ಮಳೆನೀರು ಅಮೃತವಿದ್ದಂತೆ, ಅದನ್ನು ಚರಂಡಿ ಪಾಲು ಮಾಡದಿರಿ - ರಾಘವೇಶ್ವರ ಶ್ರೀ

Upayuktha
0

* ಮನುಷ್ಯನ ಆಯಾಸ, ಗಾಬರಿ ನೀಗಿಸುವ ಶಕ್ತಿ ನೀರಿಗಿದೆ

* ಸಮಾಧಾನ ನೀಡುವಲ್ಲಿ ನೀರಿಗೆ ಸಾಟಿಯಿಲ್ಲ

* ಮಳೆನೀರಿಗಿದೆ ಅಪರಿಮಿತ ಚೈತನ್ಯ

ಗೋಕರ್ಣ: ಹಿಂದೆ ರಾಜರು ಮಳೆಯ ನೀರನ್ನೇ ಸುಯೋಗ್ಯವಾಗಿ ಸಂಗ್ರಹಿಸಿ ಕುಡಿಯುತ್ತಿದ್ದರು. ಸಮರ್ಪಕವಾಗಿ ಮಳೆ ನೀರನ್ನು ಸಂಗ್ರಹಿಸಿದಾಗ ಅದು ವರ್ಷಗಳ ಕಾಲ ಹಾಳಾಗದೇ ಸೇವನೆಗೆ ಯೋಗ್ಯವಾಗಿರುತ್ತದೆ. ನಮಗಿಂದು ಮಳೆ ನೀರೆಂಬ ಅಮೃತ ಜಲದ ಬಗ್ಗೆ ಯಾವುದೇ ಜ್ಞಾನ ಇಲ್ಲದಂತಾಗಿದೆ. ಮಳೆನೀರನ್ನು ಸುಯೋಗ್ಯವಾಗಿ ಸಂಗ್ರಹಿಸುವುದರ ಬದಲು, ಅದನ್ನು ಚರಂಡಿಯಲ್ಲಿ ಹರಿದು ಹೋಗಲು ಬಿಡುತ್ತಿದ್ದೇವೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.


ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ 07.09.2026 ರಂದು 'ಅನ್ನಂ ಬ್ರಹ್ಮ' ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಸಮಾಧಾನವನ್ನು ನೀಡುವಲ್ಲಿ ನೀರಿನಂತೆ ಇರುವ ಇನ್ನೊಂದು ಪದಾರ್ಥವಿಲ್ಲ. ಮನುಷ್ಯನಿಗೆ ದಣಿವು, ಆಯಾಸ, ಗಾಬರಿಗಳಾದಾಗ ಸಮಾಧಾನವನ್ನು ತಂದುಕೊಡುವ ಗುಣ ನೀರಿಗಿದೆ. ಬೇರೆ ಬೇರೆ ಕಾಲದ ಬೇರೆ ಬೇರೆ ಪ್ರದೇಶದ ಆಯುರ್ವೇದ ಆಚಾರ್ಯರೆಲ್ಲರೂ ಮಳೆ ನೀರನ್ನು ಸೇವನೆಗೆ ಸುಯೋಗ್ಯ ಎಂದು ಸಾರಿ ಹೇಳಿದ್ದಾರೆ.ಮಳೆಯ ನೀರಿಗೆ ಅಪರಿಮಿತವಾದ ಚೈತನ್ಯವಿದ್ದು, ಲೆಕ್ಕಕ್ಕೆ ಸಿಗದಷ್ಟು ಗುಣಗಳಿವೆ. ಮಳೆನೀರಿನಲ್ಲಿ ಸುಲಭವಾಗಿ ಗುರುತಿಸಲು ಸಾಧ್ಯವಾಗುವ ಆರು ಗುಣಗಳನ್ನು ಆಯುರ್ವೇದ ಚರ್ಚಿಸಿದ್ದು, ತಂಪು, ಶುದ್ಧ, ರುಚಿಕರ, ಕಲ್ಮಶಗಳಿಲ್ಲ, ಮಂಗಳಕರ ಹಾಗೂ ಜೀರ್ಣಕ್ಕೆ ಲಘು ಎಂಬುದಾಗಿ ವಿಮರ್ಶಿಸಿದೆ ಎಂದರು.


