ಪೇಜಾವರ ಶ್ರೀಗಳ ಚಾತುರ್ಮಾಸ್ಯ 2026: ಪಾಕಿಸ್ತಾನಿ ಹಿಂದೂ ನಿರಾಶ್ರಿತರ ಬಡಾವಣೆಗೆ ಶ್ರೀ ವಿಶ್ವಪ್ರಸನ್ನತೀರ್ಥರ ಭೇಟಿ

Upayuktha
0


ನವದೆಹಲಿ: ದೆಹಲಿ ಚಾತುರ್ಮಾಸ್ಯ ವ್ರತದಲ್ಲಿರುವ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಪಾಕಿಸ್ತಾನದಿಂದ ಬಂದು ದೆಹಲಿಯಲ್ಲಿ ನೆಲೆಸಿರುವ ಹಿಂದೂ ಅಭ್ಯರ್ಥಿಗಳ 'ಭಾಟಿ ಮೈನ್ಸ್' ಬಡಾವಣೆಗೆ ಭಾನುವಾರ ಭೇಟಿ ನೀಡಿ ಆಶೀರ್ವದಿಸಿದರು.


ವಿಶ್ವ ಹಿಂದೂ ಪರಿಷತ್ (ವಿಹಿಂಪ) ಹಾಗೂ ಸೇವಾ ಭಾರತಿಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಸೇವಾ ಬಸ್ತಿ (ಹಿಂದುಳಿದ ಪ್ರದೇಶ) ಭೇಟಿ ಅಭಿಯಾನದ ಭಾಗವಾಗಿ ಸ್ವಾಮೀಜಿಯವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಭಾರತ ವಿಭಜನೆ ಹಾಗೂ ತದನಂತರದ ಅಸುರಕ್ಷತೆಯ ವಾತಾವರಣದಿಂದಾಗಿ ಪಾಕಿಸ್ತಾನ ತೊರೆದು ಬಂದು ದೆಹಲಿಯ ಅತ್ಯಂತ ದೊಡ್ಡ ಸ್ಲಮ್ ಎಂದೇ ಗುರುತಿಸಿಕೊಂಡಿರುವ ಭಾಟಿ ಮೈನ್ಸ್‌ನಲ್ಲಿ ನಿರಾಶ್ರಿತರಾಗಿ ನೆಲೆಸಿರುವ ಜನರಿಗೆ ಈ ಭೇಟಿ ಸಾಂತ್ವನ ಹಾಗೂ ಧೈರ್ಯ ನೀಡಿತು.


ಮನೆ ಮನೆಗೆ ತೆರಳಿ ಮಂತ್ರೋಪದೇಶ, ಕುಶಲೋಪರಿ:

ಬಡಾವಣೆಗೆ ಆಗಮಿಸಿದ ಪೇಜಾವರ ಶ್ರೀಗಳನ್ನು ಸ್ಥಳೀಯ ಪ್ರಮುಖರು ಭಕ್ತಿಯಿಂದ ಸ್ವಾಗತಿಸಿದರು. ಬಳಿಕ ಐದು ಮನೆಗಳಿಗೆ ನೇರವಾಗಿ ತೆರಳಿದ ಸ್ವಾಮೀಜಿಯವರು, ಅಯೋಧ್ಯೆಯ ಶ್ರೀರಾಮ ಹಾಗೂ ಉಡುಪಿ ಶ್ರೀಕೃಷ್ಣನ ಭಾವಚಿತ್ರಗಳನ್ನು ನೀಡಿ ರಾಮದೀಪ ಬೆಳಗಿಸಿದರು. ಜನ್ಮಾಷ್ಟಮಿಯ ಪ್ರಸಾದ ವಿತರಿಸಿ, ಕುಟುಂಬಸ್ಥರೊಂದಿಗೆ 10 ಬಾರಿ ಶ್ರೀರಾಮತಾರಕ ಮಂತ್ರವನ್ನು ಜಪಿಸಿದರು.


