ಕೆಲವು ದಿನಗಳ ಹಿಂದೆ ನಾನು ಬೆಂಗಳೂರಿನ ಒಂದು ಪ್ರತಿಷ್ಠಿತ ಮತ್ತು ದುಬಾರಿ ಹೋಟೆಲ್‌ಗೆ ಹೋಗಿದ್ದೆ. ನೂರಾರು ರೂಪಾಯಿ ಕೊಟ್ಟು ನನ್ನ ನೆಚ್ಚಿನ 'ಪನೀರ್ ಬಟರ್ ಮಸಾಲಾ' ಮತ್ತು ರೊಟ್ಟಿ ಆರ್ಡರ್ ಮಾಡಿದೆ. ಸುಂದರವಾದ ಲೈಟಿಂಗ್ಸ್, ಎಸಿ ಗಾಳಿ, ಹಾಗೂ ಆಕರ್ಷಕ ಪ್ಲೇಟಿಂಗ್ ನಡುವೆ ಆ ಪನೀರ್ ನಾಲಿಗೆಗೆ ತುಂಬಾ ರುಚಿ ನೀಡಿತು. ಆದರೆ, ಅಸಲಿ ಆಟ ಶುರುವಾಗಿದ್ದು ಮರುದಿನ ಬೆಳಿಗ್ಗೆ. ತೀವ್ರ ಹೊಟ್ಟೆನೋವು, ವಾಂತಿ ಮತ್ತು ಭೇದಿಯಿಂದಾಗಿ ನಾನು ಆಸ್ಪತ್ರೆ ಸೇರಬೇಕಾಯಿತು. ವೈದ್ಯರು ಅದು 'ಫುಡ್ ಪಾಯ್ಸನಿಂಗ್' ಎಂದು ಹೇಳಿದಾಗ ನನಗೆ ತಲೆ ತಿರುಗಿದಂತಾಯಿತು. ಗುಣಮುಖನಾಗಲು ನಾನು ಮೂರು ದಿನಗಳ ಕಾಲ ಬೆಡ್ ರೆಸ್ಟ್ ತಗೆದುಕೊಳ್ಳಬೇಕಾಯಿತು. ಆಗ ನನ್ನ ಮನಸ್ಸಿನಲ್ಲಿ ಮೂಡಿದ ಪ್ರಶ್ನೆ ಒಂದೇ- ನಾವು ಕಷ್ಟಪಟ್ಟು ಸಂಪಾದಿಸಿದ ದುಡ್ಡನ್ನು ಕೊಟ್ಟು ತಿನ್ನುತ್ತಿರುವುದು ಒಳ್ಳೆಯ ಆಹಾರವನ್ನೋ ಅಥವಾ ಕಾಯಿಲೆಯನ್ನೋ?
ನನ್ನ ಈ ಕಹಿ ಅನುಭವ ಕೇವಲ ವೈಯಕ್ತಿಕವಲ್ಲ. ಇತ್ತೀಚೆಗೆ ಕರ್ನಾಟಕ ಆಹಾರ ಸುರಕ್ಷತಾ ಇಲಾಖೆಯು ಬೆಂಗಳೂರಿನ ಐಷಾರಾಮಿ 5 ಸ್ಟಾರ್ ಹೋಟೆಲ್‌ಗಳು ಮತ್ತು ಬೌರಿಂಗ್ ಕ್ಲಬ್‌ನಂತಹ ಪ್ರತಿಷ್ಠಿತ ಕ್ಲಬ್‌ಗಳ ಮೇಲೆ ನಡೆಸಿದ ಸರಣಿ ದಾಳಿಗಳು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿವೆ. ಟಿವಿ ಸುದ್ದಿಗಳಲ್ಲಿ ಆ ಹೋಟೆಲ್‌ಗಳ ಅಡುಗೆ ಕೋಣೆಯನ್ನು (ಕಿಚನ್) ತೋರಿಸಿದಾಗ ನನಗೆ ವಾಕರಿಕೆ ಬಂತು. ಎಲ್ಲಿ ನೋಡಿದರಲ್ಲಿ ಜಿರಳೆಗಳು ಓಡಾಡುತ್ತಿದ್ದವು, ಕೊಳೆತ ಮಾಂಸಗಳನ್ನು ಫ್ರಿಡ್ಜ್‌ನಲ್ಲಿ ಇಡಲಾಗಿತ್ತು, ಮತ್ತು ಬೂಷ್ಟು ಹಿಡಿದ ತರಕಾರಿಗಳನ್ನೇ ಬಳಸಿ ಅಡುಗೆ ಮಾಡಲಾಗುತ್ತಿತ್ತು. ಹೊರಗಡೆ ಬಣ್ಣದ ಲೇಬಲ್ ಮತ್ತು ರಾಯಲ್ ಲುಕ್ ತೋರಿಸುವ ಈ ಬ್ರ್ಯಾಂಡ್‌ಗಳ ಅಸಲಿ ಮುಖ ಇದು ಇದಕ್ಕಿಂತ ಆಘಾತಕಾರಿ ವಿಷಯವೆಂದರೆ, ಇತ್ತೀಚೆಗೆ ನಮ್ಮ ಸರ್ಕಾರ ಕೃತಕ ಪನೀರ್ ಅನ್ನು ಒಂದು ವರ್ಷಗಳ ಕಾಲ ಬ್ಯಾನ್ ಮಾಡಿದೆ. ಹಾಲಿನಿಂದ ಮಾಡದ, ಕೇವಲ ತಾಳೆ ಎಣ್ಣೆ , ಸ್ಟಾರ್ಚ್ ಮತ್ತು ರಾಸಾಯನಿಕಗಳನ್ನು ಬಳಸಿ ತಯಾರಿಸಿದ ರಬ್ಬರ್‌ನಂತ ನಕಲಿ ಪನೀರನ್ನು ನಾವು ಇಷ್ಟು ದಿನ ಹೋಟೆಲ್‌ಗಳಲ್ಲಿ ತಿನ್ನುತ್ತಿದ್ದೆವಾ ಎಂದು ಯೋಚಿಸಿದರೆ ಮೈ ಜುಂ ಎನ್ನುತ್ತದೆ.
