ಸುರತ್ಕಲ್: ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಇಂಟರಾಕ್ಟ್ ಸಂಸ್ಥೆಯು ಮಹತ್ತರವಾದ ಕೊಡುಗೆಯನ್ನು ನೀಡುತ್ತಿದೆ. ಮಾನವೀಯ ನೆಲೆಗಟ್ಟಿನಲ್ಲಿ ಕಾರ್ಯಚಟುವಟಿಕೆಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಸಾಮಾಜಿಕ ಜೀವನ ಕೌಶಲ್ಯಗಳನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ ಎಂದು ರೋಟರಿ ಜಿಲ್ಲೆ 3181ರ ಇಂಟರಾಕ್ಟ್ ಅಧ್ಯಕ್ಷ ರೊ. ಡಾ. ಜಯಕುಮಾರ್ ಶೆಟ್ಟಿ ಅಭಿಪ್ರಾಯಪಟ್ಟರು.
ಅವರು ಸುರತ್ಕಲ್ ರೋಟರಿ ಕ್ಲಬ್ ಪ್ರವರ್ತಿತ ಇಂಟರಾಕ್ಟ್ ಕ್ಲಬ್‌ಗಳ ಪದಾಧಿಕಾರಿಗಳು ಹಾಗೂ ಶಿಕ್ಷಕ ಸಂಯೋಜಕರಿಗಾಗಿ ಸುರತ್ಕಲ್‌ನ 'ವಿರಾಟ್' ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಅಭಿವ್ರೇರಣೆ ತರಬೇತಿ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸುರತ್ಕಲ್ ರೋಟರಿ ಕ್ಲಬ್ ಅಧ್ಯಕ್ಷ ಶ್ರೀಧರ್ ಟಿ. ಎನ್. ಅವರು, ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುವಲ್ಲಿ ಇಂಟರಾಕ್ಟ್ ಕ್ಲಬ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ವಿವಿಧ ವಿಷಯಗಳ ಕುರಿತು ತರಬೇತಿ:
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಜಿಲ್ಲಾ ರೋಟರಿ ಯುವ ರಕ್ಷಣಾ ವಿಭಾಗದ ಅಧ್ಯಕ್ಷ ಡಾ. ಕೆ. ರಾಜ ಮೋಹನ್ ರಾವ್, ಸುರತ್ಕಲ್ ರೋಟರಿ ಕ್ಲಬ್ ಕಾರ್ಯದರ್ಶಿ ಶ್ರೀನಿವಾಸ ರಾವ್ ಪಾದೆಬೆಟ್ಟು ಹಾಗೂ ರೋಟರಿ ಕ್ಲಬ್ ಪೂರ್ವಾಧ್ಯಕ್ಷೆ ಯಶೋಮತಿ ರವೀಂದ್ರನಾಥ್ ಅವರು ಇಂಟರಾಕ್ಟ್ ಪದಾಧಿಕಾರಿಗಳು ಮತ್ತು ಶಿಕ್ಷಕ ಸಂಯೋಜಕರಿಗೆ ವಿವಿಧ ವಿಷಯಗಳ ಕುರಿತು ಪ್ರಾತ್ಯಕ್ಷಿಕೆ ಹಾಗೂ ಪ್ರಾಯೋಗಿಕ ತರಬೇತಿ ನೀಡಿದರು.
ರೋಟರಿ ಝೋನಲ್ ಲೆಫ್ಟಿನೆಂಟ್ ಸುಧಾಕರ್ ಎನ್. ಸಾಲ್ಯಾನ್ ಅವರು ತರಬೇತಿಯಲ್ಲಿ ಪಾಲ್ಗೊಂಡವರಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ ಶುಭ ಹಾರೈಸಿದರು. ಇಂಟರಾಕ್ಟ್ ಸಂಯೋಜಕ ರಾಮಮೋಹನ್ ವೈ. ವಂದನಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಸುರತ್ಕಲ್ ರೋಟರಿ ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷ ರಾಮಚಂದ್ರ ಬಿ. ಕುಂದರ್, ಉಪಾಧ್ಯಕ್ಷ ಚಂದ್ರಕಾಂತ್ ಮರಾಠೆ, ನಿರ್ದೇಶಕರಾದ ಮೋಹನ್ ಹೊಸಬೆಟ್ಟು, ಸತೀಶ್ ಸದಾನಂದ್, ಪೂರ್ಣಿಮಾ ಸತೀಶ್ ರಾವ್, ಕೃಷ್ಣ ಮೂರ್ತಿ ಹಾಗೂ ಅನುಷಾ ಎಂ. ಎ. ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
