ಅವರಂತೆ ನಾವು ಏಕೆ ಇಲ್ಲ?? ಎಂದು ಹೋಲಿಸಿಯೇ ನಾವು ನಮ್ಮ ದಿನವನ್ನು ಆರಂಭಿಸುವ ಕಾಣದ ಕಾಯಿಲೆಯೊಂದು ನಮಗೆ ಇದೆ . ಹೌದು ಹೋಲಿಕೆಯು ನಮ್ಮ ಜೀವನದ ಒಂದು ಅಂಗವಾಗಿ ಹೋಗಿದೆ ,
ಅವರ ಬಣ್ಣ ನಮಗೆ ಯಾಕೆ ಇಲ್ಲ? ,ಅವರಂತೆ ನಾವು ಏಕೆ ಉದ್ದ ಇಲ್ಲ, ಸಣ್ಣ ಇಲ್ಲ , ಎಂಬ ದೈಹಿಕ ಕೊರತೆಗಳನ್ನು ಹೋಲಿಸುವುದರ ಜೊತೆಗೆ ಅವರಂತೆ ನಾವು ಏಕೆ ಸಾಧಿಸಲಾಗುತ್ತಿಲ್ಲ ,ಏಕೆ ರ್‍ಯಾಂಕ್ ಪಡೆಯಲಾಗುತ್ತಿಲ್ಲ, ಬೇಗ ಪ್ರಖ್ಯಾತಿಯನ್ನು ಯಾಕೆ ಹೊಂದುತ್ತಿಲ್ಲ ಎಂಬ ಪ್ರಶ್ನೆಗಳಿಂದಲೇ ದಿನವನ್ನು ಆರಂಭಿಸಿ ಅಂತ್ಯಗೊಳಿಸುತ್ತಿದ್ದೇವೆ.
ಬಹುಶಃ ಇದಕ್ಕೆ ನಮ್ಮ ಪರಿಸರ ,ತಂದೆ ತಾಯಿ , ನಮ್ಮ ಸುತ್ತಮುತ್ತಲಿರುವವರ ಸಹಕಾರ ಇರಬಹುದು. ಪಕ್ಕದ ಮನೆಯ ಹುಡುಗಿ ರ್‍ಯಾಂಕ್ ಪಡೆದರೆ ನಿನಗೇನು ಓದುವುದಕ್ಕೆ ಎಂದು ಹೇಳುವ ಪೋಷಕರು ಯಾಕೆ ತಮ್ಮ ಮಗಳು ಕಡಿಮೆ ಅಂಕ ಪಡೆದಳು ?ಅವಳ ದೌರ್ಬಲ್ಯವೇನು?ಮತ್ತು ಬೇರೆ ಯಾರೋ ಒಬ್ಬ ಹುಡುಗ ಸಾಧನೆ ಮಾಡಿದರೆ, ನೋಡಿ ಕಲಿತುಕೋ ಎಂದು ಹೇಳುವವರು ತನ್ನ ಮಗ ಏನು ಮಾಡುತ್ತಿದ್ದಾನೆ? ಅದು ಅವನ ಜೀವನಕ್ಕೆ ಒಳಿತೋ, ಕೆಡುಕೋ? ಎಂದು ಯೋಚಿಸುವುದಿಲ್ಲ .
ಸರೋಜಾ ಅಕ್ಕ ಚಿನ್ನದ ಸರ ಖರೀದಿಸಿದರೆ ತನಗೂ ಅದೇ ತರ ಬೇಕೆಂದು ಗಂಡನ ಬಳಿ ಜಗಳ ಆಡೋ ಹೆಂಡತಿ, ರಾಮಣ್ಣನ ಹೆಂಡತಿ ತುಂಬಾ ಚೆಂದ ಅಡುಗೆ ಮಾಡಿದರೆ ನೀನು ಯಾಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸುವ ಗಂಡ ,ಹೀಗೆ ಹೋಲಿಕೆಯು ಸಂಬಂಧಗಳನ್ನು ಕಳೆದುಕೊಳ್ಳಲು ದಾರಿ ಮಾಡಿಕೊಡುತ್ತಿದೆ.
