ಕಲಿಯುಗದ ಕಾಯಕಯೋಗಿ: ನಾಗೂರಿನ ನರಗುಂದ ನಿಂಗಪ್ಪ ಶಂಕ್ರಪ್ಪ

Shreya Hegde
0



ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ನಾಗೂರು ಗ್ರಾಮದ ನರಗುಂದ ನಿಂಗಪ್ಪ ಶಂಕ್ರಪ್ಪನವರ ಕುಟುಂಬ ಎಂದರೆ ಸಂಪ್ರದಾಯ, ಸಂಸ್ಕಾರ, ಆಧ್ಯಾತ್ಮ ಹಾಗೂ ಕೃಷಿಯನ್ನೇ ಉಸಿರಾಗಿಸಿಕೊಂಡ ಪ್ರತಿಷ್ಠಿತ ಮನೆತನ. ಇದು ಇಂದಿಗೂ ಆದರ್ಶವಾಗಿ ಬಾಳುತ್ತಿರುವ ಒಂದು ಜಂಟಿ (ಅವಿಭಕ್ತ) ಕುಟುಂಬ.


ಅಕ್ಷರ ದಾಸೋಹ ಮತ್ತು ಮನೆಬಾಗಿಲ ಆಶ್ರಯ:

ನಾವು ಚಿಕ್ಕವರಿದ್ದಾಗ ಇಡೀ ಊರಿನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಮ್ಮ ದೊಡ್ಡ ಮನೆಯನ್ನೇ ಬಿಟ್ಟುಕೊಟ್ಟಿದ್ದರು. ಇಂದು ನಾಗೂರಿನ ಹಲವಾರು ವಿದ್ಯಾರ್ಥಿಗಳು ಜಗತ್ತಿನ ನಾನಾ ದೇಶಗಳಲ್ಲಿ, ದೇಶ-ರಾಜ್ಯದ ವಿವಿಧ ಇಲಾಖೆಗಳಲ್ಲಿ ಸರ್ಕಾರಿ ನೌಕರರಾಗಿ, ಉದ್ಯೋಗಿಗಳಾಗಿ ನೆಲೆಸಿದ್ದಾರೆ ಎಂದರೆ ಅದಕ್ಕೆ ನರಗುಂದ ಕುಟುಂಬದ ಆಶ್ರಯವೇ ಕಾರಣ.


ಹಗಲು-ರಾತ್ರಿ ಎನ್ನದೆ ನಾವು ಅವರ ಮನೆಯಲ್ಲಿ ಓದುತ್ತಿದ್ದೆವು. ವಿದ್ಯುತ್ ಬಿಲ್ ಅನ್ನು ಅವರೇ ಪಾವತಿಸುತ್ತಿದ್ದರು, ಮನೆಯನ್ನು ಸ್ವಚ್ಛಗೊಳಿಸಿ, ನಸುಕಿನಲ್ಲಿಯೇ ನಮ್ಮನ್ನು ಎಬ್ಬಿಸಿ ಓದಿಸುತ್ತಿದ್ದರು. ಒಂದನೇ ತರಗತಿಯಿಂದ ಹಿಡಿದು ಕೆಲಸ ಸಿಗುವವರೆಗೆ ನಮಗೆಲ್ಲ ಆಲದ ಮರದಂತೆ ಆಶ್ರಯ ನೀಡಿದ ಮನೆತನವಿದು.


ಅನ್ನದಾಸೋಹದ ಸಂಸ್ಕೃತಿ:

ನಿಂಗಪ್ಪನವರ ತಾಯಿ ಶ್ರೀಮತಿ ಈರಮ್ಮನವರು ಅಡುಗೆ ಮಾಡಿದರೆ ಅದು ಕೇವಲ ಮನೆಗಷ್ಟೇ ಸೀಮಿತವಾಗಿರಲಿಲ್ಲ. ಓಣಿಯ ಜನರಿಗೆ ಸಾಂಬಾರು, ಮಜ್ಜಿಗೆ ನೀಡುವುದು ಸಾಮಾನ್ಯಂತಿತ್ತು. ಮನೆಗೆ ಯಾರು ಬಂದರೂ "ಬಿಸಿ ರೊಟ್ಟಿ ಉಂಡು ಹೋಗಿ" ಎಂದು ಕರೆಯುವ ಉದಾರತೆ ಅವರದ್ದು. ಈರಮ್ಮ, ಬಸಮ್ಮ, ಹಾಗೂ ನೀಲಮ್ಮ ಅಮ್ಮಂದಿರು ನಮಗೆಲ್ಲ ಬೆಣ್ಣೆ ಉಂಡೆ ಕೊಟ್ಟು ಶಾಲೆಗೆ ಕಳುಹಿಸುತ್ತಿದ್ದರು.


