ಮಂಗಳೂರು: ಎಚ್ಐವಿ ರೋಗಕ್ಕೆ ಔಷಧಿ ಇದೆ ಎಂದ ಮಾತ್ರಕ್ಕೆ ಮುಂಜಾಗ್ರತೆ ವಹಿಸದೇ ನಿರ್ಲಕ್ಷ್ಯ ಮಾಡುವುದು ತಪ್ಪಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಅಧಿಕಾರಿ ಮಹೇಶ್ ಯು.ಕೆ. ಹೇಳಿದರು. ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ರೆಡ್ ರಿಬ್ಬನ್ ಕ್ಲಬ್ ಹಾಗೂ ಆಂತರಿಕ ಗುಣಮಟ್ಟ ಖಾತ್ರಿ ಕೋಶದ ವತಿಯಿಂದ 2026-27ನೇ ಶೈಕ್ಷಣಿಕ ಸಾಲಿನ ಎನ್ಎಸ್ಎಸ್ ಚಟುವಟಿಕೆಗಳ ಉದ್ಘಾಟನೆ ನಡೆಸಿ ಮಾತನಾಡಿದರು.
ಪ್ರಸ್ತುತ ದೇಶದಲ್ಲಿ ಎಚ್ಐವಿ ತಡೆಗಟ್ಟಲು ಔಷಧಗಳನ್ನು ಅಭಿವೃದ್ಧಿಪಡಿಸಲಾಗಿದೆ. ಆದರೆ, ಈ ಔಷಧಿ ಸಂಪೂರ್ಣವಾಗಿ ಕಾಯಿಲೆ ಗುಣಪಡಿಸುವುದಿಲ್ಲ. ಬದಲಾಗಿ ಎಚ್ಐವಿ ಸೋಂಕಿತರ ಜೀವಿತಾವಧಿಯನ್ನು ಮಾತ್ರವೇ ಹೆಚ್ಚು ಮಾಡುತ್ತದೆ. ಸೋಂಕು ತಗುಲಿದ 3-6 ತಿಂಗಳು ರೋಗದ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ ಮತ್ತು ರಕ್ತ ಪರೀಕ್ಷೆಯಲ್ಲೂ ತಿಳಿಯುವುದಿಲ್ಲ. ಈ ಅವಧಿಯನ್ನು ವಿಂಡೋ ಪೀರಿಯಡ್ ಎಂದು ಕರೆಯಲಾಗುತ್ತದೆ. ಇದಾದ ನಂತರ, ಎಚ್ಐವಿ ಸೋಂಕು ವ್ಯಾಪಕವಾಗಿ ದೇಹದಲ್ಲಿ ಹರಡಿ, ರಕ್ತ ಪರೀಕ್ಷೆಯಲ್ಲಿ ಮಾತ್ರವೇ ಕಾಣಿಸಿಕೊಳ್ಳುವುದರಿಂದ ಎಚ್ಚರ ವಹಿಸುವುದು ಸೂಕ್ತ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಪ್ರೊ. ರಾಮಕೃಷ್ಣ ಬಿ.ಎಂ., ಎನ್ಎಸ್ಎಸ್ ಕೇವಲ ಪಠ್ಯೇತರ ಚಟುವಟಿಕೆ ಮಾತ್ರವಲ್ಲದೇ, ಸಮಾಜದ ಬೇರೆ ಬೇರೆ ಸಮಸ್ಯೆಗಳಿಗೆ ಸ್ಪಂದಿಸಲು ಉತ್ತಮ ವೇದಿಕೆ ಒದಗಿಸಿಕೊಡುತ್ತದೆ. ವಿದ್ಯಾರ್ಥಿಗಳು ಕೇವಲ ವಿದ್ಯಾಭ್ಯಾಸಕ್ಕೆ ಮಾತ್ರವೇ ಸೀಮಿತಗೊಳ್ಳದೇ ಸಮಾಜವನ್ನು ಪ್ರಾಯೋಗಿಕವಾಗಿ ಅರ್ಥ ಮಾಡಿಕೊಳ್ಳುವ ಮೂಲಕ ಉತ್ತಮ ಪ್ರಜೆಯಾಗಬೇಕಿದೆ. ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ನಿರ್ಮಣದಲ್ಲೂ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.
ತೃತೀಯ ಬಿಎ ವಿದ್ಯಾರ್ಥಿನಿ ಪ್ರಿಯಾ ಎನ್ಎಸ್ಎಸ್ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಇದೇ ವೇಳೆ, ರಾಷ್ಟ್ರೀಯ ಸ್ವಯಂ ಸೇವಾ ಅಧಿಕಾರಿ ಡಾ. ಸುರೇಶ್, ಲಿಖಿತಾ ಜಿ. ಎನ್., ವಾಣಿಜ್ಯ ವಿಭಾಗದ ಉಪನ್ಯಾಸಕಿ ಜಯಶ್ರೀ, ಪ್ರೊ. ಜಗದೀಶ್, ಪ್ರವಾಸೋದ್ಯಮ ವಿಭಾಗದ ಭರತ್ ಕುಮಾರ್ ಸೇರಿದಂತೆ ನಾನ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು.
