ದೇವಸ್ವರೂಪಿ ಗೋಮಾತೆ

Shreya Hegde
0


ಲೋಕಮಾತೃಂ ಗವಾಂ ಮಾತಾ ಸರ್ವದೇವಮಯೀ ಶುಭಮ್।

ಪವಿತ್ರಂ ಪಾಪಹರಂ ನಿತ್ಯಂ ಗೋದಾನಂ ಸುಖದಂ ಭವೇತ್॥

ಇದು ದೇವರ ಸ್ಥಾನದಲ್ಲಿಟ್ಟು ಆರಾಧಿಸುವ, ಜಗನ್ಮಾತೆ ಎಂದೇ ಕರೆಯಲ್ಪಡುವ ಗೋವಿನ ಮಹಿಮೆಯನ್ನು ಸಾರುವ ಪವಿತ್ರ ಶ್ಲೋಕ. ಇದರ ಅರ್ಥ: "ಹಸುವು ಸಮಸ್ತ ಲೋಕಕ್ಕೂ ತಾಯಿಯಾಗಿದ್ದು, ಸಕಲ ದೇವತೆಗಳ ಸ್ವರೂಪವನ್ನು ತನ್ನಲ್ಲಿ ಒಳಗೊಂಡಿದೆ. ಪವಿತ್ರವೂ, ಪಾಪನಾಶಕವೂ ಆದ ಗೋದಾನವು ಮನುಷ್ಯನಿಗೆ ಸದಾ ಸುಖ-ಶಾಂತಿಗಳನ್ನು ಕರುಣಿಸುತ್ತದೆ."


ಮಾನವಕುಲಕ್ಕೆ ತನ್ನ ತಾಯಿಯ ಎದೆಹಾಲಿನ ನಂತರ ಅತ್ಯಂತ ಪವಿತ್ರ ಹಾಗೂ ಪೌಷ್ಟಿಕ ಪರ್ಯಾಯ ಎಂದರೆ ಅದು ಹಸುವಿನ ಹಾಲು ಮಾತ್ರ. ಹಿಂದೂ ಧರ್ಮದ ನಂಬಿಕೆಯಂತೆ 33 ಕೋಟಿ ದೇವತೆಗಳ ಆವಾಸಸ್ಥಾನವಾಗಿರುವ ಗೋವು, ಪುರಾತನ ಕಾಲದಿಂದಲೂ ತನ್ನದೇ ಆದ ವಿಶಿಷ್ಟ ಹಾಗೂ ಪೂಜನೀಯ ಸ್ಥಾನವನ್ನು ಕಾಯ್ದುಕೊಂಡು ಬಂದಿದೆ. ರಾಮಾಯಣ, ಮಹಾಭಾರತಗಳಂತಹ ಪವಿತ್ರ ಗ್ರಂಥಗಳಲ್ಲಿಯೂ ಗೋವಿನ ಉಲ್ಲೇಖವಿದ್ದು, ಇಂದಿನ ದಿನಗಳಲ್ಲೂ ವಿವಿಧ ಹಬ್ಬ-ಹರಿದಿನಗಳಲ್ಲಿ, ಧಾರ್ಮಿಕ ವಿಧಿವಿಧಾನಗಳಲ್ಲಿ ಹಾಗೂ ಗ್ರಾಮೀಣ ಸಂಸ್ಕೃತಿಯಲ್ಲಿ ಗೋವಿಗೆ ಅಗ್ರಸ್ಥಾನ ನೀಡಲಾಗುತ್ತಿದೆ.


ಕೃಷಿ ಮತ್ತು ಗೋವಿನ ನಡುವಿನ ಬಾಂಧವ್ಯ ಅನನ್ಯವಾದದ್ದು. ಹಿಂದಿನ ಕಾಲದಲ್ಲಿ ಎತ್ತುಗಳು ಕೇವಲ ಹಾಲಿನ ಉತ್ಪಾದನೆಗಷ್ಟೇ ಅಲ್ಲದೆ, ರೈತನ ಹೆಗಲಿಗೆ ಹೆಗಲು ಕೊಟ್ಟು ಗದ್ದೆ ಉಳುಮೆ, ನೀರಾವರಿ ಮುಂತಾದ ಕೃಷಿ ಕಾಯಕಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದವು. ಅಂದು ಕೃಷಿ ಆರ್ಥಿಕತೆಯ ದೊಡ್ಡ ಆಧಾರಸ್ತಂಭವಾಗಿದ್ದ ಹಸು-ಎತ್ತುಗಳು ಮನೆಯಲ್ಲಿದ್ದರೆ, ಆತನನ್ನು ಸಂಪನ್ನ ರೈತ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಇಂದಿನ ಆಧುನಿಕ ಯುಗದಲ್ಲಿ ಯಂತ್ರೋಪಕರಣಗಳ ಅತಿಯಾದ ಬಳಕೆಯಿಂದಾಗಿ, ಕೃಷಿಯಲ್ಲಿ ಗೋವಿನ ಸಹಭಾಗ hissa ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿ.


ಗೋಮಾತೆಯ ಹಾಲು ಕೇವಲ ಕುಡಿಯುವುದಕ್ಕೆ ಮಾತ್ರ ಸೀಮಿತವಾಗಿರದೆ ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಹಾಗೂ ವಿವಿಧ ರೀತಿಯ ಸಿಹಿ ತಿಂಡಿಗಳ ತಯಾರಿಕೆಯಲ್ಲಿ ಬಳಸಲ್ಪಡುತ್ತದೆ. ಅಷ್ಟೇ ಅಲ್ಲ, ಆಕೆಯ ಪಂಚಗವ್ಯಗಳಾದ ಸಗಣಿ ಮತ್ತು ಗಂಜಲಗಳು ಪೂಜಾ ಕಾರ್ಯಗಳಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿತವಾಗಿವೆ. ಇದು ಕೇವಲ ಧಾರ್ಮಿಕ ನಂಬಿಕೆಯಷ್ಟೇ ಅಲ್ಲ, ವೈಜ್ಞಾನಿಕವಾಗಿಯೂ ಸಾಬೀತಾಗಿರುವ ಸತ್ಯ. ರೈತನ ಹೊಲದಲ್ಲಿ ಪೈರು ಸಮೃದ್ಧವಾಗಿ ಬೆಳೆಯಲು ಹಸುವಿನ ಸಗಣಿಯಿಂದ ತಯಾರಿಸಿದ ಸಾವಯವ ಗೊಬ್ಬರವೇ ಅತ್ಯಂತ ಶ್ರೇಷ್ಠ.


ಇಷ್ಟೆಲ್ಲ ಪಾವಿತ್ರ್ಯತೆ ಹಾಗೂ ಉಪಕಾರ ಗುಣಗಳನ್ನು ಹೊಂದಿರುವ ಹಸು ದೇವಸ್ವರೂಪಿಯಲ್ಲವೇ? ನಮ್ಮ ಜೀವನಕ್ಕೆ ಆಹಾರ, ಕೃಷಿ ಮತ್ತು ಆರ್ಥಿಕ ಸುಸ್ಥಿರತೆಯನ್ನು ನೀಡುತ್ತಿರುವ ಗೋಮಾತೆಯನ್ನು ಪ್ರೀತಿಸೋಣ, ಪೂಜಿಸೋಣ ಹಾಗೂ ಆಕೆಯ ರಕ್ಷಣೆ ಮಾಡುವ ಮೂಲಕ ನಮ್ಮ ಸಂಸ್ಕೃತಿಯನ್ನು ಗೌರವಿಸೋಣ.


– ಕೆ. ಎನ್. ಧನುಷ್

ದ್ವಿತೀಯ ಪತ್ರಿಕೋದ್ಯಮ ವಿಭಾಗ,

ಎಸ್‌ಡಿಎಮ್ ಕಾಲೇಜು (ಸ್ವಾಯತ್ತ), ಉಜಿರೆ.





Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top