ಧಾರವಾಡ ಶ್ರೀ ಉತ್ತರಾದಿ ಮಠದಲ್ಲಿ ‘ಅಕ್ಷರ ಪ್ರಭಾವಂ’ ಮಕ್ಕಳ ಸಂಭ್ರಮದ ಕೃಷ್ಣಜನ್ಮಾಷ್ಟಮಿ ಉತ್ಸವ

Upayuktha
0

 ಗ್ರಾಮ-ಗ್ರಾಮದಿಂದ ಬಂದ ಗೋಪಾಲ


ಧಾರವಾಡ: ಇಲ್ಲಿನ ಮಾಳಮಡ್ಡಿಯ ಶ್ರೀಮದ್ ಉತ್ತರಾದಿ ಮಠದಲ್ಲಿ ಚಾತುರ್ಮಾಸ್ಯ ವ್ರತಾಚರಣೆ ಹಾಗೂ ಕೃಷ್ಣಜನ್ಮಾಷ್ಟಮಿಯ ಪುಣ್ಯ ಪರ್ವಕಾಲದ ನಿಮಿತ್ತ ‘ಗ್ರಾಮ-ಗ್ರಾಮದಿಂದ ಬಂದ ಗೋಪಾಲ’ ಎಂಬ ವಿಶೇಷ ಶೈಕ್ಷಣಿಕ, ಕಲಾತ್ಮಕ ಮತ್ತು ಸಾಮಾಜಿಕ ಚಿಣ್ಣ ಗೋಪಾಲರ ಕೂಟವು ಸೆಪ್ಟೆಂಬರ್ 5ರ ಶನಿವಾರ ಸಂಜೆಯ ಗೋಧೂಳಿ ಮುಹೂರ್ತದಲ್ಲಿ ಅತ್ಯಂತ ಸಡಗರ-ಸಂಭ್ರಮದಿಂದ ನೆರವೇರಿತು.


ಧಾರವಾಡ ಜಿಲ್ಲೆಯ 33ಕ್ಕೂ ಹೆಚ್ಚು ಹಳ್ಳಿಗಳಿಂದ ‘ಅಕ್ಷರ ಪ್ರಭಾವಂ’ ಶೈಕ್ಷಣಿಕ ತರಬೇತಿಯಲ್ಲಲಿರುವ 570 ಗ್ರಾಮಾಂತರ ವಿದ್ಯಾರ್ಥಿಗಳು ಶ್ರೀಕೃಷ್ಣ ಹಾಗೂ ಗೋಪಿಕೆಯರ ಕಮನೀಯ ವೇಷಭೂಷಣ ತೊಟ್ಟು, ಶಿಕ್ಷಕರೊಂದಿಗೆ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


ಸಂಸ್ಕಾರ ಹಾಗೂ ಸಮೃದ್ಧಿಯ ಅನುಗ್ರಹ ಸಂದೇಶ:

ಶ್ರೀಮನ್ ಮಧ್ವಾಚಾರ್ಯ ಮೂಲ ಸಂಸ್ಥಾನ ಶ್ರೀ ಉತ್ತರಾದಿ ಮಠದ ಪೀಠಾಧಿಪತಿಗಳಾದ ಅನಂತ ಶ್ರೀ ಸಂಬೋಧಿತ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಮಕ್ಕಳಿಗೆ ಅನುಗ್ರಹೋಪದೇಶ ನೀಡಿ, "ಶ್ರೀಕೃಷ್ಣ ಕಳ್ಳನಲ್ಲ, ಆತ ಪ್ರತಿಯೊಂದು ಮನೆಯನ್ನೂ ತನ್ನದೇ ಎಂದು ಭಾವಿಸಿದ್ದ. ಹಾಗೆಯೇ ಗೋಪಿಯರೂ ಆತನನ್ನು ಪ್ರೀತಿಯಿಂದ ಸಂತೈಸುತ್ತಿದ್ದರು. ಇಂದು ನಮ್ಮ ಹಳ್ಳಿಗಳು ಒಂದೇ ಕುಟುಂಬದಂತೆ ಒಗ್ಗೂಡಿದಾಗ ಮಾತ್ರ ಸರ್ವಾಂಗೀಣ ವಿಕಾಸ ಹಾಗೂ ಸಮಸ್ಯೆಗಳಿಗೆ ಸುಲಭ ಪರಿಹಾರ ಸಾಧ್ಯ" ಎಂದು ಕರೆ ನೀಡಿದರು.


ಶಿಕ್ಷಣದ ಜತೆಗೆ ಸಂಸ್ಕಾರ, ನಾಯಕತ್ವ, ಹೆತ್ತವರು ಹಾಗೂ ಗುರು-ಹಿರಿಯರಲ್ಲಿ ಆದರ, ನಿತ್ಯ ಪೂಜೆ, ಸತ್ಯ ಧರ್ಮ ನಿಷ್ಠೆ, ಸೇವಾಭಾವ ಮತ್ತು ‘ಗುಡಿ-ಗೋ-ಗ್ರಾಮ-ಭಾರತ’ದ ಬಗ್ಗೆ ಮಮಕಾರ ಬೆಳೆಸಿಕೊಳ್ಳಲು ಮಹಾಸ್ವಾಮಿಗಳು ಉಪದೇಶಿಸಿ, ಜಿಲ್ಲೆಯ ಸಮಸ್ತ ಗ್ರಾಮಗಳಿಗೂ ಸಮೃದ್ಧಿಯನ್ನು ಹಾರೈಸಿದರು.


