ಮಂಗಳೂರಿನಲ್ಲಿ ಎಸ್.ಡಿ.ಎಂ ಬಿಯಾಂಡ್ ದಿ ಕ್ಲಾಸ್ ವಿಶೇಷ ಸಂವಾದ ಕಾರ್ಯಕ್ರಮ
ಮಂಗಳೂರು: ಕಥೆ, ಚಿತ್ರಕಥೆ, ಸಂಭಾಷಣೆ, ಗೀತ ರಚನೆ, ಸಂಗೀತ ಮತ್ತು ತಾಂತ್ರಿಕತೆ ಸೇರಿದಂತೆ ವಿವಿಧ ವಿಭಾಗಗಳನ್ನು ಸಮರ್ಥವಾಗಿ ಪ್ರತಿನಿಧಿಸಬಲ್ಲ ಪ್ರತಿಭಾನ್ವಿತರ ತಂಡ ಕಟ್ಟಿ ಪೋಷಿಸಿ ದೃಶ್ಯ ಮಾಧ್ಯಮವನ್ನು ಗುಣಾತ್ಮಕವಾಗಿ ಗೆಲ್ಲಿಸುವಂತಹ ನಿರ್ದೇಶಕತ್ವ ಕನ್ನಡ ಸಿನಿಮಾ ರಂಗದಲ್ಲಿ ರೂಪುಗೊಳ್ಳಬೇಕಿದೆ ಎಂದು ಖ್ಯಾತ ಬರಹಗಾರ, ಕನ್ನಡ ಪ್ರಭ ದಿನಪತ್ರಿಕೆಯ ಸಂಪಾದಕರಾದ ಗಿರೀಶ್‌ರಾವ್ ಹತ್ವಾರ್ (ಜೋಗಿ) ಅಭಿಪ್ರಾಯಪಟ್ಟರು.
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಬಿ.ವೋಕ್ ಡಿಜಿಟಲ್ ಮೀಡಿಯಾ ಹಾಗೂ ಫಿಲ್ಮ್ ಮೇಕಿಂಗ್ ವಿಭಾಗ, ಪದವಿ ಪತ್ರಿಕೋದ್ಯಮ ವಿಭಾಗ ಸಹಯೋಗದಲ್ಲಿ ಮಂಗಳೂರಿನ ಎಸ್.ಡಿ.ಎಂ ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ ಸಭಾಂಗಣದಲ್ಲಿ ಎಸ್.ಡಿ.ಎಂ ಸಂವಾದ ಶೀರ್ಷಿಕೆಯಡಿ ಶನಿವಾರ ಆಯೋಜಿತವಾದ ಬಿಯಾಂಡ್ ದಿ ಕ್ಲಾಸ್ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಕನ್ನಡ ಚಿತ್ರರಂಗದಲ್ಲಿ ಪ್ರತಿಭಾನ್ವಿತರಿಗೆ ಕೊರತೆ ಇಲ್ಲ. ಆದರೆ, ಅಂತಹ ಪ್ರತಿಭಾನ್ವಿತರನ್ನು ಸಿನಿಮಾ ಮಾಧ್ಯಮದ ನಿಜವಾದ ಶಕ್ತಿ ವಿಸ್ತರಿಸುವ ಮಹತ್ವದ ಉದ್ದೇಶದೊಂದಿಗೆ ಕಾರ್ಯನಿರ್ವಹಿಸಬಲ್ಲ ನಿರ್ದೇಶಕರ ಕೊರತೆ ಇದೆ. ಹಿಂದಿನ ದಶಕಗಳಲ್ಲಿ ಸಿನಿಮಾ ನಿರ್ದೇಶಕರು ತಾವೇ ಸ್ವತಃ ಚಿತ್ರಕಥೆ ರಚಿಸುತ್ತಿರಲಿಲ್ಲ. ಹಾಡುಗಳನ್ನು ಬರೆಯುತ್ತಿರಲಿಲ್ಲ. ಸಂಭಾಷಣೆಗಳನ್ನು ಹೆಣೆಯುತ್ತಿರಲಿಲ್ಲ. ಈಗ ಸಿನಿಮಾ ಮಾಡಬೇಕೆಂದು ಮುಂದಡಿಯಿಡುವ ನಿರ್ದೇಶಕರನೇಕರು ಸ್ಪಷ್ಟ ಕಥೆಯ ಆಧಾರವಿಲ್ಲದೇ ತಾವೇ ಚಿತ್ರಕಥೆ, ಹಾಡು, ಸಂಭಾಷಣೆ ಬರೆಯಲು ಮುಂದಾಗುತ್ತಿರುವುದರಿಂದ ತಂಡಸ್ಫೂರ್ತಿಯ ಮೂಲಕ ಸಿಗಬಹುದಾದ ಸಿನಿಮಾ ಕಾಣ್ಕೆಗಳು ರೂಪುಗೊಳ್ಳುತ್ತಿಲ್ಲ ಎಂದರು.
