ಹಿಂದಿ ಸಾಹಿತ್ಯದಲ್ಲಿ ಕೃಷ್ಣ ಭಕ್ತಿ ಸಾರಿದ ಮಹನೀಯರು

Upayuktha
0



ಕ್ತಿ ಕಾಲದಲ್ಲಿ ಎಲ್ಲ ಭಾಷೆಗಳಲ್ಲೂ ಭಕ್ತ ಕವಿಗಳು ಭಗವಂತನ ವಿವಿಧ ಅವತಾರಗಳ ವರ್ಣನೆ ಮಾಡಿದ್ದರೂ ಕೃಷ್ಣನ ಭಕ್ತರು ಮತ್ತು ಭಕ್ತ ಕವಿಗಳದ್ದು ವಿಶೇಷ ಸ್ಥಾನವಿದೆ. ವಲ್ಲಭಾಚಾರ್ಯರ ಅಷ್ಟ ಚಾಪ ಕವಿಗಳು ಪ್ರಮುಖರು ಅಲ್ಲದೇ ಮೀರಾ ಬಾಯಿ, ರಸಖಾನ  ಮೊದಲಾದವರು ಪ್ರಮುಖರು. 


16ನೇ ಶತಮಾನದ ಮಹಾನ್ ಅಂಧ ಭಕ್ತಿ ಕವಿ ಮತ್ತು ಗಾಯಕರಾದ ಸೂರದಾಸ್ ಅವರು ತಮ್ಮ ಕಾವ್ಯಗಳಲ್ಲಿ ಶ್ರೀಕೃಷ್ಣನ ಬಾಲಲೀಲೆ, ಪ್ರೇಮ ಮತ್ತು ಭಕ್ತಿಯನ್ನು ಅದ್ಭುತವಾಗಿ ವರ್ಣಿಸಿದ್ದಾರೆ. ಬ್ರಜ್ ಭಾಷೆಯಲ್ಲಿ ರಚಿತವಾಗಿರುವ ಇವರ ಸಾಹಿತ್ಯವು ಭಕ್ತಿ ಚಳುವಳಿಯ ಪ್ರಮುಖ ಭಾಗವಾಗಿದೆ.ಸೂರದಾಸರ ವಿಶಿಷ್ಟ ಕೃತಿಗಳು ಮತ್ತು ಅವುಗಳಲ್ಲಿ ಶ್ರೀಕೃಷ್ಣನ ಚಿತ್ರಣವನ್ನುವನ್ನು ಮನಮೋಹಕವಾಗಿ ಚಿತ್ರಿಸಿದ್ದಾರೆ.


ಸೂರಸಾಗರ ಸೂರದಾಸರ ಅತ್ಯಂತ ಪ್ರಸಿದ್ಧ ಹಾಗೂ ಬೃಹತ್ ಕಾವ್ಯ ಗ್ರಂಥವಾಗಿದೆ. ಇದರಲ್ಲಿ ಶ್ರೀಕೃಷ್ಣನ ಜನ್ಮ, ಬಾಲ್ಯದ ತುಂಟಾಟಗಳು ಹಾಗೂ ರಾಧಾ-ಕೃಷ್ಣರ ದಿವ್ಯ ಪ್ರೇಮದ ಸುಂದರ ವರ್ಣನೆಗಳು ಮನೋಜ್ಞವಾಗಿ ಮೂಡಿದೆ. ಸೂರ ಸಾರಾವಳಿ  ಎಂಬ ಮತ್ತೊಂದು ಗ್ರಂಥದಲ್ಲಿ ಸೃಷ್ಟಿಯ ಸಿದ್ಧಾಂತ ಮತ್ತು ಹೋಲಿ ಹಬ್ಬದ ಹಿನ್ನೆಲೆಯಲ್ಲಿ ಕೃಷ್ಣನ ಮೇಲಿನ ಭಕ್ತಿಯನ್ನು ಕಣ್ಣ ಮುಂದೆ ಕಾಣುತ್ತಿದೆಯೋ ಎಂಬಂತೆ ವರ್ಣಿಸಿದ್ದಾರೆ. ಮತ್ತೊಂದು ಕೃತಿಯಾದ ಸಾಹಿತ್ಯ ಲಹರಿ ಯಲ್ಲಿ ಕೃಷ್ಣನ ದಿವ್ಯ ಸೌಂದರ್ಯ ಮತ್ತು ಶೃಂಗಾರ ರಸವನ್ನು ಪ್ರಧಾನವಾಗಿ ಹೊಂದಿರುವ ಭಕ್ತಿಗೀತೆಗಳ ಗುಚ್ಛವಾಗಿದೆ.


