ಹುನಗುಂದ: ತಿಮ್ಮಾಪೂರದಲ್ಲಿ ವಿಜೃಂಭಣೆಯ ಶ್ರೀ ಮಾರುತೇಶ್ವರ, ಬಸವೇಶ್ವರ ಜಾತ್ರಾ ಮಹೋತ್ಸವ

Shreya Hegde
0


ಹುನಗುಂದ: ತಾಲೂಕಿನ ತಿಮ್ಮಾಪೂರ ಗ್ರಾಮದ ಆರಾಧ್ಯ ದೇವರಾದ ಶ್ರೀ ಮಾರುತೇಶ್ವರ ಹಾಗೂ ಬಸವೇಶ್ವರ ದೇವರುಗಳ ಜಾತ್ರಾ ಮಹೋತ್ಸವವು ಸಡಗರ ಮತ್ತು ಪರಂಪರೆಯೊಂದಿಗೆ ಶ್ರದ್ಧಾ-ಭಕ್ತಿಯಿಂದ ಜರುಗಿತು. ಜಾತ್ರೆಯ ಅಂಗವಾಗಿ ಹತಾರ ಸೇವೆ, ಸುತ್ತಗಾಯಿ ಒಡೆಯುವ ಕಾರ್ಯಕ್ರಮಗಳು ಹಾಗೂ ದೈವವಾಣಿ ನುಡಿಯುವ ವಿಶಿಷ್ಟ ಧಾರ್ಮಿಕ ವಿಧಿ-ವಿಧಾನಗಳು ಭಕ್ತರ ಗಮನ ಸೆಳೆದವು.


ಜಾತ್ರೆಯ ಅಂಗವಾಗಿ ಶನಿವಾರ ರಾತ್ರಿ 8 ಗಂಟೆಯ ಸುಮಾರಿಗೆ ಶ್ರೀ ಮಾರುತೇಶ್ವರ ಪಲ್ಲಕ್ಕಿ ಹಾಗೂ ನೂರಾರು ಭಕ್ತರು ಬರಿಗಾಲಿನಲ್ಲಿ ತಿಮ್ಮಾಪೂರದಿಂದ ಹೊರಟು, ಕಿರಸೂರ ಗ್ರಾಮದ ಪತ್ರಿಗಿಡದ ಬಸವೇಶ್ವರನಿಗೆ ಪೂಜೆ ಸಲ್ಲಿಸಿದರು. ನಂತರ ಅಲ್ಲಿನ ಹನುಮಂತ ದೇವರಿಗೆ ನಮಿಸಿ, ಹಡಗಲಿ ಸಮೀಪದ ಮಲಪ್ರಭ ನದಿಗೆ ತೆರಳಿ ಪುಣ್ಯಸ್ನಾನ ಹಾಗೂ ಪೂಜಾ ಪುನಸ್ಕಾರಗಳನ್ನು ನೆರವೇರಿಸಲಾಯಿತು.


ನಂತರ ಹಡಗಲಿ ಗ್ರಾಮದ ಹನುಮಂತ ದೇವರಿಗೆ ಪೂಜೆ ಸಲ್ಲಿಸಿ, ಮುಂಜಾನೆ 4 ಗಂಟೆಯ ಸುಮಾರಿಗೆ ಹನುಮಂತ ದೇವರ ಕಟ್ಟೆಯ ಮೇಲೆ ಶ್ರೀ ಮಾರುತೇಶ್ವರ ಅರ್ಚಕ ಸಂಜೀವಪ್ಪ ಪೂಜಾರಿ ಅವರು "ಉತ್ತರಿ ಹಸ್ತ, ಗಿಂಡೀಲಿ ನೀರು ಬಂಡಿಲಿ ಅಣ್ಣ" ಎಂಬ ದೈವವಾಣಿಯನ್ನು (ಹೇಳಿಕೆಯನ್ನು) ನುಡಿದರು.


ಈ ದೈವವಾಣಿಯ ಅರ್ಥದ ಕುರಿತು ಸ್ಥಳೀಯ ಮುಖಂಡ ಹಾಗೂ ಹುನಗುಂದ ತಾಲೂಕಾ ಪಂಚಾಯತ ಮಾಜಿ ಉಪಾಧ್ಯಕ್ಷರಾದ ಶಂಕ್ರಪ್ಪ ನೇಗಲಿ ಮಾತನಾಡಿ, ದೈವಿಕ ಅನುಸಾರ ಕಾಲಕ್ಕೆ ತಕ್ಕಂತೆ ಮಳೆ-ಬೆಳೆಗಳ ಮುನ್ಸೂಚನೆ ಇದಾಗಿದ್ದು, ಗಿಂಡಿಲಿ ನೀರು ಎಂದರೆ ಮಳೆ ಕಡಿಮೆ ಎಂದೂ, ಬಂಡಿಲಿ ಅಣ್ಣ ಎಂದರೆ ಉತ್ತಮ ಫಸಲು ಬರುತ್ತದೆ ಎಂದೂ ಅರ್ಥೈಸಬಹುದು ಎಂದು ತಿಳಿಸಿದರು. ನಂತರ ಪಲ್ಲಕ್ಕಿ ಮತ್ತು ಭಕ್ತರು ವಾಪಸ್ ತಿಮ್ಮಾಪೂರು ಗ್ರಾಮಕ್ಕೆ ಆಗಮಿಸಿದರು.


