ಬೆಂಗಳೂರು: ಅರವತ್ತನಾಲ್ಕು ಕಲೆಗಳಲ್ಲಿ "ಒಗಟು" ಪ್ರಮುಖ ಕಲೆಯಾಗಿ ತನ್ನ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದೆ ಎಂದು ಹಿರಿಯ ವಿದ್ವಾಂಸರಾದ ಡಾ. ಪ್ರಭು ಅಂಗಡಿ ಅಭಿಪ್ರಾಯಪಟ್ಟರು.
ಮಯೂರ ವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ಮುಂಬೈ ಹಾಗೂ ಎ.ಎನ್.ಬಿ. ಮೆಮೋರಿಯಲ್ ಟ್ರಸ್ಟ್ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ‘ಕುವೆಂಪು ಸಭಾಂಗಣ’ದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ "ಒಗಟುಗಳು ಹಾಗೂ ಜಾನಪದ ವೈವಿಧ್ಯ" ವಿಚಾರ ಸಂಕಿರಣದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
"ಒಬ್ಬರು ಮತ್ತೊಬ್ಬರಿಗೆ ಒಡ್ಡುವ ಸವಾಲು, ಒಂದು ವಸ್ತುವನ್ನು ಇನ್ನೊಂದು ವಸ್ತುವಿನ ಮುಖಾಂತರ ಮೋಡಿಯ ಮಾದರಿಯಲ್ಲಿ ರಚಿಸಿ, ಅದರಲ್ಲಿ ಅಡಕವಾಗಿರುವ ಅವ್ಯಕ್ತ ವಸ್ತುವನ್ನು ಕಂಡುಹಿಡಿಯುವಂತೆ ಹೇಳುವ ಕಲಾತ್ಮಕ ರೂಪವೇ ಒಗಟು. ಒಗಟಿನಲ್ಲಿ ಉಪಮಾನ ಮತ್ತು ಉಪಮೇಯಗಳಿರುತ್ತವೆ. 'ಉಪಮಾನ' ವಾಚ್ಯವಾಗಿದ್ದರೆ, 'ಉಪಮೇಯ' ನಿಗೂಢವಾಗಿರುತ್ತದೆ. ಆ ಗುಟ್ಟನ್ನು ರಟ್ಟು ಮಾಡುವುದೇ ಒಗಟಿನ ವೈಶಿಷ್ಟ್ಯ," ಎಂದು ವಿವರಿಸಿದರು.
ಸಂಸ್ಕೃತದಲ್ಲಿ ಒಗಟಿಗೆ 'ಪ್ರಹೇಲಿಕಾ' ಅಥವಾ 'ಬ್ರಹ್ಮಮೇಧ್ಯಾ' ಎಂಬ ಹೆಸರಿದ್ದು, ಇದು ರಹಸ್ಯಪೂರ್ಣ ಪ್ರಶ್ನೋತ್ತರ ವ್ಯವಹಾರದಲ್ಲಿ ನಿಗೂಢತೆಯನ್ನು ಬಳಸುವ ಚಾಣಾಕ್ಷ ಕಲೆಯಾಗಿದೆ. ಇಂದು ರಾಜಕೀಯ, ಧಾರ್ಮಿಕ ಹಾಗೂ ಅನೇಕ ವ್ಯವಹಾರಗಳಲ್ಲಿ ತಮ್ಮದೇ ಆದ ಒಗಟಿನ ಭಾಷೆ ಬಳಕೆಯಾಗುತ್ತಿರುವುದನ್ನು ಕಾಣಬಹುದು. ಒಗಟುಗಳು ಕಾಲಕ್ಕೆ ತಕ್ಕಂತೆ ರೂಪಾಂತರಗೊಳ್ಳುತ್ತಾ, ಬಳಸುವ ವ್ಯಕ್ತಿಗಳ ಜಾಣ್ಮೆಯ ಪ್ರತಿಬಿಂಬವಾಗಿ ಮೂಡಿಬರುತ್ತವೆ ಎಂದು ಡಾ. ಅಂಗಡಿ ತಿಳಿಸಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಡಾ. ಋಷಿದೇವ್ ಭಾರ್ಗವ ಅವರು ಪುರಾಣ ಹಾಗೂ ಸಂಸ್ಕೃತ ಸಾಹಿತ್ಯದಲ್ಲಿ ಒಗಟಿನ ಬಳಕೆಯ ಕುರಿತು ಬೆಳಕು ಚೆಲ್ಲಿದರೆ, ಡಾ. ಮೈಥಿಲಿ ರಾವ್ ಅವರು ಉತ್ತರ ಭಾರತ ಹಾಗೂ ಹಿಂದಿ ಭಾಷೆಯಲ್ಲಿರುವ ಒಗಟುಗಳ ಕುರಿತು ಮಾಹಿತಿ ಹಂಚಿಕೊಂಡರು.
ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದ ಮಯೂರ ವರ್ಮ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ಮಧುಸೂದನ್ ಟಿ.ಆರ್. ಮಾತನಾಡಿ, "ತಂತ್ರಜ್ಞಾನದ ಕಪಿಮುಷ್ಟಿಯಲ್ಲಿ ಬಂದಿಯಾಗುತ್ತಿರುವ ಇಂದಿನ ದಿನಗಳಲ್ಲಿ ಪೂರ್ವಜರ ಜ್ಞಾನಸಂಪತ್ತಾದ ಜಾನಪದದ ಕುರಿತು ತಿಳಿದುಕೊಳ್ಳುವುದು ಅಗತ್ಯ. ಒಗಟು ಮೈ-ಮನಗಳಿಗೆ ಇಂಪು ನೀಡುವುದರ ಜೊತೆಗೆ ಬುದ್ಧಿಯನ್ನು ಜಾಗೃತಗೊಳಿಸಿ, ನೂತನ ಚೈತನ್ಯ ಮೂಡಿಸುತ್ತದೆ," ಎಂದರು. ಇದೇ ವೇಳೆ 84ರ ಇಳಿ ವಯಸ್ಸಿನಲ್ಲೂ ಜಿಜ್ಞಾಸೆ ಮತ್ತು ಜೀವನೋತ್ಸಾಹ ಕಾಯ್ದುಕೊಂಡಿರುವ ಎ.ಎನ್.ಬಿ. ಮೆಮೋರಿಯಲ್ ಟ್ರಸ್ಟಿನ ಅಧ್ಯಕ್ಷ ಶ್ರೀ ಆಗುಂಬೆ ನಟರಾಜ್ ಅವರ ಬದ್ಧತೆ ಯುವಜನತೆಗೆ ಮಾದರಿ ಎಂದು ಬಣ್ಣಿಸಿದರು.
ಕನ್ನಡ ಸಂಪದದ ಓಂಕಾರಪ್ರಿಯ ಬಾಗೇಪಲ್ಲಿ ಮಾತನಾಡಿ, ಒಗಟುಗಳು ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಿ ಆರೋಗ್ಯಕ್ಕೆ ಪೂರಕ ವಾತಾವರಣ ನಿರ್ಮಿಸುತ್ತವೆ ಎಂದರು. ಪ್ರತಿಷ್ಠಾನದ ಸ್ಥಾಪಕ ವಿಶ್ವನಾಥ ದೊಡ್ಮನೆ ಕಾರ್ಯಕ್ರಮದ ಆಶಯ ನುಡಿಗಳನ್ನಾಡಿದರು.
ಕಾರ್ಯಕ್ರಮದ ಆರಂಭದಲ್ಲಿ ಕುಮಾರಿ ನಿಶಿತಾ ಜಿ.ಆರ್. ಅವರಿಂದ ಗೀತಗಾಯನ ಹಾಗೂ ಕುಮಾರಿ ಪ್ರಣತಿ ಅವರಿಂದ ಜಾನಪದ ನೃತ್ಯ ಪ್ರದರ್ಶನ ಜರುಗಿತು. ಶ್ರೀ ಕೇಶವ ಕಿಬ್ಳೆ ಸ್ವಾಗತಿಸಿದರು, ಶ್ರೀಕಲಾ ಹಂಸ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಮಾರಂಭದಲ್ಲಿ ಸಿರಿಕಲಾ ಮೇಳದ ಸುರೇಶ ಹೆಗಡೆ, ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಸಾಹಿತಿ ವಿಶ್ವನಾಥ, ಸತೀಶ ಕುಮಾರ ಕೆ.ಸಿ. ಸೇರಿದಂತೆ ಹಲವು ಗಣ್ಯರು ಹಾಗೂ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

