ಮಂಗಳೂರು, ಸೆ. 22: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಸೂಕ್ಷ್ಮಜೀವಶಾಸ್ತ್ರ ವಿಭಾಗದಲ್ಲಿ ಅಂತರರಾಷ್ಟ್ರೀಯ ಸೂಕ್ಷ್ಮಾಣು ಜೀವಿಗಳ ದಿನದ ಅಂಗವಾಗಿ ಮೈಕ್ರೋಬಯಾಲಜಿಸ್ಟ್ ಸೊಸೈಟಿ ಇಂಡಿಯಾದ ಸ್ಥಾಪಕ ಅಧ್ಯಕ್ಷ ಡಾ. ಎ. ಎಂ. ದೇಶಮುಖ್ ಮತ್ತು ಅವರ ತಂಡ, ಕಾಲೇಜಿನ ಸೂಕ್ಷ್ಮಜೀವಶಾಸ್ತ್ರ ವಿಭಾಗ ಹಾಗೂ ಮೂಡಬಿದಿರೆ ಆಳ್ವಾಸ್ ಎಂಬಿಎಸ್‌ಐ ವಿದ್ಯಾರ್ಥಿ ಘಟಕ ಇವರ ಸಹಯೋಗದಲ್ಲಿ ಮಂಗಳೂರಿನ ಪ್ರೊ. ಪ್ಯಾಟ್ರಿಕ್ ಟೌರೋ ಅವರಿಗೆ ‘ಸೂಕ್ಷ್ಮಜೀವಶಾಸ್ತ್ರ ಕ್ಷೇತ್ರದಲ್ಲಿನ ಜೀವಮಾನದ ಸೇವಾ ಪ್ರಶಸ್ತಿ' ಪ್ರಧಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪ್ರಶಸ್ತಿ ಸ್ವೀಕರಿಸಿದ ಟೌರೋ ಅವರು, ಸೂಕ್ಷ್ಮಜೀವಶಾಸ್ತ್ರ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿರುವುದರಿಂದ ದೇಶದಲ್ಲಿ ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. ಇದು ಕೃಷಿ, ಹವಾಮಾನ, ಕಾರ್ಖಾನೆ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ತನ್ನ ಪ್ರಭಾವ ಬೀರುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯವಂತ ನಾಯಕ್, ವಿಜ್ಞಾನ ಕ್ಷೇತ್ರದಲ್ಲಿ ಸಾಂಪ್ರದಾಯಿಕ ವಿಷಯಗಳನ್ನು ಹಿಂದಿಕ್ಕಿ ಸೂಕ್ಷ್ಮಜೀವಶಾಸ್ತ್ರ ಸಾಕಷ್ಟು ಪ್ರಸಿದ್ಧಿ ಪಡೆದುಕೊಳ್ಳುತ್ತಿದೆ. ಯಾವುದೇ ವಿಷಯದಲ್ಲಿ ನಕಾರಾತ್ಮಕತೆ ಮತ್ತು ಸಕಾರಾತ್ಮಕತೆ ಎರಡೂ ಇರುತ್ತದೆ. ಆದರೆ, ಅವುಗಳಲ್ಲಿ ಸಕಾರಾತ್ಮಕತೆ ಉಳಿಸಿಕೊಂಡು ಬೆಳೆಸಬೇಕಿದೆ. ಸೂಕ್ಷ್ಮಜೀವಾಣುಗಳು ಕಣ್ಣಿಗೆ ಕಾಣದೇ ಇದ್ದರೂ ಅವುಗಳ ಮಹತ್ವ ಬಹಳಷ್ಟಿದೆ ಎಂದು ವಿವರಿಸಿದರು.
ಇದೇ ವೇಳೆ, ಎಂಬಿಎಸ್‌ಐನ ರಾಜ್ಯ ಮುಖ್ಯ ಸಂಯೋಜಕಿ ಹಾಗೂ ಕಾಲೇಜಿನ ಸೂಕ್ಷ್ಮಜೀವಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಭಾರತಿ ಪ್ರಕಾಶ್, ಸೇಂಟ್ ಆಗ್ನೆಸ್ ಕಾಲೇಜಿನ ವಿಜ್ಞಾನ ವಿಭಾಗದ ಡೀನ್ ವಿದ್ಯಾ ಪಟಾಲಿ, ಸೂಕ್ಷ್ಮಜೀವಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರಜ್ವಲ್ ರಾವ್, ಸೇಂಟ್ ಅಲೋಶಿಯಸ್ ಕಾಲೇಜಿನ ಸೂಕ್ಷ್ಮಜೀವಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ವೈಶಾಲಿ, ಕಾಲೇಜಿನ ಸೂಕ್ಷ್ಮಜೀವಶಾಸ್ತ್ರ ವಿಭಾಗದ ಉಪನ್ಯಾಸಕಿ ಸುಮಂಗಲಾ, ಐಕ್ಯುಎಸಿ ಸಂಯೋಜಕ ಡಾ. ಸಿದ್ಧರಾಜು ಎಂ. ಎನ್. ಸೇರಿದಂತೆ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