ಇಂದಿಗೂ ಅವರ ಮೂವರು ಪುತ್ರರು (ಚಿದಾನಂದ, ಅಂದಾನಪ್ಪ, ಚಂದಪ್ಪ) ಹಾಗೂ ಸೊಸೆಯಂದಿರು (ನೀಲಗಂಗಮ್ಮ, ರಾಜೇಶ್ವರಿ, ಬಸಮ್ಮ) ಅದೇ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಮನೆಗೆ ಬಂದವರು ಖಾಲಿ ಹೊಟ್ಟೆಯಲ್ಲಿ ಹಿಂತಿರುಗಿದ ಉದಾಹರಣೆಯೇ ಇಲ್ಲ. ಬಡ ಕುಟುಂಬಗಳು ಇವರ ಹೊಲದಲ್ಲಿ ಕೂಲಿ ಮಾಡಿ, ಜೀವನ ನಿರ್ವಹಿಸಿ, ಮಕ್ಕಳನ್ನು ಬೆಳೆಸಿದ ಇತಿಹಾಸವಿದೆ.


ಆಧ್ಯಾತ್ಮಿಕ ಬದುಕು ಮತ್ತು ಗುರುಭಕ್ತಿ:

ಈ ಕುಟುಂಬವು ಹಾಲಕೇರಿ ಅನ್ನದಾನ ಮಹಾಸ್ವಾಮಿಗಳ ಪರಮ ಭಕ್ತ ಮನೆತನ. ಪೂಜ್ಯರು ನಾಗೂರಿಗೆ ಬಂದರೆ ಇವರ ಮನೆಯಲ್ಲಿಯೇ ಲಿಂಗಪೂಜೆ ನೆರವೇರಿಸುವುದು ಇಂದಿಗೂ ನಡೆದುಬಂದ ಪದ್ಧತಿ. ಆಗಿನ ಬೆತ್ತದ ಅನ್ನದಾನ ಮಹಾಸ್ವಾಮಿಗಳಿಂದ ಹಿಡಿದು, ಸಂಗನಬಸವ ಮಹಾಸ್ವಾಮಿಗಳು ಹಾಗೂ ಇಂದಿನ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳವರೆಗೆ ಎಲ್ಲರೂ ನಿಂಗಪ್ಪನವರನ್ನು ಮಾನಸ ಪುತ್ರನಂತೆ ಕಂಡಿದ್ದಾರೆ.


ನಿಂಗಪ್ಪನವರು ದೇವಿಯ ಆರಾಧಕರೂ ಹೌದು. ಪ್ರತಿವರ್ಷ ಮಹಾನವಮಿಯ ಸಂದರ್ಭದಲ್ಲಿ 9 ದಿನಗಳ ಕಾಲ 'ದೇವಿ ಪುರಾಣ' ಪಠಣ ಏರ್ಪಡಿಸಿ, ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ ಪ್ರಸಾದ ವ್ಯವಸ್ಥೆ ಮಾಡುತ್ತಾರೆ.


ಊರಿನ ನ್ಯಾಯಾಧೀಶ ಮತ್ತು ಸಮಾಜ ಸುಧಾರಕ:

ಗ್ರಾಮದಲ್ಲಿ ಅಣ್ಣ-ತಮ್ಮಂದಿರ ಅಥವಾ ಗಂಡ-ಹೆಂಡತಿಯ ಜಗಳವಿದ್ದರೆ ಅದು ನಿಂಗಪ್ಪನವರ ಮನೆಗೇ ಬರುತ್ತಿತ್ತು. ತಂದೆಯಂತೆ ಗದರಿ, ಪ್ರೀತಿಯಿಂದ ಬುದ್ಧಿ ಹೇಳಿ, ಯಾವುದೇ ಪಕ್ಷಪಾತವಿಲ್ಲದೆ ನ್ಯಾಯ ತೀರ್ಮಾನ ಮಾಡುತ್ತಿದ್ದರು. ಅವರ ತೀರ್ಪಿಗೆ ಪೊಲೀಸ್ ಅಥವಾ ನ್ಯಾಯಾಲಯದ ಅಗತ್ಯವೇ ಇರಲಿಲ್ಲ.


30 ವರ್ಷಗಳ ರಾಜಕೀಯ ಪಯಣ ಹಾಗೂ ಸಮಾಜ ಸೇವೆ:

1977 ರಿಂದ ಸುದೀರ್ಘ 30 ವರ್ಷಗಳ ಕಾಲ ಸಾರ್ವಜನಿಕ ಜೀವನದಲ್ಲಿದ್ದ ನಿಂಗಪ್ಪನವರು 1977 ರಿಂದ 1983 ರವರೆಗೆ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ, ಮಂಡಲ ಪಂಚಾಯತ್ ವ್ಯವಸ್ಥೆಯಲ್ಲಿ ಉಪಪ್ರಧಾನರಾಗಿ, ಎರಡು ಬಾರಿ ತಾಲೂಕು ಪಂಚಾಯತಿ ಸದಸ್ಯರಾಗಿ ಹಾಗೂ ಒಮ್ಮೆ ಉಪಾಧ್ಯಕ್ಷರಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ.


