ಮಂಗಳೂರು: ದೇಶದ ಸರ್ವೋತೋಮುಖ ಪ್ರಗತಿಗೆ ಮತ್ತು ತಾಂತ್ರಿಕ ಬೆಳವಣಿಗೆಗೆ ನಿರಂತರವಾಗಿ ಶ್ರಮಿಸುವ ಇಂಜಿನಿಯರ್‌ಗಳ ಸಾಧನೆಯನ್ನು ಸ್ಮರಿಸುವ ದಿನವೇ ‘ರಾಷ್ಟ್ರೀಯ ಇಂಜಿನಿಯರ್ಸ್ ದಿನ’ ಎಂದು ಖ್ಯಾತ ಸಿವಿಲ್ ಇಂಜಿನಿಯರ್ ಹಾಗೂ ರೋಟರಿ ಜಿಲ್ಲಾ 3181ರ ದಂಡಾಧಿಕಾರಿ ಏಕನಾಥ್ ದಂಡಕೇರಿ ಅಭಿಪ್ರಾಯಪಟ್ಟಿದ್ದಾರೆ. ರೋಟರಿ ಮಂಗಳೂರು ಸಿಟಿ ಸಂಸ್ಥೆಯ ಆಶ್ರಯದಲ್ಲಿ ಸೆಪ್ಟೆಂಬರ್ 24ರಂದು ನಗರದ ಈಡನ್ ಕ್ಲಬ್ ಸಭಾಂಗಣದಲ್ಲಿ ಜರಗಿದ ರಾಷ್ಟ್ರೀಯ ಇಂಜಿನಿಯರ್ಸ್ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಿದ್ದ ರೋಟರಿ ವಲಯ 2ರ ಸಹಾಯಕ ಗವರ್ನರ್, ಇಂಜಿನಿಯರ್ ಸಂದೀಪ್ ರಾವ್ ಇಡ್ಯಾರವರು ಮಾತನಾಡಿ, ಭಾರತ ರತ್ನ ದಿ. ಸರ್ ಎಂ. ವಿಶ್ವೇಶ್ವರಯ್ಯನವರು ತಮ್ಮ ವೃತ್ತಿ ಕೌಶಲ್ಯ, ಅಸಾಧಾರಣ ಪ್ರತಿಭೆ ಮತ್ತು ದೇಶಪ್ರೇಮದ ಮೂಲಕ ದೇಶದ ಎಲ್ಲಾ ಇಂಜಿನಿಯರ್‌ಗಳಿಗೆ ಮಾದರಿಯಾಗಿದ್ದಾರೆ ಎಂದರು. ಅವರು ಅಳವಡಿಸಿಕೊಂಡ ‘ಶ್ರಮಿಸು ಇಲ್ಲವೇ ನಶಿಸು’ ಎಂಬ ಧ್ಯೇಯವಾಕ್ಯ ಹಾಗೂ ಅವರ ಕರ್ತವ್ಯ ನಿಷ್ಠೆ, ಸಮಯ ಪ್ರಜ್ಞೆ ಮತ್ತು ಪ್ರಾಮಾಣಿಕತೆ ಇಂದಿನ ಯುವ ಇಂಜಿನಿಯರ್‌ಗಳಿಗೆ ಸದಾ ದಿಕ್ಸೂಚಿಯಾಗಿದೆ ಎಂದು ತಿಳಿಸಿದರು.
‘ಆದರ್ಶ ಇಂಜಿನಿಯರ್’ ಪ್ರಶಸ್ತಿ ಪ್ರದಾನ:
ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಸುದೀರ್ಘ ಹಾಗೂ ಅನುಪಮ ಸೇವೆ ಸಲ್ಲಿಸಿರುವ ಎನ್.ಐ.ಟಿ.ಕೆ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಕಟ್ಟಾ ವೆಂಕಟರಮಣ ಅವರನ್ನು ಅವರ ಅಪ್ರತಿಮ ಸಾಧನೆಗಾಗಿ ‘ಆದರ್ಶ ಇಂಜಿನಿಯರ್’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕಟ್ಟಾ ವೆಂಕಟರಮಣರವರು, ರೋಟರಿ ಸಂಸ್ಥೆಯು ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವ ಕಾರ್ಯವು ಶ್ಲಾಘನೀಯ ಎಂದು ಕೃತಜ್ಞತೆ ಸಲ್ಲಿಸಿದರು. ಮಾಜಿ ಅಧ್ಯಕ್ಷ ಸುಮಿತ್ ರಾವ್ ಅವರು ಪ್ರಶಸ್ತಿ ವಿಜೇತರ ಪರಿಚಯ ಮಾಡಿಕೊಟ್ಟು ಅಭಿನಂದನಾ ಭಾಷಣ ಮಾಡಿದರು.
ಸಂಸ್ಥೆಯ ಅಧ್ಯಕ್ಷೆ ಸಜ್ನಾ ಭಾಸ್ಕರ್ ಸ್ವಾಗತಿಸಿ, ದಿನಾಚರಣೆಯ ಉದ್ದೇಶ ಹಾಗೂ ಮಹತ್ವವನ್ನು ವಿವರಿಸಿ ಇಂಜಿನಿಯರ್ ಸದಸ್ಯರನ್ನು ಗೌರವಿಸಿದರು. ಕಾರ್ಯದರ್ಶಿ ನಿತಿನ್ ದೇವಾಡಿಗ ವರದಿ ಮಂಡಿಸಿ ವಂದಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಸ್ಥಾಪನಾ ಅಧ್ಯಕ್ಷ ಡಾ. ರಂಜನ್ ಹಾಗೂ ಮಾಜಿ ಅಧ್ಯಕ್ಷ ಬಸವ ಕುಮಾರ್ ಉಪಸ್ಥಿತರಿದ್ದರು.
