ಶಿಕ್ಷಣ ಮತ್ತು ಆರೋಗ್ಯ ಎಲ್ಲರಿಗೂ ಸಿಗುವುದೇ ಸರಕಾರದ ಆಶಯ: ಎಸ್ ಎಲ್ ಭೋಜೇಗೌಡ

Shreya Hegde
0

ಉಜಿರೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಸಂಭ್ರಮ


ಉಜಿರೆ: ಶಿಕ್ಷಣ ಮತ್ತು ಆರೋಗ್ಯ ಎಲ್ಲರಿಗೂ ತಲುಪುವಂತೆ ಮಾಡುವುದು ಸರಕಾರದ ಮುಖ್ಯ ಆಶಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ತಿಳಿಸಿದ್ದಾರೆ. ಸೆಪ್ಟೆಂಬರ್ 27ರಂದು ಉಜಿರೆಯ ಇಂದ್ರಪ್ರಸ್ಥ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಸಂಘ ಮತ್ತು ಎಸ್.ಡಿ.ಎಂ. ಪದವಿ ಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದರೂ, ನಾಡಿನ ಬೆಳಕಾಗುತ್ತಿರುವ ವಿದ್ಯಾರ್ಥಿಗಳಿಗೆ ಜ್ಞಾನದೀವಿಗೆಯಾಗುತ್ತಿರುವ ಎಲ್ಲ ಶಿಕ್ಷಕರ ಸೇವೆ ಅನನ್ಯ ಎಂದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಜೀವನ ಶಿಕ್ಷಣದ ಮೂಲಕ ಮಹಿಳೆಯರಿಗೆ ಸ್ವಾವಲಂಬನೆಯ ಅಡಿಪಾಯ ಹಾಕಿಕೊಟ್ಟಿದೆ ಎಂದು ಶ್ಲಾಘಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್, ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳನ್ನು ಸಾಮಾಜಿಕ ಜಾಲತಾಣಗಳ ದುಷ್ಪರಿಣಾಮಗಳಿಂದ ದೂರವಿಟ್ಟು, ಅವರ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕರು ನಿರಂತರವಾಗಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.


ಗೌರವಾರ್ಪಣೆ ಹಾಗೂ ಸಾಧಕರ ಸನ್ಮಾನ:

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ: ಜಯಾನಂದ ಎನ್. ಸುವರ್ಣ (ನಾರ್ಲಪದವು), ಪ್ರೇಮನಾಥ ಶೆಟ್ಟಿ (ಎಡಪದವು), ಸುಬ್ರಮಣ್ಯ (ಮಂಗಳೂರು), ಪೂರ್ಣಿಮಾ ಡಿ. ಶೆಟ್ಟಿ (ಕೊಣಾಜೆ), ಕಿರಣಾ ಶೆಟ್ಟಿ (ಮಂಗಳೂರು) ಹಾಗೂ ಅನಿತಾ ವಿ. ಜೈನ್ (ಮೂಡುಬಿದಿರೆ) ಅವರನ್ನು ಸನ್ಮಾನಿಸಲಾಯಿತು.


ವಿಶೇಷ ಸಾಧಕರು: ರಾಜ್ಯ ಮಟ್ಟದ ಉತ್ತಮ ಉಪನ್ಯಾಸಕ ಪ್ರಶಸ್ತಿ ಪಡೆದ ಇಬ್ರಾಹಿಂ (ಉಪ್ಪಿನಂಗಡಿ), ನೌಕರರ ಸಂಘದ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದ ಹರೀಶ್ ಎನ್., ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾದ ವಿಠ್ಠಲ ಎ., ಹಾಗೂ ರಾಷ್ಟ್ರೀಯ ಸ್ವರ್ಣ ಕಮಲ ಪದಕ ವಿಜೇತ ಡಾ. ಪ್ರದೀಪ್ ಕೆಂಚನೂರು ಅವರನ್ನು ಗೌರವಿಸಲಾಯಿತು. ಇದೇ ವೇಳೆ, ಶೇಕಡ ನೂರು ಫಲಿತಾಂಶ ದಾಖಲಿಸಿದ ಜಿಲ್ಲೆಯ 78 ಕಾಲೇಜುಗಳ ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗದವರನ್ನು ಅಭಿನಂದಿಸಲಾಯಿತು. ಶಿಕ್ಷಕರಿಗಾಗಿ ವಿಶೇಷ ನೃತ್ಯ ಸ್ಪರ್ಧೆಯನ್ನು ಸಹ ಆಯೋಜಿಸಲಾಗಿತ್ತು.


ವೇದಿಕೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಉಪನಿರ್ದೇಶಕಿ ರಾಜೇಶ್ವರಿ ಹೆಚ್.ಹೆಚ್., ಪ್ರಾಚಾರ್ಯರ ಸಂಘದ ಅಧ್ಯಕ್ಷ ಡಾ. ನವೀನ್ ಶೆಟ್ಟಿ ಕೆ., ಸಹಾಯಕ ನಿರ್ದೇಶಕ ಆನಂದ ಪಿ., ಶಾಖಾಧಿಕಾರಿ ನಿತಿನ್ ಬಿ.ಟಿ. ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾಲೇಜುಗಳ ಮುಖ್ಯಸ್ಥರು ಉಪಸ್ಥಿತರಿದ್ದರು.


ಎಸ್.ಡಿ.ಎಂ. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಮೋದ್ ಕುಮಾರ್ ಬಿ. ಸ್ವಾಗತಿಸಿದರು. ಕಾವೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ಮಮತಾ ಎ. ವಂದಿಸಿದರು. ಡಾ. ಮಹಾವೀರ ಜೈನ್ ಹಾಗೂ ಉಮೇಶ್ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top