ತಮ್ಮ ಅಧಿಕಾರದ ಅವಧಿಯಲ್ಲಿ ಬಡವರಿಗೆ ಉಚಿತ ಮನೆಗಳು, ರಸ್ತೆ, ಚರಂಡಿ, ಕುಡಿಯುವ ನೀರು, ಕಲ್ಯಾಣ ಮಂಟಪ ಹಾಗೂ ಗುಡಿ-ಗೋಪುರಗಳನ್ನು ನಿರ್ಮಿಸಿದರು. ಪ್ರಮುಖವಾಗಿ, ನಾಗೂರು ಗ್ರಾಮದಲ್ಲಿದ್ದ ಸರಾಯಿ ಅಂಗಡಿಯನ್ನು ಬಂದ್ ಮಾಡಿಸಿದ್ದು ಅವರ ಸಾಮಾಜಿಕ ಕಳಕಳಿಗೆ ಹಿಡಿದ ಕನ್ನಡಿ. ತಮ್ಮ ಮಕ್ಕಳ ಮದುವೆಯನ್ನು ಸಾಮೂಹಿಕ ವಿವಾಹವಾಗಿ ನೆರವೇರಿಸಿ ಬಡವರಿಗೆ ಮಾದರಿಯಾದರು.


ಸ್ಥಿತಪ್ರಜ್ಞೆ ಮತ್ತು ಶಿಸ್ತಿನ ಜೀವನ:

ಈಗ 88 ವರ್ಷ ವಯಸ್ಸಾದರೂ ನಿಂಗಪ್ಪನವರು ದಿನವೂ ಬೆಳಿಗ್ಗೆ 3:00 ಗಂಟೆಗೆ ಏಳುತ್ತಾರೆ. ದನಕರುಗಳ ಆರೈಕೆ, ಮನೆಗೆ ನೀರು ತುಂಬಿಸುವುದು, ಹೊಲಕ್ಕೆ ಕಾಲ್ನಡಿಗೆಯಲ್ಲೇ ಹೋಗಿ ಯೋಗಾಭ್ಯಾಸ ಮಾಡುವುದು ಮತ್ತು 2 ಗಂಟೆಗಳ ಕಾಲ ಲಿಂಗಪೂಜೆ ಮಾಡುವುದು ಅವರ ದಿನಚರಿ.


ಒಮ್ಮೆ ತಾಲೂಕು ಪಂಚಾಯತಿ ಚುನಾವಣೆಯಲ್ಲಿ ಭಾರಿ ಬಹುಮತದಿಂದ ಗೆದ್ದಾಗ ಸಂಭ್ರಮಿಸದೆ, ತಮ್ಮ ನಿತ್ಯದ ತ್ರಿಕಾಲ ಲಿಂಗಪೂಜೆಯಲ್ಲಿ ನಿರತರಾಗಿದ್ದನ್ನು ಕಂಡು ಮುಖಂಡ ಶಿವಸಂಗಪ್ಪನವರೇ ಆಶ್ಚರ್ಯಚಕಿತರಾಗಿದ್ದರು. ತಾಯಿ ತೀರಿಕೊಂಡಾಗಲೂ ಧೀರರಾಗಿ ನಿಂತ ಅವರ ಸ್ಥಿತಪ್ರಜ್ಞತೆ, ಯೋಗಾಭ್ಯಾಸದಿಂದ ಸಿದ್ಧಿಸಿದ ಮನೋಭಾವಕ್ಕೆ ಸಾಕ್ಷಿ.


ಸಾಧನೆಯ ಹಿಂದಿನ ಶಕ್ತಿ:

ನಿಂಗಪ್ಪನವರ ಈ ಸುದೀರ್ಘ ಸಾಧನೆಯ ಹಿಂದೆ ಅವರ ಧರ್ಮಪತ್ನಿ ಶ್ರೀಮತಿ ನೀಲಮ್ಮನವರ ತಾಳ್ಮೆ ಮತ್ತು ತ್ಯಾಗ ದೊಡ್ಡದಾಗಿದೆ. ಮುದ್ದೇಬಿಹಾಳ ತಾಲೂಕಿನ ಅಮರಗೋಳ ಗ್ರಾಮದ ಶ್ರೀಮಂತ ಮನೆತನದಿಂದ ಬಂದವರಾಗಿದ್ದರೂ, ಪತಿ ರಾಜಕೀಯದ ಉನ್ನತ ಹಂತದಲ್ಲಿದ್ದಾಗಲೂ ಯಾವುದೇ ಅಹಂ ಇಲ್ಲದೆ ಹೊಲದ ಕೆಲಸ, ಕಳೆ ಕೀಳುವುದು, ಸಗಣಿ ಬಳಿಯುವ ಕಾಯಕವನ್ನು ಪ್ರೀತಿಯಿಂದ ಮಾಡಿದರು.


ಕಾಯಕ, ಭಕ್ತಿ ಮತ್ತು ಸರಳತೆಯನ್ನೇ ಉಸಿರಾಗಿಸಿಕೊಂಡ ನರಗುಂದ ನಿಂಗಪ್ಪ ಶಂಕ್ರಪ್ಪನವರ ಬದುಕು ನಿಜಕ್ಕೂ ಇಂದಿನ ತಲೆಮಾರಿಗೆ ಸ್ಪೂರ್ತಿದಾಯಕ.


- ಅಂದಾನಯ್ಯ ವಸ್ತ್ರದ, ನಾಗೂರ

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top