ಆಳ್ವಾಸ್ ಮೆಡಿಕಲ್ ಕಾಲೇಜು ಉದ್ಘಾಟನೆ: ತಿಂಗಳಲ್ಲಿ ಪರಿಗಣಿತ ವಿಶ್ವವಿದ್ಯಾಲಯದ ಮಾನ್ಯತೆ – ಪ್ರಹ್ಲಾದ್ ಜೋಶಿ

Upayuktha
0

 


ಮೂಡುಬಿದಿರೆ: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್ (ಆಳ್ವಾಸ್ ಮೆಡಿಕಲ್ ಕಾಲೇಜು) ಸೋಮವಾರ (ಸೆ.21) ಮಿಜಾರಿನ ಶೋಭಾ ಮೋಹನ ಆಳ್ವ ಆವರಣದಲ್ಲಿ ಉದ್ಘಾಟನೆಗೊಂಡಿತು.


ಮಿಜಾರುಗುತ್ತು ಸುಂದರಿ ಆನಂದ ಆಳ್ವ ವೇದಿಕೆಯಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರದ ಶಿಕ್ಷಣ, ಆಹಾರ ಮತ್ತು ಸಾರ್ವಜನಿಕ ವಿತರಣೆ, ಗ್ರಾಹಕ ವ್ಯವಹಾರಗಳು ಹಾಗೂ ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಅವರು ಕಾಲೇಜನ್ನು ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಪ್ರಹ್ಲಾದ್ ಜೋಶಿ, ಆಳ್ವಾಸ್ ಪರಿಗಣಿತ ವಿಶ್ವವಿದ್ಯಾಲಯದ ಮಾನ್ಯತೆ ಇನ್ನೊಂದು ತಿಂಗಳಲ್ಲಿ ದೊರೆಯಲಿದೆ ಎಂದು ಭರವಸೆ ನೀಡಿದರು.


“ಮುಂಬೈ ಕರ್ನಾಟಕದ ಜನರು ದೇವರ ದರ್ಶನಕ್ಕಾಗಿ ಧರ್ಮಸ್ಥಳಕ್ಕೆ ಹಾಗೂ ಶಿಕ್ಷಣಕ್ಕಾಗಿ ಮೂಡುಬಿದಿರೆಯ ಆಳ್ವಾಸ್‌ಗೆ ಬರುತ್ತಾರೆ. ಆಳ್ವರೆ, ನಿಮಗೆ ದೇವರ ಆಶೀರ್ವಾದವಿದೆ” ಎಂದು ಅವರು ಹೇಳಿದರು.


“ನೂರು ಕೈಗಳಿಂದ ಗಳಿಸಿ, ಸಾವಿರ ಕೈಗಳಿಂದ ಕೊಡಬೇಕು ಎಂಬುದನ್ನು ನಮ್ಮ ಸಂಸ್ಕೃತಿ ಹೇಳುತ್ತದೆ. ಇದಕ್ಕೆ ಆಳ್ವರು ನಿದರ್ಶನ. ಅಶಕ್ತರಿಗೆ ನೆರವು ನೀಡುವ ಸಂಸ್ಥೆಯಾಗಿ ಆಳ್ವಾಸ್ ಗುರುತಿಸಿಕೊಂಡಿದೆ” ಎಂದು ಅವರು ಶ್ಲಾಘಿಸಿದರು.


ವೈದ್ಯಕೀಯ ಕೇಂದ್ರವಾಗಲಿ ದಕ್ಷಿಣ ಕನ್ನಡ

ಜಗತ್ತು ವೃದ್ಧಾಪ್ಯದತ್ತ ಸಾಗುತ್ತಿದ್ದರೂ ಭಾರತ ಯುವಜನರ ದೇಶವಾಗಿದೆ. ಭಾರತದ ವೈದ್ಯರು ಮತ್ತು ಶುಶ್ರೂಷಕರ ಮೇಲಿನ ವಿಶ್ವಾಸ ಜಾಗತಿಕವಾಗಿ ಹೆಚ್ಚುತ್ತಿದೆ. ದಕ್ಷಿಣ ಕನ್ನಡವು ಜಗತ್ತಿನ ಪ್ರಮುಖ ವೈದ್ಯಕೀಯ ಕೇಂದ್ರವಾಗಿ ಬೆಳೆಯಬೇಕು ಎಂದು ಪ್ರಹ್ಲಾದ್ ಜೋಶಿ ಆಶಿಸಿದರು.


