ಮನುಷ್ಯ ಹುಟ್ಟುವಾಗ ಯಾವುದೇ ಜಾತಿಯ ಮುದ್ರೆಯೊಂದಿಗೆ ಹುಟ್ಟುವುದಿಲ್ಲ. ಆದರೆ ಬೆಳೆಯುತ್ತಿದ್ದಂತೆ ಸಮಾಜ ಅವನಿಗೆ ಮೊದಲು ಕಲಿಸುವ ಮತ್ತು ಕೇಳುವ ಪ್ರಶ್ನೆ ಒಂದೇ- “ನೀನು ಯಾವ ಜಾತಿ?”
ಬದುಕಿನ ಪ್ರತಿ ಹಂತದಲ್ಲೂ ಜಾತಿಯ ಲೆಕ್ಕಾಚಾರವೇ ಪ್ರಧಾನವಾಗುತ್ತದೆ. ಮದುವೆ, ಸ್ನೇಹ, ಮನೆ ನಿರ್ಮಾಣ, ಯಾರ ಜೊತೆ ಓಡಾಡಬೇಕು, ರಾಜಕೀಯದಲ್ಲಿ ಯಾರಿಗೆ ಮತ ಹಾಕಬೇಕು—ಇವೆಲ್ಲವೂ ಜಾತಿಯ ಕಣ್ಣಿನಿಂದಲೇ ತೀರ್ಮಾನವಾಗುತ್ತಿವೆ. ಮನುಷ್ಯನ ನಡತೆ, ಪ್ರಾಮಾಣಿಕತೆ ಮತ್ತು ಮಾನವೀಯತೆಗಿಂತ ಅವನ ಜಾತಿಯೇ ಮುಖ್ಯವಾಗುವ ಕಹಿ ವಾತಾವರಣ ನಮ್ಮ ನಡುವೆ ಇಂದಿಗೂ ಜೀವಂತವಾಗಿದೆ.
ಆದರೆ, ಇದೇ ಸಮಾಜದ ಮುಂದೆ ಒಂದು ಸ್ವಾರಸ್ಯಕರ ಪ್ರಶ್ನೆಯಿದೆ: “ಹಣಕ್ಕೆ ಯಾವ ಜಾತಿ?”
ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಜೀವಕ್ಕಾಗಿ ಹೋರಾಡುತ್ತಿರುವಾಗ ವೈದ್ಯರಾಗಲಿ, ಬಿಲ್ ಪಡೆಯುವವರಾಗಲಿ ರೋಗಿಯ ಜಾತಿ ಕೇಳುವುದಿಲ್ಲ; ಅಲ್ಲಿ ಬೇಕಿರುವುದು ಹಣ ಮಾತ್ರ. ಅಂಗಡಿಯಲ್ಲಿ ಸಾಮಾನನ್ನು ಕೊಳ್ಳುವಾಗ ವ್ಯಾಪಾರಿ ಕಸ್ಟಮರ್‌ನ ಜಾತಿಯನ್ನು ಪರಿಶೀಲಿಸುವುದಿಲ್ಲ. ಕೊನೆಗೆ ಅಂತ್ಯಕ್ರಿಯೆಯ ಸಂದರ್ಭದಲ್ಲೂ ಹಣದ ವ್ಯವಹಾರಕ್ಕೆ ಜಾತಿಯ ಅಡ್ಡಿಯಿಲ್ಲ.
ಹಣ ಹೊಸದಿರಲಿ, ಹಳೆಯದಿರಲಿ, ನೀರಿನಲ್ಲೋ ಕೊಳಚೆಯಲ್ಲೋ ಬಿದ್ದಿರಲಿ ಅಥವಾ ಧೂಳು ಹಿಡಿದಿರಲಿ—ಅದರ ಮೌಲ್ಯ ಬದಲಾಗುವುದಿಲ್ಲ. ಯಾರೂ ಒಂದು ನೋಟನ್ನು ಕೈಯಲ್ಲಿ ಹಿಡಿದು, “ಇದು ಯಾವ ಜಾತಿಯ, ಯಾವ ಧರ್ಮದ ಅಥವಾ ಯಾವ ಊರಿನ ದುಡ್ಡು?” ಎಂದು ಪ್ರಶ್ನಿಸುವುದಿಲ್ಲ. ಏಕೆಂದರೆ ಹಣಕ್ಕೆ ಜಾತಿಯಿಲ್ಲ, ಧರ್ಮವಿಲ್ಲ, ಮೇಲು-ಕೀಳೆಂಬ ಭೇದವಿಲ್ಲ.
