ಹೊಸಬೆಟ್ಟು: ಶಿಕ್ಷಕರ ದಿನಾಚರಣೆಯ ವಿಶೇಷ ಸಂದರ್ಭದಲ್ಲಿ, ನವಗಿರಿ ಸೇವಾ ಟ್ರಸ್ಟ್ (ರಿ.) ಹೊಸಬೆಟ್ಟು-ಕುಳಾಯಿ ಇದರ ಪ್ರಧಾನ ಯುವ ಸಂಘಟನೆ ‘ಯುವಚೇತನ’ ವತಿಯಿಂದ ಶಿಕ್ಷಕ ದಂಪತಿಗೆ ಅವರ ಸ್ವಗೃಹದಲ್ಲಿ ‘ಗುರುನಮನ’ ಸಲ್ಲಿಸಿ ಗೌರವಿಸಲಾಯಿತು.
ವಿದ್ಯಾದಾಯಿನಿ ಪ್ರೌಢ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿಯಾಗಿ, ಸಂಚಾಲಕಿಯಾಗಿ ಹಾಗೂ ಹಿಂದೂ ವಿದ್ಯಾದಾಯಿನಿ ಸಂಘದ ಕಾರ್ಯದರ್ಶಿಯಾಗಿ ಗುರುತರ ಸೇವೆ ಸಲ್ಲಿಸಿದ ಶ್ರೀಮತಿ ಐ. ಉಮಾದೇವಿ ಹಾಗೂ ಅದೇ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಬಿ. ರಮೇಶ್ ಅವರಿಗೆ ಈ ಗೌರವಾರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಅಭಿನಂದನಾ ಭಾಷಣಗೈದ ವಿದ್ಯಾದಾಯಿನಿ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶ್ರೀನಿವಾಸ ಕುಳಾಯಿ, "ತಂದೆ-ತಾಯಿಯರು ಜನ್ಮ ನೀಡಿದರೆ, ಶಿಕ್ಷಕರು ಜೀವನಕ್ಕೆ ಸರಿಯಾದ ದಾರಿ ತೋರಿಸುತ್ತಾರೆ. ಅಂತಹ ಶಿಸ್ತು ಮತ್ತು ಸಮಾನತೆಯೊಂದಿಗೆ ಜ್ಞಾನದಾನ ಮಾಡಿದ ಶಿಕ್ಷಕರು ಸದಾ ಅಭಿನಂದನೀಯರು" ಎಂದು ನುಡಿದರು.
ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ವಿದ್ಯಾದಾಯಿನಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ಹಿರಿಯ ನ್ಯಾಯವಾದಿ ರಾಘವೇಂದ್ರ ಹೆಚ್.ವಿ., ಯುವಚೇತನದ ಅಧ್ಯಕ್ಷ ಅರುಣ್ ಕಕ್ಕೆಸಾಲು, ಕಾರ್ಯದರ್ಶಿ ವಿಕ್ರಮ್ ಮೈರ್ಪಾಡಿ, ಕೋಶಾಧಿಕಾರಿ ಅಮಿತ್ ಹತ್ವಾರ್, ಉಪಾಧ್ಯಕ್ಷರಾದ ಪ್ರಶಾಂತ್ ರಾವ್ ಹೆಚ್., ಅಶೋಕ್, ವಸಂತ ರಾಜ ಹೆಚ್. ಹಾಗೂ ಉಜ್ವಲ್ ಉಪಸ್ಥಿತರಿದ್ದರು. ಪವನ್ ಮೈರ್ಪಾಡಿ ಕಾರ್ಯಕ್ರಮವನ್ನು ನಿರೂಪಿಸಿದರು.