ಇನ್ನು ರೈಲ್ವೆ ಸ್ಟೇಷನ್‌ಗಳ ಕ್ಯಾಂಟೀನ್‌ಗಳು ಮತ್ತು ರಸ್ತೆ ಬದಿಯ ಗಾಡಿಗಳ ಕಥೆಯಂತೂ ಹೇಳತೀರದು. ಕಳಪೆ ದರ್ಜೆಯ ಎಣ್ಣೆಯನ್ನು ಪದೇ ಪದೇ ಕಾಯಿಸಿ ಬಳಸುವುದು, ಕಲುಷಿತ ನೀರನ್ನು ಬಳಸಿ ಅಡುಗೆ ಮಾಡುವುದು ಅಲ್ಲಿ ಸಾಮಾನ್ಯವಾಗಿದೆ. ಹೋಟೆಲ್ ಮಾಲೀಕರ ಈ ಹಣದ ಹಪಾಹಪಿ ಮತ್ತು ಬೇಜವಾಬ್ದಾರಿತನಕ್ಕೆ ಬ್ರೇಕ್ ಬೀಳಲೇಬೇಕು. ಗ್ರಾಹಕರಾದ ನಾವು ಕೇವಲ ಹಣ ಕೊಟ್ಟು ತಿನ್ನುವ ಬಲಿಪಶುಗಳಾಗಬಾರದು, ನಮಗೂ ಕಾನೂನುಬದ್ಧ ಹಕ್ಕುಗಳಿವೆ. ಹೋಟೆಲ್‌ಗೆ ಹೋದಾಗ ಕೇವಲ ಡೈನಿಂಗ್ ಟೇಬಲ್ ಅಷ್ಟೇ ಅಲ್ಲ, ಅವರ ಅಡುಗೆ ಕೋಣೆಯ ಸ್ವಚ್ಛತೆ ಹೇಗಿದೆ ಎಂಬುದನ್ನು ಗಮನಿಸಬೇಕು. ಯಾವುದೇ ಸಣ್ಣ ಅಥವಾ ದೊಡ್ಡ ಹೋಟೆಲ್‌ನಲ್ಲಿ ತಿಂದರೂ ಪಕ್ಕಾ ಬಿಲ್ ಪಡೆಯುವುದನ್ನು ಮರೆಯಬಾರದು. ಆಹಾರ ಕಳಪೆಯಾಗಿದ್ದು, ಆರೋಗ್ಯ ಕೆಟ್ಟರೆ ದೂರು ನೀಡಲು ಇದು ಅತ್ಯಂತ ಮುಖ್ಯವಾದ ಕಾನೂನು ಸಾಕ್ಷಿಯಾಗಿದೆ.
ನಿಮಗೇನಾದರೂ ಕಳಪೆ ಆಹಾರ ಸಿಕ್ಕರೆ ತಕ್ಷಣ FSSAI ನ ಆಹಾರ ಸುರಕ್ಷತಾ ಇಲಾಖೆಯ ಹೆಲ್ಪ್‌ಲೈನ್‌ಗೆ ದೂರು ನೀಡಬೇಕು. ನಮ್ಮ ಒಂದು ದೂರು ನೂರಾರು ಜನರ ಜೀವವನ್ನು ಉಳಿಸಬಲ್ಲದು. ಕೊನೆಯದಾಗಿ ಹೇಳುವುದಾದರೆ ರುಚಿಯಾದ ಮಸಾಲೆ ಮತ್ತು ಅಂದವಾದ ಹೋಟೆಲ್ ರೂಮುಗಳು ನಮಗೆ ಆರೋಗ್ಯ ನೀಡುವುದಿಲ್ಲ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಗ್ರಾಹಕರಾದ ನಾವು ಜಾಗೃತರಾಗದಿದ್ದರೆ, ಹೋಟೆಲ್‌ಗಳ ಈ 'ರುಚಿಯಾದ ವಿಷ' ನಮ್ಮ ಜೀವಕ್ಕೆ ಕುತ್ತು ತರುವುದು ಗ್ಯಾರಂಟಿ. ಇನ್ನಾದರೂ ಎಚ್ಚೆತ್ತುಕೊಳ್ಳೋಣ.
- ದರ್ಶನ್ ಬಿ ಎನ್, ಉಜಿರೆ

