ವಿದ್ಯೆ ವಾರಿಧಿಯಾದ ಗಣಪನು ಮತಿಗೆ ಮಂಗಳವನ್ನುಂಟು ಮಾಡುವವನಾಗಿದ್ದಾನೆ. ನಂದಳಿಕೆಯ ಲಕ್ಷ್ಮೀನಾರಾಯಣಯ್ಯ ಮುದ್ದಣ ಎಂಬ ಹೆಸರಿನಿಂದ ಪ್ರಸಿದ್ಧನಾದ ಕವಿ. ಆತನ ಯಕ್ಷಗಾನ ರತ್ನಾವತೀ ಕಲ್ಯಾಣದಲ್ಲಿ ಆರಂಭದಲ್ಲಿ ಗಣೇಶ ಸ್ತುತಿ ಬರುತ್ತದೆ.
ಜಯತು ಜಯಗಣನಾಥ |
ಜಯತು ಆಖುವರೂಥಾ
ಜಯತು ಲೋಕ ವಿಖ್ಯಾತ|
ವಿಘ್ನ ವಿಪಿನ ಕುಠಾರ
ವಿಘಾದಿಕಲುಷಹರ |
ವಿಘ್ನಕರಾ ಧೀರ
ಕರಿವದನ ಹರಪುತ್ರ |
ಶರಣಜನನುತಿ ಪಾತ್ರ
ಸುರವಿನುತ ಸುಚರಿತ್ರ |
ಪರತರ ಪವಿತ್ರ
ಮುದ್ದಣನ ಕುಮಾರ ವಿಜಯ ಯಕ್ಷಗಾನದಲ್ಲಿಯೂ ಗಣಪತಿಯ ವರ್ಣನೆ ಬರುತ್ತದೆ.
ಜಯ ಜಯ ಗಣಗಣನಾಯಕ |
ಜಯ ಜಯ ಮಂಗಳದಾಯಕ
ಜಯ ಜಯ ವಿಘ್ನ ನಿವಾರಕ |
ಜಯ ಜಯ ಸಿರಿ ಬೆನಕ
ಶಂಕರ ಸುತ ಶಂಕರ |
ಮಂ ಕುಡು ಕೂರ್ಮೆಯೊಳನುದಿನ
ಬಿಂಕಣಗಿವಿಯನೆ ಪಾಲಿಪು |
ದಂಕುಶಧರ ದಯದಿ
ಲಂಬೋದರ ನಂಬಿದೆ ಪಾ|
ದಾಂಬುಜದೊಳು ಬಿಂಗಕ್ಕುವೆ
ನಂಬಿಕೆಯಣುಗನ ಪೊರೆ ಹೇ|
ರಂಬನೆ ಸಂಭ್ರಮದಿ ಜಯ ಜಯ
ಮಂಗಳದಾಯಕ, ವಿಘ್ನ ನಿವಾರಕ ಪೊರೆಯ ಬೇಕು- ಎಂಬ ಮೊರೆ ಇದೆ.
ಕನಕದಾಸರ ಮೋಹನ ತರಂಗಿಣಿ ಕಾವ್ಯವು ಇದೀಗ ತುಳು ಭಾಷೆಯಲ್ಲೂ ಅನುವಾದಗೊಂಡು ಬಂದಿದೆ. ಇಲ್ಲಿ ಗಣೇಶನ ಸ್ತುತಿ ಹೀಗೆ ವರ್ಣಿತವಾಗಿದೆ.
ಓ ಬಂಗಾರ್ ಬೂಮಿದ ವಿನಾಯಕ
ನಿನ್ನ ಕಜ್ಜೊ ಯೇಪೊಲ ನಿರ್ವಿಘ್ನ
ಲೋಕೊದೊಡೆಯೆಯಾಯಿ
ಯೀಯೆಂಕ್ಲೆಗೆಡ್ಡೆ ಮತಿ ಕೊರುದು ಕಾಪುಲ
ಗಣಪತಿ ಜ್ಞಾನದ ಸಂಕೀರ್ಣ ಸ್ವರೂಪದ ಸಂಕೇತ. ಅವನು ಸರ್ವರಿಗೂ ಸನ್ಮಂಗಲವನ್ನುಂಟು ಮಾಡಲೆಂದು ಹಾರೈಸೋಣ.
- ಕೃಷ್ಣಮೂರ್ತಿ


