆ ಎಂಬುದರ ಅರಿವಿರಬೇಕು. ಆತನ ಅನುಮತಿಯಿಲ್ಲದೆ ಒಂದು ಹುಲ್ಲುಕಡ್ಡಿಯೂ ಅಲ್ಲಾಡದು. ಆತ ಪ್ರೇರಣಾಶಕ್ತಿ.


ವಸುದೇವ ಸುತಂ ದೇವಂ ಕಂಸ ಚಾಣೂರ ಮರ್ದನಮ್|

ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಮ್||


ಜಗತ್ತಿಗೆ ನೀಡಿದ ಗೀತಾಮೃತವೆಂಬ ಹಾಲನ್ನು ಸೇವಿಸಿ ಜ್ಞಾನಿಗಳಾಗೋಣ. ಭಯಂಕರವಾದ ರಣನದಿಯನ್ನು ಪಾಂಡವರೊಂದಿಗೆ ಅಂಬಿಗನಾಗಿ ದಾಟಿಸಿದ ಮಹಾನ್ ಶಕ್ತಿ ಶ್ರೀಕೃಷ್ಣ. ಈತನ ಆದಿ ಅಂತ್ಯವನ್ನು ಅರಿತವರೇ ಜ್ಞಾನಿಗಳು, ಜನಸಾಮಾನ್ಯರಿಗೆ ಕೇವಲ ಗೋಪಾಲಕ, ಲೀಲಾವಿನೋದಿ, ಗೋಪಿಕಾ ಸ್ತ್ರೀಯರೊಂದಿಗೆ ಕಾಲಕಳೆಯುವವ, ರಾಧಾ ಮಾಧವ, ಮುರವೈರಿ, ಅಸುರಾರಿ ಅಷ್ಟೆ. ಭ್ರಷ್ಟರಿಗೆ ಮಣೆ ಹಾಕಬಾರದೆಂದು ಹೇಳಿದವನು. ಉತ್ತಮರಿಗೆ ಎಂದೂ ಕೆಡುಕಿಲ್ಲ, ಬಂದರೂ ಕ್ಷಣಿಕ. ಹೊನ್ನನ್ನು ಒರೆಹಚ್ಚುವಂತೆ ಪರೀಕ್ಷಿಸಿ, ಸೋಸಿ ಭಗವಂತ ನೋಡುವನಷ್ಟೆ. ಅದನ್ನು ದಾಟುವ ಸಾಮರ್ಥ್ಯವಿರಬೇಕು, ಕಷ್ಟ ಬಂತೆಂದು ಕೈಕಟ್ಟಿ ಕೂರಬಾರದು. 'ಅಡೆತಡೆಗಳನ್ನು ದಾಟು, ಮುಂದೆ ಹೋಗು' ಎಂಬ ಸೂಚನೆ. ಮೂರು ದಿನದ ಬದುಕಿನಲ್ಲಿ ಅಹಮನ್ನು ಸಂಪೂರ್ಣವಾಗಿ ಬಿಡಬೇಕು. ಮಹಾಭಾರತದ ಕೌರವನೇ ಇದಕ್ಕೆ ಸಾಕ್ಷಿ. ಸಂಧಾನದ ನೆಪವೊಡ್ಡಿ ಬಂದವಗೆ 'ಸಂಗ್ರಾಮವನ್ನೇ ಆಯ್ಕೆ ಮಾಡಿದ್ದೇನೆ, ಸೂಜಿಮೊನೆ ಊರುವಷ್ಟು ಜಾಗ ಸಹ ಕೊಡಲಾರೆ' ಎಂದು ಕೌರವನ ಬಾಯಿಯಲ್ಲಿ ಹೇಳಿಸಿದ. ರಾಜಕೀಯ ಚಾಣಕ್ಯ ತಂತ್ರವದು, ಮುತ್ಸದ್ದಿತನ. ಈ ಮೂಲಕವಾಗಿ ಜಗತ್ತಿಗೆ "ಮರದ ಹುಳದಂತೆ" ತನ್ನನ್ನು ತಾನೇ ನಾಶ ಮಾಡಬಹುದು ಎಂಬ ಸಂದೇಶವನ್ನು ನೀಡಿದ. ಲೋಕಮುಖಕ್ಕೆ ಕಂಟಕರಾದವರು ಬಂಧುಗಳೆಂದು ಸಹ ನೋಡದೆ ಇಲ್ಲವಾಗಿಸಿದ ಮಹಾತ್ಮ. ಧರ್ಮವನ್ನು ಎತ್ತಿಹಿಡಿದ ಕೇಶವನಾತ. ಮರ್ತ್ಯ ಪ್ರಜ್ಞೆಯಲ್ಲಿ ಅಮರ್ತ್ಯದ ಅದ್ಭುತ ರಹಸ್ಯವನ್ನು ತೋರಿಸಿದವನು.