ಕೃಷ್ಣನ ಲೀಲೆಗಳ ವರ್ಣನೆಯನ್ನು ವಿವಿಧ ಭಾವಗಳನ್ನು ಸೂರದಾಸರು ತಮಗೆ ಕಣ್ಣಿಲ್ಲದಿದ್ದರೂ, ಕೃಷ್ಣನ ರೂಪ ಮತ್ತು ಚಲನವಲನಗಳನ್ನು ಒಬ್ಬ ಪ್ರತ್ಯಕ್ಷ ಸಾಕ್ಷಿಯಂತೆ ಅತ್ಯಂತ ಮನೋಜ್ಞವಾಗಿ ಚಿತ್ರಿಸಿದ್ದಾರೆ. ವಾತ್ಸಲ್ಯ ಭಾವದಲ್ಲಿ ಶ್ರೀಕೃಷ್ಣನ ಬಾಲ ಕೃಷ್ಣನ ಲೀಲೆಗಳನ್ನು  ಹಾಡುತ್ತಾರೆ. ಸೂರದಾಸರ ಕಾವ್ಯದ ಜೀವಾಳವೇ ವಾತ್ಸಲ್ಯ ರಸ. ತಾಯಿ ಯಶೋದೆಯ ಮಡಿಲಲ್ಲಿ ಬೆಳೆಯುವ ಕೃಷ್ಣ, ಆತ ಮಣ್ಣು ತಿಂದಾಗ ಯಶೋದೆ ಬಾಯಿ ತೆರೆಸುವ ಪ್ರಸಂಗ, ಕೃಷ್ಣ ಮೊಣಕಾಲೂರಿ ನಡೆಯಲು ಕಲಿಯುವುದು, ಮತ್ತು ಬೆಣ್ಣೆ ಕದಿಯುವ (ಮಾಖನ್ ಚೋರ್) ದೃಶ್ಯಗಳನ್ನು ಕಣ್ಣಿಗೆ ಕಟ್ಟುವಂತೆ ಭಜಿಸುತ್ತಾರೆ.ಶೃಂಗಾರ ಮತ್ತು ಪ್ರೇಮ ರಸ ತುಂಬಿರುವ ವೃಂದಾವನದಲ್ಲಿ ರಾಧೆ ಮತ್ತು ಗೋಪಿಕೆಯರೊಂದಿಗೆ ಕೃಷ್ಣನಾಡುವ ರಾಸಲೀಲೆಯನ್ನು ಇವರು ಅತ್ಯಂತ ದಿವ್ಯವಾಗಿ ಭಕ್ತಿ ಪರವಶರಾಗಿಯೇ ಚಿತ್ರಿಸುತ್ತಾರೆ. ಈ ಪ್ರೇಮವು ಕೇವಲ ಲೌಕಿಕವಲ್ಲ, ಅದು ಜೀವಾತ್ಮವು ಪರಮಾತ್ಮನೊಂದಿಗೆ ಒಂದಾಗಲು ಪಡುವ ಹಂಬಲದ ಸಂಕೇತವಾಗಿದೆ ಎಂಬುದು ಸ್ಪಷ್ಟವಾಗಿ ತೋರುತ್ತದೆ. ಕೃಷ್ಣನು ಮಥುರೆಗೆ ಹೋದಾಗ ರಾಧೆ ಮತ್ತು ಗೋಪಿಕೆಯರು ಅನುಭವಿಸುವ ವಿರಹ ತಾಪವನ್ನು ಕೃಷ್ಣನ ಸಂದೇಶವಾಹಕ ಉದ್ಧವನು (ಉಧೋ) ಜ್ಞಾನಮಾರ್ಗದ ಬೋಧನೆ ಮಾಡಲು ಬಂದಾಗ, ಗೋಪಿಕೆಯರು ತಮಗೆ ಕೃಷ್ಣನ ಭೌತಿಕ ಸಾನ್ನಿಧ್ಯವೇ ಬೇಕು ಎಂದು ವಾದಿಸುವ ಪ್ರಸಂಗ ಬಹಳ ಸೊಗಸಾಗಿ ಚಿತ್ರಿಸಿರುವ ಸೂರದಾಸರು ಇಲ್ಲಿ ವಿಯೋಗ ಶೃಂಗಾರದ ವರ್ಣನೆ ಬಹಳವೆ ಸೊಗಸಾಗಿ ಮಾಡಿದ್ದಾರೆ. ಪ್ರಸಿದ್ಧ ಕತೆಯಲ್ಲಿ ತಿಳಿಯುವುದಾದರೆ. ದಿವ್ಯ ದೃಷ್ಟಿಯ ಪವಾಡಸೂರದಾಸರ ಭಕ್ತಿ ಎಷ್ಟಿತ್ತೆಂದರೆ, ಅವರು ವೃಂದಾವನದ ಶ್ರೀನಾಥ ಜಿ ದೇವಸ್ಥಾನದಲ್ಲಿ ಪ್ರತಿದಿನ ಕೃಷ್ಣನಿಗೆ ಮಾಡಲಾಗುತ್ತಿದ್ದ ಅಲಂಕಾರವನ್ನು (ಬಣ್ಣ, ಆಭರಣ, ಬಟ್ಟೆ) ತಮ್ಮ ಕಣ್ಣು ಕಾಣದಿದ್ದರೂ ಭಜನೆಯ ರೂಪದಲ್ಲಿ ನಿಖರವಾಗಿ ವರ್ಣಿಸುತ್ತಿದ್ದರು. ಒಮ್ಮೆ ಅರ್ಚಕರು ಇವರನ್ನು ಪರೀಕ್ಷಿಸಲು ದೇವರಿಗೆ ಯಾವುದೇ ಬಟ್ಟೆ ಹಾಕದೆ ಕೇವಲ ಮುತ್ತಿನ ಹಾರವನ್ನು ಮಾತ್ರ ಧರಿಸಿದ್ದರು. ಅಂದು ಸೂರದಾಸರು ದೇವರ ನೈಸರ್ಗಿಕ ಶ್ಯಾಮಲ ವರ್ಣವನ್ನು ಕೊಂಡಾಡಿ ಹಾಡುವ ಮೂಲಕ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿದ್ದರು. ಸೂರದಾಸರ ರಚಣೆಯಲ್ಲಿ ಶ್ರೀಕೃಷ್ಣನು ಕೇವಲ ಒಬ್ಬ ದೇವರಾಗಿರದೆ ಒಬ್ಬ ಮುದ್ದಾದ ಮಗನಾಗಿ, ಸಖನಾಗಿ ಮತ್ತು ದಿವ್ಯ ಪ್ರೇಮಿಯಾಗಿ ವರ್ಣಿಸಲ್ಪಟ್ಟಿದ್ದಾನೆ.