ಭಾನುವಾರ (ದಿನಾಂಕ 20 ರಂದು) ಬೆಳಗ್ಗೆಯಿಂದಲೇ ಎರಡು ದೇವರಿಗೆ ರುದ್ರಾಭಿಷೇಕ, ಕಳಸದ ಮೆರವಣಿಗೆ ಹಾಗೂ ಗೋಪುರಕ್ಕೆ ಕಳಸಾರೋಹಣ ಕಾರ್ಯಕ್ರಮಗಳು ಜರುಗಿದವು. ಹೋಳೆಯಿಂದ ತಂದ ಪವಿತ್ರ ನೀFರಿನಿಂದ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ, ಪೂಜಾರಿಗಳಿಂದ ರೋಮಾಂಚನಗೊಳಿಸುವ ಹತಾರ ಸೇವೆ ನಡೆಯಿತು. ಅಂದು ಸಂಜೆ ಪೂಜಾರಿ ಮನೆಯಿಂದ ಮಾವಿನ ಮರತಪ್ಪ (ಹನುಮಂತ ದೇವರ ಮೂರ್ತಿಯನ್ನು ಅರ್ಚಕರಿಂದ) ದೇವಸ್ಥಾನಕ್ಕೆ ತರಲಾಯಿತು. ನಂತರ ಐದು ಸುತ್ತು ಹತಾರ ಸೇವೆ ಹಾಗೂ ಯುವಕರಿಂದ ಸುತ್ತಗಾಯಿ ಒಡೆಯುವ ಸಂಪ್ರದಾಯವು ಉತ್ಸಾಹದಿಂದ ಜರುಗಿತು.


ಕೊನೆಯಲ್ಲಿ ಅರ್ಚಕ ಬಸವರಾಜ ಹನುಮಂತ ಪೂಜಾರಿ ಅವರು ಬೀರಮ ದೇವರ ಕಟ್ಟೆಯ ಮೇಲೆ ನಿಂತು "ಉತ್ರಿ, ಊತ್ರಿ ಹಸ್ತ. ಚಿತ್ತಿ - ಸಾಧಾರಣ ಮಳೆ ಸಾಧಾರಣ ಬೆಳೆ" ಎಂಬ ಭವಿಷ್ಯ ನುಡಿದರು. ಇದರ ಕುರಿತು ಪತ್ರಕರ್ತ ಜಗದೀಶ ಹದ್ಲಿ ಮಾತನಾಡಿ, ಉತ್ತರಿ ಹಸ್ತ ಚಿತ್ತಿ ಮಳೆಗಳು ಸಾಧಾರಣವಾಗಿ ಬಂದರೆ, ಬೆಳೆಗಳು ಕೂಡ ಸಾಧಾರಣ ಪ್ರಮಾಣದಲ್ಲಿ ಬರಲಿವೆ ಎಂಬುದನ್ನು ಈ ನುಡಿ ಸೂಚಿಸುತ್ತದೆ ಎಂದು ವಿವರಿಸಿದರು.


ಭಕ್ತರ ಹರಕೆ ಹಾಗೂ ಸಡಗರ:

ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಗ್ರಾಮದ ಪ್ರತಿಯೊಂದು ಮನೆಮನೆಯವರು ಸುತ್ತಗಾಯಿಯನ್ನು ಒಡೆದು ದೇವರಿಗೆ ತಮ್ಮ ಹರಕೆಯನ್ನು ಸಮರ್ಪಿಸಿದರು. ಜಾತ್ರೆಯ ಸಂಭ್ರಮದಲ್ಲಿ ಸಾವಿರಾರು ಕಾಯಿಗಳು ಮಾರಾಟವಾದವು. ಪ್ರತಿಯೊಬ್ಬರ ಮನೆಗಳ ಮುಂದೆ ರಂಗೋಲಿ ಬಿಡಲಾಗಿತ್ತು. ಓಣಿಗಳಲ್ಲಿ ಕಳಸದ ಮೆರವಣಿಗೆಯ ಸಂದರ್ಭದಲ್ಲಿ ಪೂಜೆ ಮತ್ತು ಕಾಯಿ ಒಡೆಯುವ ಸಂಪ್ರದಾಯಗಳು ಮೈವೆತ್ತಿದ್ದವು.


ಈ ಜಾತ್ರಾ ಮಹೋತ್ಸವದಲ್ಲಿ ಚಿತ್ತರಗಿ, ಕಿರಸೂರ, ಹಡಗಲಿ, ಬೇವೂರ, ಹಳ್ಳೂರು, ಬಾಗವತಿ, ಹುನಗುಂದ, ಇಲಕಲ್ಲ, ಹಿರೆಮಾಗಿ, ಮೆಂದಾಪೂರು, ಗಂಗೂರು ಹಾಗೂ ಬಾಗಲಕೋಟೆ ಸೇರಿದಂತೆ ವಿವಿಧ ಕಡೆಗಳಿಂದ ಆಗಮಿಸಿದ್ದ ಸದ್ಭಕ್ತರು ದೇವಸ್ಥಾನಗಳಿಗೆ ತೆರಳಿ ಭಕ್ತಿಯ ನಮನ ಸಲ್ಲಿಸಿದರು.


ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸುವ್ಯವಸ್ಥೆ ಕಾಪಾಡಲು ಹುನಗುಂದ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಎಂ.ಎನ್. ಶಿರಹಟ್ಟಿ, ಪೇದೆ ಎಂ.ಎನ್. ಬಾಲರೆಡ್ಡಿ ಹಾಗೂ ಹೋಮ್ ಗಾರ್ಡ್ ಸಿಬ್ಬಂದಿ ಬಿಗಿ ಬಂದೋಬಸ್ತ್ ಕಲ್ಪಿಸಿ ಯಶಸ್ವಿಯಾಗಿ ವ್ಯವಸ್ಥೆಯನ್ನು ನಿರ್ವಹಿಸಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top