ಮೊನ್ನೆ ನನ್ನ ಆಪ್ತರೊಬ್ಬರಿಗೆ ಕರೆ ಮಾಡಿದ್ದೆ. ಅವರು ಪಟ್ಟಣದಲ್ಲಿ ಸರ್ಕಾರಿ ನೌಕರಿಯಿಂದ ನಿವೃತ್ತರಾದವರು. ಅವರಿಗೆ ಇಪ್ಪತ್ತು ವರ್ಷದ ಏಕಮಾತ್ರ ಪುತ್ರಿ. ಅವಳೀಗ ವಿದ್ಯಾಭ್ಯಾಸದ ಕೊನೆಯ ಹಂತದಲ್ಲಿದ್ದು, ಮೈಸೂರಿನ ಪಿಜಿ (PG) ಒಂದರಲ್ಲಿ ತಂಗಿ ಓದುತ್ತಿದ್ದಾಳೆ. ಆ ಆಪ್ತರ ದೊಡ್ಡ ಗೋಳೆಂದರೆ- ಮಗಳು ಮದುವೆಯೇ ಬೇಡ ಅನ್ನುತ್ತಿದ್ದಾಳೆ!
"ನಮಗಿರುವುದು ಒಬ್ಬಳೇ ಮಗಳು. ಮದುವೆಯಾಗಿ ಬಹಳ ವರ್ಷಗಳ ನಂತರ ಹುಟ್ಟಿದವಳು. ಈಗ ನಾವಿಬ್ಬರೂ (ಗಂಡ-ಹೆಂಡತಿ) ಹೃದಯಾಘಾತಕ್ಕೆ ಒಳಗಾಗಿ ಸ್ಟೆಂಟ್ ಹಾಕಿಸಿಕೊಂಡಿದ್ದೇವೆ. ಈ ಭೂಮಿ ಮೇಲಿನ ನಮ್ಮ ಋಣ ಯಾವಾಗ ಮುಗಿಯುತ್ತೋ ಗೊತ್ತಿಲ್ಲ. ನಾವು ಕಣ್ಣು ಮುಚ್ಚುವುದರೊಳಗೆ ಅವಳಿಗೆ ಮದುವೆ ಮಾಡಿ ನಮ್ಮ ಜವಾಬ್ದಾರಿ ಪೂರೈಸಬೇಕು ಎಂಬ ಆಸೆ. ಆದರೆ ಈ ಹುಡುಗಿ ಮದುವೆಯ ಸುದ್ದಿ ಎತ್ತಬೇಡಿ ಅಂತಿದ್ದಾಳೆ! ಮೊನ್ನೆ ನನ್ನ ಅಕ್ಕ ಮನೆಗೆ ಬಂದಿದ್ದಾಗ, ಅವಳ ಹತ್ತಿರ ಮಗಳಿಗೆ ತಿಳಿಹೇಳಿ ಕನ್ವಿನ್ಸ್ ಮಾಡಿಸೋಣ ಅಂತ ಮದುವೆ ವಿಷಯ ಎತ್ತಿದೆವು. ಅದಕ್ಕೆ ಮಗಳು, 'ಅತ್ತೆ, ನೀವು ನಮ್ಮ ಮನೆಗೆ ಬನ್ನಿ, ಇರಿ... ಆದರೆ ನನಗೆ ಮದುವೆ ಆಗು ಅಂತ ಒತ್ತಾಯ ಮಾಡುವುದಾದರೆ ನಮ್ಮ ಮನೆಗೆ ನೀವು ಬರುವುದೇ ಬೇಡ!' ಎಂದುಬಿಟ್ಟಳು. ಅಕ್ಕ ಬೇಜಾರು ಮಾಡಿಕೊಂಡು ಹೊರಟುಹೋದಳು..." ಎಂದು ತಮ್ಮ ಮಗಳ ಬಗ್ಗೆ ಅಳಲು ತೋಡಿಕೊಂಡರು.
ಇದು ಕೇವಲ ಒಬ್ಬಿಬ್ಬರ ಕಥೆಯಲ್ಲ; ಇಂದಿನ ಹಲವಾರು ಹೆಣ್ಣುಮಕ್ಕಳದ್ದು ಇದೇ ನಿಲುವು.