ಮತ್ತೊಬ್ಬ ಪ್ರಸಿದ್ಧ ಸಂತ ಮಹಿಳಾ ಕವಿ ಸಂತ ಮೀರಾಬಾಯಿ

ಶ್ರೀಕೃಷ್ಣನ ಭಕ್ತಿಯು ಮಾತು ಬಂದಾಗ ಅವನ ಪರಮ ಭಕ್ತೆಯಾದ ಮೀರಾಬಾಯಿಯ ಮಾತು ಬರದೇ ಇರಲು ಸಾಧ್ಯವೇ ಇಲ್ಲ.  ಮೀರಾಬಾಯಿಯ ಭಕ್ತಿ ಅನನ್ಯವಾದುದು.


ಮೀರಾಬಾಯಿ (ಕ್ರಿ.ಶ 1504- 1558) 16ನೇ ಶತಮಾನದ ಪ್ರಸಿದ್ಧ ಭಕ್ತಿ ಸಂತರು ಮತ್ತು ಕೃಷ್ಣನ ಪರಮ ಭಕ್ತೆ. ರಾಜಸ್ಥಾನದ ರಾಜಮನೆತನದಲ್ಲಿ ಜನಿಸಿದ್ದರೂ, ಲೌಕಿಕ ಸುಖಗಳನ್ನು ತ್ಯಜಿಸಿ ತನ್ನ ಇಡೀ ಜೀವನವನ್ನು ಶ್ರೀಕೃಷ್ಣನ ಆರಾಧನೆಗೆ ಮುಡಿಪಾಗಿಟ್ಟರು. ಇವರು ರಚಿಸಿರುವ ಕೃಷ್ಣಭಕ್ತಿಯ ಮಧುರವಾದ ಭಜನೆಗಳು ಇಂದಿಗೂ ಪ್ರಸಿದ್ಧವಾಗಿವೆ.ಮೀರಾಬಾಯಿಯವರ ಜನನ ರಾಜಸ್ಥಾನದ ಪಾಲಿ ಜಿಲ್ಲೆಯ ಕುಡಕಿ ಎಂಬಲ್ಲಿ  ಆಗಿತ್ತು. ಇವರ ತಂದೆ ರತನ್ ಸಿಂಗ್ ರಾಥೋಡ್. ತಾಯಿ ವೀರ್‌ ಕಂವರ್‌, ರಾಜಕುಮಾರಿಯಾದ ಮೀರಾಬಾಯಿಯ ಮೊದಲ ಹೆಸರು ಪ್ರೇಮಲ್.‌ ಚಿಕ್ಕಂದಿನಿಂದಲೇ ಶ್ರೀಕೃಷ್ಣನನ್ನು ತನ್ನ ಪತಿಯೆಂದು ಭಾವಿಸಿ ಭಕ್ತಿಯಲ್ಲಿ ಮುಳುಗಿದ್ದರು. ಆದರೆ ಪ್ರಾಪಂಚಿಕವಾಗಿ ಮದುವೆ ಆಗಲೇ ಬೇಕಾದ ಕಾರಣ ಅವರ ತಂದೆಯು ಹುಡುಕಿದ  ಮೇವಾರದ ರಾಜಕುಮಾರ ಭೋಜ್ ರಾಜ್ ಅವರೊಂದಿಗೆ ವಿವಾಹವಾಯಿತು.