ವೈದ್ಯಕೀಯ ಸಂಶೋಧನೆಯಲ್ಲಿ ಮಾನವೀಯತೆ ಅತ್ಯಂತ ಮುಖ್ಯ. ವಿದ್ಯಾರ್ಥಿಗಳಿಗೆ ಕೌಶಲದ ಜೊತೆಗೆ ಧೈರ್ಯವೂ ಅಗತ್ಯ. ಸೇವಾ ಸಂಕಲ್ಪ ಭಾರತದಲ್ಲಿ ಬಲವಾಗಿದೆ ಎಂದು ಅವರು ಹೇಳಿದರು.


ಯುವಜನರು ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ. ಪೋಷಕರು ಮಕ್ಕಳ ಮೇಲೆ ಅನಗತ್ಯ ಒತ್ತಡ ಹೇರಬಾರದು ಎಂದು ಅವರು ಕಿವಿಮಾತು ಹೇಳಿದರು.


ಭಾರತವು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದ್ದು, ವಿದ್ಯುತ್ ಉತ್ಪಾದನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದೇಶ ಪ್ರಗತಿ ಸಾಧಿಸುತ್ತಿದೆ. ಭಾರತವು ಪ್ರಸ್ತುತ 863 ಬಿಲಿಯನ್ ಡಾಲರ್ ಮೌಲ್ಯದ ರಫ್ತು ಮಾಡುತ್ತಿದೆ ಹಾಗೂ 300 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಉತ್ಪಾದಿಸುತ್ತಿದೆ ಎಂದು ಅವರು ತಿಳಿಸಿದರು.


ಭಾರತದಲ್ಲಿ ಶೇ.98ರಷ್ಟು ಮೊಬೈಲ್ ಉತ್ಪಾದನೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ 6ಜಿ ತಂತ್ರಜ್ಞಾನವನ್ನು ಭಾರತ ನೀಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.



ದೇಶದಲ್ಲಿ ಪ್ರಸ್ತುತ 1.4 ಲಕ್ಷ ವೈದ್ಯಕೀಯ ಸೀಟುಗಳಿದ್ದು, 1.03 ಲಕ್ಷ ಪೇಟೆಂಟ್‌ಗಳು ಮತ್ತು 2.3 ಲಕ್ಷ ಸ್ಟಾರ್ಟ್‌ಅಪ್‌ಗಳ ಮೂಲಕ ಭಾರತದ ಶೈಕ್ಷಣಿಕ ಹಾಗೂ ಆವಿಷ್ಕಾರ ಕ್ಷೇತ್ರದ ಸಾಧನೆ ಜಾಗತಿಕ ಗಮನ ಸೆಳೆಯುತ್ತಿದೆ ಎಂದರು.


ರಾಜ್ಯ ಹಾಗೂ ದಕ್ಷಿಣ ಕನ್ನಡದಿಂದ ಹೆಚ್ಚಿನ ಸಂಖ್ಯೆಯ ಸ್ಟಾರ್ಟ್‌ಅಪ್‌ಗಳು ಹೊರಹೊಮ್ಮಬೇಕು. ಹೊಸ ಯೋಚನೆಗಳು ಮತ್ತು ಯೋಜನೆಗಳು ವೈದ್ಯಕೀಯ ಕ್ಷೇತ್ರದಿಂದ ಬರಬೇಕು ಎಂದು ಅವರು ಆಶಿಸಿದರು.


