ಶ್ರೀ ಪುತ್ತಿಗೆ ಸಂಧ್ಯಾ ವಿದ್ಯಾಪೀಠ ಹಾಗೂ ಮಹಿಳಾ ವಿದ್ಯಾಪೀಠ ಉದ್ಘಾಟನೆ

Shreya Hegde
0


ನವಿ ಮುಂಬೈ: ಉಡುಪಿ ಶ್ರೀ ಪುತ್ತಿಗೆ ಮಠದ ಹಿರಿಯ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿ ಹಾಗೂ ಆಶೀರ್ವಾದದೊಂದಿಗೆ ಮುಂಬೈ ಮಹಾನಗರದಲ್ಲಿ ಶ್ರೀ ಪುತ್ತಿಗೆ ಸಂಧ್ಯಾ ವಿದ್ಯಾಪೀಠ ಹಾಗೂ ಶ್ರೀ ಪುತ್ತಿಗೆ ಮಹಿಳಾ ವಿದ್ಯಾಪೀಠ ಇಂದು ವಿಧಿವತ್ತಾಗಿ ಉದ್ಘಾಟನೆಗೊಂಡಿತು.


ಯಾಂತ್ರಿಕ ಜೀವನಶೈಲಿಯ ಪರಿಣಾಮವಾಗಿ ಧರ್ಮ, ಸಂಸ್ಕೃತಿ ಹಾಗೂ ಮೌಲ್ಯಾಧಾರಿತ ಜೀವನ ಕ್ರಮಗಳು ನಿಧಾನವಾಗಿ ಮರೆಯಾಗುತ್ತಿರುವ ಹಿನ್ನೆಲೆಯಲ್ಲಿ, ಆಸ್ತಿಕ ಸಮಾಜದ ಪ್ರತಿಯೊಂದು ಮನೆ-ಮನದಲ್ಲೂ ಧರ್ಮಚಿಂತನೆ ಮೂಡಿಸಿ, ಧಾರ್ಮಿಕ ಆಚರಣೆಗಳ ಅರ್ಥವನ್ನು ಅರಿತು ಅವುಗಳನ್ನು ಅರ್ಥಪೂರ್ಣವಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಶ್ರೀ ಪುತ್ತಿಗೆ ವಿದ್ಯಾಪೀಠವನ್ನು ಸ್ಥಾಪಿಸಲಾಗಿದೆ.


ಈಗಾಗಲೇ ಚೆನ್ನೈ, ಬೆಂಗಳೂರು ಹಾಗೂ ಕೋಲ್ಕತ್ತಾ ನಗರಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಪುತ್ತಿಗೆ ವಿದ್ಯಾಪೀಠವು, ಮುಂಬೈ ಮಹಾನಗರದಲ್ಲಿಯೂ ಧರ್ಮ ಹಾಗೂ ಸಂಸ್ಕೃತಿಯ ಪ್ರಸಾರಕ್ಕಾಗಿ ತನ್ನ ಕಾರ್ಯವನ್ನು ವಿಸ್ತರಿಸಿದೆ. ಶ್ರೀ ಜಗನ್ನಾಥ ದಾಸರ ಆರಾಧನೆಯ ಪವಿತ್ರ ಸಂದರ್ಭದಲ್ಲಿ ಈ ವಿದ್ಯಾಪೀಠಗಳ ಆರಂಭಕ್ಕೆ ಸಂಕಲ್ಪ ಮಾಡಲಾಗಿದೆ. ಶ್ರೀ ಪುತ್ತಿಗೆ ಮಹಿಳಾ ವಿದ್ಯಾಪೀಠದಲ್ಲಿ ಮಹಿಳೆಯರಿಗೆ ದಾಸರ ಪದಗಳು, ಹರಿಕಥಾಮೃತಸಾರ ಸಂಪ್ರದಾಯದ ಹಾಡುಗಳು, ಭಜನೆ, ರಂಗವಲ್ಲಿ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ತರಬೇತಿ ನೀಡಲಾಗುವುದು.


ಸಂಧ್ಯಾ ವಿದ್ಯಾಪೀಠ

ವಿಪ್ರ ಪುರುಷರಿಗಾಗಿ ಆರಂಭಿಸಲಾಗಿರುವ ಸಂಧ್ಯಾ ವಿದ್ಯಾಪೀಠದಲ್ಲಿ ವೇದಾಧ್ಯಯನ, ಸಂಧ್ಯಾವಂದನೆ ಕಾರ್ಯಾಗಾರ, ದೇವಪೂಜಾ ಪದ್ಧತಿ, ಶ್ರೀಮದ್ಭಗವದ್ಗೀತೆ, ದಾಸರ ಪದಗಳು, ಭಜನೆ ಮುಂತಾದ ವಿಷಯಗಳ ಕುರಿತು ಕ್ರಮಬದ್ಧವಾದ ಶಿಕ್ಷಣ ಮತ್ತು ತರಬೇತಿ ನೀಡಲಾಗುವುದು.