ಮದುವೆಯಾದ ನಂತರವೂ ಮೀರಾಬಾಯಿಯ ಭಕ್ತಿ ಮತ್ತು ಆರಾಧನೆ ನಿಲ್ಲಲಿಲ್ಲ. ಆದರೆ ಮದುವೆಯಾದ ಕೆಲವೇ ವರ್ಷಗಳಲ್ಲಿ ಅವರ ಪತಿ ಯುದ್ಧದಲ್ಲಿ ಮರಣ ಹೊಂದಿದರು. ಮೀರಾಬಾಯಿ ಪತಿ ಅವಳೊಂದಿಗೆ ಪೃೀತಿ ವಿಶ್ವಾಸ ಗೌರವದೊಂದಿಗೇ ಇದ್ದರು. ಆದರೆ ಅತ್ತೆಯ ಮನೆಯ ಎಲ್ಲರಿಗೂ ಮೀರಾಬಾಯಿಯ ವೈರಾಗ್ಯ ಭಕ್ತಿ ರೀತಿ ನೀತಿಗಳು ಸರಿಕಾಣುತ್ತಿರಲಿಲ್ಲ ಏಕೆಂದರೆ  ಪತಿಯ ನಿಧನದ ನಂತರ, ಮೀರಾಬಾಯಿ ತನ್ನ ರಾಜಮನೆತನದ ಆಡಂಬರವನ್ನು ತೊರೆದು, ಋಷಿ-ಮುನಿಗಳ ಹಾಗೂ ಭಕ್ತರ ಸಹವಾಸದಲ್ಲಿ ಕೃಷ್ಣ ಭಜನೆಗಳನ್ನು ಹಾಡುತ್ತಾ ಕಾಲ ಕಳೆದರು. ಅತ್ತೆಯ ಮನೆಯವರು ಇದನ್ನು ವಿರೋಧಿಸಿ, ಆಕೆಯನ್ನು ಕೊಲ್ಲಲು ವಿಷಪ್ರಾಶನ ಸೇರಿದಂತೆ ಅನೇಕ ಹಿಂಸೆಗಳನ್ನು ನೀಡಿದರು. ಆದರೆ ಕೃಷ್ಣನ ಕೃಪೆಯಿಂದ ಆಕೆಯ ಪ್ರಾಣಕ್ಕೆ ಯಾವುದೇ ಹಾನಿಯಾಗಲಿಲ್ಲ. ಮೀರಾಬಾಯಿ ಮೇವಾರ್ ರಾಜ್ಯವನ್ನು ತೊರೆದು ತೀರ್ಥಯಾತ್ರೆಗಳಿಗೆ ಹೋದಳು ಎಂದು ಹೇಳುತ್ತಾರೆ ಹಾಗೂ ತನ್ನ ಕೊನೆಯ ವರ್ಷಗಳಲ್ಲಿ, ಮೀರಾಬಾಯಿ ದ್ವಾರಕಾ ಅಥವಾ ವೃಂದಾವನದಲ್ಲಿ ವಾಸಿಸುತ್ತಿದ್ದಳು ಎಂಬ ನಂಬಿಕೆ ಕೂಡ ಇದೆ. ಮೀರಾಬಾಯಿ ತನ್ನ ಜೀವನವನ್ನು ಕೃಷ್ಣನಿಗೆ ಅರ್ಪಿಸಿದಳು, ಭಕ್ತಿಗೀತೆಗಳನ್ನು ರಚಿಸಿದಳು ಮತ್ತು ಭಕ್ತಿ ಚಳುವಳಿಯ ಅವಧಿಯ ಪ್ರಮುಖ ಕವಿ-ಸಂತರಲ್ಲಿ ಪ್ರಮುಖಳಾದಳು.


ಅವಳ ಕೃಷ್ಣ ಭಕ್ತಿ ಮತ್ತು ಪ್ರೇಮಕ್ಕಾಗಿ ಒಂದು ಕಥೆಯನ್ನು ಕೂಡ ಹೇಳುತ್ತಾರೆ, ಬಾಲ್ಯದಲ್ಲೇ ಈಕೆಗೆ ಶ್ರೀಕೃಷ್ಣನಲ್ಲಿ ಮೋಹ ಉಂಟಾಯಿತು. ಒಮ್ಮೆ ಮದುವೆಯ ದಿಬ್ಬಣ ಮನೆಯ ಮುಂದೆ ಹಾದು ಹೋಗುತ್ತಿದ್ದಾಗ ಬಾಲಿಕೆ ಮೀರಾ ತನ್ನ ಅಜ್ಜನನ್ನು ತನಗೆ ಯಾವಾಗ ಮದುವೆ ಎಂದು ಕೇಳಿದಳೆಂದೂ, ಆತ ತಮಾಷೆಗೆ "ನಿನ್ನ ಮದುವೆ ಆಗಲೇ ಶ್ರೀಕೃಷ್ಣನೊಂದಿಗೆ ಕೊಟ್ಟು ಮಾಡಿದ್ದೇವೆ" ಎಂದುದನ್ನೇ ಮೀರಾ ಗಂಭೀರವಾಗಿ ಸ್ವೀಕರಿಸಿದಳೆಂದೂ ಹೇಳುತ್ತಾರೆ.