ಇವುಗಳನ್ನೇ ನೋಡುತ್ತಾ ,,ಗಮನಿಸುತ್ತಾ ,,ಬೆಳೆದ ಮಕ್ಕಳು ಸಹ ಹೋಲಿಕೆನ್ನೇ ಮೈಗೂಡಿಸಿಕೊಳ್ಳುತ್ತಿವೆ , ಚಿಕ್ಕಮಗು ಶಾಲೆಗೆ ಹೋಗುವಾಗ ನನ್ನ ಸ್ನೇಹಿತನ ನೀರಿನ ಬಾಟಲ್ ನನಗಿಂತ ಚಂದ ಇದೆ ನಾನು ಅಪ್ಪನ ಬಳಿ ಅದನ್ನೇ ಕೇಳಿ ಕೊಡಿಸಿಕೊಳ್ಳಬೇಕು ಎಂದು ಯೋಚಿಸುವ ಪ್ರಾರಂಭದ ಹಂತದಿಂದ ಮುಂದೊಂದು ದಿನ ತನ್ನ ದೌರ್ಬಲ್ಯಗಳನ್ನು ಹೋಲಿಸಿಕೊಂಡೇ ತನ್ನಲ್ಲಿರುವ ಉತ್ತಮತೆಯನ್ನು ಮರೆಮಾಡುತ್ತದೆ.
ಹೀಗೆ ಒಂದು ಸನ್ನಿವೇಶ ಎದುರಾಯಿತು ನನ್ನ ಅಮ್ಮ ನನ್ನನ್ನು ಸಹ ಹೀಗೆ ಹೋಲಿಸಿದ್ದಳು ಒಮ್ಮೆ ,ನಮ್ಮ ಪಕ್ಕದ ಮನೆ ಹುಡುಗಿ ನಿನ್ನಂತೆ ಜೋರು ಮಾಡುವುದಿಲ್ಲ, ಹೇಳುವುದಕ್ಕೂ ಮೊದಲು ಎಲ್ಲಾ ಕೆಲಸ ಮಾಡಿಬಿಡುತ್ತಾಳೆ, ತುಂಬಾ ಚೆನ್ನಾಗಿ ಅಡುಗೆ ಕೆಲಸ ಕಲಿತಿದ್ದಾಳೆ, ನೀನು ಯಾಕೆ ಹೀಗೆ ? ಎಂಬ ಅವಳ ಪ್ರಶ್ನೆಗೆ ,ನನ್ನ ಉತ್ತರ ಸರಳವಾಗಿ ಇತ್ತು .
ಕಾರಣ ಇಷ್ಟೇ ಅಮ್ಮ ನಾನು ಅವಳಲ್ಲ, ಅವಳು ನಾನಲ್ಲ , ನೀನು ಹೇಳಿದ್ದೆಲ್ಲ ಅವಳ ಗುಣ ಒಪ್ಪುತ್ತೇನೆ , ಆದರೆ ನನಗೂ ನನ್ನದೇ ಆದ ಕೆಲವು ಗುಣಗಳಿವೆ ನಾನು ಅದನ್ನು ಯಾರೊಂದಿಗೂ ಹೋಲಿಸಿಕೊಳ್ಳುವುದಿಲ್ಲ , ನಿನಗೆ ಕೆಲಸದಲ್ಲಿ ಸಹಾಯ ಮಾಡುತ್ತಿಲ್ಲ ಎಂದು ಕೋಪದಲ್ಲಿ ನೀನು ಹೀಗೆಲ್ಲ ಹೇಳುತ್ತಿರಬಹುದು, ಆದರೆ ಅವಳಂತೆ ಆಗೂ ಎಂದು ನೀನು ಹೇಳಿದರು ನಾನು ಅಳವಡಿಸಿಕೊಳ್ಳಲು ಪ್ರಯತ್ನ ಪಟ್ಟರು, ನಾನು ಅವಳಾಗುವುದಿಲ್ಲ .