ಇಂದಿನ ಬಹುತೇಕ ಹುಡುಗಿಯರ ಇಡೀ 20-25 ವರ್ಷಗಳ ಕಾಲ ಕೇವಲ ಓದು ಮತ್ತು ನೌಕರಿಯ ಬೆನ್ನತ್ತಿಯೇ ಕಳೆದುಹೋಗಿರುತ್ತದೆ. ಪೋಷಕರೂ ಸಹ ಅವರನ್ನು ಕೇವಲ ಓದು, ಪರೀಕ್ಷೆ, ರ್ಯಾಂಕ್ ಗಳಿಸುವುದಕ್ಕಷ್ಟೇ ಕೇಂದ್ರಿಕರಿಸಿ ಬೆಳೆಸಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ನೀವು ಯಾವುದೇ ಸಭೆ-ಸಮಾರಂಭಗಳನ್ನು ಗಮನಿಸಿ ನೋಡಿ; ಮನೆಯ ಕಾರ್ಯಕ್ರಮಗಳಿದ್ದರೂ ಮಕ್ಕಳು ಅಥವಾ ಯುವಜನರು ಭಾಗವಹಿಸುವುದೇ ಇಲ್ಲ. ಎಲ್ಲ ಮಕ್ಕಳ ಶೈಕ್ಷಣಿಕ ಜೀವನವೂ ಓದು, ಪರೀಕ್ಷೆ, ಟ್ಯೂಷನ್, ಕೋಚಿಂಗ್ ಕ್ಲಾಸ್‌ಗಳಲ್ಲೇ ಮುಳುಗಿಹೋಗಿರುತ್ತದೆ. ಪೋಷಕರು "ಓದು-ಪರೀಕ್ಷೆಯೇ ಜೀವನದ ಅತ್ಯಂತಿಕ ಗುರಿ" ಎಂದು ಬಿಂಬಿಸಿದ ದುಷ್ಪರಿಣಾಮವೇನೆಂದರೆ- ಕೊನೆಗೆ ತಂದೆ-ತಾಯಿ ತೀರಿಕೊಂಡರೂ ಬಾರದ ಅಥವಾ ಬರುವ ಮನಸ್ಸು ಮಾಡದ ಸ್ಥಿತಿಗೆ ಮಕ್ಕಳು ತಲುಪುತ್ತಿದ್ದಾರೆ!
ಸಾಕಷ್ಟು ತಂದೆ-ತಾಯಿಗಳು ತಮ್ಮ ಮಕ್ಕಳನ್ನು ತಮಗೆ ಬೇಕಾದ ಶೇಪ್‌ಗೆ 'ಮೌಲ್ಡ್' ಮಾಡಿ ತಯಾರಿಸುವ ಮೂರ್ತಿಗಳೆಂದು ಭಾವಿಸಿ, ತಮ್ಮ ಇಡೀ ಜೀವನವನ್ನೇ ಧಾರೆ ಎರೆಯುತ್ತಾರೆ. ಕೊನೆಗೆ ಮಕ್ಕಳು 'ಏನೋ' ಆಗಿ ಬೆಳೆಯುತ್ತಾರೆ, ಆದರೆ ತಂದೆ-ತಾಯಿಗಳಿಗೆ ಮಾತ್ರ ಅವರಿಂದ ಯಾವುದೇ ಪ್ರಯೋಜನ ಸಿಗುವುದಿಲ್ಲ! ಕೊನೆಗೆ ಹೆತ್ತವರಿಗೆ ವೃದ್ಧಾಶ್ರಮದ ದಾರಿ ತೋರಿಸುವುದೇ ಇಂತಹ ಮಕ್ಕಳು. ಮಕ್ಕಳು ಗಾಳಿಪಟವಾದರೆ, ಪೋಷಕರು ಆ ಗಾಳಿಪಟದ ದಾರ ಹಿಡಿದ ಸೂತ್ರಧಾರರು. ಆದರೆ, ಇಂದಿನ ದಿನಗಳಲ್ಲಿ ಮಕ್ಕಳು ಎತ್ತರಕ್ಕೆ ಹಾರಿದ ಮೇಲೆ ಆ ಸೂತ್ರಧಾರನ ಜೊತೆಗಿನ ಕೊಂಡಿಯೇ ತುಂಡಾಗುತ್ತಿರುವುದು ದೊಡ್ಡ ವಿಪರ್ಯಾಸ.