ಮೀರಾಬಾಯಿಯ ಕೃತಿಗಳು ಭೋಜಪುರಿ ಭಾಷೆಯಲ್ಲಿವೆ. ಈ ಕೃತಿಗಳಲ್ಲಿ ನಮಗೆ ಮುಖ್ಯವಾಗಿ ಕಾಣುವುದು ಶ್ರೀಕೃಷ್ಣನನ್ನು ಕುರಿತು ಅನನ್ಯ ಭಕ್ತಿ ಮತ್ತು ಸಮರ್ಪಣ ಭಾವ. "ಗಿರಿಧರ ಗೋಪಾಲ" ಎಂಬುದು ಅವಳ ಅಂಕಿತ. "ನನಗೆ ಏನಿದ್ದರೂ ಗಿರಿಧರ ಗೋಪಾಲ, ಬೇರಾರೂ ಇಲ್ಲ" ಎಂಬುದು ಅವಳ ಪದಗಳಲ್ಲಿ ವ್ಯಕ್ತವಾಗುವ ಭಾವ. ಮೀರಾಬಾಯಿ ಕುರಿತು ಅನೇಕ ಚಲನಚಿತ್ರಗಳನ್ನು ಭಾರತೀಯ ಭಾಷೆಗಳಲ್ಲಿ ತಯಾರಿಸಲಾಗಿದೆ. 

 


ಮೀರಾಬಾಯಿಯವರ ಹಲವಾರು ಸಂಯೋಜನೆಗಳನ್ನು ಇಂದಿಗೂ  ಸುಪ್ರಸಿದ್ಧ ಭಜನೆಗಳಾಗಿ ಭಾರತದಾದ್ಯಂತ  ಹಾಡುತ್ತಾರೆ.  ಹೆಚ್ಚಾಗಿ ಕೃಷ್ಣನ ಕಡೆಗೆ ಭಕ್ತಿಗೀತೆಗಳಾಗಿ ( ಭಜನೆಗಳು) , ಆದರೂ ಬಹುತೇಕ ಎಲ್ಲವೂ ತಾತ್ವಿಕ ಅರ್ಥವನ್ನು ಹೊಂದಿವೆ.  ಅವರ ಕವಿತೆಗಳು ಕೃಷ್ಣನಿಂದ ಅವರ ಪ್ರೀತಿ, ನಮಸ್ಕಾರ ಮತ್ತು ಬೇರ್ಪಡುವಿಕೆ ಮತ್ತು ಪ್ರಪಂಚದೊಂದಿಗಿನ ಅವರ ಅತೃಪ್ತಿಯನ್ನು ವಿವರಿಸುತ್ತವೆ.  ಇಲ್ಲಿ ಪರಮಾತ್ಮ ಪತಿ ಮತ್ತು ಭಕ್ತ ಸತಿ ಎಂಬ ಭಾವನೆಯ ಹಾಡುಗಳೇ ಪ್ರಮುಖವಾವುದು ಅವರ ಅತ್ಯಂತ ಜನಪ್ರಿಯ ಸಂಯೋಜನೆಗಳಲ್ಲಿ ಒಂದಾದ " ಪಯೋಜಿ ಮೈನೆ ರಾಮ್ ರತನ್ ಧನ್ ಪಾಯೋ " ಗಾಯನಕ್ಕೆ ಅದ್ಭುತವಾಗುವ ಈ ಗೀತೆಗಳಲ್ಲಿ  ರಾಜಸ್ಥಾನಿ ಭಾಷೆಯಲ್ಲಿ ಭಾವಗೀತಾತ್ಮಕ ಪದಗಳು. 


 