ಪ್ರಪಂಚದಲ್ಲಿ ಎಷ್ಟು ಮನುಷ್ಯರಿದ್ದಾರೆ ಅವರೆಲ್ಲ ಯಾಕೆ ನೋಡುವುದಕ್ಕೆ ಒಂದೇ ತರ ಇಲ್ಲ, ಯಾಕೆ ಅವರ ಹಾವಭಾವ ಗುಣಗಳು ಒಂದೇ ಅಲ್ಲ, ಎಲ್ಲೋ ಕೆಲವು ಹೆಸರುಗಳು ಒಂದೇ ಬಿಟ್ಟರೆ ಅದರಲ್ಲೂ ವಿಭಿನ್ನತೆಯನ್ನು ನೋಡಬಹುದು , ಹೀಗಿರುವಾಗ ನಾನ್ಯಾಕೆ ಅವಳನ್ನೇ ಹೋಲಿಸಿಕೊಳ್ಳಲಿ , ನಿನಗೆ ಸಹಾಯ ಬೇಕಿದ್ದರೆ ಸಹಾಯ ಮಾಡು ಎಂದು ಬಯ್ಯುವ ಹಕ್ಕು ನಿನಗುಂಟು ಆದರೆ ನಿನ್ನ ಮಗಳು ಅವಳದ್ದೇ ಆದ ಗುಣಗಳಿಂದ ವೈಶಿಷ್ಟಳೆ ಹೊರತು ಯಾರನ್ನು ಅನುಕರಿಸುವವಳಲ್ಲ. ಈ ಮಾತು ನನ್ನ ತಾಯಿಗೂ ಅರಿವಾಯಿತು ಅನಿಸುತ್ತದೆ ಮುಂದೆ ಎಂದೂ ಅವಳು ನನ್ನನ್ನು ಹೋಲಿಸಿಯೇ ಇಲ್ಲ.
ಹೀಗೆ ನಾವು ಪ್ರತಿಯೊಂದರಲ್ಲೂ ಯೋಚಿಸಿದರೆ ಬಹುಶಃ ತುಂಬಾ ವಿಷಯಗಳಲ್ಲಿ ನೋವನ್ನು ಅನುಭವಿಸುದಿಲ್ಲ , ಇಂತಹ ಮಾನಸಿಕ ಧೈರ್ಯತೆಯನ್ನು ಮಕ್ಕಳಿಗೆ ಉಡುಗೊರೆ ನೀಡಿದರೆ ಎಂತಹದ್ದೇ ಕಷ್ಟ ಬಂದರೂ ಎದುರಿಸಿ ತೀರಿಸುತ್ತಾರೆ. ಆದರೆ ಇಂದಿನ ದಿನಗಳಲ್ಲಿ ಹೋಲಿಕೆ ಮಾಡದೆ ದಿನ ಮುಗಿಸುವುದು ಸವಾಲೇ ಸರಿ, ಹಾಗಿದ್ದಾರೆ ನಾವು ನಿಜಕ್ಕೂ ಈ ಹೋಲಿಕೆಗೆ ಆಳಾಗಿ ಹೋಗಿದ್ದೇವಾ?? ನಮ್ಮನ್ನ ನಾವು ಹೋಲಿಸದೆ ಇರಲು ಆಗುವುದೇ ಇಲ್ವಾ ?? ಉತ್ತರ ನಿಮ್ಮದೇ ಯೋಚಿಸಿಕೊಳ್ಳಿ , ನಿಮ್ಮೊಳಗೆ ನೀವೇ ಕೇಳಿಕೊಳ್ಳಿ ...
-ದರ್ಶಿನಿ ಎಂ { SDM PG COLLEGE}
ಉಜಿರೆ



