ಯಲ್ಲಾಪುರ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತು (ರಿ.), ಬೆಂಗಳೂರು–ಜಿಲ್ಲಾ ಘಟಕ ಉತ್ತರ ಕನ್ನಡ ಇವರ ವತಿಯಿಂದ ಆಯೋಜಿಸಿದ್ದ ‘ಸಾಂಸ್ಕೃತಿಕ ವೈಭವ’ ಕಾರ್ಯಕ್ರಮದಲ್ಲಿ ಭಟ್ಕಳದ ನಿನಾದ ಕಲ್ಚರಲ್ ಅಕಾಡೆಮಿಗೆ ‘ಉತ್ತಮ ಸೇವಾ ಸಂಸ್ಥೆ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಯಲ್ಲಾಪುರದ ಅಡಿಕೆ ಸಭಾಭವನದಲ್ಲಿ ಭಾನುವಾರ ನಡೆದ ಅದ್ಧೂರಿ ಸಮಾರಂಭದಲ್ಲಿ ಯಲ್ಲಾಪುರದ ಜನಪ್ರಿಯ ಶಾಸಕ ಶಿವರಾಮ ಹೆಬ್ಬಾರ್ ಅವರು ತಮ್ಮ ಅಮೃತ ಹಸ್ತದಿಂದ ನಿನಾದ ಕಲ್ಚರಲ್ ಅಕಾಡೆಮಿಯ ಪರವಾಗಿ ಉಮೇಶ ಮುಂಡಳ್ಳಿ, ರೇಷ್ಮಾ ಉಮೇಶ ಹಾಗೂ ನಿನಾದ ಉತ್ಥಾನ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.
ಕಲೆ, ಸಂಸ್ಕೃತಿ, ಸಾಹಿತ್ಯ ಹಾಗೂ ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ನಿನಾದ ಕಲ್ಚರಲ್ ಅಕಾಡೆಮಿ ಕಳೆದ ಹಲವು ವರ್ಷಗಳಿಂದ ಸಲ್ಲಿಸುತ್ತಿರುವ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಶಿವರಾಮ ಹೆಬ್ಬಾರ್, “ಪ್ರಶಸ್ತಿ ಪಡೆಯುವ ಕಲಾವಿದ, ಸಾಹಿತಿ ಅಥವಾ ಸಂಘಟನೆಯ ಜವಾಬ್ದಾರಿ ಇದರಿಂದ ಇನ್ನಷ್ಟು ಹೆಚ್ಚಾಗುತ್ತದೆ. ಕಲಾವಿದ ಸದಾ ಜನಸ್ನೇಹಿಯಾಗಿರುತ್ತಾನೆ. ಹಾಗಾಗಿ ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಕಲಾವಿದರಿಗೆ ಗೌರವ ಸಲ್ಲುತ್ತದೆ” ಎಂದರು.
ನಿನಾದ ಕಲ್ಚರಲ್ ಅಕಾಡೆಮಿಗೆ ದೊರೆತಿರುವ ಈ ಗೌರವವು ಸಂಸ್ಥೆಯ ಪ್ರತಿಯೊಬ್ಬ ಕಲಾವಿದ, ವಿದ್ಯಾರ್ಥಿ, ಪೋಷಕರು ಹಾಗೂ ಹಿತೈಷಿಗಳಿಗೆ ಸಲ್ಲುವ ಗೌರವವಾಗಿದೆ. ಹಲವು ವರ್ಷಗಳಿಂದ ಮಕ್ಕಳ ಪ್ರತಿಭಾ ಅನಾವರಣ, ಸಾಹಿತ್ಯ, ಸಂಗೀತ, ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ವೇದಿಕೆ ಕಲ್ಪಿಸುತ್ತಿರುವ ನಿನಾದದ ಸೇವೆಗೆ ಈ ಪ್ರಶಸ್ತಿ ಮತ್ತಷ್ಟು ಪ್ರೋತ್ಸಾಹ ನೀಡಿದೆ.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಬಿ.ಕೆ. ಶಿವಲೀಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಂತೋಷಕುಮಾರ ಪಾಟೀಲ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ, ಪತ್ರಕರ್ತ ಸುಬ್ರಾಯ ಬಿದ್ರಮನೆ, ಸಂಘಟನೆಯ ಗೌರವಾಧ್ಯಕ್ಷ ಕಲ್ಲಣ್ಣನವರ್, ಪರ್ವಿನ್ ಬಾನು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಶ್ರೀಶೈಲ ಐನಾಪುರ ಸ್ವಾಗತಿಸಿದರು. ಕಾರ್ಯಕ್ರಮದ ಬಳಿಕ ಶಿಕ್ಷಕರಿಂದ ಜನಪದ ಕಾರ್ಯಕ್ರಮ, ಗುಮಟೆಪಾಂಗ್ ಸೇರಿದಂತೆ ವಿವಿಧ ಜನಪದ ಕಲಾಪ್ರಕಾರಗಳ ಮನಮೋಹಕ ಪ್ರದರ್ಶನ ನಡೆಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


