ಮಂಗಳೂರು : ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ದ ಆಶ್ರಯದಲ್ಲಿ ‘ಶಕ್ತಿ, ಸುಸ್ಥಿರತೆ ಮತ್ತು ಹವಾಮಾನ ಬದಲಾವಣೆಗೆ ಸಮಗ್ರ ವಿಧಾನಗಳು’ (Integrated Approaches to Energy, Sustainability & Climate Change) ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವು ಸೆಪ್ಟೆಂಬರ್ 17 ಮತ್ತು 18, 2026 ರಂದು ನಡೆಯಲಿದೆ.
ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ (AICTE) ‘ವಾಣಿ’ (AICTE-VAANI) ಯೋಜನೆಯ ಬೆಂಬಲದೊಂದಿಗೆ ಈ ವಿಚಾರ ಸಂಕಿರಣ ಆಯೋಜಿತಗೊಂಡಿದ್ದು, ರಾಜ್ಯದಲ್ಲೇ ಕೊಂಕಣಿ ಭಾಷೆಯಲ್ಲಿ ನಡೆಯುತ್ತಿರುವ ಏಕೈಕ ಎಐಸಿಟಿಇ ಪುರಸ್ಕೃತ ಕಾರ್ಯಕ್ರಮವಾಗಿದೆ.
ಕೊಂಕಣಿ ಭಾಷೆಯ ಮೂಲಕ ಸುಸ್ಥಿರ ಇಂಧನ ವ್ಯವಸ್ಥೆಗಳು, ಹವಾಮಾನ ಬದಲಾವಣೆಯ ಸವಾಲುಗಳು ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಅಲ್ಲದೆ, ಸಂಶೋಧಕರು ಮತ್ತು ತಜ್ಞರು ತಮ್ಮ ವೈಜ್ಞಾನಿಕ ಆಲೋಚನೆಗಳನ್ನು ಪ್ರಾದೇಶಿಕ ಭಾಷೆಯಲ್ಲಿ ವ್ಯಕ್ತಪಡಿಸಲು ವೇದಿಕೆ ಕಲ್ಪಿಸಲಾಗುತ್ತಿದೆ.
ಈ ವಿಚಾರ ಸಂಕಿರಣದಲ್ಲಿ ಚೆನ್ನೈನ ಸಿಎಸ್‍ಐಆರ್-ಸಿಎಲ್‌ಆರ್‌ಐ ಹಿರಿಯ ವಿಜ್ಞಾನಿ ಡಾ. ಅಮಿತ್ ಅಶೋಕ್ ವರ್ಣೇಕರ್, ಮಣಿಪಾಲ ಎಂಐಟಿಯ ಡಾ. ವಿನೋದ್ ಟಿ. ಕಾಮತ್, ಡಾ. ನಾಗರಾಜ್ ಕಾಮತ್, ಎಂಎಚ್‌ಇ ಮಣಿಪಾಲದ ಡಾ. ನಮ್ರತಾ ಪೈ ಕೆ., ಸುರತ್ಕಲ್ ಎನ್‌ಐಟಿಕೆ ಪ್ರಾಧ್ಯಾಪಕ ಡಾ. ಅರುಣ್ ಎಂ. ಇಸ್ಲೂರ್, ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಹಿರಿಯ ನಿರ್ದೇಶಕ ಡಾ. ರಂಜಿತ್ ಕೃಷ್ಣ ಪೈ ಹಾಗೂ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.
ವಿಚಾರ ಸಂಕಿರಣದ ಭಾಗವಾಗಿ ಕೊಂಕಣಿ ಭಾಷೆಯಲ್ಲಿ ಸಂಶೋಧನಾ ಹಾಗೂ ಜನಪ್ರಿಯ ವಿಜ್ಞಾನ ಲೇಖನಗಳ ಪೋಸ್ಟರ್ ಪ್ರಸ್ತುತಿಗೆ ಅವಕಾಶ ಕಲ್ಪಿಸಲಾಗಿದೆ. ಎಐಸಿಟಿಇ ಮಾನ್ಯತೆ ಪಡೆದ ಸಂಸ್ಥೆಗಳ ಅಧ್ಯಾಪಕರು, ಸಂಶೋಧಕರು, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಉದ್ಯಮ ರಂಗದವರು ಇದರಲ್ಲಿ ಭಾಗವಹಿಸಬಹುದಾಗಿದೆ. ನೋಂದಣಿಗೆ ಯಾವುದೇ ಶುಲ್ಕವಿರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಸಂಯೋಜಕರಾದ ಡಾ. ಗೀತಾ ಎಂ. ಪಿಂಟೋ (9448105267) ಹಾಗೂ ಸಹ-ಸಂಯೋಜಕರಾದ ಡಾ. ಪ್ರವೀಣ್ ಪಿ. ಡಿಸೋಜ (8553213845) ಅವರನ್ನು ಸಂಪರ್ಕಿಸಬಹುದಾಗಿದೆ.