ವಿದೇಶಿ ಚಿತ್ರರಂಗ ವಲಯವು ಜಾಗತಿಕ ಮಾರುಕಟ್ಟೆ ದೃಷ್ಟಿಯಲ್ಲಿರಿಸಿಕೊಂಡು ಸಿನಿಮಾ ಬರಹಗಾರರು ಮತ್ತು ತಂತ್ರಜ್ಞರ ತಂಡಗಳನ್ನು ಸಮರ್ಥವಾಗಿ ನಿರ್ವಹಿಸುವಂತಹ ನಿರ್ದೇಶಕತ್ವದ ಆಧಾರದಲ್ಲಿ ಮನ್ನಣೆ ಪಡೆಯುವಲ್ಲಿ ಸಫಲವಾಗಿದೆ. ನೆರೆಯ ಮಲಯಾಳಂ ಚಿತ್ರರಂಗವೂ ಕೂಡಾ ಸಿನಿಮಾ ಬರಹಗಾರರ ತಂಡವನ್ನು ಪೋಷಿಸಿ ನಿಜವಾದ ನಿರ್ದೇಶಕತ್ವದ ಶಕ್ತಿಯನ್ನು ವಿಸ್ತರಿಸುವಂತಹ ಪ್ರಯೋಗಶೀಲತೆಯಲ್ಲಿ ತೊಡಗಿಸಿಕೊಂಡು ಮುನ್ನಡೆ ಕಂಡುಕೊಳ್ಳುತ್ತಿದೆ. ಆದರೆ, ಕನ್ನಡ ಚಿತ್ರರಂಗ ಮಾತ್ರ ಇಂತಹ ತಂಡಸ್ಫೂರ್ತಿಯೊಂದಿಗಿನ ಪ್ರತಿಭಾನ್ವಿತರನ್ನು ಪೋಷಿಸಿ ಪೊರೆಯುವಂತಹ ಸಾಧ್ಯತೆಗಳಿಂದ ದೂರವೇ ಉಳಿದಿದೆ ಎಂದರು.
ಪುಟ್ಟಣ್ಣ ಕಣಗಾಲ್ ಅವರಂತಹ ನಿರ್ದೇಶಕರು ತಾವು ದೃಶ್ಯಮಾಧ್ಯಮದ ಮೂಲಕ ಹೇಳಲಿಚ್ಛಿಸುವ ಕಥೆಯ ಪ್ರಭಾವಳಿ ಹೆಚ್ಚಿಸುವುದಕ್ಕೆ ಉಳಿದ ಪ್ರತಿಭಾನ್ವಿತರ ಕಲಾತ್ಮಕ ಶಕ್ತಿಯನ್ನು ಪೂರಕವಾಗಿಸಿಕೊಂಡರು. ತಮ್ಮ ಕಥೆಯ ವಿನ್ಯಾಸಕ್ಕೆ ಬೇಕಾದ ಹಾಡುಗಳನ್ನು ಬೇರೆಯವರಿಂದ ಬರೆಸಿದರು. ದೃಶ್ಯದ ಅಗತ್ಯಕ್ಕೆ ಅನುಗುಣವಾದ ಸಂಭಾಷಣೆಗಾಗಿ ಸಮರ್ಥ ಬರಹಗಾರರನ್ನು ಅವಲಂಬಿಸಿದರು. ಚಿತ್ರಕಥನದ ಬಿಂಬಗಳಿಗೆ ಜೀವ ತುಂಬುವಂತಹ ಬರಹಗಾರರಿಗೆ ಆದ್ಯತೆ ನೀಡಿದರು. ಆದರೆ, ಅಂಥ ಪ್ರತಿಭಾನ್ವಿತರ ತಂಡದ ನಾಯಕತ್ವದ ಅಸ್ಮಿತೆಯೊಂದಿಗೆ ಗುರುತಿಸಿಕೊಳ್ಳುವ ನಿರ್ದೇಶಕರು ಈಗ ಇಲ್ಲ ಎಂದು ಹೇಳಿದರು.
