ದ.ಕ.ಜಿಲ್ಲಾ ರೆಡ್‌ಕ್ರಾಸ್ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಮಾಹಿತಿ
ಮಂಗಳೂರು: ಲೇಡಿಗೋಶನ್ ಆಸ್ಪತ್ರೆಯಲ್ಲಿ ದಾಖಲಾಗುವ ಗರ್ಭಿಣಿಯರು ಸಹಿತ ಅವಶ್ಯ ಇರುವ ರೋಗಿಗಳಿಗೆ ರೆಡ್‌ಕ್ರಾಸ್ ಬ್ಲಡ್‌ಬ್ಯಾಂಕ್‌ನಿಂದ ಉಚಿತವಾಗಿ ರಕ್ತ ಪೂರೈಸಲಾಗುತ್ತಿದೆ. ಜಿಲ್ಲೆಯ ಯಾವುದೇ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುವ ಬಿಪಿಎಲ್ ಕಾರ್ಡ್ ದಾರರಿಗೆ ರೆಡ್‌ಕ್ರಾಸ್ ನಿಂದ ಉಚಿತವಾಗಿ ರಕ್ತ ಒದಗಿಸುವ ಯೋಜನೆ ರೂಪಿಸಲಾಗಿದ್ದು, ಮುಂದಿನ ವರ್ಷ ಕಾರ್ಯಗತವಾಗಲಿದೆ ಎಂದು ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಹೇಳಿದರು.
ದ.ಕ. ಜಿಲ್ಲಾ ಶಾಲಾ ಮಕ್ಕಳ ವಾಹನ ಚಾಲಕರ ಸಂಘದ ವತಿಯಿಂದ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಸಹಯೋಗದಲ್ಲಿ ನಗರದ ಮಣ್ಣಗುಡ್ಡೆ ಜಿಪಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ನಡೆದ ಉಚಿತ ವೈದ್ಯಕೀಯ ಶಿಬಿರ ಮತ್ತು ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ವಕೀಲ ರಾಮ್‌ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ರೆಡ್‌ಕ್ರಾಸ್ ಸೊಸೈಟಿಯ ನಿರ್ದೇಶಕ ರಾಘವೇಂದ್ರ ರಾವ್ ಸ್ವತಃ ರಕ್ತ ನೀಡುವ ಮೂಲಕ ರಕ್ತದಾನಕ್ಕೆ ಚಾಲನೆ ನೀಡಿದರು. ಮುಡಾ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಮಣ್ಣಗುಡ್ಡೆ ಶಾಲೆಯ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ, ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಕೆಎಂಸಿ ಆಸ್ಪತ್ರೆಯ ಡಾ. ಕಿಶನ್ ಪ್ರೇಮ್, ಡಾ.ಸಾಹಿಸ್ತಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ದ.ಕ. ಜಿಲ್ಲಾ ಶಾಲಾ ಮಕ್ಕಳ ವಾಹನ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ ಯೆಯ್ಯಾಡಿ, ಕೋಶಾಧಿಕಾರಿ ಸತೀಶ್ ಪೂಜಾರಿ ಉರ್ವ, ಸ್ಥಾಪಕ ಅಧ್ಯಕ್ಷ ಮೋಹನ್ ಅತ್ತಾವರ, ಲೋಕೇಶ್ ಸುರತ್ಕಲ್, ದಿನೇಶ್ ಕುಂಜತ್ತಬೈಲ್, ಕಿರಣ್ ಲೇಡಿಹಿಲ್, ರಾಜೇಶ್ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಸತೀಶ್ ಪೂಜಾರಿ ಅಶೋಕನಗರ ಸ್ವಾಗತಿಸಿದರು. ಆಂತರಿಕ ಲೆಕ್ಕಪರಿಶೋಧಕ ರೆಹಮಾನ್ ಖಾನ್ ಕುಂಜತ್ತಬೈಲ್ ಕಾರ್ಯಕ್ರಮ ನಿರೂಪಿಸಿದರು.
ಕೆಎಂಸಿ ಆಸ್ಪತ್ರೆ, ಪ್ರಸಾದ್ ನೇತ್ರಾಲಯ,ಶ್ರೀನಿವಾಸ್ ಹಾಸ್ಪಿಟಲ್ ಮುಕ್ಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (ಅಂಧತ್ವ ವಿಭಾಗ) ಮತ್ತು ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ ಸಹಭಾಗಿತ್ವದಲ್ಲಿ ಶಿಬಿರ ನಡೆಯಿತು.