ಮೀರಾ ಬಾಯಿಯ ಕಾವ್ಯದಲ್ಲಿ ಆಗಾಗ್ಗೆ ಗಿರ್ಧರ್ ನಾಗರ್ ಎಂಬ ವಿಶೇಷಣವನ್ನು ಬಳಸಿದ್ದಾಳೆ ಮತ್ತು ತನ್ನ ಏಕೈಕ ನಿಜವಾದ ಸಂಗಾತಿಯಾಗಿ ಅವನಿಗೆ ಅವಳ ಸಂಪೂರ್ಣ ಶರಣಾಗತಿಯನ್ನು ಒತ್ತಿಹೇಳುತ್ತದೆ. ಅವರ ಹೃದಯಸ್ಪರ್ಶಿ ಪ್ರತ್ಯೇಕತಾ ಕವಿತೆಗಳು ಅಥವಾ ವಿರಹದಲ್ಲಿ, ಅವರು ಸಾಂದರ್ಭಿಕವಾಗಿ ಕೃಷ್ಣನನ್ನು ನಿರ್ಲಿಪ್ತ ಯೋಗಿ ಅಥವಾ ತ್ಯಾಗಿಯಾಗಿ ಚಿತ್ರಿಸುತ್ತಾರೆ, ಅವರು ಪ್ರೇಮಿಗಳನ್ನು ಮೋಹಿಸುವ ಮೂಲಕ ಅವರನ್ನು ಸಂಕಟದಲ್ಲಿ ಬಿಡುತ್ತಾರೆ. ಈ ಭಾವನಾತ್ಮಕ ತೀವ್ರತೆಯು ಹೆಚ್ಚಾಗಿ ಪ್ರಕೃತಿ ಚಿತ್ರಣಗಳನ್ನು ನೀಡುತ್ತದೆ.


ಮೀರಾಬಾಯಿಯ ಆಕರ್ಷಣೆಯು ಸಾಮಾಜಿಕ ಗಡಿಗಳನ್ನು ಮೀರುತ್ತದೆ, ಆಕೆಯ ರಾಜಮನೆತನದ ದುಃಖದ ಮೂಲಕ ಉನ್ನತ ಜಾತಿಯ ವ್ಯಕ್ತಿಗಳೊಂದಿಗೆ ಮತ್ತು ಆಕೆಯ ಸ್ಥಾನಮಾನವನ್ನು ತ್ಯಜಿಸುವುದನ್ನು ಮತ್ತು ಅಸ್ಪೃಶ್ಯ ಚರ್ಮಕಾರ ರೈದಾಸರನ್ನು ತನ್ನ ಗುರುವಾಗಿ ಆಯ್ಕೆ ಮಾಡಿಕೊಂಡಿರುವುದನ್ನು ಮೆಚ್ಚುವ ಕೆಳಜಾತಿಯ ಗುಂಪುಗಳೊಂದಿಗೆ ಪ್ರತಿಧ್ವನಿಸುತ್ತದೆ. ಪ್ರಾಚೀನ ಬ್ರಜ್‌ನ ಗೋಪಿಯರೊಂದಿಗೆ ಗುರುತಿಸಿಕೊಳ್ಳುವ ಮೂಲಕ, ಅವರು ಬೇಷರತ್ತಾದ ಪ್ರೀತಿಯ ಆಳವನ್ನು ಪ್ರದರ್ಶಿಸಿದರು.


ಮೀರಾಬಾಯಿ ಹಿಂದಿ ಮತ್ತು ರಾಜಸ್ಥಾನಿ ಭಾಷೆಗಳಲ್ಲಿ ಸಾವಿರಾರು ಭಕ್ತಿ ಗೀತೆಗಳು ಮತ್ತು ಕೀರ್ತನೆಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಶ್ರೀಕೃಷ್ಣನ ಮೇಲಿನ ಪ್ರೀತಿ, ಆರಾಧನೆ ಮತ್ತು ಭಕ್ತಿಯ ಪರಾಕಾಷ್ಠೆಯನ್ನು ಕಾಣಬಹುದು. ಮೀರಾ ಭಾಯಿಯ ಗುರುಗಳು ಸಂತ ರವಿದಾಸರು ಇವರು ಆಧ್ಯಾತ್ಮಿಕ ಗುರುಗಳಾಗಿದ್ದರು. ಮೀರಾ ಬಾಯಿಯವರ ಮರಣ ಅವರ 48-49ನೇ ವಯಸ್ಸಿಗೆ ದ್ವಾರಕೆಯಲ್ಲಿ ಆಯಿತು ಎಂದು ಹೇಳುತ್ತಾರೆ.


- ಮಾಧುರಿ ದೇಶಪಾಂಡೆ, ಬೆಂಗಳೂರು


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top