ಉದ್ಘಾಟನಾ ಸಮಾರಂಭದಲ್ಲಿ ಸಭೆಯನ್ನುದ್ದೇಶಿಸಿ ಆಶೀರ್ವಚನ ನೀಡಿದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರು, “ಸನಾತನ ಧರ್ಮವು ಎಂದಿಗೂ ನಶಿಸುವುದಿಲ್ಲ. ಅದಕ್ಕೆ ಪ್ರಮುಖ ಕಾರಣ ಹಿಂದೂ ಸಮಾಜದ ಸ್ತ್ರೀಯರಲ್ಲಿರುವ ಧರ್ಮಪ್ರಜ್ಞೆ ಹಾಗೂ ಅಚಲವಾದ ಧರ್ಮನಿಷ್ಠೆ. ಈ ಧರ್ಮಪ್ರಜ್ಞೆಯನ್ನು ಮತ್ತಷ್ಟು ಜಾಗೃತಗೊಳಿಸುವ ಉದ್ದೇಶದಿಂದ ಮಹಿಳಾ ವಿದ್ಯಾಪೀಠವನ್ನು ಆರಂಭಿಸಲಾಗಿದೆ. ಯಾಂತ್ರಿಕ ಜೀವನಶೈಲಿಯಲ್ಲಿ ತಮ್ಮತನವನ್ನೇ ಮರೆತು ಹೋಗುತ್ತಿರುವ ಪುರುಷರಲ್ಲಿ, ವಿಶೇಷವಾಗಿ ವಿಪ್ರ ಪುರುಷರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವ ಉದ್ದೇಶದಿಂದ ಸಂಧ್ಯಾ ವಿದ್ಯಾಪೀಠವನ್ನು ಸ್ಥಾಪಿಸಲಾಗಿದೆ. ವ್ಯವಸ್ಥಿತವಾಗಿ ನಡೆಯಲಿರುವ ಈ ವಿದ್ಯಾಪೀಠಗಳಲ್ಲಿ ಶಿಕ್ಷಣ ಪೂರ್ಣಗೊಳಿಸಿದವರಿಗೆ ಪ್ರಮಾಣಪತ್ರವನ್ನು ನೀಡಲಾಗುವುದು” ಎಂದು ನುಡಿದರು.


ಈ ಸಂದರ್ಭದಲ್ಲಿ ಮಹಾಭಾರತ ತಾತ್ಪರ್ಯ ನಿರ್ಣಯದ ಶ್ಲೋಕವನ್ನು ಉಪದೇಶಿಸುವ ಮೂಲಕ ಶ್ರೀಪಾದಂಗಳವರು ವಿದ್ಯಾಪೀಠಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ವಾನ್ ನಾಗರಹಳ್ಳಿ ಪ್ರಹ್ಲಾದಾಚಾರ್ಯರು ಮಾತನಾಡಿ, “ಇಂತಹ ವಿದ್ಯಾಪೀಠಗಳು ಸಮಾಜಕ್ಕೆ ಆದರ್ಶಪ್ರಾಯವಾಗಿವೆ. ಲಕ್ಷಾಂತರ ಗುರುಕುಲಗಳು ಹಾಗೂ ವಿದ್ಯಾಪೀಠಗಳು ಇದ್ದಂತಹ ಈ ರಾಷ್ಟ್ರದಲ್ಲಿ ಇಂದು ಬೆರಳೆಣಿಕೆಯಷ್ಟು ಮಾತ್ರ ಉಳಿದಿವೆ. ಪರಮಪೂಜ್ಯ ಶ್ರೀಪಾದಂಗಳವರ ಸಂಕಲ್ಪದಿಂದ ನಮ್ಮ ದೇಶದ ಆ ಗತವೈಭವವು ಪುನಃಶ್ಚೇತನಗೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ” ಎಂದು ಅಭಿಪ್ರಾಯಪಟ್ಟರು.


ಕಾರ್ಯಕ್ರಮದ ಅತಿಥಿಗಳಾದ ಮಾನ್ಯೂರು ಅನಂತಮೂರ್ತಿ ಅವರು ಭಾಗ್ಯನಗರದ ಶ್ರೀ ಗುರು ರಾಘವೇಂದ್ರ ಮಠದಿಂದ ತಂದ ರಾಯರ ಶೇಷವಸ್ತ್ರವನ್ನು ಪರಮಪೂಜ್ಯ ಶ್ರೀಪಾದಂಗಳವರಿಗೆ ಸಮರ್ಪಿಸಿದರು. ಧರ್ಮ, ಸಂಸ್ಕೃತಿ ಮತ್ತು ಮೌಲ್ಯಾಧಾರಿತ ಜೀವನಶೈಲಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಉದ್ದೇಶದೊಂದಿಗೆ ಆರಂಭಗೊಂಡಿರುವ ಈ ವಿದ್ಯಾಪೀಠಗಳು ಮುಂಬೈ ಮಹಾನಗರದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೊಸ ದಿಕ್ಕನ್ನು ನೀಡುವ ನಿರೀಕ್ಷೆಯಿದೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top