ಯುವಜನರಿಗೆ ಸಾಕಷ್ಟು ಅವಕಾಶಗಳಿದ್ದು, ಸಂಶೋಧನೆಗಾಗಿ ಕೇಂದ್ರ ಸರ್ಕಾರವು ₹2.5 ಲಕ್ಷ ಕೋಟಿ ಮೀಸಲಿಟ್ಟಿದೆ. 21ನೇ ಶತಮಾನ ಭಾರತದ್ದಾಗಿದ್ದು, 2047ರ ವೇಳೆಗೆ ಭಾರತ ವಿಕಸಿತ ರಾಷ್ಟ್ರವಾಗಲಿದೆ ಎಂದು ಪ್ರಹ್ಲಾದ್ ಜೋಶಿ ಹೇಳಿದರು.


ಆರೋಗ್ಯ-ಅಧ್ಯಾತ್ಮಿಕ ಗುಣಮುಖ ರಾಜಧಾನಿಯಾಗಲಿ ದಕ್ಷಿಣ ಕನ್ನಡ: ಚೌಟ

ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ಆಳ್ವಾಸ್ ಮೆಡಿಕಲ್ ಕಾಲೇಜಿನ ಮೂಲಕ ಶಿಕ್ಷಣ ಪ್ರೇಮಿಗಳ ಬೇಡಿಕೆ, ಆಳ್ವಾಸ್‌ನ ಕನಸು ಹಾಗೂ ಜನರ ಅಪೇಕ್ಷೆ ಈಡೇರಿದೆ. ಆಳ್ವಾಸ್ ಸಂಸ್ಥೆಯ ಸಾಧನೆಗೆ ಅವರೇ ಸಾಟಿ ಎಂದು ಹೇಳಿದರು.


ಆರ್ಥಿಕವಾಗಿ ಕೈಗೆಟಕುವ, ಗುಣಮಟ್ಟದ ಹಾಗೂ ಸುಲಭವಾಗಿ ದೊರೆಯುವ ಆರೋಗ್ಯ ಸೇವೆ ಎಲ್ಲರಿಗೂ ಲಭ್ಯವಾಗಬೇಕು ಎಂಬುದು ಕೇಂದ್ರ ಸರ್ಕಾರದ ಆಶಯವಾಗಿದೆ. ಕೇಂದ್ರದ ನೀತಿಗಳ ಪರಿಣಾಮವಾಗಿ ದೇಶದ ಆರೋಗ್ಯ ಕ್ಷೇತ್ರ ವೇಗವಾಗಿ ಅಭಿವೃದ್ಧಿ ಕಾಣುತ್ತಿದೆ ಎಂದರು.


ಕ್ಷಯ ಮುಕ್ತ ಭಾರತ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.


ದಕ್ಷಿಣ ಕನ್ನಡವು ಆರೋಗ್ಯ ಮತ್ತು ಅಧ್ಯಾತ್ಮಿಕ ಗುಣಮುಖ ರಾಜಧಾನಿಯಾಗಿ ರೂಪುಗೊಳ್ಳಬೇಕು. ಜಿಲ್ಲೆಯಲ್ಲಿ ಇನ್ನಷ್ಟು ಆರೋಗ್ಯ ದೇವಾಲಯಗಳು ನಿರ್ಮಾಣವಾಗಬೇಕು ಹಾಗೂ ದಕ್ಷಿಣ ಕನ್ನಡ ವೈದ್ಯಕೀಯ ಪ್ರವಾಸಿತಾಣವಾಗಿ ಬೆಳೆಯಬೇಕು ಎಂದು ಅವರು ಆಶಿಸಿದರು.


ಆಳ್ವಾಸ್ ಪರಿಗಣಿತ ವಿಶ್ವವಿದ್ಯಾಲಯದ ಕನಸು ಶೀಘ್ರದಲ್ಲೇ ನನಸಾಗಲಿ ಎಂದು ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾರೈಸಿದರು.


ಶಿಕ್ಷಣದೊಂದಿಗೆ ಸಂಸ್ಕಾರವೂ ಅಗತ್ಯ: ತಿಪ್ಪೇಸ್ವಾಮಿ


ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯವಾಹ ಎನ್. ತಿಪ್ಪೇಸ್ವಾಮಿ ಮಾತನಾಡಿ, ಶಿಕ್ಷಣದ ಜೊತೆಗೆ ಸಂಸ್ಕಾರವೂ ಅಗತ್ಯ. ಇದಕ್ಕೆ ಆಳ್ವಾಸ್ ಅತ್ಯುತ್ತಮ ಸಂಸ್ಥೆಯಾಗಿದ್ದು, ಸಂಸ್ಥೆಯ ಸಾಮಾಜಿಕ ಬದ್ಧತೆ ಶ್ಲಾಘನೀಯವಾಗಿದೆ ಎಂದರು.


ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ. ಭಗವಾನ್ ಬಿ.ಸಿ. ಮಾತನಾಡಿ, ಆಳ್ವಾಸ್ ನಮ್ಮ ವಿಶ್ವವಿದ್ಯಾಲಯದ ಭಾಗವಾಗಿರುವುದು ಹೆಮ್ಮೆಯ ಸಂಗತಿ. ಶಿಕ್ಷಣವು ಮಿದುಳಿನ ಜೊತೆಗೆ ಹೃದಯಕ್ಕೂ ದೊರೆಯಬೇಕು ಎಂಬ ಸಾಕ್ರಟೀಸ್ ಅವರ ಮಾತಿಗೆ ಡಾ. ಎಂ. ಮೋಹನ ಆಳ್ವ ಅವರ ಕಾರ್ಯ ಮಾದರಿಯಾಗಿದೆ ಎಂದರು.


ಹಿರಿಯ ವೈದ್ಯರ ಸ್ಮರಣಾರ್ಥ ವಿಭಾಗಗಳಿಗೆ ಹೆಸರು

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿ, ಆಳ್ವಾಸ್ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಶ್ರಮಿಸಿದ ಹಾಗೂ ಕೊಡುಗೆ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.


ವೈದ್ಯಕೀಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ ಹಿರಿಯ ವೈದ್ಯರು ಮತ್ತು ವೈದ್ಯಕೀಯ ದಿಗ್ಗಜರ ಸ್ಮರಣೆಯನ್ನು ಗೌರವಿಸುವ ಉದ್ದೇಶದಿಂದ ಕಾಲೇಜಿನ ವಿವಿಧ ಚಿಕಿತ್ಸಾ ಕೇಂದ್ರಗಳು ಹಾಗೂ ವಿಭಾಗಗಳಿಗೆ ಟಿ.ಎಂ.ಎ. ಪೈ, ಡಾ. ಎಸ್. ಕಾಂತ, ಡಾ. ಶಂಕರ್ ನಾಯಕ್, ಡಾ. ವಿ.ಎಸ್. ಆಚಾರ್ಯ, ಡಾ. ಶಾಂತರಾಮ್ ಶೆಟ್ಟಿ, ವಿನಯ್ ಹೆಗ್ಡೆ, ಡಾ. ಚಂದ್ರಶೇಖರ್ ಶೆಟ್ಟಿ, ಡಾ. ಸುಧಾಕರ್ ಶೆಟ್ಟಿ, ಡಾ. ವಿ.ಎಸ್. ಕಾಮತ್, ಡಾ. ಮನೋರಮಾ, ಡಾ. ಕೃಷ್ಣಮೂರ್ತಿ ಹಾಗೂ ಡಾ. ಅಮರನಾಥ ಹೆಗ್ಡೆ ಅವರ ಹೆಸರುಗಳನ್ನು ಇಡಲಾಗಿದೆ ಎಂದು ತಿಳಿಸಿದರು.


ಸಮಾರಂಭದ ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.