ಒಂದು ಕಾಲದಲ್ಲಿ ನೀಲಿಸಿನಿಮಾಗಳಿಗಾಗಿಯೇ ಮಲಯಾಳಂ ಚಿತ್ರರಂಗವು ಕುಖ್ಯಾತಿ ಪಡೆದಿತ್ತು. ಅಂತಹ ನೆಗೆಟಿವಿಟಿಯಿಂದ ಅಲ್ಲಿಯ ಸಿನಿಮಾ ರಂಗವನ್ನು ಮೋಹನ್ ಲಾಲ್ ಮತ್ತು ಮುಮ್ಮುಟ್ಟಿ ಇಬ್ಬರೂ ವಿಮುಕ್ತಗೊಳಿಸಿದರು. ಸಿನಿಮಾಕ್ಕಾಗಿಯೇ ಬರೆಯುವಂತಹ ಪ್ರತಿಭಾನ್ವಿತರನ್ನು ಪೋಷಿಸುವ ಸಂಕಲ್ಪಬಲದಲ್ಲಿ ಅವರು ಅಲ್ಲಿಯ ಚಿತ್ರರಂಗವನ್ನು ಆಮೂಲಾಗ್ರವಾಗಿ ಮಾರ್ಪಡಿಸಿದರು. ಇದಕ್ಕೆ ಪೂರಕವಾಗಿಯೇ ಪ್ರತಿಭಾನ್ವಿತರ ಸೃಜನಶೀಲತೆಯನ್ನು ಸಮರ್ಥವಾಗಿ ದುಡಿಸಿಕೊಳ್ಳುವ ನಿರ್ದೇಶಕರು ಅಲ್ಲಿ ಕಾಣಿಸಿಕೊಂಡರು. ಈ ಮಾದರಿಯನ್ನು ಕನ್ನಡ ಚಿತ್ರರಂಗ ಅಳವಡಿಸಿಕೊಂಡು ಹೊಸದೊಂದು ಎತ್ತರ ತಲುಪಿಕೊಳ್ಳುವ ಹಂಬಲದೊಂದಿಗೆ ಗುರುತಿಸಿಕೊಳ್ಳಬೇಕಿದೆ ಎಂದರು.
ಎಲ್ಲಾ ಕಾಲಗಳಲ್ಲಿಯೂ ಕೆಟ್ಟ ಸಿನಿಮಾಗಳು ಬರುತ್ತಲೇ ಇರುತ್ತವೆ. ಅಂಥ ಸಿನಿಮಾಗಳನ್ನು ನೋಡುತ್ತಾ ನೋಡುತ್ತಾ ಅವುಗಳು ಸರಿಯಾಗಿಲ್ಲ ಎನ್ನುವ ನಿಲುವು ಪ್ರೇಕ್ಷಕರಲ್ಲಿ ಒಂದಲ್ಲ ಒಂದು ಸಂದರ್ಭದಲ್ಲಿ ಮೂಡುತ್ತದೆ. ತದನಂತರ ಒಳ್ಳೆಯ ಸಿನಿಮಾಗಳು ಇಷ್ಟವಾಗಲಾರಂಭಿಸುತ್ತವೆ. ನೇರವಾಗಿ ಕೆಟ್ಟದ್ದನ್ನು ಕಾಣಿಸಿ ಕೆಟ್ಟ ಸಿನಿಮಾಗಳ ಹಣೆಪಟ್ಟಿ ಕಟ್ಟಿಕೊಳ್ಳುವಂತಹ ಸಿನಿಮಾಗಳಿಗಿಂತಲೂ ನಿಗೂಢವಾಗಿ ಕೆಟ್ಟದ್ದೇ ಸರಿ ಎನ್ನುವಂತಹ ರೀತಿಯಲ್ಲಿ ಬಿಂಬಿತಗೊಂಡು ಒಳ್ಳೆಯತನದ ಪೋಷಾಕು ತೊಟ್ಟ ಸಿನಿಮಾಗಳು ಅಪಾಯಕಾರಿ ಎಂಬುದನ್ನು ಅರಿತುಕೊಳ್ಳಬೇಕು ಎಂದು ನುಡಿದರು.