ನಮ್ಮ ಪೋಷಕರು ಮಕ್ಕಳಿಗೆ ಓದಿನ ಹೊರತು ಬೇರೆ ಪ್ರಪಂಚವನ್ನೇ ಪರಿಚಯಿಸಿರುವುದಿಲ್ಲ. 25 ವರ್ಷಗಳ ಕಾಲ ಬರೀ ಪುಸ್ತಕದ ಮುಖವನ್ನೇ ನೋಡಿದ ಪರಿಣಾಮ, ಅವರಿಗೆ ಕನಿಷ್ಠ ಲೌಕಿಕ ಚಟುವಟಿಕೆಗಳು ಗೊತ್ತಿರುವುದಿಲ್ಲ. ಇಂದಿನ ಅನೇಕ ಮಕ್ಕಳಿಗೆ ಕಾಫಿ-ಟೀ ಮಾಡುವುದಿರಲಿ, ಅನ್ನ ಬೇಯಿಸುವುದಕ್ಕೂ ಬರುವುದಿಲ್ಲ! "ನನ್ನ ಮಗಳಿಗೆ ಅಡುಗೆಯೇ ಬರುವುದಿಲ್ಲ" ಎಂದು ಅನೇಕ ಪೋಷಕರು ಹೆಮ್ಮೆಯಿಂದ ಹೇಳಿಕೊಳ್ಳುವುದನ್ನು ನಾನು ನೋಡಿದ್ದೇನೆ. ಕೇವಲ 25-30 ವರ್ಷಗಳ ಹಿಂದೆ ಎಷ್ಟೇ ಶ್ರೀಮಂತರ ಮನೆಯ ಮಕ್ಕಳಾಗಿದ್ದರೂ, ಅವರಿಗೆ ಮನೆಯಲ್ಲೇ ಅಡುಗೆ, ಕಾಫಿ-ಟೀ ಮಾಡುವುದನ್ನು ಕಲಿಸುತ್ತಿದ್ದರು. ಆದರೆ ಇಂದಿನ ಪೋಷಕರು ತಮ್ಮ ಹೆಣ್ಣುಮಕ್ಕಳಿಗೆ- ಅನ್ನ ಮಾಡಲು ಬರುವುದಿಲ್ಲ, ಕಾಫಿ-ಟೀ ಮಾಡಲು ಬರುವುದಿಲ್ಲ, ಸಾರು-ಸಾಂಬಾರು ಮಾಡಲು ಬರುವುದಿಲ್ಲ; ಮನೆ ಗುಡಿಸಲು, ನೆಲ ಒರೆಸಲು, ಪಾತ್ರೆ ತೊಳೆಯಲು, ಬಟ್ಟೆ ಒಗೆಯಲು (ಅೇಕೆ, ವಾಷಿಂಗ್ ಮೆಷಿನ್‌ಗೆ ಹಾಕಿ ತೆಗೆಯಲೂ!), ರಂಗೋಲಿ ಹಾಕಲು, ಸೀರೆ ಉಡಲು ಬರುವುದಿಲ್ಲ; ಹಬ್ಬ-ಹರಿದಿನಗಳು ಗೊತ್ತಿಲ್ಲ, ಸಂಪ್ರದಾಯ ಗೊತ್ತಿಲ್ಲ, ನೆಂಟರಿಷ್ಟರ ಸಂಪರ್ಕವೂ ಇಲ್ಲ... ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ!
ನನ್ನ ಇನ್ನೊಬ್ಬರು ಆತ್ಮೀಯರ ಮಗಳು ವಿದೇಶದಲ್ಲಿದ್ದಾಳೆ. ಅವಳಿಗೀಗ 36 ವರ್ಷ. ಅವಳ ತಾಯಿ ಮಗಳ ಮದುವೆಗಾಗಿ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ವಯಸ್ಸು ಮೀರುತ್ತಿದ್ದರೂ ಮದುವೆ ನಿಶ್ಚಯವಾಗುತ್ತಿಲ್ಲ. ಹುಡುಗಿ 'ವೆಲ್ ಸೆಟ್ಲ್ಡ್' ಆಗಿರುವುದರಿಂದ ಸಾಲು ಸಾಲು ಸಂಬಂಧಗಳು ಬರುತ್ತಿವೆ, ಆದರೆ ಯಾವ ಹುಡುಗನನ್ನೂ ಈಕೆ ಫೈನಲ್ ಮಾಡುತ್ತಿಲ್ಲ. ಕೆಲವು ಸಂಬಂಧಗಳು ಇನ್ನೇನು ನಿಶ್ಚಯವಾಯಿತು ಎನ್ನುವಷ್ಟರಲ್ಲಿ, "ನಾನು ಮಗು ಹೆರುವುದಿಲ್ಲ" ಎನ್ನುವ ಷರತ್ತು ಹಾಕುತ್ತಾಳೆ! ಮಗು ಮಾಡಿಕೊಳ್ಳಲು ಸಿದ್ಧವಿಲ್ಲ ಎಂದು ಹುಡುಗಿ ಹೇಳಿದ ತಕ್ಷಣವೇ ಹುಡುಗರು ಮದುವೆ ಕ್ಯಾನ್ಸಲ್ ಮಾಡುತ್ತಿದ್ದಾರೆ.
