ನಾವು ದಿನನಿತ್ಯ ಎಲ್ಲರ ಜೊತೆ ಮಾತನಾಡುತ್ತೇವೆ. ಅಮ್ಮ- ಅಪ್ಪ ಸ್ನೇಹಿತರು, ಕಾಲೇಜಿನವರು ಹೀಗೆ ಯಾರಾದರೂ ಒಬ್ಬರ ಜೊತೆ ಮಾತನಾಡುತ್ತಲೇ ಇರುತ್ತೇವೆ. ಆದರೆ ಒಂದು ಕ್ಷಣ ಯೋಚಿಸಿ ನೋಡಿ ನಮ್ಮ ಜೊತೆ ನಾವು ಯಾವಾಗ ಮಾತನಾಡಿದ್ದೇವೆ...
ಕೆಲವೊಮ್ಮೆ ತುಂಬ ಜನರ ಮಧ್ಯೆಯೇ ಇದ್ದರೂ ನಮಗೆ ಒಂಟಿತನ ಅನ್ನಿಸುತ್ತದೆ. ಯಾರಿಗಾದರೂ ಹೇಳಬೇಕು ಅನಿಸುತ್ತದೆ, ಆದರೆ ಏನು ಹೇಳಬೇಕು ಹೇಗೆ ಹೇಳಬೇಕು ಅನ್ನೋದುಗೊತ್ತಾಗುವುದಿಲ್ಲ. ಆಗ ಸುಮ್ಮನೆ ಇದ್ದುಬಿಡುತ್ತೇವೆ. ಆದರೆ ನಮ್ಮ ಮನಸ್ಸು ಮಾತ್ರ ಸುಮ್ಮನಿರುವುದಿಲ್ಲ. ಅದು ನಮ್ಮ ಜೊತೆ ಏನಾದರೂ ಒಂದು ಮಾತು ಹೇಳುತ್ತಲೇ ಇರುತ್ತದೆ. ನಾನು ಖುಷಿಯಾಗಿದ್ದೀನಾ ಅಂತ ನಮ್ಮೊಳಗೇ ನಾವು ಪ್ರಶ್ನೆ ಮಾಡಿಕೊಳ್ಳುತ್ತೇವೆ. ಹೊರಗಡೆ ಎಲ್ಲರ ಮುಂದೆ ನಗುತ್ತಿರುತ್ತೇವೆ. ನಾವು ಚೆನ್ನಾಗಿದ್ದೀನಿ ಅಂತ ಹೇಳುತ್ತೇವೆ. ಆದರೆ ಕೆಲವೊಮ್ಮೆ ಮನಸ್ಸಿನ ಆಳದಲ್ಲಿ ಮಾತ್ರ ಬೇರೆ ರೀತಿಯ ಭಾವನೆ ಇರುತ್ತದೆ. ಅದನ್ನು ಬೇರೆಯವರಿಗೆ ಹೇಳಲು ಆಗದಿದ್ದರೂ, ನಮ್ಮ ಮನಸ್ಸಿಗೆ ಮಾತ್ರ ಅದು ಗೊತ್ತಿರುತ್ತದೆ. ಜೀವನದಲ್ಲಿ ಕೆಲವೊಮ್ಮೆ ನಾವು ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಗೊಂದಲವಾಗುತ್ತದೆ. ಆಗ ಯಾರಾದರೂ ಬಂದು ನಮ್ಮ ಪರವಾಗಿ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ನಾವೇ ಕುಳಿತು ಯೋಚಿಸಬೇಕು. ನನಗೆ ಯಾವುದು ಬೇಕು ಅಂತ ನಮ್ಮನ್ನೇ ಕೇಳಿಕೊಳ್ಳಬೇಕು.
ತಪ್ಪುಗಳಾದಾಗಲೂ ಹಾಗೆಯೇ. ನಾನು ತಪ್ಪು ಮಾಡಿದೆ ಅಂತ ನಮ್ಮನ್ನೇ ದೂಷಿಸುತ್ತಾ ಕುಳಿತುಕೊಳ್ಳುವುದಕ್ಕಿಂತ, ಸರಿ.. ತಪ್ಪಾಗಿದೆ, ಮುಂದೆ ಹೀಗೆ ಆಗದಂತೆ ನೋಡಿಕೊಳ್ಳಬೇಕು ಅಂತ ನಮ್ಮ ಜೊತೆ ನಾವು ಮಾತನಾಡಿಕೊಳ್ಳಬೇಕು. ನಾವು ಯಾವಾಗಲೂ ಮೊಬೈಲ್ ನೋಡುತ್ತಾ, ಸ್ನೇಹಿತರ ಜೊತೆ ಮಾತನಾಡುತ್ತಾ, ಯಾವುದಾದರೂ ಕೆಲಸ ಮಾಡುತ್ತಾ ಇರುತ್ತೇವೆ. ಸ್ವಲ್ಪ ಸಮಯ ಒಬ್ಬರೇ ಇದ್ದಾಗ ಮಾತ್ರ ನಮ್ಮ ಬಗ್ಗೆ ಯೋಚಿಸಲು ಅವಕಾಶ ಸಿಗುತ್ತದೆ. ಅದಕ್ಕಾಗಿಯೇ ಕೆಲವೊಮ್ಮೆ ಒಂಟಿಯಾಗಿ ಕುಳಿತುಕೊಳ್ಳಬೇಕು. ನಮ್ಮ ಬಗ್ಗೆ ನಮಗೆ ನಾವು ಕೇಳಿಕೊಳ್ಳಬೇಕಾದ ಕೆಲವು ಪ್ರಶ್ನೆಗಳಿವೆ. ನನಗೆ ಏನು ಬೇಕು? ನಾನು ಮಾಡುತ್ತಿರುವುದು ನನಗೆ ಇಷ್ಟವಾಗುತ್ತಿದೆಯಾ? ನಾನು ಸಂತೋಷವಾಗಿದ್ದೀನಾ? ಅಂತ. ಈ ಪ್ರಶ್ನೆಗಳಿಗೆ ಬೇರೆ ಯಾರೂ ಉತ್ತರ ಕೊಡಬೇಕಾಗಿಲ್ಲ. ನಾವೇ ಉತ್ತರ ಹುಡುಕಬೇಕು. ಎಲ್ಲರನ್ನೂ ಅರ್ಥಮಾಡಿಕೊಳ್ಳಲು ನಾವು ಪ್ರಯತ್ನಿಸುತ್ತೇವೆ. ಆದರೆ ಕೆಲವೊಮ್ಮೆ ನಮ್ಮನ್ನೇ ಅರ್ಥಮಾಡಿಕೊಳ್ಳುವುದನ್ನು ಮರೆತುಬಿಡುತ್ತೇವೆ. ಹಾಗಾಗಿ ದಿನದಲ್ಲಿ ಸ್ವಲ್ಪ ಸಮಯವಾದರೂ ನಮ್ಮ ಜೊತೆ ನಾವು ಮಾತನಾಡೋಣ. ಯಾರಿಗೂ ಹೇಳಲಾಗದ ಮಾತುಗಳನ್ನು ನಮ್ಮ ಮನಸ್ಸಿನ ಜೊತೆ ಹೇಳಿಕೊಳ್ಳೋಣ.

.jpg)