ವಿಶಿಷ್ಟ ಅರ್ಪಣೆ ಹಾಗೂ ‘ಶ್ರೀರಾಮ ರಕ್ಷಾ ಪ್ರಸಾದ’ ವಿತರಣೆ:

ಮಕ್ಕಳು ಕೃಷ್ಣ-ಸುಧಾಮನ ಪವಿತ್ರ ಸ್ನೇಹದ ಸಂಕೇತವಾಗಿ ತಮ್ಮ ಮನೆಗಳಿಂದ ತಂದಿದ್ದ ಅವಲಕ್ಕಿ, ಬೆಲ್ಲ, ಕಮಲ, ಪುಷ್ಪ, ಫಲ ಹಾಗೂ ತುಳಸಿಯನ್ನು ಮಠದ ಸಂಸ್ಥಾನ ದೇವರ ನೈವೇದ್ಯಕ್ಕಾಗಿ ಮಹಾಸ್ವಾಮಿಗಳ ಚರಣಗಳಿಗೆ ಹೃದ್ಪೂರ್ವಕವಾಗಿ ಅರ್ಪಿಸಿದರು. ಶ್ರೀಪಾದಂಗಳು ಸಹಸ್ರಾರು ಗ್ರಾಮೀಣ ಮನೆಗಳಿಗೆ ‘ಶ್ರೀ ದಿಗ್ವಿಜಯ ಮೂಲ ಸೀತಾ ರಾಮದೇವರ’ ವಿಶೇಷ ಅನುಗ್ರಹ ತಲುಪಿಸುವ ಸದುದ್ದೇಶದಿಂದ ಮಂತ್ರಾಕ್ಷತೆಯನ್ನು ದಯಪಾಲಿಸಿದರು. ಮಕ್ಕಳ ಈ ಸಣ್ಣ ಅರ್ಪಣೆ, ಇಡೀ ಹಳ್ಳಿಗಳಿಗೆ ಶ್ರೀರಾಮ ರಕ್ಷಾ ಪ್ರಸಾದ ತಲುಪಲು ಸಾಧನವಾಯಿತು.


ವಿವಿಧ ಚಟುವಟಿಕೆಗಳು ಮತ್ತು ಮೆರವಣಿಗೆ:

ಕಲಾತ್ಮಕ ಕಾರಾಗಾರ: ಟಿ.ಆರ್. ಶ್ರೀ ಗುರುಮೂರ್ತಿ ನಾಯಕ್ ಅವರ ನೆರವಿನಲ್ಲಿ ಮಕ್ಕಳಿಗೆ ಶ್ರೀಕೃಷ್ಣ ದೇವರ ಕಲಾತ್ಮಕ ಚಿತ್ರ ಬಿಡಿಸುವ ಕಾರ್ಯಾಗಾರ ನಡೆಯಿತು.


ವಿಠ್ಠಲ ಭಜನಾ ಪಾದಯಾತ್ರೆ: ವಿಠ್ಠಲ ದೇವರ ನಾಮಸ್ಮರಣೆ ಮಾಡುತ್ತಾ ಸಾಗಿದ ಮಕ್ಕಳ ಭಜನಾ ಪಾದಯಾತ್ರೆಗೆ ದಾರಿಯುದ್ದಕ್ಕೂ ಸಾರ್ವಜನಿಕರು ಕೈಮುಗಿದು, ಚಪ್ಪಾಳೆ ತಟ್ಟಿ ಭಕ್ತಿಯಿಂದ ಸಾಥ್ ನೀಡಿದರು. ಶ್ರೀಮಠದ ವತಿಯಿಂದ ವಾದ್ಯಘೋಷಗಳೊಂದಿಗೆ ಮಕ್ಕಳನ್ನು ಗೌರವದಿಂದ ಬರಮಾಡಿಕೊಳ್ಳಲಾಯಿತು.


ಸಂಸ್ಕೃತಿ ಸಂಭ್ರಮ: ಮುಸ್ಸಂಜೆ ಕೆ.ಇ. ಬೋರ್ಡ್ ಶಾಲೆಯ ಪ್ರಾಂಗಣದಲ್ಲಿ ‘ರತಿಕಾ ನಾಟ್ಯ ನಿಕೇತನ’ದ ಕು. ಶ್ರೀನಿಧಿ ಅಕ್ಕಿ ಮತ್ತು ಕು. ರೇಣುಕಾ ಲೋಕಣ್ಣವರ ನೇತೃತ್ವದಲ್ಲಿ ಕೃಷ್ಣ-ಗೋಪಿಯರ ವೇಷದಲ್ಲಿದ್ದ ಮಕ್ಕಳು ‘ರಾಸ್ ಗರ್ಬಾ’ ಹಾಗೂ ಗೋಕುಲ ನೃತ್ಯ ಮಾಡಿ ಸಂಭ್ರಮಿಸಿದರು.