ಯಾಕೆ ನಮ್ಮ ಹೆಣ್ಣುಮಕ್ಕಳು ಮದುವೆಯಿಂದ ದೂರ ಓಡುತ್ತಿದ್ದಾರೆ?
ತುಂಬಾ ವಿಷಾದನೀಯ ಸಂಗತಿಯೆಂದರೆ, ಇಂದಿನ ಬಹಳಷ್ಟು ಹೆಣ್ಣುಮಕ್ಕಳು 'ಮದುವೆ' ಮತ್ತು 'ಸಂಸಾರ' ಎಂದರೆ ಭಯಪಡುತ್ತಿದ್ದಾರೆ. ಮುಂಚೆಯೆಲ್ಲ ಕೂಡುಕುಟುಂಬಗಳಲ್ಲಿ ಎಲ್ಲ ವಯಸ್ಸಿನ ಸದಸ್ಯರ ಜೊತೆಗೂಡಿ ಬಾಳುವ ಅಭ್ಯಾಸವಿರುತ್ತಿತ್ತು. ಆದರೆ ಇಂದಿನ ಮೈಕ್ರೋ (ನ್ಯೂಕ್ಲಿಯರ್) ಫ್ಯಾಮಿಲಿಗಳಲ್ಲಿ ಹಿರಿಯರೆಂದರೆ ಕೇವಲ ಅಪ್ಪ-ಅಮ್ಮ ಮಾತ್ರ. ಅವರನ್ನು ಬಿಟ್ಟರೆ ಶಾಲೆ-ಕಾಲೇಜುಗಳಲ್ಲಿನ ಅಧ್ಯಾಪಕರ ಜೊತೆಗಿನ ಅಲ್ಪ ಒಡನಾಟ, ಉಳಿದಂತೆ ಸಮವಯಸ್ಕರ ಸಂಗ ಅಷ್ಟೇ.
ಮನೆಗೆ ಯಾರಾದರೂ ನೆಂಟರು ಬಂದ ತಕ್ಷಣ ಈ ಮಕ್ಕಳು ಕೋಣೆಯೊಳಗೆ ಹೋಗಿ ಬಾಗಿಲು ಹಾಕಿಕೊಳ್ಳುತ್ತಾರೆ. ಪೋಷಕರು ಸಹ ತಮ್ಮ ಹೆಣ್ಣುಮಕ್ಕಳಿಗೆ "ಅತ್ತೆ-ಮಾವ ಇಲ್ಲದ ಮನೆ"ಯನ್ನೇ ಮದುವೆಗೆ ಹುಡುಕುತ್ತಾರೆ! ಹೆಣ್ಣುಮಕ್ಕಳು ತಮ್ಮ ಸಮವಯಸ್ಸಿನ ಅಥವಾ ಕೇವಲ 1-2 ವರ್ಷ ಗ್ಯಾಪ್ ಇರುವ ಹುಡುಗರನ್ನೇ ಆಯ್ಕೆ ಮಾಡಿಕೊಳ್ಳಲು ಇದೇ ಮುಖ್ಯ ಕಾರಣ- ಅವರಿಗೆ ತಮಗಿಂತ ಭಿನ್ನ ವಯಸ್ಸಿನ ಜನರ ಜೊತೆ ಬೆರೆತು ಅಭ್ಯಾಸವೇ ಇರುವುದಿಲ್ಲ! 'ವೇವ್ ಲೆಂತ್' ಎನ್ನುವ ನೆಪದ ಹಿಂದೆ ಇರುವ ನೈಜ ಕಾರಣವಿದು.
