ಧರ್ಮತ್ತಡ್ಕ: ಶಾಲಾ ಕಲೋತ್ಸವಕ್ಕೆ ಚಾಲನೆ

Shreya Hegde
0



ಧರ್ಮತ್ತಡ್ಕ: ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ ಪ್ರೌಢಶಾಲಾ ವಿಭಾಗದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ, ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕೆ ವೇದಿಕೆಯಾಗಿರುವ ಶಾಲಾ ಮಟ್ಟದ ಕಲೋತ್ಸವಕ್ಕೆ ಇಂದು ಚಾಲನೆ ನೀಡಲಾಯಿತು. ಹೈಯರ್ ಸೆಕೆಂಡರಿ ವಿಭಾಗದ ನಿವೃತ್ತ ಪ್ರಾಂಶುಪಾಲರಾದ ಎನ್. ರಾಮಚಂದ್ರ ಭಟ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ವಿದ್ಯಾರ್ಥಿಗಳ ಪ್ರತಿಭೆ ಬೆಳಗುವಲ್ಲಿ ಕಲೋತ್ಸವಗಳು ಪೂರಕವಾಗಿವೆ. ಇಂತಹ ಕಲೋತ್ಸವದ ವೇದಿಕೆಗಳು ಸಮಾಜಕ್ಕೆ ಉತ್ತಮ ಕಲಾವಿದರನ್ನು ಕೊಡುಗೆಯಾಗಿ ನೀಡಲು ಸಹಕಾರಿಯಾಗುತ್ತವೆ” ಎಂದರು.


ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅಧ್ಯಾಪಕ ಹಾಗೂ ಯಕ್ಷಗಾನ ಗುರುಗಳಾದ ಶೇಖರ ಶೆಟ್ಟಿ ಬಾಯಾರು ಅವರು ಮಾತನಾಡಿ, ಕಲೋತ್ಸವದಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಬೇಕು. ಬಹುಮಾನದ ನಿರೀಕ್ಷೆಯಿಲ್ಲದೆ ಕಲೆಯ ಮೇಲಿನ ಆಸಕ್ತಿಯಿಂದ ಭಾಗವಹಿಸಿದಾಗ ಮಾತ್ರ ಕಲೋತ್ಸವದ ವೇದಿಕೆ ಅರ್ಥಪೂರ್ಣವಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ತಮ್ಮ ಶಿಕ್ಷಣ ಕ್ಷೇತ್ರದ ಅನುಭವಗಳೊಂದಿಗೆ ಯಕ್ಷಗಾನ, ಗಮಕ ಮೊದಲಾದ ಕಲಾ ಕ್ಷೇತ್ರಗಳೊಂದಿಗಿನ ತಮ್ಮ ಒಡನಾಟದ ನೆನಪುಗಳನ್ನು ಮೆಲುಕು ಹಾಕಿದರು. ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಎಚ್. ಗೋವಿಂದ ಭಟ್ ಅವರು ಮಾತನಾಡಿ, “ಕಲೋತ್ಸವ ಗೆಲುವು–ಸೋಲಿನ ಉತ್ಸವವಲ್ಲ; ಅದು ಪ್ರತಿಭೆಯ ಉತ್ಸವ, ಸೃಜನಶೀಲತೆಯ ಉತ್ಸವ” ಎಂದರು.


ಶಾಲಾ ಮುಖ್ಯೋಪಾಧ್ಯಾಯರಾದ ಶಶಿಕುಮಾರ್ ಪಿ. ಅವರು ಕಲೋತ್ಸವದ ಔಚಿತ್ಯ, ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣ ಹಾಗೂ ವಿದ್ಯಾರ್ಥಿಗಳ ಸಕ್ರಿಯ ಪಾಲ್ಗೊಳ್ಳುವಿಕೆಯ ಕುರಿತು ಮಾತನಾಡಿದರು. ಶಾಲಾ ವ್ಯವಸ್ಥಾಪಕರಾದ ಶಂಕರನಾರಾಯಣ ಭಟ್ ಅವರು ಶುಭಾಶಂಸನೆಗೈದು, ಏಷ್ಯಾ ಖಂಡದ ಅತಿ ದೊಡ್ಡ ಉತ್ಸವವಾದ ಕಲೋತ್ಸವದಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸೃಜನಶೀಲ ಬೆಳವಣಿಗೆಗೆ ಸಹಕಾರಿಯಾಗುತ್ತವೆ ಎಂದರು. ರಕ್ಷಕ–ಶಿಕ್ಷಕ ಸಂಘದ ಅಧ್ಯಕ್ಷರಾದ ದಿನೇಶ್ ಚೆರುಗೋಳಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ತಮ್ಮ ಬಾಲ್ಯದ ವೇದಿಕೆಯ ದಿನಗಳನ್ನು ನೆನಪಿಸಿಕೊಂಡರು. ಕಲೋತ್ಸವದಲ್ಲಿ ಭಾಗವಹಿಸುವ ಎಲ್ಲ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಮಟ್ಟಕ್ಕೇರಿ ಸಾಧನೆ ಮಾಡುವಂತಾಗಲಿ ಎಂದು ಹಾರೈಸಿದರು.


ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು. ಕಲೋತ್ಸವ ಸಮಿತಿ ಸಂಚಾಲಕಿ ಎನ್ ಗಂಗಮ್ಮ ಅವರು ಸರ್ವರನ್ನು ಸ್ವಾಗತಿಸಿದರು. ಈಶ್ವರಿ ಡಿ ಹಾಗೂ ಪ್ರಶಾಂತ ಹೊಳ್ಳ ಎನ್ ಅವರು ಕಾರ್ಯಕ್ರಮ ನಿರೂಪಿಸಿದರು. ಸೌಮ್ಯ ಎಂ ಅವರು ಧನ್ಯವಾದ ಸಮರ್ಪಿಸಿದರು.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top