ಸುವ್ಯವಸ್ಥೆಯನ್ನು ಸದಾ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದವ. ಮಾನವ ಸಹಜವಾದ ಸೆಳೆತಗಳನ್ನು ದಾಟಿ ದೇವನೆನಿಸಿದವ. ಜೀವನ ಸರಸ್ಸು ವಿಷವಾದಾಗ, ಅದರ ಕಾರಣ ತಿಳಿದು ಕಾಳಿಂಗ ಮರ್ದನ ಗೈಯ್ದವ. ಎಷ್ಟೇ ದುಷ್ಟ ಅರಸರನ್ನು ಕೊಂದರೂ ಪಟ್ಟಕ್ಕೆ ಆಸೆಪಡದ ತ್ಯಾಗಿಯಾತ. ಭಗವಂತನ ಆರಾಧನೆ ಇಂದು ಬಹು ಸಂಭ್ರಮ ಸಡಗರದಿಂದ ಹಮ್ಮಿಕೊಳ್ಳುವರು. ಕಥಾಶ್ರವಣ, ನಾಟಕ, ನೃತ್ಯರೂಪಕ, ಪೂಜೆ, ನೈವೇದ್ಯ, ಭಜನೆ, ಆಟೋಟ ಹಮ್ಮಿಕೊಳ್ಳುವರು. ಕೆಲವೆಡೆ ಧಾರ್ಮಿಕ ನುಡಿಗಳನ್ನು ಪ್ರಾಜ್ಞರ ಮುಖೇನ ಹೇಳಿಸುವರು. ಭಕ್ತಿ, ಪ್ರೀತಿ, ವಾತ್ಸಲ್ಯ, ಮಮತೆಯ ಭಗವಂತನಾತ. 'ನಂಬಿ ಕರೆದಲ್ಲಿಗೆ ಬರುವ ಭಗವಂತನಾತ.'


ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನ/


ನಾವು ನೆಟ್ಟ ಫಲ ನಮಗೇ ಸಿಗಬೇಕೆಂಬ ಬಯಕೆ ಬೇಡ. ಕರ್ಮ, ಕೆಲಸ, ಕಾಯಕ ಮಾಡು, ಫಲ ಭಗವಂತನಿಚ್ಛೆ. ಮುಖ್ಯವಾಗಿ ದುಡಿದು ಉಣ್ಣು ಎನುವ ಸಂದೇಶ. ಭಗವಂತನ ಕೊಳಲು ಬರಿಯ ಕಣ್ಣಿಗೆ ಕೊಳಲಷ್ಟೆ. ಅದರ ನಾದದಲ್ಲಿ ಉತ್ತಮ ಸಂದೇಶವಿದೆ. ಗಂಟುಗಳಿಲ್ಲದ ಕೊಳಲಿನ ಹಾಗೆ ನಮ್ಮ ಬದುಕೂ ಇರಬೇಕೆಂಬ ತತ್ವ. ನವಿಲುಗರಿಯ ಬಣ್ಣ ಸಮಚಿತ್ತವನ್ನು ಕಾಯಬೇಕೆಂಬುದನ್ನು ಸೂಚಿಸುತ್ತದೆ. ಸಕಲಕಲಾವಲ್ಲಭ, ರುಕ್ಮಿಣಿಗೆ ಪ್ರಿಯ, ಭಾಮಾಕಾಂತ, ರಾಧಾಕೃಷ್ಣ, ಚೈತನ್ಯರೂಪಿ, ಅಸುರಾರಿ, ಭಕ್ತವತ್ಸಲ, ದೇವರದೇವ, ಪಾಂಡವರ ಭಾವ ಶ್ರೀಕೃಷ್ಣನಿಗೆ ನಮೋ ನಮ:


ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರಿಮ್/


ಯತ್ಕೃಪಾ ತಮಹಂ ವಂದೇ ಪರಮಾನಂದ ಮಾಧವಮ್//


ಶ್ರೀಕೃಷ್ಣ ಸ್ತೋತ್ರಗಳು: ನಿತ್ಯ ಸ್ತೋತ್ರ ದೀಪಿಕಾ


ಸಂಗ್ರಹ: ರತ್ನಾ ಕೆ. ಭಟ್ಟ ತಲಂಜೇರಿ, ಪುತ್ತೂರು

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top