ಇನ್ನು ಹೆಣ್ಣುಮಕ್ಕಳ ಮುಟ್ಟಿನ (ತಿಂಗಳ ರಜೆ) ವಿಚಾರದಲ್ಲಿ ತಾಯಂದಿರ ಮಾರ್ಗದರ್ಶನ ಮತ್ತು ಬೆಂಬಲ ಸದಾ ಬೇಕಿರುತ್ತದೆ. ಆದರೆ ಬಹಳಷ್ಟು ಹೆಣ್ಣುಮಕ್ಕಳು ಓದಿನ ಕಾರಣಕ್ಕೆ ತಾಯಂದಿರಿಂದ ದೂರವಿರುವುದರಿಂದ, ಈ ವಿಷಯದಲ್ಲಿ ದೈಹಿಕ ಹಾಗೂ ಮಾನಸಿಕವಾಗಿ ತೀವ್ರ ಕಷ್ಟ ಅನುಭವಿಸುತ್ತಿದ್ದಾರೆ. ಅಪೌಷ್ಟಿಕತೆ ಮತ್ತು ಬದುಕಿನ ಶೈಲಿಯಿಂದಾಗಿ ಹಾರ್ಮೋನ್ ಏರುಪೇರು ಉಂಟಾಗಿ, ಸರಿಯಾದ ಸಮಯಕ್ಕೆ ಮುಟ್ಟಾಗುವುದಿಲ್ಲ. ಈ ಸಮಸ್ಯೆಯನ್ನು ಹೇಗೆ ಎದುರಿಸಬೇಕೆಂದು ತಿಳಿಯದೇ, ಸರಿಯಾದ ನಿರ್ವಹಣೆ ಇಲ್ಲದೆ ಕೊನೆಗೆ ತಮ್ಮ ಅಮೂಲ್ಯ ಅಂಗವಾದ ಗರ್ಭಕೋಶಕ್ಕೇ ಹಾನಿ ಮಾಡಿಕೊಳ್ಳುತ್ತಿದ್ದಾರೆ. ಮದುವೆಯಾದ ಮೇಲೆಯೂ ಮಕ್ಕಳಾಗದಿರಲು ಇದೇ ಮುಖ್ಯ ಕಾರಣ.
ನೀವು ಯಾವುದಾದರೂ 'ಫರ್ಟಿಲಿಟಿ / ಐವಿಎಫ್ (IVF) ಸೆಂಟರ್'ಗೆ ಹೋಗಿ ನೋಡಿದರೆ, ಅಲ್ಲಿ ಚಿಕಿತ್ಸೆಗೆ ಬಂದಿರುವ ಎಳೆ ವಯಸ್ಸಿನ ಜೋಡಿಗಳನ್ನು ನೋಡಿ ತೀವ್ರ ಆತಂಕವಾಗುತ್ತದೆ! ದಿನಕಳೆದಂತೆ ಸಂತಾನಹೀನ ಕುಟುಂಬಗಳ ಸಂಖ್ಯೆ ಹೆಚ್ಚುತ್ತಿದೆ. ಸರಿಯಾದ ಆಹಾರ ಮತ್ತು ನಿದ್ರೆಯ ಅಭಾವದಿಂದ ಗಂಡು-ಹೆಣ್ಣು ಇಬ್ಬರಲ್ಲೂ ವೀರ್ಯಾಣು ಮತ್ತು ಅಂಡಾಣುಗಳ ಗುಣಮಟ್ಟ ತೀರಾ ಕುಸಿಯುತ್ತಿದೆ. ವಿವಾಹಪೂರ್ವದಲ್ಲೇ ಯುವಪೀಳಿಗೆಗೆ- ಲೈಂಗಿಕ ಆಸಕ್ತಿ ಮತ್ತು ಸಾಮರ್ಥ್ಯದ ಕೊರತೆ, ಮಕ್ಕಳಾಗುವ ಬಗ್ಗೆ ಅನುಮಾನ, ಗರ್ಭಧಾರಣೆ ಹಾಗೂ ಹೆರಿಗೆಯ ಭಯ, ಮಗುವಿಗೆ ಹಾಲುಣಿಸಿ ಬೆಳೆಸಲು ನಾವು ಅಸಮರ್ಥರೇನೋ ಎನ್ನುವ ಭೀತಿ- ಇವೆಲ್ಲವೂ ಸೇರಿ ಕೊನೆಗೆ "ಈ ಮದುವೆ ಸಹವಾಸವೇ ಬೇಡ" ಎನ್ನುವ ನಿರ್ಧಾರಕ್ಕೆ ತಳ್ಳುತ್ತಿವೆ.
