ನವದೆಹಲಿ: ಶ್ರೀ ಪೇಜಾವರ ಮಠಾಧೀಶರ 39ನೇ ಚಾತುರ್ಮಾಸ್ಯ ವ್ರತದ ಪರಿಸಮಾಪ್ತಿಯ ಶುಭ ಸಂದರ್ಭದಲ್ಲಿ, ದೆಹಲಿಯ ವಸಂತ್ ಕುಂಜ್‌ನಲ್ಲಿರುವ 'ವೇದವ್ಯಾಸ ಗುರುಕುಲ'ದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮಹಾಪೂರವೇ ಹರಿಯುತ್ತಿದೆ. ಇದರ ಅಂಗವಾಗಿ ಶುಕ್ರವಾರ ಸಂಜೆ ತಿರುಮಲ ತಿರುಮತಿ ದೇವಸ್ಥಾನದ (ಟಿಟಿಡಿ) ಸಂಯೋಜನೆಯಲ್ಲಿ ಲೋಕಕ್ಷೇಮಾರ್ಥವಾಗಿ ನಡೆದ ವೈಭವೋಪೇತ 'ಶ್ರೀನಿವಾಸ ಕಲ್ಯಾಣೋತ್ಸವ'ವು ದೇಶಧಾನಿಯ ಆಸ್ತಿಕ ಜನತೆಗೆ ಭಕ್ತಿಯ ಅಮೃತ ಸಿಂಚನ ನೀಡಿತು.
ದೇವೋತ್ತಮ ಶ್ರೀನಿವಾಸನ ಈ ಅಪರೂಪದ ಕಲ್ಯಾಣೋತ್ಸವದ ವೈಭವವನ್ನು ಕಣ್ಣುಂಬಿಕೊಂಡ ನೂರಾರು ಭಕ್ತಸ್ತೋಮ ಭಕ್ತಿಯ ಪರವಶತೆಯಲ್ಲಿ ಮುಳುಗೇಳುವ ಮೂಲಕ ಧನ್ಯತಾ ಭಾವ ಅನುಭವಿಸಿತು.
ವಿಶೇಷ ಪೂಜೆ:
ಸಂಪ್ರದಾಯಬದ್ಧವಾಗಿ ನಡೆದ ಈ ಉತ್ಸವದ ಸಂಕಲ್ಪ ವಿಧಿಯನ್ನು ಡಾ. ವಿಠೋಬಾಚಾರ್ಯ ದಂಪತಿಗಳು ನೆರವೇರಿಸಿ, ಕಲ್ಯಾಣೋತ್ಸವದ ಯಜಮಾನಿಕೆಯನ್ನು ವಹಿಸಿಕೊಂಡಿದ್ದರು. ಸಭಾಂಗಣದಲ್ಲಿ ಕಿಕ್ಕಿರಿದು ನೆರೆದಿದ್ದ ಸಾವಿರಾರು ಭಕ್ತಾದಿಗಳು ಸುಮಾರು ಎರಡು ಗಂಟೆಗಳ ಕಾಲ ನಡೆದ ವೈಭವದ ಧಾರ್ಮಿಕ ವಿಧಿವಿಧಾನಗಳನ್ನು ಅತ್ಯಂತ ಶ್ರದ್ಧೆ ಹಾಗೂ ತದೇಕಚಿತ್ತದಿಂದ ವೀಕ್ಷಿಸಿ ಪುನೀತರಾದರು.
ಶ್ರೀಗಳ ಆಶೀರ್ವಚನ ಮತ್ತು ಅನುಗ್ರಹ:
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಶ್ರೀ ಪೇಜಾವರ ಶ್ರೀಗಳು ಭಕ್ತಾದಿಗಳನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು. "ಇಂದ್ರಪ್ರಸ್ಥದಲ್ಲಿ ನೆರವೇರಿದ ಈ ಶ್ರೀನಿವಾಸನ ಕಲ್ಯಾಣೋತ್ಸವದ ಫಲವಾಗಿ ನಮ್ಮ ದೇಶಕ್ಕೆ ಹಾಗೂ ಸನಾತನ ಧರ್ಮಕ್ಕೆ ಎದುರಾಗಬಹುದಾದ ಸಕಲ ಆಪತ್ತು-ವಿಪತ್ತುಗಳು ನಿವಾರಣೆಯಾಗಲಿ. ಎಲ್ಲೆಡೆ ಸುಖ, ಶಾಂತಿ, ಸಮೃದ್ಧಿ ಹಾಗೂ ನೆಮ್ಮದಿ ನೆಲೆಸಲಿ," ಎಂದು ಲೋಕಕ್ಷೇಮಕ್ಕಾಗಿ ಶ್ರೀನಿವಾಸನಲ್ಲಿ ಪ್ರಾರ್ಥಿಸಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಅತ್ಯಂತ ಶ್ರದ್ಧೆಯಿಂದ ಆಯೋಜಿಸಿದ ತಿರುಮಲ ತಿರುಮತಿ ದೇವಸ್ಥಾನದ (ಟಿಟಿಡಿ) ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗಕ್ಕೆ ಶ್ರೀಗಳು ಅನುಗ್ರಹಿಸಿ, ಅಭಿನಂದನೆಗಳನ್ನು ಸಲ್ಲಿಸಿದರು.
ದಿನೇ ದಿನೇ ಕಳೆಗಟ್ಟುತ್ತಿರುವ ಪೇಜಾವರ ಶ್ರೀಗಳ ಚಾತುರ್ಮಾಸ್ಯ ಕಾರ್ಯಕ್ರಮಗಳು ರಾಜಧಾನಿ ದೆಹಲಿಯ ಆಸ್ತಿಕರ ಮನಸ್ಸಿನಲ್ಲಿ ಭಕ್ತಿಭಾವದ ಹೊಸ ಸಂಚಲನವನ್ನು ಮೂಡಿಸಿವೆ.
