ಕಾನೂನು ಶಿಕ್ಷಣದಿಂದ ಸಮಾಜ ಸುಧಾರಣೆ: ಶಿವಪ್ರಸಾದ್ ಶೆಟ್ಟಿ
ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ 2026-27ನೇ ಸಾಲಿನ ಪ್ರಥಮ ಬಿ.ಎ.ಎಲ್ಎಲ್.ಬಿ. ಹಾಗೂ ಪ್ರಥಮ ಬಿ.ಬಿ.ಎ.ಎಲ್ ಎಲ್ ಬಿ ವಿದ್ಯಾರ್ಥಿಗಳಿಗೆ ಐದು ದಿನಗಳ ಓರಿಯಂಟೇಶನ್ ಕಾರ್ಯಕ್ರಮ 'ಜ್ಯೋತಿರ್ಗಮಯಕ್ಕೆ ಚಾಲನೆ ನೀಡಲಾಯಿತು.
ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷರಾದ ಎಂ. ಶಿವಪ್ರಸಾದ್ ಶೆಟ್ಟಿ ಯವರು ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಕಾನೂನು ಶಿಕ್ಷಣವು ಕೇವಲ ವಕೀಲರನ್ನು ಅಥವಾ ನ್ಯಾಯಾಧೀಶರನ್ನು ಸೃಷ್ಟಿಸುವ ಪ್ರಕ್ರಿಯೆಯಲ್ಲ. ಅದು ಇಡೀ ಸಮಾಜವನ್ನು ಸುಧಾರಿಸುವ ಮತ್ತು ಪ್ರಗತಿಯತ್ತ ಮುನ್ನಡೆಸುವ ಒಂದು ಶಕ್ತಿಶಾಲಿ ಮಾಧ್ಯಮವಾಗಿದೆ. "ಕಾನೂನು ಸಾಮಾಜಿಕ ಬದಲಾವಣೆಯ ಸಾಧನ" ಎಂಬ ಮಾತಿನಂತೆ, ಕಾನೂನು ಶಿಕ್ಷಣವು ಸಮಾಜದಲ್ಲಿ ಸಮಾನತೆ, ನ್ಯಾಯ ಮತ್ತು ಶಾಂತಿಯನ್ನು ಸ್ಥಾಪಿಸಲು ಮಹತ್ವದ ಪಾತ್ರ ವಹಿಸುತ್ತದೆ ಎಂದರು. ಅಂತಹ ಕಾನೂನು ಅಭ್ಯಾಸಕ್ಕಾಗಿ ವಿವೇಕಾನಂದ ಕಾನೂನು ಮಹಾವಿದ್ಯಾಲಯವನ್ನು ಆಯ್ಕೆ ಮಾಡಿಕೊಂಡ ನೀವು, ಇಲ್ಲಿ ಕಾನೂನು ವಿದ್ಯೆಯ ಜೊತೆಗೆ ಮೌಲ್ಯಗಳನ್ನು ಕಲಿತು ಸಮಾಜದ ಆಸ್ತಿಗಳಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುರೇಂದ್ರ ಕಿಣಿ ಜಿ. ಮಾತನಾಡಿ, ವಿದ್ಯೆಯೊಂದಿಗೆ ಸಂಸ್ಕಾರ ಇದ್ದರೇ ಮಾತ್ರ ವಿದ್ಯಾವಂತನಿಗೆ ಸಮಾಜದಲ್ಲಿ ಬೆಲೆ ಇರುತ್ತದೆ. ಬಲಿಷ್ಠವಾದ ವಿದ್ಯಾರ್ಥಿ ಸಮೂಹವನ್ನು ಸಮಾಜಕ್ಕೆ ಬೇಕಾದ ರೀತಿಯಲ್ಲಿ ಸಂಸ್ಕಾರವಂತರನ್ನಾಗಿ ರೂಪಿಸುವ ಕೆಲಸವನ್ನು ಹಾಗೂ ಗುಣಮಟ್ಟದ ಸಂಸ್ಕಾರಯುತ ಕಾನೂನು ಶಿಕ್ಷಣ ನೀಡುವ ಗುರಿಯನ್ನು ವಿವೇಕಾನಂದ ಕಾನೂನು ಮಹಾವಿದ್ಯಾಲಯ ಇಟ್ಟುಕೊಂಡು ಅದಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು. ಅಂತಹ ವಿದ್ಯಾಸಂಸ್ಥೆಯನ್ನು ಆಯ್ದುಕೊಂಡಿರುವ ನೀವು, ಇಲ್ಲಿರುವ ಎಲ್ಲಾ ಉತ್ತಮ ಅಂಶಗಳನ್ನು ಪಡೆದುಕೊಂಡು ಭವಿಷ್ಯದಲ್ಲಿ ಉತ್ತಮ ವೃತ್ತಿಪರರಾಗಲು ನಿಮ್ಮ ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಬದ್ಧತೆ, ಸಮರ್ಪಣೆ ಮತ್ತು ಪರಿಶ್ರಮವನ್ನು ಮೈಗೂಡಿಸಿಕೊಳ್ಳಿ ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಗೌರವ ಉಪಸ್ಥಿತರಿದ್ದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ಅಧ್ಯಯನ ವಿಭಾಗದ ನಿರ್ದೇಶಕ ಡಾ.ಬಿ.ಕೆ.ರವೀಂದ್ರ ಮಾತನಾಡಿ, ಕಾನೂನು ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಯುಗದ ಸವಾಲುಗಳನ್ನು ಎದುರಿಸಲು ಬೇಕಾದ ಎಲ್ಲಾ ರೀತಿಯ ಸೌಕರ್ಯಗಳನ್ನು ನಿಮಗೆ ಒದಗಿಸಲಾಗುತ್ತಿದೆ. ನೀವು ಮುಂದಿನ ಐದು ವರ್ಷಗಳ ಕಾಲ ಇಲ್ಲಿಗೆ ನಿಮ್ಮನ್ನು ಸಮರ್ಪಿಸಿಕೊಂಡು ವಿದ್ಯಾಭ್ಯಾಸ ಮಾಡಿದರೆ ಖಂಡಿತ ಅದ್ಭುತ ಭವಿಷ್ಯ ನಿಮ್ಮದಾಗಲಿದೆ ಎಂದರು.
ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾರಾದ ಡಾ. ಅಕ್ಷತಾ ಎ.ಪಿ. ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಲಕ್ಷ್ಮೀಕಾಂತ ರೈ ಅನಿಕೂಟೇಲ್ ವಂದಿಸಿದರು. ವಿದ್ಯಾರ್ಥಿನಿ ವರ್ಷಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉದ್ಘಾಟನಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಗೆ ವಿಶೇಷ ಮಾರ್ಗದರ್ಶಕ ತರಗತಿಗಳನ್ನು ನಡೆಸಲಾಯಿತು. ಮೊದಲ ಅವಧಿಯಲ್ಲಿ ಪುತ್ತೂರಿನ ಖ್ಯಾತ ನ್ಯಾಯವಾದಿ ಹಾಗೂ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿ ಸೂರ್ಯನಾರಾಯಣ ಎನ್.ಕೆ. 'ನ್ಯಾಯ ಎತ್ತಿಹಿಡಿಯುವಲ್ಲಿ ಕಾನೂನು ವೃತ್ತಿಯ ಪಾತ್ರ' ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಅದೇ ರೀತಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಗಿರೀಶ್ ಕೆ.ಸಿ. ಯವರು 'ಕಾನೂನು ಶಿಕ್ಷಣದಲ್ಲಿ ಉತ್ಕೃಷ್ಟತೆಯನ್ನು ಸಾಧಿಸುವ ವಿಧಾನಗಳು' ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಅದೇ ರೀತಿ ಮುಂದಿನ ನಾಲ್ಕು ದಿನಗಳ ಕಾಲ ವಿವಿಧ ವಿಷಯಗಳಿಗೆ ಸಂಬಂಧಿಸಿದ 10 ವಿಶೇಷ ಗೋಷ್ಠಿಗಳು ನಡೆಯಲಿದೆ.