ಕಾರ್ಯಕ್ರಮದಲ್ಲಿ ಮೂಡುಬಿದಿರೆ ಶಾಸಕ ಉಮಾನಾಥ ಎ. ಕೋಟ್ಯಾನ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಮೊದಲ ಕುಲಪತಿ ಡಾ. ಎಸ್. ಕಾಂತಾ, ವಿಶ್ರಾಂತ ಕುಲಪತಿ ಡಾ. ಎಸ್. ಚಂದ್ರಶೇಖರ್ ಶೆಟ್ಟಿ, ಮಾಹೆಯ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್, ವಿಶ್ರಾಂತ ಕುಲಪತಿಗಳಾದ ಡಾ. ರಮಾನಂದ ಶೆಟ್ಟಿ ಮತ್ತು ಡಾ. ಎಸ್. ಸಚ್ಚಿದಾನಂದ, ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಲ್. ಧರ್ಮ, ಧರ್ಮಸ್ಥಳದ ಡಿ. ಸುರೇಂದ್ರ ಕುಮಾರ್ ಹಾಗೂ ಡಿ. ಹರ್ಷೇಂದ್ರ ಕುಮಾರ್, ಲಕ್ಷ್ಮೀ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಎ.ಜೆ. ಶೆಟ್ಟಿ, ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ವಿಶಾಲ್ ಹೆಗ್ಡೆ, ಯೆನೆಪೊಯ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಅಬ್ದುಲ್ ಕುಂಞಿ, ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಷನ್ಸ್‌ನ ನಿರ್ದೇಶಕ ಫೌಸ್ಟಿನ್ ಲ್ಯೂಕಸ್ ಲೋಬೋ ಸೇರಿದಂತೆ ಹಲವರು ಉಪಸ್ಥಿತರಿದ್ದರು.


ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಹಾಜಿ ಯು.ಕೆ. ಮೋನು, ಫಸ್ಟ್ ನ್ಯೂರೋ ಹಾಸ್ಪಿಟಲ್ಸ್‌ನ ವೈದ್ಯಕೀಯ ನಿರ್ದೇಶಕ ಡಾ. ರಾಜೇಶ್ ಶೆಟ್ಟಿ, ಎಂಆರ್‌ಜಿ ಗ್ರೂಪ್‌ನ ಅಧ್ಯಕ್ಷ ಡಾ. ಪ್ರಕಾಶ್ ಶೆಟ್ಟಿ, ಅದಾನಿ ಸಮೂಹ ಕರ್ನಾಟಕದ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಅಧ್ಯಕ್ಷ ಕಿಶೋರ್ ಆಳ್ವ, ಮಂಗಳೂರು ಧರ್ಮಪ್ರಾಂತ್ಯದ ಧರ್ಮಗುರು ರೆ. ಫಾ. ಫ್ರಾನ್ಸಿಸ್ ಕ್ಷೇವಿಯರ್ ಗೋಮ್ಸ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕದ ರಾಜ್ಯ ಪ್ರಧಾನ ಆಯುಕ್ತ ಡಾ. ಪಿ.ಜಿ.ಆರ್. ಸಿಂಧ್ಯಾ, ಮಾಜಿ ಸಚಿವರಾದ ಕೆ. ಅಭಯಚಂದ್ರ ಜೈನ್ ಹಾಗೂ ವಿನಯ ಕುಮಾರ್ ಸೊರಕೆ, ಮಾಜಿ ವಿಧಾನಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ತೇಜಸ್ವಿನಿ ಆಸ್ಪತ್ರೆಯ ಸ್ಥಾಪಕ ಅಧ್ಯಕ್ಷ ಡಾ. ಶಾಂತಾರಾಮ್ ಶೆಟ್ಟಿ, ಕೆಎಂಸಿ ಮಣಿಪಾಲದ ಮೂಳೆಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಡಾ. ಕಿರಣ್ ಕೆ.ವಿ. ಆಚಾರ್ಯ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಮಂಡಳಿ ಸದಸ್ಯೆ ಜಯಶ್ರೀ ಅಮರನಾಥ ಶೆಟ್ಟಿ, ಡಾ. ಅಮರಶ್ರೀ, ಡಾ. ಶಿವಶರಣ್ ಶೆಟ್ಟಿ, ಡಾ. ವೈಶಾಲಿ ಶ್ರೀಜಿತ್, ಪ್ರವೀಣ್ ಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಡಾ. ವಿನಯ್ ಆಳ್ವ, ಗ್ರೀಷ್ಮಾ ವಿವೇಕ್ ಆಳ್ವ, ಹನ್ನಾ ವಿನಯ್ ಆಳ್ವ, ಉದ್ಯಮಿ ಶ್ರೀಪತಿ ಭಟ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top