ಇವತ್ತಿನ ಮಕ್ಕಳು ದೈಹಿಕವಾಗಿ ಬೆಳೆದಿದ್ದರೂ, ಮಾನಸಿಕವಾಗಿ ಮತ್ತು ಮೊಬೈಲ್‌ನಂತಹ ತಂತ್ರಜ್ಞಾನದ ಪ್ರಭಾವದಿಂದಾಗಿ ಬಾಲ್ಯದಲ್ಲೇ ತಮ್ಮ ಮುಗ್ಧತೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಎರಡು ದಶಕಗಳ ಹಿಂದೆ 14 ವರ್ಷಗಳವರೆಗೂ ಇರುತ್ತಿದ್ದ ಬಾಲ್ಯ, ಇವತ್ತು 6-7 ವರ್ಷಗಳಿಗೇ ಮುಗಿದುಹೋಗುತ್ತಿದೆ! ಮಕ್ಕಳು ಮಾನಸಿಕವಾಗಿ ಬೇಗನೇ ಪ್ರೌಢತೆಯತ್ತ ಧಾವಿಸುತ್ತಿರುವುದು ಪೋಷಕರನ್ನೂ, ಶಾಲಾ ಶಿಕ್ಷಕರನ್ನೂ ಗೊಂದಲಕ್ಕೀಡುಮಾಡಿದೆ.
ಪೋಷಕರೇ, ವಿನಂತಿ:
ಈ ಎಲ್ಲಾ ಕಾರಣಗಳಿಂದಾಗಿ ಈ ಕಾಲದ ಪೀಳಿಗೆಗೆ ಮದುವೆ ಎಂಬುದು ಕಷ್ಟ ಮತ್ತು ಅಪರೂಪವಾಗುತ್ತಿದೆ.
ಪೋಷಕರು ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯಿರಿ, ಅವರೊಂದಿಗೆ ಮುಕ್ತವಾಗಿ ಸಂವಹನ ನಡೆಸಿ.
ಮಕ್ಕಳನ್ನು ಬಂಧು-ಬಳಗದವರ ಜೊತೆ ಬೆರೆಯಲು ಬಿಡಿ. ಕೇವಲ ಸಮವಯಸ್ಕರ ಜೊತೆಗಷ್ಟೇ ಅಲ್ಲದೆ, ಎಲ್ಲ ವಯಸ್ಸಿನವರೊಂದಿಗೂ ಒಡನಾಟವಿಟ್ಟುಕೊಳ್ಳುವುದನ್ನು ಕಲಿಸಿ.
ಅವರಿಗೆ ಜೀವನದ ಕಷ್ಟ-ಸುಖ, ವಾಸ್ತವಗಳ ಅರಿವು ಮೂಡಿಸಿ.
ಮದುವೆ, ಸಂಸಾರದ ಸಾಂಗತ್ಯ, ಕುಟುಂಬ ವ್ಯವಸ್ಥೆ ಮತ್ತು ಸಂತಾನೋತ್ಪತ್ತಿ ಎನ್ನುವುದು ಜೀವನದ ಸುಂದರ ಹಾಗೂ ಅತ್ಯಗತ್ಯ ಭಾಗ ಎಂಬುದನ್ನು ಮನದಟ್ಟು ಮಾಡಿ.
ವಿಶೇಷವಾಗಿ ಹೆಣ್ಣುಮಕ್ಕಳ ದೈಹಿಕ-ಮಾನಸಿಕ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಿ.
ಗಂಡು ಮತ್ತು ಹೆಣ್ಣುಮಕ್ಕಳಿಬ್ಬರಿಗೂ ಅಡುಗೆ ಮಾಡುವುದು, ಮನೆಗೆಲಸ ಮಾಡುವುದು ಮತ್ತು ಸ್ವಾವಲಂಬಿಯಾಗಿರುವುದನ್ನು ದಯವಿಟ್ಟು ಕಲಿಸಿ.
ಮಕ್ಕಳು ಮದುವೆಯಾಗದೇ, ಒಂಟಿತನದಲ್ಲಿ ಉಳಿಯುವುದು ಬೇಡ...
— ಪ್ರಬಂಧ ಅಂಬುತೀರ್ಥ