ಹೊಸ ತಲೆಮಾರು ಎಲ್ಲದ್ದರ ಮೇಲೂ ಅವಲಂಬಿತವಾಗುತ್ತಿದೆ. ಚಿತ್ರಮಂದಿರಗಳಲ್ಲಿ ಪ್ರದರ್ಶಿತವಾಗುವ ಸಿನಿಮಾಗಳನ್ನು ಇಷ್ಟಪಡುವ ಟ್ರೆಂಡ್ ಬದಲಾಗಿ ಮೊಬೈಲ್‌ವರೆಗೆ ಹರಿದುಬರುವ ಸಿನಿಮಾಗಳನ್ನು ಇಷ್ಟಪಡುವ ಯುವಸಮೂಹ ಹುಟ್ಟಿಕೊಂಡಿದೆ. ಅವರನ್ನು ದೃಷ್ಟಿಯಲ್ಲಿರಿಸಿಕೊಂಡ ಸಿನಿಮಾಗಳು ಓಟಿಟಿ ಪ್ಲಾಟ್‌ಫಾರ್ಮ್ಗಳಲ್ಲಿ ಗೆಲ್ಲುತ್ತಿವೆ. ಕೆಟ್ಟ ಸಿನಿಮಾಗಳಿಗೆ ನೋಡುಗರು ಇರುವಂತೆ ಒಳ್ಳೆಯ ಸಿನಿಮಾಗಳಿಗೂ ವೀಕ್ಷಕ ವರ್ಗ ಇದ್ದೇ ಇರುತ್ತದೆ ಎನ್ನುವುದನ್ನು ಈ ಹೊಸ ವೇದಿಕೆಗಳು ನಿರೂಪಿಸುತ್ತಿವೆ. ನನಗಿಷ್ಟವಾಗುವ ಸಿನಿಮಾ ಸಕಾರಣದೊಂದಿಗೆ ಇರುವಂಥದ್ದು ಎನ್ನುವ ನೆಲೆಯಲ್ಲಿ ಗ್ರಹಿಸಿದರೆ ಮನಸು ಒಳ್ಳೆಯ ಸಿನಿಮಾದ ಕಡೆಗೆ ಹರಿಯುತ್ತದೆ ಎಂದು ಹೇಳಿದರು.
ಆಶಯ ನುಡಿಗಳನಾಡಿದ ಎಸ್.ಡಿ.ಎಂ ಬಿ.ವೋಕ್ ಡಿಜಿಟಲ್ ಮೀಡಿಯಾ ಆ್ಯಂಡ್ ಫಿಲ್ಮ್ ಮೇಕಿಂಗ್ ವಿಭಾಗದ ಮುಖ್ಯಸ್ಥರಾದ ಮಾಧವ ಹೊಳ್ಳ ಅವರು ಸಮೂಹ ಮಾಧ್ಯಮದ ಸದಭಿರುಚಿಯ ಸಾಧ್ಯತೆಗಳನ್ನು ವಿಸ್ತರಿಸುವ ಉದ್ದೇಶದೊಂದಿಗೆ ಬಿಯಾಂಡ್ ದಿ ಕ್ಲಾಸ್ ವಿಶೇಷ ಕಾರ್ಯಕ್ರಮಕ್ಕೆ ಜೋಗಿ ಅವರ ಸಮಕ್ಷಮದಲ್ಲಿ ಚಾಲನೆ ನೀಡಲಾಗಿದೆ ಎಂದರು. ಸಿನಿಮಾ ತಾಂತ್ರಿಕತೆಯ ವ್ಯಾಕರಣವಷ್ಟೇ ಅಲ್ಲದೇ ಅದು ಒಳಗೊಳ್ಳಬಹುದಾದ ಸಕಾರಾತ್ಮಕ ಕಥನ ಮಾದರಿಗಳು ಎಂಥವಿರಬೇಕು ಎನ್ನುವುದನ್ನು ತಮ್ಮ ವಿಮರ್ಶಾತ್ಮಕ ನಿಲುವುಗಳ ಮೂಲಕ ಕಂಡರಿಸಿದವರು ಜೋಗಿ. ಅವರ ಮಾತುಗಳ ಮೂಲಕ ಎಸ್.ಡಿ.ಎಂ ಸಂವಾದದ ಪ್ರಯೋಗಶೀಲತೆ ಶುರುವಾಗಿದೆ ಎಂದು ತಿಳಿಸಿದರು.
ಉಜಿರೆ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕ ವಿರಾಟ್ ಪದ್ಮನಾಭ 'ಸಮೂಹ ಮಾಧ್ಯಮ ಪರಂಪರೆಯಲ್ಲಿ ಜೋಗಿ ಅಸ್ಮಿತೆ' ಕುರಿತು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್‌ಮೆಂಟ್ ಪ್ರಾಂಶುಪಾಲರಾದ ಡಾ.ಭಾನುಪ್ರಕಾಶ್ ಬಿ.ಇ ಅವರು ಜೋಗಿ ಅವರ ಬರಹದೊಳಗಿನ ಸರಳತೆಯ ಶಕ್ತಿ ವಿಶಿಷ್ಠವಾದುದು ಎಂದರು.
ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಕವನ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ಇಂದುಧರ ಕಿಣಿ ವಂದಿಸಿದರು.