ಮಳೆಯ ನೀರಿನಲ್ಲಿ ಗಾಂಗ ಹಾಗೂ ಸಾಮುದ್ರ ಎಂದು ಎರಡು ವಿಭಾಗವನ್ನು ಮಾಡಿದ್ದು, ಗಾಂಗ ಜಲವು ಸೇವಿಸಲು ಉತ್ಕೃಷ್ಟ ನೀರಾಗಿದೆ. ಸಂಗ್ರಹಿಸಿದ ಮಳೆಯ ನೀರು ಗಾಂಗವೋ? ಅಥವಾ ಸಾಮುದ್ರಕವೋ?? ಎಂದು ತಿಳಿಯಲು ಅನೇಕ ಸುಲಭ ಪರೀಕ್ಷೆಗಳನ್ನು ಮಾಡಬಹುದಾಗಿದ್ದು, ಸಾಮಾನ್ಯವಾಗಿ ಆಶ್ವಯುಜ ಮಾಸದಲ್ಲಿ ಹಾಗೂ ದಕ್ಷಿಣ ದಿಕ್ಕಿನಲ್ಲಿ ಅಗಸ್ತ್ಯ ನಕ್ಷತ್ರ ಕಾಣುವಾಗ ಬೀಳುವ ಮಳೆಯ ನೀರು ಗಾಂಗವಾಗಿದ್ದು, ಅದು ಕುಡಿಯಲು ಉತ್ತಮೋತ್ತಮ ಎಂದು ಪ್ರಾಚೀನ ಮಹರ್ಷಿಗಳು ಸೂಚಿಸಿದ್ದಾರೆ ಎಂದು ವಿವರಿಸಿದರು.


ಭೂಮಿಗೆ ಬಿದ್ದ ನೀರನ್ನು ಕುದಿಸಿ ಆರಿಸಿದರೆ ಅದು ಆ ದಿನಕ್ಕೆ ಮಾತ್ರ ಕುಡಿಯಲು ಯೋಗ್ಯ. ಮರುದಿನಕ್ಕೆ ಕುದಿಸಿ ಆರಿಸಿದ ಆ ನೀರಿನ ಗುಣದಲ್ಲಿ ವ್ಯತ್ಯಾಸವಾಗುತ್ತದೆ. ಹಿಂದಿನ ದಿನ ಜೀರ್ಣಕ್ಕೆ ಲಘುವಾಗಿದ್ದ ಅದೇ ನೀರು ಮರು ದಿನ ಗುರುವಾಗಿ ಜೀರ್ಣಕ್ಕೆ ಕಷ್ಟಕರವಾಗುತ್ತದೆ. ಆದರೆ ಮಳೆಯ ನೀರು ಹಾಗಲ್ಲ ಎಂದು ನೀರಿನ ಕುರಿತಾದ ಸೂಕ್ಷ್ಮ ಮಾಹಿತಿಗಳನ್ನು ವಿವರಿಸಿದರು.


ಮಳೆಯ ನೀರು ಕಪ್ಪು ಮಣ್ಣಿಗೆ ಬಿದ್ದಾಗ ಸಿಹಿ ರಸ, ಬಿಳಿ ಮಣ್ಣಿಗೆ ಬಿದ್ದಾಗ ಒಗರು, ಪರ್ವತದ ತಪ್ಪಲಲ್ಲಿ ಬಿದ್ದ ನೀರು ಖಾರ ರಸ ಎಂಬುದಾಗಿ ಮಳೆಯ ನೀರು ಯಾವ ಬಣ್ಣದ ಮಣ್ಣಿಗೆ ಬಿದ್ದಾಗ ಯಾವ ರುಚಿ ಏರ್ಪಡುತ್ತದೆ ಎಂದು ವಿಸ್ತಾರವಾಗಿ ನಮ್ಮ ಪೂರ್ವಜರು ಸಂಶೋಧಿಸಿದ್ದು, ಬಂಗಾರ, ಬೆಳ್ಳಿ , ಮಣ್ಣು ಅಥವಾ ಗಾಜಿನ ಪಾತ್ರೆಗಳಲ್ಲಿ ಮಳೆಯ ನೀರನ್ನು ಸಂಗ್ರಹ ಮಾಡಬೇಕು. ಇವುಗಳಿಂದ ನೀರಿನ ಗುಣಗಳ ನಾಶವಾಗುವುದಿಲ್ಲ ಎಂದು ತಿಳಿಸಿದರು.


ಶ್ರೀಕ್ಷೇತ್ರ ಗೋಕರ್ಣದ ಉಪಾಧಿವಂತರಾದ ವೇ.ಮೂ. ಪರಮೇಶ್ವರ ಭಟ್ ಮಾರ್ಕಂಡೆ ದಂಪತಿಗಳು ದಿನಪ್ರಧಾನರಾಗಿ ಉಪಸ್ಥಿತರಿದ್ದು, ಶ್ರೀಗಳಿಂದ ಆಶೀರ್ವಾದ ಪಡೆದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top