ಪರಿಸರ ಸ್ನೇಹಿ ಉಡುಗೊರೆ: ಮಹಾಸ್ವಾಮಿಗಳು ತಮ್ಮ ಕೈಯಾರೆ ಮಕ್ಕಳಿಗೆ ಸಿಹಿ ತಿನಿಸು ನೀಡಿ, ಪ್ಲಾಸ್ಟಿಕ್ ಬಳಕೆ ತಡೆಯುವ ಉದ್ದೇಶದಿಂದ ಪ್ರತಿಯೊಂದು ಮಗುವಿಗೆ ದಿನನಿತ್ಯದ ಬಳಕೆಗಾಗಿ ಭರಿತ ಸ್ಟೀಲ್ ಊಟದ ಡಬ್ಬಿಗಳನ್ನು ಉಡುಗೊರೆಯಾಗಿ ನೀಡಿದರು.


ಶಾಸಕರಾದ ಅರವಿಂದ ಬೆಲ್ಲದ ಅವರು ಗ್ರಾಮಾಂತರ ಪ್ರದೇಶದಿಂದ ಮಕ್ಕಳ ಪ್ರಯಾಣಕ್ಕಾಗಿ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಿದ್ದರು. ಶ್ರೀ ವಿಷ್ಣು ಹುಕ್ಕೇರಿ ಅವರು ಕೆ.ಇ. ಬೋರ್ಡ್ ಶಾಲೆಯ ವಸತಿ ನೆರವು ನೀಡಿದರು. ಆರ್‌ಎಸ್‌ಎಸ್ ಕರ್ನಾಟಕ ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ಶ್ರೀಧರ ನಾಡಗೀರ್, ರಾಷ್ಟ್ರೋತ್ಥಾನ ಶಾಲೆಯ ಕಾರ್ಯದರ್ಶಿ ರಾಘವೇಂದ್ರ ಅಂಬೇಕರ್, ಪ್ರಾಂಶುಪಾಲರು ಹಾಗೂ ಶಿಕ್ಷಕರು ಭಾಗವಹಿಸಿದ್ದರು.


ಶ್ರೀ ಉತ್ತರಾದಿ ಮಠದ ದಿವಾನರಾದ ಶ್ರೀ ಸತ್ಯಧ್ಯಾನಾಚಾರ್ಯ ಕಟ್ಟಿ ಅವರ ಮಾರ್ಗದರ್ಶನದಲ್ಲಿ, ದಿವಾನರಾದ ಶಶಿಧರಾಚಾರ್ಯ ಹಾಗೂ ವಿದ್ಯಾಧೀಶಾಚಾರ್ಯ ಗುತ್ತಲ್ ಮತ್ತು ಚಾತುರ್ಮಾಸ್ಯ ವ್ಯವಸ್ಥಾಪಕ ಮಂಡಳಿ ಅಧ್ಯಕ್ಷರಾದ ಆರ್.ಎಂ. ಕುಲಕರ್ಣಿ ಅವರ ನೇತೃತ್ವದಲ್ಲಿ ಇಡೀ ಕಾರ್ಯಕ್ರಮದ ಸುಸಜ್ಜಿತ ಉಸ್ತುವಾರಿ ಹಾಗೂ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ‘ಅಕ್ಷರ ಪ್ರಭಾವಂ’ ಸಂಸ್ಥೆಯ ಪರವಾಗಿ ಅಶ್ವಿನ್ ಭುಸಾರೆ ಹಾಗೂ ರಮ್ಯಾ ಶ್ರೀನಾಥ ಕೊಪ್ಪಾ ಅವರು ಮಹಾಸ್ವಾಮಿಗಳಿಗೆ ಕೃತಜ್ಞತಾಪೂರ್ವಕ ಸನ್ಮಾನ ಸಲ್ಲಿಸಿ ಆಶೀರ್ವಾದ ಪಡೆದರು.


ಶಿಕ್ಷಕರ ದಿನಾಚರಣೆಯಂದೇ ನೆರವೇರಿದ ಈ ಜಗದ್ಗುರು ಶ್ರೀಕೃಷ್ಣನ ಉತ್ಸವವು, ಗ್ರಾಮೀಣ ಮಕ್ಕಳಲ್ಲಿ ನೂತನ ಹುಮ್ಮಸ್ಸು ಹಾಗೂ ಸಂಸ್ಕಾರದ ಹಬ್ಬದ ವಾತಾವರಣವನ್ನು ಮೂಡಿಸುವ ಮೂಲಕ ಅರ್ಥಪೂರ್ಣವಾಗಿ ಸಂಪನ್ನಗೊಂಡಿತು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top