ಹಿಂದಿ ಭಾಷೆಯ ಬಳಕೆ ಹೆಚ್ಚಲಿ: ಆನಂದ್ ರಾಯಮನೆ

Shreya Hegde
0


ಮೂಡುಬಿದಿರೆ: ಹಿಂದಿ ಭಾಷೆ ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗದೆ, ದೈನಂದಿನ ಜೀವನದ ಸಂವಹನ ಹಾಗೂ ಜ್ಞಾನಾರ್ಜನೆಯಲ್ಲಿಯೂ ಬಳಕೆಯಾಗಬೇಕು ಎಂದು ಸುಬೇದಾರ್ ಲೆಫ್ಟಿನೆಂಟ್ ಡಾ ಆನಂದ್ ರಾಯಮನೆ ಹೇಳಿದರು.


ಕಾಲೇಜಿನ ಹಿಂದಿ ವಿಭಾಗ ಆಯೋಜಿಸಿದ್ದ ಹಿಂದಿ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಭಾರತದ ವಿವಿಧ ಭಾಗಗಳಲ್ಲಿ ಹಿಂದಿ ಭಾಷೆ ಬಳಕೆಯಲ್ಲಿದ್ದು, ದೇಶದ ಜನರನ್ನು ಪರಸ್ಪರ ಸಂಪರ್ಕಿಸುವ ಪ್ರಮುಖ ಭಾಷೆಯಾಗಿದೆ.  ವಿದ್ಯಾರ್ಥಿಗಳು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಹಿಂದಿಯನ್ನು ಹೆಚ್ಚು ಬಳಸುವುದರೊಂದಿಗೆ, ಭಾಷೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಜವಾಬ್ದಾರಿಯನ್ನೂ ವಹಿಸಬೇಕು ಎಂದರು.


ಅಭಿವೃದ್ಧಿ ಹೊಂದಿದ ಅನೇಕ ರಾಷ್ಟ್ರಗಳು ತಮ್ಮ ಮಾತೃಭಾಷೆಯನ್ನು ಶಿಕ್ಷಣ ಮತ್ತು ಆಡಳಿತದ ಪ್ರಮುಖ ಮಾಧ್ಯಮವಾಗಿ ಬಳಸುತ್ತಿವೆ. ವಿದ್ಯಾರ್ಥಿಗಳ ಶಿಕ್ಷಣದಲ್ಲಿ ಮಾತೃಭಾಷೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದರಿಂದ ಜ್ಞಾನಾರ್ಜನೆ ಹಾಗೂ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಡಿಜಿಟಲ್ ಯುಗದಲ್ಲಿ ಭಾರತೀಯ ಭಾಷೆಗಳನ್ನು ಇಂಗ್ಲಿಷ್ ಅಕ್ಷರಗಳಲ್ಲಿ ಬರೆಯುವ ಪ್ರವೃತ್ತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳು ಭಾಷೆಯ ಮೂಲ ಸ್ವರೂಪವನ್ನು ಉಳಿಸಿಕೊಂಡು ಅದರ ಸರಿಯಾದ ಬಳಕೆಯನ್ನು ಉತ್ತೇಜಿಸಬೇಕು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪರೀಕ್ಷಾಂಗ ವಿಭಾಗದ ಕುಲಸಚಿವ ಡಾ. ಎನ್.ಪಿ. ನಾರಾಯಣ ಶೆಟ್ಟಿ ಮಾತನಾಡಿ, ಭಾಷಾ ಕಲಿಕೆ ವಿದ್ಯಾರ್ಥಿಗಳಿಗೆ ಆನಂದದಾಯಕವಾಗಬೇಕು. ಭಾಷೆ ಮತ್ತು ರಾಜಕೀಯವನ್ನು ಪರಸ್ಪರ ಬೆರೆಸದೆ, ಭಾಷೆಯನ್ನು ಜನರನ್ನು ಬೆಸೆಯುವ ಮಾಧ್ಯಮವಾಗಿ ನೋಡಬೇಕು ಎಂದರು. ಹಿಂದಿ ಯಾವುದೇ ಒಂದು ಪ್ರದೇಶಕ್ಕೆ ಸೀಮಿತವಾಗದೆ ದೇಶದ ವಿವಿಧ ಭಾಗಗಳಲ್ಲಿ ಬಳಕೆಯಾಗುತ್ತಿರುವ ಭಾಷೆಯಾಗಿದ್ದು, ಭಾಷೆಯೊಂದಿಗೆ ಸಂಸ್ಕೃತಿ ಮತ್ತು ಪರಂಪರೆಯೂ ಬೆಸೆದುಕೊಂಡಿದೆ ಎಂದರು.


ಯಶಸ್ವಿನಿ ಹಾಗೂ ಹರ್ಷಿಣಿ ಪ್ರಾರ್ಥಿಸಿ,  ಹಾನಿಯಾ ಶೇಕ್ ಸ್ವಾಗತಿಸಿದರು. ಬಿಸಿಎ ವಿದ್ಯಾರ್ಥಿನಿ ನೇಹಾ ಮುಖ್ಯ ಅತಿಥಿಯನ್ನು ಪರಿಚಯಿಸಿದರು.  2025–26ನೇ ಸಾಲಿನ ಮನಮೋಹನ ವಾಲ್ ಮ್ಯಾಗಜಿನ್ ಸ್ಪರ್ಧೆಯಲ್ಲಿ  ಪ್ರಥಮ ಬಿಎಸ್ಸಿ ವಿದ್ಯಾರ್ಥಿಗಳು ದ್ವಿತೀಯ ಹಾಗೂ ದ್ವಿತೀಯ ಬಿಸಿಎ ವಿದ್ಯಾರ್ಥಿಗಳು ಪ್ರಥಮ ಬಹುಮಾನ ಪಡೆದರು. ಹಿಂದಿ ಸಾಹಿತಿಗಳ ಹೆಸರುಗಳನ್ನು ಬರೆಯುವ ಸ್ಪರ್ಧೆಯಲ್ಲಿ ಹಿತಾ ಪಿ. ಶೆಟ್ಟಿ ದ್ವಿತೀಯ ಹಾಗೂ ಜನಾ ಶೇಕ್ ಪ್ರಥಮ ಬಹುಮಾನ ಪಡೆದರು. ಹಾಡುಗಾರಿಕೆ ಸ್ಪರ್ಧೆಯಲ್ಲಿ ಎಸ್ತಿತಾ ಜೇನ್ ಡಿಸೋಜಾ ಹಾಗೂ ಸಮನ್ವಿತಾ ಎಂ.ಎಚ್. ದ್ವಿತೀಯ ಬಹುಮಾನ ಪಡೆದರೆ, ಕುಮಾರ್ ಪ್ರಥಮ ಬಹುಮಾನ ಪಡೆದರು. ವಿಭಾಗದ ಮುಖ್ಯಸ್ಥ ಡಾ. ದತ್ತಾತ್ರೇಯ ಹೆಗಡೆ  ಇದ್ದರು.


ಕಾರ್ಯಕ್ರಮವನ್ನು ಬಿಸಿಎ ವಿದ್ಯಾರ್ಥಿಗಳಾದ ಸಹನಾ ಭರಡೆ, ನಬಿಹಾ ಶೇಕ್, ಹಾನಿಯಾ, ನೇಹಾ ಹಾಗೂ ಸ್ವಾತಿ ನಿರೂಪಿಸಿದರು. ಸ್ವಾತಿ ವಂದಿಸಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top