ಇಲ್ಲಿಯೇ ಸಮಾಜದ ದೊಡ್ಡ ವ್ಯಂಗ್ಯ ಅಡಗಿದೆ. ಜಾತಿಯ ಹೆಸರಿನಲ್ಲಿ ಮನುಷ್ಯನನ್ನು ಮನುಷ್ಯನಿಂದ ದೂರ ತಳ್ಳುವ ನಾವು, ಹಣದ ವಿಚಾರ ಬಂದಾಗ ಮಾತ್ರ 'ಎಲ್ಲರೂ ಒಂದೇ' ಎಂದು ಒಪ್ಪಿಕೊಳ್ಳುತ್ತೇವೆ. ಹಣವನ್ನು ಸ್ವೀಕರಿಸುವಾಗ ಕಾಣಿಸದ ಕಟ್ಟುಪಾಡುಗಳು, ಒಬ್ಬ ಮನುಷ್ಯನನ್ನು ಮನುಷ್ಯನಾಗಿ ಸ್ವೀಕರಿಸುವಾಗ ಏಕೆ ಅಡ್ಡಬರುತ್ತವೆ?
ನಾವು ರಕ್ತಕ್ಕೆ, ಹಸಿವಿಗೆ, ನೋವಿಗೆ ಅಥವಾ ಸಾವಿಗೆ ಜಾತಿ ಕೇಳುವುದಿಲ್ಲ. ಆದರೆ ಬದುಕಿರುವ ಮನುಷ್ಯನಿಗೆ ಮಾತ್ರ ಜಾತಿಯ ಚೌಕಟ್ಟು ಹಾಕುತ್ತೇವೆ.
ಜಾತಿ ಎಂಬುದು ಕೇವಲ ಒಂದು ಸಾಂದರ್ಭಿಕ ಗುರುತಾಗಬಹುದೇ ಹೊರತು, ಅದು ನಮ್ಮ ಮಾನವೀಯತೆಯನ್ನು ನಿರ್ಧರಿಸಬಾರದು. ಮನುಷ್ಯನ ಮೌಲ್ಯ ಇರುವುದು ಅವನ ಗುಣದಲ್ಲೇ ಹೊರತು ಹುಟ್ಟಿದ ಜಾತಿಯಲ್ಲಲ್ಲ. ದುಡ್ಡಿಗೆ ಕೊಡಬೇಕಾದ ಗೌರವವನ್ನು ಮನುಷ್ಯನಿಗೆ ಕೊಡುವ ದಿನ ಬಂದಾಗಷ್ಟೇ ಸಮಾಜ ನಿಜವಾದ ಅರ್ಥದಲ್ಲಿ ಪ್ರಬುದ್ಧವಾಗಿದೆ ಎನ್ನಬಹುದು.
“ದುಡ್ಡಿಗೆ ಜಾತಿಯಿಲ್ಲದ ಸಮಾಜದಲ್ಲಿ, ಬದುಕುವ ಮನುಷ್ಯನಿಗೆ ಮಾತ್ರ ಜಾತಿ ಹುಡುಕುವುದು ಎಂಥ ವಿಪರ್ಯಾಸ!”
ಬನ್ನಿ, ಮನುಷ್ಯನನ್ನು ಕೇವಲ ಮನುಷ್ಯನಾಗಿ ನೋಡುವ ಮನಸ್ಥಿತಿಯನ್ನು ಬೆಳೆಸಿಕೊಳ್ಳೋಣ. ಜಾತಿಗಿಂತ ಮಾನವೀಯತೆಯೇ ದೊಡ್ಡದು ಎಂಬ ಸತ್ಯವನ್ನು ಒಪ್ಪಿ ನಡೆಯೋಣ.
- ಶ್ರೀಮತಿ ಕೀರ್ತಿ ಬಸವರಾಜ ರಾಮತೀರ್ಥ
ಕೆರೂರ