ಇದೇ ವೇಳೆ ಮನೆಮಂದಿಯ ಕುಶಲೋಪರಿ ವಿಚಾರಿಸಿದ ಶ್ರೀಗಳು, ಬಡಾವಣೆಯಲ್ಲಿರುವ ಕುಡಿಯುವ ನೀರು, ವಿದ್ಯುತ್, ರಸ್ತೆ, ಒಳಚರಂಡಿ, ಶಾಲೆ ಹಾಗೂ ಆಸ್ಪತ್ರೆಗಳಂತಹ ಮೂಲಭೂತ ಸೌಕರ್ಯಗಳ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು.


ಸಂಸ್ಕಾರ ಮತ್ತು ರಾಷ್ಟ್ರನಿಷ್ಠೆಯ ಸಂದೇಶ:

ಬಡಾವಣೆಯ ಶ್ರೀರಾಮ ಮಂದಿರದ ಆವರಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ಜನರನ್ನು ಉದ್ದೇಶಿಸಿ ಶ್ರೀಗಳು ಆಶೀರ್ವಚನ ನೀಡಿದರು:


ಧರ್ಮ ಪಾಲನೆ: ನಿತ್ಯ ಭಗವಂತನ ನಾಮಸ್ಮರಣೆ, ಸನಾತನ ಧರ್ಮದ ಪಾಲನೆ, ಕರ್ತವ್ಯನಿಷ್ಠೆ ಹಾಗೂ ರಾಷ್ಟ್ರನಿಷ್ಠೆಯನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು.


ಸ್ವಚ್ಛತೆ ಹಾಗೂ ಶಿಕ್ಷಣ: ಪ್ರತಿಯೊಂದು ಮನೆ, ಕೇರಿ ಹಾಗೂ ಬಡಾವಣೆಯಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡುವುದರ ಜೊತೆಗೆ ಆರೋಗ್ಯದ ಕಡೆಗೆ ವಿಶೇಷ ಗಮನ ಹರಿಸಬೇಕು.


ಸಭೆಯಲ್ಲಿದ್ದ ಪ್ರತಿಯೊಬ್ಬರಿಗೂ ರಾಮಮಂತ್ರೋಪದೇಶ ನೀಡಿ, ಶ್ರೀರಾಮ-ಕೃಷ್ಣರ ಭಾವಚಿತ್ರ ಹಾಗೂ ಪ್ರಸಾದ ವಿತರಿಸಲಾಯಿತು.


ಸ್ಥಳೀಯರ ಭಾವುಕ ನುಡಿ:

"ಶತಮಾನಗಳ ಇತಿಹಾಸವಿರುವ ಪ್ರಸಿದ್ಧ ಮಠದ ಪೀಠಾಧಿಪತಿಗಳೊಬ್ಬರು ನಮ್ಮ ದೀನದಲಿತರ ಕೇರಿಗೆ, ಮನೆಬಾಗಿಲಿಗೆ ಬಂದು ಆಶೀರ್ವದಿಸುತ್ತಾರೆಂದು ನಾವು ಕನಸಿನಲ್ಲೂ ಯೋಚಿಸಿರಲಿಲ್ಲ. ಇಂದಿನ ಈ ಭೇಟಿ ನಮ್ಮ ಜೀವನದಲ್ಲೇ ಅತ್ಯಂತ ಪಾವನ ಅನುಭವ" ಎಂದು ಬಡಾವಣೆಯ ಪ್ರಮುಖರು ಭಾವುಕರಾಗಿ ನುಡಿದರು.


ಕಾರ್ಯಕ್ರಮದಲ್ಲಿ ವಿಹಿಂಪ ಪ್ರಾಂತ ಸಂಘಟನಾ ಕಾರ್ಯದರ್ಶಿ ಸುಬೋಧ್ ಜಿ, ಪ್ರಮುಖರಾದ ಲಕ್ಷ್ಮಣ್ ಜಿ, ಅಭಿಷೇಕ್ ಹಾಗೂ ಸೇವಾ ಭಾರತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top